ಒಂದು ಸಣ್ಣ ಬಟ್ಟಲಿನಲ್ಲಿ ಮೆಣಸಿನ ಪುಡಿ, ಉಪ್ಪು, ಸೈನದವ ಲವಣ ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿಟ್ಟು ಕೊಳ್ಳಿ.
ಆಲೂಗಡ್ಡೆಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯ ಮೇಲೆ ನೇರವಾಗಿ ಆಲೂಗಡ್ಡೆ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ). ಅಥವಾ ಕತ್ತರಿಸಿದ ತಕ್ಷಣ ಆಲೂಗಡ್ಡೆ ಬಿಲ್ಲೆಗಳನ್ನು ಬಿಸಿ ಎಣ್ಣೆಗೆ ಒಂದೊಂದಾಗಿ ಹಾಕಿ.
ಬಿಲ್ಲೆಗಳು ಹಾಕುವಾಗ ಎಣ್ಣೆ ಬಿಸಿಯಿರಲಿ. ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸುವುದನ್ನು ಮುಂದುವರೆಸಿ.
ನಂತರ ಚಿಪ್ಸ್ ತೆಗೆದು, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.
Southekayi neer dose recipe in Kannada | ಸೌತೆಕಾಯಿ ನೀರ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
1/2 ಕಪ್ ತೆಂಗಿನ ತುರಿ
3 ಕಪ್ ನೀರು (ಅರೆಯುವ ನೀರು ಸೇರಿಸಿ)
1 ಮಧ್ಯಮ ಗಾತ್ರದ ಸೌತೆಕಾಯಿ
1 - 2 ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಸೌತೆಕಾಯಿ ನೀರ್ ದೋಸೆ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಹೆಚ್ಚಿದ ಸೌತೆಕಾಯಿ ಮತ್ತು ಹಸಿರು ಮೆಣಸಿನಕಾಯಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ.
ಸೌತೆಕಾಯಿ ನೀರ್ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ.
ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.
Hurigalu or hurigaalu recipe in Kannada | ಹುರಿಗಾಳು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/4 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
1/4 ಕಪ್ ಹುರಿಗಡಲೆ ಅಥವಾ ಕಡಲೆಪಪ್ಪು
1/2 ಕಪ್ ಸಣ್ಣದಾಗಿ ಹೆಚ್ಚಿದ ಕೊಬ್ಬರಿ
1/4 ಕಪ್ ಹೆಸರುಕಾಳು
1/4 ಕಪ್ ಕಡಲೆ ಕಾಳು
1/4 ಕಪ್ ಅಲಸಂದೆ ಕಾಳು
1/4 ಕಪ್ ಮಟಕಿ ಕಾಳು ಅಥವಾ ಅವಡೆ ಕಾಳು
1/8 ಕಪ್ ಹುರುಳಿ ಕಾಳು
2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
3 ಟೀಸ್ಪೂನ್ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
ದೊಡ್ಡ ಚಿಟಿಕೆ ಅರಶಿನ ಪುಡಿ
1/2 ಟೀಸ್ಪೂನ್ ಇಂಗು
ಉಪ್ಪು ರುಚಿಗೆ ತಕ್ಕಷ್ಟು
ಹುರಿಗಾಳು ಮಾಡುವ ವಿಧಾನ:
ಹೆಸರುಕಾಳು, ಕಡಲೆ ಕಾಳು, ಅಲಸಂದೆ ಕಾಳು, ಮಟಕಿ ಕಾಳು ಅಥವಾ ಅವಡೆ ಕಾಳು ಮತ್ತು ಹುರುಳಿ ಕಾಳನ್ನು ತೊಳೆದು 7 - 8 ಘಂಟೆಗಳ ಕಾಲ ನೆನೆಸಿಡಿ.
ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಬಟ್ಟೆಯ ಮೇಲೆ ಹರಡಿ, 2 ಘಂಟೆಗಳ ಕಾಲ ನೀರಾರಲು ಬಿಡಿ.
ಈ ಸಮಯದಲ್ಲಿ ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಚ್ಚಿದ ಕೊಬ್ಬರಿಯನ್ನು ಗರಿ ಗರಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ.
ನಂತರ ಅದೇ ಹುರಿಗಡಲೆಯನ್ನು ಬಿಸಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ.
ಕಡ್ಲೆಕಾಯಿಯನ್ನು ಅಲ್ಲಲ್ಲಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ನೆಲಗಡಲೆ ಅಥವಾ ಕಡ್ಲೆಕಾಯಿಯ ಸಿಪ್ಪೆ ಬೇರ್ಪಡಿಸಿ.ನಾನು ಸಿಪ್ಪೆ ತೆಗೆಯಲಿಲ್ಲ.
ನಂತರ ನೆನೆಸಿದ ಕಾಳುಗಳನ್ನು ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಬೇಕು. ಕಾಳುಗಳು ಮೊದಲಿನ ಗಾತ್ರಕ್ಕೆ ಬರುವವರೆಗೆ ಮತ್ತು ಚಟಪಟ ಸದ್ದು ಮಾಡುತ್ತ ಒಡೆಯಲು ಪ್ರಾರಂಭವಾಗುವವರೆಗೆ ಹುರಿಯಿರಿ. ಬಿಸಿ ಆರಲು ಬಿಡಿ.
ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ನಿಂಬೆ ರಸ, ಇಂಗು ಮತ್ತು ಉಪ್ಪು ಕಲಸಿ. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ.
ಹುರಿದ ಕಾಳುಗಳು ಬಿಸಿ ಆರಿದ ಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ.
ಪುನಃ ಸ್ಟವ್ ಮೇಲಿಟ್ಟು ಕಾಳುಗಳು ಒಣಗುವವರೆಗೆ ಹುರಿಯಿರಿ.
ಸ್ಟವ್ ಆಫ್ ಮಾಡಿದ ನಂತರ ಹುರಿದ ಕಡ್ಲೆಕಾಯಿ, ಹುರಿಗಡಲೆ ಮತ್ತು ಕೊಬ್ಬರಿ ಹಾಕಿ ಮಗುಚಿ.
ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
Tomato soup recipe in Kannada | ಟೊಮೇಟೊ ಸೂಪ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
4 - 5 ಮಧ್ಯಮ ಗಾತ್ರದ ಟೊಮೆಟೊಗಳು
2 ಎಸಳು ಬೆಳ್ಳುಳ್ಳಿ
1 ಮಧ್ಯಮ ಗಾತ್ರದ ಈರುಳ್ಳಿ
1/2 ಕ್ಯಾರೆಟ್
2 ಟೀಸ್ಪೂನ್ ಬೆಣ್ಣೆ
1/2 ಟೀಸ್ಪೂನ್ ಕರಿಮೆಣಸು (ಅಥವಾ ನಿಮ್ಮ ರುಚಿ ಪ್ರಕಾರ)
1/2 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
1 ಕಪ್ ನೀರು
1 ಟೀಸ್ಪೂನ್ ಕಾರ್ನ್ ಫ್ಲೋರ್ ಅಥವಾ ಮೈದಾ ಅಥವಾ 1 ಬೆರಳು ಗಾತ್ರದ ಆಲೂಗಡ್ಡೆ
1/4 - 1/2 ಟೀಸ್ಪೂನ್ ಸಕ್ಕರೆ (ಬೇಕಾದಲ್ಲಿ ಅಥವಾ ನಿಮ್ಮ ರುಚಿ ಪ್ರಕಾರ)
1 ಟೀಸ್ಪೂನ್ ತಾಜಾ ಕೆನೆ (ಬೇಕಾದಲ್ಲಿ)
1 ಬ್ರೆಡ್ ಸ್ಲೈಸ್ (ಬೇಕಾದಲ್ಲಿ)
ಟೊಮೇಟೊ ಸೂಪ್ ಮಾಡುವ ವಿಧಾನ:
ಬೆಳ್ಳುಳ್ಳಿ, ಈರುಳ್ಳಿ, ಕ್ಯಾರಟ್ ಮತ್ತು ಟೊಮೆಟೊಗಳನ್ನು ಕತ್ತರಿಸಿಟ್ಟುಕೊಳ್ಳಿ.
ಮೊದಲಿಗೆ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ.
ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
ನಂತರ ಕತ್ತರಿಸಿದ ಕ್ಯಾರಟ್ ಹಾಕಿ ಒಂದೆರಡು ನಿಮಿಷ ಬಾಡಿಸಿ. ಆಲೂಗಡ್ಡೆ ಹಾಕುವುದಾದಲ್ಲಿ ಈಗಲೇ ಹಾಕಿ.
ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ.
ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ.
ಜ್ಯೂಸು ಸೋಸುವ ಜರಡಿ ಉಪಯೋಗಿಸಿ, ಅರೆದ ಮಿಶ್ರಣವನ್ನು ಸೋಸಿರಿ. ಮೇಲಿನಿಂದ ಸ್ವಲ್ಪ ನೀರು ಸೇರಿಸಿ, ಒಂದು ಚಮಚದ ಸಹಾಯದಿಂದ ಚೆನ್ನಾಗಿ ಸೋಸಿ.
ಸೋಸಿದ ಟೊಮೇಟೊ ರಸವನ್ನು ಒಂದು ಪಾತ್ರೆಗೆ ಹಾಕಿ. ಉಳಿದ ನೀರು ಸೇರಿಸಿ ಕುದಿಯಲು ಇಡಿ. ಕಾರ್ನ್ ಫ್ಲೋರ್ ನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಾಕಿ. ಮೈದಾ ಹಿಟ್ಟು ಉಪಯೋಗಿಸುತ್ತೀರಾದರೆ, ಒಂದು ಚಮಚ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಹಾಲಿನಲ್ಲಿ ಕಲಸಿದ ಮೈದಾ ಹಿಟ್ಟು ಹಾಕಿ, ಕುದಿಸಿ, ನಂತರ ಟೊಮೇಟೊ ರಸ ಸೇರಿಸಿ.
ಸೂಪ್ ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟೋವ್ ಆಫ್ ಮಾಡಿ.
ಬೇಕಾದಲ್ಲಿ ಹಾಲಿನ ಕೆನೆ (ಫ್ರೆಶ್ ಕ್ರೀಮ್) ಅಥವಾ ಹುರಿದ ಬ್ರೆಡ್ ಚೂರುಗಳಿಂದ ಅಲಂಕರಿಸಿ. ಟೊಮೇಟೊ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಸವಿದು, ಆನಂದಿಸಿ.
Hittina vade recipe in kannada | ಹಿಟ್ಟಿನ ವಡೆ ಮಾಡುವ ವಿಧಾನ
Hittina vade video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/4 ಕಪ್ ಗೋಧಿ ಹಿಟ್ಟು
1/4 ಕಪ್ ಮೈದಾ
1/4 ಕಪ್ ಕಡ್ಲೆಹಿಟ್ಟು
1/4 ಕಪ್ ಅಕ್ಕಿ ಹಿಟ್ಟು
1/4 ಕಪ್ ಜೋಳದ ಹಿಟ್ಟು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಪೂರಿ ಕಾಯಿಸಲು
ಅರೆಯಲು ಬೇಕಾಗುವ ಪದಾರ್ಥಗಳು:
1 ಈರುಳ್ಳಿ ಕತ್ತರಿಸಿದ್ದು
1 - 3 ಹಸಿರುಮೆಣಸಿನಕಾಯಿ
2 ಎಸಳು ಕರಿಬೇವು
1/4 ಕಪ್ ತೆಂಗಿನ ತುರಿ
1 ಚಮಚ ಜೀರಿಗೆ
ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ:
ಒಂದು ಅಗಲವಾದ ಬಟ್ಟಲಿಗೆ ಎಲ್ಲ ಹಿಟ್ಟುಗಳನ್ನೂ ಹಾಕಿ.
ನಂತರ ಒಂದು ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹುರಿಯಿರಿ.
ಹುರಿದ ಪದಾರ್ಥಗಳು ತಣ್ಣಗಾದಮೇಲೆ, ತೆಂಗಿನ ತುರಿ ಮತ್ತು ಜೀರಿಗೆಯೊಂದಿಗೆ ಸಾಧ್ಯವಾದಷ್ಟು ಕಡಿಮೆ ನೀರಿನಲ್ಲಿ ನುಣ್ಣನೆ ಅರೆಯಿರಿ.
ಬಟ್ಟಲಿನಲ್ಲಿರುವ ಹಿಟ್ಟಿಗೆ, ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಪೂರಿ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು.
ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.
ಎರಡು ಬದಿ ಕಾಯಿಸಿ. ಆಲೂ ಭಾಜಿಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಬಡಿಸಿ. ಈ ಪೂರಿಯನ್ನು ಹಾಗೆಯೂ ತಿನ್ನಬಹುದು.
Steamed eggless cake recipe in Kannada | ಹಬೆಯಲ್ಲಿ ಬೇಯಿಸಿ ವೆನಿಲ್ಲಾ ಕೇಕ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್, 1 ಟೇಬಲ್ ಚಮಚ = 3 ಟೀಸ್ಪೂನ್)
1/2 ಕಪ್ ಮೈದಾ ಹಿಟ್ಟು
3/4 ಟೀಸ್ಪೂನ್ ಬೇಕಿಂಗ್ ಪೌಡರ್
ಒಂದು ದೊಡ್ಡ ಚಿಟಿಕೆ ಅಡಿಗೆ ಸೋಡಾ
6 - 7 ಟೇಬಲ್ ಚಮಚ ಮೊಸರು
3 ಟೇಬಲ್ ಚಮಚ ಸಕ್ಕರೆ
2 ಟೇಬಲ್ ಚಮಚ ಹಾಲು
1 ಟೇಬಲ್ ಚಮಚ ಎಣ್ಣೆ
1 ಟೀಸ್ಪೂನ್ ವೆನಿಲ್ಲಾ ಸಾರ ಅಥವಾ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)
ಕ್ರೀಮ್ ಗೆ ಬೇಕಾಗುವ ಪದಾರ್ಥಗಳು: ( 1 ಟೇಬಲ್ ಚಮಚ = 3 ಟೀಸ್ಪೂನ್)
50gm ಉಪ್ಪುರಹಿತ ಬೆಣ್ಣೆ
100gm ಐಸಿಂಗ್ ಸಕ್ಕರೆ (ಸಕ್ಕರೆ ಪುಡಿ + 1/2 ಟೀಸ್ಪೂನ್ ಕಾರ್ನ್ ಫ್ಲೋರ್)
2 ಟೇಬಲ್ ಚಮಚ ಹಾಲು
ಒಂದು ಚಿಟಿಕೆ ಉಪ್ಪು
1 ಟೀಸ್ಪೂನ್ ವೆನಿಲ್ಲಾ ಸಾರ ಅಥವಾ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)
ಹಬೆಯಲ್ಲಿ ಬೇಯಿಸಿ ವೆನಿಲ್ಲಾ ಕೇಕ್ ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾ ಹಾಕಿ, ಕಲಸಿ, ಜರಡಿ ಹಿಡಿದಿಟ್ಟುಕೊಳ್ಳಿ.
ಇನ್ನೊಂದು ಬಟ್ಟಲಿನಲ್ಲಿ ಹಾಲು, ಎಣ್ಣೆ, ಅರ್ಧಂಶ ಮೊಸರು, ವೆನಿಲ್ಲಾ ಸಾರ ಮತ್ತು ಸಕ್ಕರೆ ಹಾಕಿ ಕಲಸಿ.
ಈಗ ಜರಡಿ ಮಾಡಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಚೆನ್ನಾಗಿ ಮಿಶ್ರ ಮಾಡಿ. ಉಳಿದ ಮೊಸರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಕೇಕ್ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ.
ಎಣ್ಣೆ ಅಥವಾ ಬೆಣ್ಣೆ ಹಚ್ಚಿದ ಪಾತ್ರೆಗೆ ಹಾಕಿ, ಇಡ್ಲಿ ಬೇಯಿಸುವ ಹಾಗೆ ಇಪ್ಪತ್ತು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಸ್ಟವ್ ಆಫ್ ಮಾಡುವ ಮುನ್ನ ಒಂದು ಕಡ್ಡಿ ಅಥವಾ ಫೋರ್ಕ್ ನ್ನು ಚುಚ್ಚಿ ಕೇಕ್ ಸಂಪೂರ್ಣ ಬೆಂದಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಚುಚ್ಚಿದ ಕಡ್ಡಿಗೆ ಹಸಿ ಹಿಟ್ಟು ಅಂಟಿರಬಾರದು. ನಿಮ್ಮಲ್ಲಿ ಓವೆನ್ ಇದ್ದರೆ ಓವನ್ ನಲ್ಲಿ ಸಹ ಬೇಕ್ ಮಾಡಬಹುದು.
ಅಥವಾ ಬೆಣ್ಣೆ ಬಿಸ್ಕತ್ ಮಾಡಿದಂತೆ, ಕುಕ್ಕರ್ ತಳಕ್ಕೆ ಉಪ್ಪು ಅಥವಾ ಮರಳನ್ನು ಹಾಕಿಯೂ ಬೇಯಿಸಬಹುದು.
ಬೇಯಿಸಿದ ಕೇಕ್ ತಣ್ಣಗಾಗುವವರೆಗೆ ಕಾಯಿರಿ. ನಂತರ ಎಚ್ಚರಿಕೆಯಿಂದ ತೆಗೆಯಿರಿ. ಈ ಕೇಕ್ ನ್ನು ಹೀಗೆ ತಿನ್ನಬಹುದು. ಅಥವಾ ಕೆಳಗೆ ತಿಳಿಸಿದಂತೆ ಕ್ರೀಮ್ ಮಾಡಿ, ಹಚ್ಚಿ ತಿನ್ನಬಹುದು.
ಕೇಕ್ ಗೆ ಕ್ರೀಮ್ ತಯಾರಿಸಲು, ಮೊದಲಿಗೆ ಬೆಣ್ಣೆಯನ್ನು ನಯವಾಗಿಸಿ. ನಂತರ ಹೇಳಿರುವ ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ವಿಸ್ಕ್ ಅಥವಾ ಬೀಟರ್ ನಿಂದ ಚೆನ್ನಾಗಿ ಕಲಸಿ.
ಕ್ರೀಮ್ ನ್ನು ಕೇಕ್ ಮೇಲೆ ಹಚ್ಚಿ, ಮೇಲಿನಿಂದ ನಿಮ್ಮಿಷ್ಟದಂತೆ ಅಲಂಕಾರ ಮಾಡಿ. ಫ್ರಿಡ್ಜ್ ನಲ್ಲಿ ಹತ್ತು ನಿಮಿಷ ಇಟ್ಟು, ನಂತರ ಸವಿದು ಆನಂದಿಸಿ.
Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಬಾಸಮತಿ ಅಕ್ಕಿ
1 ಕಪ್ ಹಸಿ ಬಟಾಣಿ
1.5 ಕಪ್ ನೀರು
0.5 ಕಪ್ ತೆಂಗಿನ ಕಾಯಿಹಾಲು
4 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
1 ಸಣ್ಣ ಪುಲಾವ್ ಎಲೆ
1 ಮರಾಟಿ ಮೊಗ್ಗು
2 ದಳ ಜಾಪತ್ರೆ (ಬೇಕಾದಲ್ಲಿ)
1 ಏಲಕ್ಕಿ
1/2 ಬೆರಳುದ್ದ ಚಕ್ಕೆ
5 - 6 ಲವಂಗ
1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
5 ಗೋಡಂಬಿ ತುಂಡು ಮಾಡಿದ್ದು
4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
1 - 2 ಹಸಿರು ಮೆಣಸಿನಕಾಯಿ
2 ಟೇಬಲ್ ಚಮಚ ಕತ್ತರಿಸಿದ ಪುದೀನಾ ಎಲೆ ಅಥವಾ ಮೆಂತೆ ಸೊಪ್ಪು (ಬೇಕಾದಲ್ಲಿ)
2 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
2 ಚಮಚ ನಿಂಬೆ ರಸ (ಬೇಕಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ:
ಅಕ್ಕಿ ತೊಳೆದು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ.
ಬಟಾಣಿ ಸುಲಿಯಿರಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಪುದಿನ ಎಲೆಗಳನ್ನು ಕತ್ತರಿಸಿ.
ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
ಕುಕ್ಕರ್ ನಲ್ಲಿ ತುಪ್ಪ ಅಥವಾ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
ಕತ್ತರಿಸಿದ ಪುದಿನ ಎಲೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಗುಚಿ.
ಮತ್ತು ಸುಲಿದ ಬಟಾಣಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ.
ನೀರು ಮತ್ತು ತೆಂಗಿನ ಕಾಯಿ ಹಾಲು ಹಾಕಿ ಮಗುಚಿ.
ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
ಒತ್ತಡ ಇಳಿದ ಕೂಡಲೇ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಕಲಸಿ. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಸವಿಯಿರಿ.
Malnad style gojjavalakki or huli avalakki recipe | ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಗಟ್ಟಿ ಅವಲಕ್ಕಿ
1/4 ಕಪ್ ತೆಂಗಿನ ತುರಿ
1 ನೆಲ್ಲಿಕಾಯಿ ಗಾತ್ರದ ಬೆಲ್ಲ
1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆಗೆ ಬೇಕಾಗುವ ಪದಾರ್ಥಗಳು:
2 - 4 ಕೆಂಪು ಮೆಣಸಿನಕಾಯಿ
2 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕಡಲೆಬೇಳೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/2 ಟೀಸ್ಪೂನ್ ಸಾಸಿವೆ
2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆಬೇಳೆ
ಚಿಟಿಕೆ ಇಂಗು
4 - 6 ಕರಿಬೇವಿನ ಎಲೆ
1/4 ಟೀಸ್ಪೂನ್ ಅರಿಶಿನ ಪುಡಿ
4 ಟೇಬಲ್ ಚಮಚ ಅಡುಗೆ ಎಣ್ಣೆ
ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ ಮತ್ತು 2 ಟೀಸ್ಪೂನ್ ಕಡಲೆಬೇಳೆಯನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
ಗಟ್ಟಿ ಅವಲಕ್ಕಿಯನ್ನು ತೊಳೆದು 5 ನಿಮಿಷಗಳ ಕಾಲ ನೆನೆಸಿ. ನೆನೆಸುವ ಸಮಯ ಅವಲಕ್ಕಿಯ ದಪ್ಪ ಅವಲಂಬಿಸಿ ಬದಲಾಗಬಹುದು. ಹುಣಿಸೇಹಣ್ಣನ್ನು ಸಹ ನೀರಿನಲ್ಲಿ ನೆನೆಸಿಡಿ.
ಅವಲಕ್ಕಿ ನೆನೆಯುವ ಸಮಯದಲ್ಲಿ ಒಗ್ಗರಣೆಯನ್ನು ತಯಾರು ಮಾಡಿ ಕೊಳ್ಳೋಣ. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ.
ನಂತರ ಅರಿಶಿನ ಪುಡಿ, ಕರಿಬೇವು ಮತ್ತು ಇಂಗು ಸೇರಿಸಿ ಸ್ಟವ್ ಆಫ್ ಮಾಡಿ.
ಈಗ ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
ಚೆನ್ನಾಗಿ ಮಗುಚಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ.
ಈಗ ನೆನೆಸಿದ ಅವಲಕ್ಕಿಯ ನೀರು ಹಿಂಡಿ ತೆಗೆದು ಹಾಕಿ.
ಚೆನ್ನಾಗಿ ಕಲಸಿ.
ಮುಚ್ಚಳವನ್ನು ಮುಚ್ಚಿ. 3 ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
3 ನಿಮಿಷಗಳ ನಂತರ ಮುಚ್ಚಳವನ್ನು ತೆರೆದು, ಮಾಡಿಟ್ಟ ಮಸಾಲೆ ಪುಡಿ ಮತ್ತು ತೆಂಗಿನ ತುರಿ ಹಾಕಿ.
ಒಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಹುರಿದು, ಪುಡಿ ಮಾಡಿಟ್ಟುಕೊಳ್ಳಿ.
ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
ಹೆಚ್ಚಿದ ಟೊಮೇಟೊ, ಉಪ್ಪು, ಮಸಾಲೆ ಪುಡಿ ಮತ್ತು ಕೆಂಪು ಮೆಣಸಿನಪುಡಿ ಹಾಕಿ ಮಗುಚಿ.
ಸಣ್ಣ ಉರಿಯಲ್ಲಿ 15 - 20 ನಿಮಿಷಗಳ ಕಾಲ ಬೇಯಿಸಿ. ಜಾಸ್ತಿ ಸಮಯ ಕೆಡದೇ ಇರಬೇಕಾದರೆ ನೀರಾರುವವರೆಗೆ ಮಗುಚಿ.
ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ. ನೀರಾರುವವರೆಗೆ ಮಗುಚಿದಲ್ಲಿ 5 - 6 ತಿಂಗಳುಗಳ ಕಾಲ ಕೆಡುವುದಿಲ್ಲ. ನಿಮಗೆ ಉಪ್ಪಿನಕಾಯಿ ಜಾಸ್ತಿ ಹುಳಿ ಬೇಕೆನಿಸಿದಲ್ಲಿ ಸ್ವಲ್ಪ ನಿಂಬೆ ರಸವನ್ನು ಉಪ್ಪಿನಕಾಯಿ ತಣ್ಣಗಾದ ಮೇಲೆ ಸೇರಿಸಬಹುದು.
Benne biscuit recipe in Kannada | ಬೆಣ್ಣೆ ಬಿಸ್ಕತ್ ಮಾಡುವ ವಿಧಾನ
ಬೆಣ್ಣೆ ಬಿಸ್ಕತ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
3/4 ಕಪ್ ಸಕ್ಕರೆ
1/4 ಕಪ್ ಒಣ ಕೊಬ್ಬರಿ ಪುಡಿ (ಬೇಕಾದಲ್ಲಿ)
ತುಪ್ಪ ಅಥವಾ ಎಣ್ಣೆ ಹಿಟ್ಟು ಕಲಸಲು
1 ಏಲಕ್ಕಿ (ಬೇಕಾದಲ್ಲಿ)
ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:
ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು (ಅಥವಾ ಗೋಧಿ ಹಿಟ್ಟು), ಸಕ್ಕರೆ ಪುಡಿ, ಕೊಬ್ಬರಿ ಪುಡಿ (ಬೇಕಾದಲ್ಲಿ) ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಮೆತ್ತಗಿನ ಹಿಟ್ಟನ್ನು ತಯಾರಿಸಿ ಕೊಳ್ಳಿ.
ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ, ಮೈಕ್ರೋವೇವ್ ಓವೆನ್ ನಲ್ಲಿಟ್ಟು, ಕಡಿಮೆ ಉಷ್ಣಾಂಶದಲ್ಲಿ (180W) 7 - 8 ನಿಮಿಷ ಬೇಯಿಸಿ. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು.
ಓವೆನ್ ಇಲ್ಲವಾದಲ್ಲಿ ಕುಕ್ಕರ್ ತಳಕ್ಕೆ ಉಪ್ಪು ಅಥವಾ ಮರಳನ್ನು ಹಾಕಿ. ಮೇಲಿನಿಂದ ಕುಕ್ಕರ್ ಪ್ಲೇಟ್ ಅಥವಾ ಯಾವುದಾದರೂ ಹಳೆ ಪ್ಲೇಟ್ ಇರಿಸಿ. ಉಪ್ಪು ಬಳಸಿದಲ್ಲಿ ಕುಕ್ಕರ್ ಸ್ವಲ್ಪ ಕಲೆಯಾಗುವ ಕಾರಣ ಹಳೆಯ ಕುಕ್ಕರ್ ಬಳಸುವುದು ಉತ್ತಮ.
ಕುಕ್ಕರ್ ಸ್ವಲ್ಪ ಬಿಸಿ ಆದಮೇಲೆ ಇನ್ನೊಂದು ತಟ್ಟೆಯಲ್ಲಿ ಬಿಸ್ಕತ್ ನ ಉಂಡೆಗಳನ್ನಿರಿಸಿ.
ಕುಕ್ಕರ್ ನ ಗ್ಯಾಸ್ಕೆಟ್ ಮತ್ತು ವೆಯಿಟ್ ತೆಗೆದು, ಮುಚ್ಚಳ ಮುಚ್ಚಿ, ಹತ್ತು ನಿಮಿಷ ಬೇಯಿಸಿ.
balekai chips recipe in Kannada | ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ದೊಡ್ಡ ಬಾಳೆಕಾಯಿ
1/2 ಟೀಸ್ಪೂನ್ ಉಪ್ಪು
1/4 ಟೀಸ್ಪೂನ್ ಅರಶಿನ
4 ಟೇಬಲ್ ಚಮಚ ನೀರು
ಎಣ್ಣೆ ಕಾಯಿಸಲು
ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ.
ಒಂದು ಸಣ್ಣ ಬಟ್ಟಲಿನಲ್ಲಿ ನೀರು, ಉಪ್ಪು ಮತ್ತು ಅರಶಿನ ಹಾಕಿ, ಅರಶಿನದ ಉಪ್ಪು ನೀರು ಸಿದ್ಧ ಮಾಡಿಟ್ಟು ಕೊಳ್ಳಿ.
ಬಾಳೆಕಾಯಿಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಬಾಳೆಕಾಯಿ ಬಿಲ್ಲೆಗಳನ್ನು ಒಂದೊಂದಾಗಿ ಹಾಕಿ. ಅಥವಾ ಸಾಧ್ಯವಾದಲ್ಲಿ ಎಣ್ಣೆಯ ಮೇಲೆ ನೇರವಾಗಿ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ).
ಕಾಯುತ್ತಿರುವ ಚಿಪ್ಸ್ ಗೆ 1/2 ಟೀ ಚಮಚದಷ್ಟು ಅರಶಿನದ ಉಪ್ಪು ನೀರು ಹಾಕಿ.
ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.
Avarekalu akki rotti recipe in Kannada | ಅವರೇಕಾಳು ಅಕ್ಕಿರೊಟ್ಟಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿಹಿಟ್ಟು
1.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
1 ಕಪ್ ಅವರೇಕಾಳು
2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
2 ಸಣ್ಣಗೆ ಹೆಚ್ಚಿದ ಈರುಳ್ಳಿ
1/2 ಕಪ್ ತೆಂಗಿನ ತುರಿ
4 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀಸ್ಪೂನ್ ಜೀರಿಗೆ
ಉಪ್ಪು ರುಚಿಗೆ ತಕ್ಕಷ್ಟು
1/4 ಟೀಸ್ಪೂನ್ ಇಂಗು
1/4 ಕಪ್ ಅಡುಗೆ ಎಣ್ಣೆ
25x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಅವರೇಕಾಳು ಅಕ್ಕಿ ರೊಟ್ಟಿ ಮಾಡುವ ವಿಧಾನ:
ಅವರೇಕಾಳನ್ನು ಕುಕ್ಕರ್ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ.
ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
ಈಗ ಬೇಯಿಸಿದ ಅವರೇಕಾಳು, ಕತ್ತರಿಸಿದ ಈರುಳ್ಳಿ , ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಜೀರಿಗೆ, ತೆಂಗಿನ ತುರಿ ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.
Rave dose recipe in Kannada | ರವೆ ದೋಸೆ ಮಾಡುವ ವಿಧಾನ
Quick Video: Rave dose recipe
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ ಹಿಟ್ಟು
1/4 ಕಪ್ ಮೀಡಿಯಂ ರವೆ
1/8 ಕಪ್ ಮೈದಾ ಹಿಟ್ಟು
2.5 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ; ದೋಸೆಕಲ್ಲು ಮತ್ತು ಹಿಟ್ಟಿನ ಗುಣಮಟ್ಟ ಅವಲಂಬಿಸಿ)
ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು)
ಉಪ್ಪು ರುಚಿಗೆ ತಕ್ಕಷ್ಟು
ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
5 - 6 ಜಜ್ಜಿದ ಕಾಳುಮೆಣಸು
1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1 ಟೇಬಲ್ ಚಮಚ ತೆಂಗಿನ ತುರಿ (ನಾನು ಬಳಸಲಿಲ್ಲ)
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
ಚಿಟಿಕೆ ಇಂಗು (ನಾನು ಬಳಸಲಿಲ್ಲ)
ಚಿಟಿಕೆ ಅರಿಶಿನ ಪುಡಿ (ನಾನು ಬಳಸಲಿಲ್ಲ)
ರವೆ ದೋಸೆ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಹಿಟ್ಟು ತೆಗೆದುಕೊಳ್ಳಿ.
ನೀರು, ಉಪ್ಪು ಮತ್ತು ನಿಮ್ಮಿಚ್ಛೆಯ ಪದಾರ್ಥಗಳನ್ನು ಸೇರಿಸಿ. ನಾನು ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕಾಳುಮೆಣಸು ಮತ್ತು ಶುಂಠಿ ಬಳಸಿದ್ದೇನೆ.
ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. ಗಮನಿಸಿ ರವೆ ದೋಸೆ ಹಿಟ್ಟು ನೀರ್ ದೋಸೆಯಂತೆ ತೆಳ್ಳಗಿರುತ್ತದೆ.
ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.