ಶನಿವಾರ, ಡಿಸೆಂಬರ್ 31, 2016

Dry fruits laddu recipe in Kannada | ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ

Dry fruits laddu recipe in Kannada

Dry fruits laddu recipe in Kannada | ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಗೋಡಂಬಿ 
  2. 1/4 ಕಪ್ ಬಾದಾಮಿ 
  3. 1/4 ಕಪ್ ಉಪ್ಪುರಹಿತ ಪಿಸ್ತಾ
  4. 1/4 ಕಪ್ ಆಕ್ರೋಡು ಅಥವಾ ವಾಲ್ನುಟ್ (ಬೇಕಾದಲ್ಲಿ) 
  5. 1/4 ಕಪ್ ಒಣ ಅಂಜೂರದ ಹಣ್ಣುಗಳು (ಬೇಕಾದಲ್ಲಿ; ಬದಲಾಗಿ ಖರ್ಜುರ ಉಪಯೋಗಿಸಬಹುದು) 
  6. 1/4 ಕಪ್ ಒಣದ್ರಾಕ್ಷಿ 
  7. 1/2 ಕಪ್ ಖರ್ಜುರ
  8. 2 ಟೀಸ್ಪೂನ್ ತುಪ್ಪ 
  9. 2 ಟೇಬಲ್ ಚಮಚ ಗಸಗಸೆ ಬೀಜಗಳು 
  10. 1/2 ಕಪ್ ತುರಿದ ಒಣ ಕೊಬ್ಬರಿ 
  11. 2 ಏಲಕ್ಕಿ

ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ:

  1. ಗೋಡಂಬಿ, ಬಾದಾಮಿ, ಪಿಸ್ತಾ ಮತ್ತು ಆಕ್ರೋಡನ್ನು ಗರಿ ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದಿಟ್ಟುಕೊಳ್ಳಿ. 
  2. ಗಸಗಸೆಯನ್ನು ಸಿಡಿಯುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. 
  3. ತುರಿದ ಒಣ ಕೊಬ್ಬರಿಯನ್ನು ಗರಿ ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. 
  4. ಬಿಸಿ ಆರಿದ ಮೇಲೆ ಎಲ್ಲ ಬೀಜಗಳನ್ನು, ಏಲಕ್ಕಿಯೊಂದಿಗೆ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. 
  5. ನಂತರ ಅಂಜೂರವನ್ನು ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ. ಒಣದ್ರಾಕ್ಷಿ ಗಟ್ಟಿ ಇದ್ದರೆ ಎರಡಾಗಿ ಚೂರು ಮಾಡಿಕೊಳ್ಳಿ. ಖರ್ಜುರದ ಬೀಜ ತೆಗೆದು ಎರಡಾಗಿ ಚೂರು ಮಾಡಿಕೊಳ್ಳಿ. 
  6. ನಂತರ ಮಿಕ್ಸಿ ಜಾರಿನಲ್ಲಿ ಎಲ್ಲ ಒಣ ಹಣ್ಣುಗಳನ್ನು ನೀರು ಹಾಕದೆ ಅರೆಯಿರಿ. 
  7. ಒಂದು ಬಾಣಲೆಯಲ್ಲಿ ಅರೆದ ಒಣ ಹಣ್ಣುಗಳು ಮತ್ತು ತುಪ್ಪ ಹಾಕಿ ಬಿಸಿ ಮಾಡಿ. 
  8. ಒಣ ಹಣ್ಣಿನ ಪೇಸ್ಟ್ ಮೆತ್ತಗಾದ ಮೇಲೆ ಪುಡಿಮಾಡಿದ ಬೀಜಗಳನ್ನು ಹಾಕಿ, ಚೆನ್ನಾಗಿ ಕಲಸಿ ಸ್ಟವ್ ಆಫ್ ಮಾಡಿ. 
  9. ಬಿಸಿ ಕಡಿಮೆಯಾಗುವವರೆಗೆ ಕಾಯಿರಿ. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಹೀಗೆ ಎಲ್ಲ ಉಂಡೆಗಳನ್ನು ಮಾಡಿ ಸವಿದು ಆನಂದಿಸಿ.


ಶುಕ್ರವಾರ, ಡಿಸೆಂಬರ್ 23, 2016

Alugadde chips recipe in Kannada | ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ

Alugadde chips recipe in Kannada

Alugadde chips recipe in Kannada | ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ತಾಜಾ ಆಲೂಗಡ್ಡೆ 
  2. 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ಅಥವಾ ನಿಮ್ಮ ರುಚಿ ಪ್ರಕಾರ)
  3. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. 1/2 ಟೀಸ್ಪೂನ್ ಸೈನದವ ಲವಣ (ಬೇಕಾದಲ್ಲಿ; ಹಾಕಿದಲ್ಲಿ ಉತ್ತಮ)
  5. 1/4 ಟೀಸ್ಪೂನ್ ಇಂಗು
  6. ಎಣ್ಣೆ ಕಾಯಿಸಲು

ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ. 
  2. ಒಂದು ಸಣ್ಣ ಬಟ್ಟಲಿನಲ್ಲಿ ಮೆಣಸಿನ ಪುಡಿ, ಉಪ್ಪು, ಸೈನದವ ಲವಣ ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿಟ್ಟು ಕೊಳ್ಳಿ. 
  3. ಆಲೂಗಡ್ಡೆಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯ ಮೇಲೆ ನೇರವಾಗಿ ಆಲೂಗಡ್ಡೆ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ). ಅಥವಾ ಕತ್ತರಿಸಿದ ತಕ್ಷಣ ಆಲೂಗಡ್ಡೆ ಬಿಲ್ಲೆಗಳನ್ನು ಬಿಸಿ ಎಣ್ಣೆಗೆ ಒಂದೊಂದಾಗಿ ಹಾಕಿ.
  5. ಬಿಲ್ಲೆಗಳು ಹಾಕುವಾಗ ಎಣ್ಣೆ ಬಿಸಿಯಿರಲಿ. ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸುವುದನ್ನು ಮುಂದುವರೆಸಿ. 
  6. ನಂತರ ಚಿಪ್ಸ್ ತೆಗೆದು, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.

Siridhanya mosaranna recipe in kannada | ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ

Siridhanya mosaranna recipe in kannada

Siridhanya mosaranna recipe in kannada | ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸಿರಿಧಾನ್ಯ
  2. 2 ಕಪ್ ಮೊಸರು
  3. 1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 5 - 6 ಗೋಡಂಬಿ (ಬೇಕಾದಲ್ಲಿ)
  8. 4 - 5 ಕರಿಬೇವಿನ ಎಲೆ 
  9. 1 ಹಸಿರು ಮೆಣಸಿನಕಾಯಿ
  10. ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
  11. ಒಂದು ಚಿಟಿಕೆ ಇಂಗು
  12. ಒಂದು ಮಧ್ಯಮ ಗಾತ್ರದ ಈರುಳ್ಳಿ ಹೆಚ್ಚಿದ್ದು
  13. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
  14. 2 ಟೀ ಚಮಚ ಅಡುಗೆ ಎಣ್ಣೆ 
  15. ಉಪ್ಪು ರುಚಿಗೆ ತಕ್ಕಷ್ಟು

ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ:

  1. ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ. 
  4. ನಂತರ ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  5. ಮೆತ್ತಗೆ ಬೇಯಿಸಿಟ್ಟ ಸಿರಿಧಾನ್ಯದ ಅನ್ನ ಹಾಕಿ ಕಲಸಿ.
  6. ಅನ್ನ ಬಿಸಿ ಆರಿದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.

Southekayi neer dose recipe in Kannada | ಸೌತೆಕಾಯಿ ನೀರ್ ದೋಸೆ ಮಾಡುವ ವಿಧಾನ

Southekayi neer dose recipe in Kannada

Southekayi neer dose recipe in Kannada | ಸೌತೆಕಾಯಿ ನೀರ್ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
  2. 1/2 ಕಪ್ ತೆಂಗಿನ ತುರಿ
  3. 3 ಕಪ್ ನೀರು (ಅರೆಯುವ ನೀರು ಸೇರಿಸಿ)
  4. 1 ಮಧ್ಯಮ ಗಾತ್ರದ ಸೌತೆಕಾಯಿ 
  5. 1 - 2 ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು

ಸೌತೆಕಾಯಿ ನೀರ್ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಹೆಚ್ಚಿದ ಸೌತೆಕಾಯಿ ಮತ್ತು ಹಸಿರು ಮೆಣಸಿನಕಾಯಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ. 
  3. ಸೌತೆಕಾಯಿ ನೀರ್ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  4. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ. 
  5. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.

ಬುಧವಾರ, ಡಿಸೆಂಬರ್ 21, 2016

Hurigalu or hurigaalu recipe in Kannada | ಹುರಿಗಾಳು ಮಾಡುವ ವಿಧಾನ

Hurigalu or hurigaalu recipe in Kannada

Hurigalu or hurigaalu recipe in Kannada | ಹುರಿಗಾಳು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. 1/4 ಕಪ್ ಹುರಿಗಡಲೆ ಅಥವಾ ಕಡಲೆಪಪ್ಪು
  3. 1/2 ಕಪ್ ಸಣ್ಣದಾಗಿ ಹೆಚ್ಚಿದ ಕೊಬ್ಬರಿ
  4. 1/4 ಕಪ್ ಹೆಸರುಕಾಳು
  5. 1/4 ಕಪ್ ಕಡಲೆ ಕಾಳು
  6. 1/4 ಕಪ್ ಅಲಸಂದೆ ಕಾಳು
  7. 1/4 ಕಪ್ ಮಟಕಿ ಕಾಳು ಅಥವಾ ಅವಡೆ ಕಾಳು
  8. 1/8 ಕಪ್ ಹುರುಳಿ ಕಾಳು
  9. 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  10. 3 ಟೀಸ್ಪೂನ್ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  11. ದೊಡ್ಡ ಚಿಟಿಕೆ ಅರಶಿನ ಪುಡಿ
  12. 1/2 ಟೀಸ್ಪೂನ್ ಇಂಗು
  13. ಉಪ್ಪು ರುಚಿಗೆ ತಕ್ಕಷ್ಟು

ಹುರಿಗಾಳು ಮಾಡುವ ವಿಧಾನ:

  1. ಹೆಸರುಕಾಳು, ಕಡಲೆ ಕಾಳು, ಅಲಸಂದೆ ಕಾಳು, ಮಟಕಿ ಕಾಳು ಅಥವಾ ಅವಡೆ ಕಾಳು ಮತ್ತು ಹುರುಳಿ ಕಾಳನ್ನು ತೊಳೆದು 7 - 8 ಘಂಟೆಗಳ ಕಾಲ ನೆನೆಸಿಡಿ. 
  2. ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಬಟ್ಟೆಯ ಮೇಲೆ ಹರಡಿ, 2 ಘಂಟೆಗಳ ಕಾಲ ನೀರಾರಲು ಬಿಡಿ. 
  3. ಈ ಸಮಯದಲ್ಲಿ ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಚ್ಚಿದ ಕೊಬ್ಬರಿಯನ್ನು ಗರಿ ಗರಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ. 
  4. ನಂತರ ಅದೇ ಹುರಿಗಡಲೆಯನ್ನು ಬಿಸಿಯಾಗುವವರೆಗೆ ಹುರಿದು ಪಕ್ಕಕ್ಕಿಡಿ. 
  5. ಕಡ್ಲೆಕಾಯಿಯನ್ನು ಅಲ್ಲಲ್ಲಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ನೆಲಗಡಲೆ ಅಥವಾ ಕಡ್ಲೆಕಾಯಿಯ ಸಿಪ್ಪೆ ಬೇರ್ಪಡಿಸಿ.ನಾನು ಸಿಪ್ಪೆ ತೆಗೆಯಲಿಲ್ಲ. 
  6. ನಂತರ ನೆನೆಸಿದ ಕಾಳುಗಳನ್ನು ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಬೇಕು. ಕಾಳುಗಳು ಮೊದಲಿನ ಗಾತ್ರಕ್ಕೆ ಬರುವವರೆಗೆ ಮತ್ತು ಚಟಪಟ ಸದ್ದು ಮಾಡುತ್ತ ಒಡೆಯಲು ಪ್ರಾರಂಭವಾಗುವವರೆಗೆ ಹುರಿಯಿರಿ. ಬಿಸಿ ಆರಲು ಬಿಡಿ. 
  7. ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ನಿಂಬೆ ರಸ, ಇಂಗು ಮತ್ತು ಉಪ್ಪು ಕಲಸಿ. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ. 
  8. ಹುರಿದ ಕಾಳುಗಳು ಬಿಸಿ ಆರಿದ ಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  9. ಪುನಃ ಸ್ಟವ್ ಮೇಲಿಟ್ಟು ಕಾಳುಗಳು ಒಣಗುವವರೆಗೆ ಹುರಿಯಿರಿ. 
  10. ಸ್ಟವ್ ಆಫ್ ಮಾಡಿದ ನಂತರ ಹುರಿದ ಕಡ್ಲೆಕಾಯಿ, ಹುರಿಗಡಲೆ ಮತ್ತು ಕೊಬ್ಬರಿ ಹಾಕಿ ಮಗುಚಿ.
  11. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಮಂಗಳವಾರ, ಡಿಸೆಂಬರ್ 20, 2016

Tomato soup recipe in Kannada | ಟೊಮೇಟೊ ಸೂಪ್ ಮಾಡುವ ವಿಧಾನ

Tomato soup recipe in Kannada

Tomato soup recipe in Kannada | ಟೊಮೇಟೊ ಸೂಪ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 - 5 ಮಧ್ಯಮ ಗಾತ್ರದ ಟೊಮೆಟೊಗಳು
  2. 2 ಎಸಳು ಬೆಳ್ಳುಳ್ಳಿ
  3. ಮಧ್ಯಮ ಗಾತ್ರದ ಈರುಳ್ಳಿ
  4. 1/2 ಕ್ಯಾರೆಟ್
  5. 2 ಟೀಸ್ಪೂನ್ ಬೆಣ್ಣೆ
  6. 1/2 ಟೀಸ್ಪೂನ್ ಕರಿಮೆಣಸು (ಅಥವಾ ನಿಮ್ಮ ರುಚಿ ಪ್ರಕಾರ)
  7. 1/2 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
  8. 1 ಕಪ್ ನೀರು 
  9. 1 ಟೀಸ್ಪೂನ್ ಕಾರ್ನ್ ಫ್ಲೋರ್ ಅಥವಾ ಮೈದಾ ಅಥವಾ 1 ಬೆರಳು ಗಾತ್ರದ ಆಲೂಗಡ್ಡೆ
  10. 1/4 - 1/2 ಟೀಸ್ಪೂನ್ ಸಕ್ಕರೆ (ಬೇಕಾದಲ್ಲಿ ಅಥವಾ ನಿಮ್ಮ ರುಚಿ ಪ್ರಕಾರ)
  11. 1 ಟೀಸ್ಪೂನ್ ತಾಜಾ ಕೆನೆ (ಬೇಕಾದಲ್ಲಿ)
  12. 1 ಬ್ರೆಡ್  ಸ್ಲೈಸ್ (ಬೇಕಾದಲ್ಲಿ)

ಟೊಮೇಟೊ ಸೂಪ್ ಮಾಡುವ ವಿಧಾನ:

  1. ಬೆಳ್ಳುಳ್ಳಿ, ಈರುಳ್ಳಿ, ಕ್ಯಾರಟ್ ಮತ್ತು ಟೊಮೆಟೊಗಳನ್ನು ಕತ್ತರಿಸಿಟ್ಟುಕೊಳ್ಳಿ. 
  2. ಮೊದಲಿಗೆ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ.
  3. ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  4. ನಂತರ ಕತ್ತರಿಸಿದ ಕ್ಯಾರಟ್ ಹಾಕಿ ಒಂದೆರಡು ನಿಮಿಷ ಬಾಡಿಸಿ. ಆಲೂಗಡ್ಡೆ ಹಾಕುವುದಾದಲ್ಲಿ ಈಗಲೇ ಹಾಕಿ.  
  5. ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
  6. ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. 
  7. ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ.
  8. ಜ್ಯೂಸು ಸೋಸುವ ಜರಡಿ ಉಪಯೋಗಿಸಿ, ಅರೆದ ಮಿಶ್ರಣವನ್ನು ಸೋಸಿರಿ. ಮೇಲಿನಿಂದ ಸ್ವಲ್ಪ ನೀರು ಸೇರಿಸಿ, ಒಂದು ಚಮಚದ ಸಹಾಯದಿಂದ ಚೆನ್ನಾಗಿ ಸೋಸಿ. 
  9. ಸೋಸಿದ ಟೊಮೇಟೊ ರಸವನ್ನು ಒಂದು ಪಾತ್ರೆಗೆ ಹಾಕಿ. ಉಳಿದ ನೀರು ಸೇರಿಸಿ ಕುದಿಯಲು ಇಡಿ. ಕಾರ್ನ್ ಫ್ಲೋರ್ ನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಾಕಿ. ಮೈದಾ ಹಿಟ್ಟು ಉಪಯೋಗಿಸುತ್ತೀರಾದರೆ, ಒಂದು ಚಮಚ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಹಾಲಿನಲ್ಲಿ ಕಲಸಿದ ಮೈದಾ ಹಿಟ್ಟು ಹಾಕಿ, ಕುದಿಸಿ, ನಂತರ ಟೊಮೇಟೊ ರಸ ಸೇರಿಸಿ. 
  10. ಸೂಪ್ ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟೋವ್ ಆಫ್ ಮಾಡಿ. 
  11. ಬೇಕಾದಲ್ಲಿ ಹಾಲಿನ ಕೆನೆ (ಫ್ರೆಶ್ ಕ್ರೀಮ್) ಅಥವಾ ಹುರಿದ ಬ್ರೆಡ್ ಚೂರುಗಳಿಂದ ಅಲಂಕರಿಸಿ. ಟೊಮೇಟೊ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಸವಿದು, ಆನಂದಿಸಿ.

ಸೋಮವಾರ, ಡಿಸೆಂಬರ್ 19, 2016

Mixed flour poori or hittina vade recipe in kannada | ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ

Mixed flour poori or hittina vade recipe in kannada

Hittina vade recipe in kannada | ಹಿಟ್ಟಿನ ವಡೆ ಮಾಡುವ ವಿಧಾನ

Hittina vade video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಗೋಧಿ ಹಿಟ್ಟು 
  2. 1/4 ಕಪ್ ಮೈದಾ 
  3. 1/4 ಕಪ್ ಕಡ್ಲೆಹಿಟ್ಟು
  4. 1/4 ಕಪ್ ಅಕ್ಕಿ ಹಿಟ್ಟು
  5. 1/4 ಕಪ್ ಜೋಳದ ಹಿಟ್ಟು
  6. ಉಪ್ಪು ರುಚಿಗೆ ತಕ್ಕಷ್ಟು
  7. ಎಣ್ಣೆ ಪೂರಿ ಕಾಯಿಸಲು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಈರುಳ್ಳಿ ಕತ್ತರಿಸಿದ್ದು
  2. 1 - 3 ಹಸಿರುಮೆಣಸಿನಕಾಯಿ
  3. 2 ಎಸಳು ಕರಿಬೇವು
  4. 1/4 ಕಪ್ ತೆಂಗಿನ ತುರಿ
  5. 1 ಚಮಚ ಜೀರಿಗೆ

ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ:

  1. ಒಂದು ಅಗಲವಾದ ಬಟ್ಟಲಿಗೆ ಎಲ್ಲ ಹಿಟ್ಟುಗಳನ್ನೂ ಹಾಕಿ. 
  2. ನಂತರ ಒಂದು ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹುರಿಯಿರಿ.
  3. ಹುರಿದ ಪದಾರ್ಥಗಳು ತಣ್ಣಗಾದಮೇಲೆ, ತೆಂಗಿನ ತುರಿ ಮತ್ತು ಜೀರಿಗೆಯೊಂದಿಗೆ ಸಾಧ್ಯವಾದಷ್ಟು ಕಡಿಮೆ ನೀರಿನಲ್ಲಿ  ನುಣ್ಣನೆ ಅರೆಯಿರಿ. 
  4. ಬಟ್ಟಲಿನಲ್ಲಿರುವ ಹಿಟ್ಟಿಗೆ, ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಪೂರಿ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು. 
  5. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. 
  6. ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ. 
  7. ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.  
  8. ಎರಡು ಬದಿ ಕಾಯಿಸಿ. ಆಲೂ ಭಾಜಿಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಬಡಿಸಿ. ಈ ಪೂರಿಯನ್ನು ಹಾಗೆಯೂ ತಿನ್ನಬಹುದು. 

ಶುಕ್ರವಾರ, ಡಿಸೆಂಬರ್ 16, 2016

Steamed eggless cake recipe in Kannada | ಹಬೆಯಲ್ಲಿ ಬೇಯಿಸಿ ವೆನಿಲ್ಲಾ ಕೇಕ್ ಮಾಡುವ ವಿಧಾನ

Steamed eggless cake recipe in Kannada

Steamed eggless cake recipe in Kannada | ಹಬೆಯಲ್ಲಿ ಬೇಯಿಸಿ ವೆನಿಲ್ಲಾ ಕೇಕ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್, 1 ಟೇಬಲ್ ಚಮಚ = 3 ಟೀಸ್ಪೂನ್)

  1. 1/2 ಕಪ್ ಮೈದಾ ಹಿಟ್ಟು
  2. 3/4 ಟೀಸ್ಪೂನ್ ಬೇಕಿಂಗ್ ಪೌಡರ್
  3. ಒಂದು ದೊಡ್ಡ ಚಿಟಿಕೆ ಅಡಿಗೆ ಸೋಡಾ
  4. 6 - 7 ಟೇಬಲ್ ಚಮಚ ಮೊಸರು 
  5. 3 ಟೇಬಲ್ ಚಮಚ ಸಕ್ಕರೆ 
  6. 2 ಟೇಬಲ್ ಚಮಚ ಹಾಲು
  7. 1 ಟೇಬಲ್ ಚಮಚ ಎಣ್ಣೆ 
  8. 1 ಟೀಸ್ಪೂನ್ ವೆನಿಲ್ಲಾ ಸಾರ ಅಥವಾ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)

ಕ್ರೀಮ್ ಗೆ ಬೇಕಾಗುವ ಪದಾರ್ಥಗಳು: ( 1 ಟೇಬಲ್ ಚಮಚ = 3 ಟೀಸ್ಪೂನ್)

  1. 50gm ಉಪ್ಪುರಹಿತ ಬೆಣ್ಣೆ
  2. 100gm ಐಸಿಂಗ್ ಸಕ್ಕರೆ  (ಸಕ್ಕರೆ ಪುಡಿ + 1/2 ಟೀಸ್ಪೂನ್ ಕಾರ್ನ್ ಫ್ಲೋರ್)
  3. 2 ಟೇಬಲ್ ಚಮಚ ಹಾಲು
  4. ಒಂದು ಚಿಟಿಕೆ ಉಪ್ಪು
  5. 1 ಟೀಸ್ಪೂನ್ ವೆನಿಲ್ಲಾ ಸಾರ ಅಥವಾ ವೆನಿಲ್ಲಾ ಎಸೆನ್ಸ್ (ನಿಮ್ಮಿಷ್ಟದ ಯಾವುದೇ ಎಸೆನ್ಸ್ ಬಳಸಬಹುದು)

ಹಬೆಯಲ್ಲಿ ಬೇಯಿಸಿ ವೆನಿಲ್ಲಾ ಕೇಕ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾ ಹಾಕಿ, ಕಲಸಿ, ಜರಡಿ ಹಿಡಿದಿಟ್ಟುಕೊಳ್ಳಿ.
  2. ಇನ್ನೊಂದು ಬಟ್ಟಲಿನಲ್ಲಿ ಹಾಲು, ಎಣ್ಣೆ, ಅರ್ಧಂಶ ಮೊಸರು, ವೆನಿಲ್ಲಾ ಸಾರ ಮತ್ತು ಸಕ್ಕರೆ ಹಾಕಿ ಕಲಸಿ. 
  3. ಈಗ ಜರಡಿ ಮಾಡಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಚೆನ್ನಾಗಿ ಮಿಶ್ರ ಮಾಡಿ. ಉಳಿದ ಮೊಸರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಕೇಕ್ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. 
  4. ಎಣ್ಣೆ ಅಥವಾ ಬೆಣ್ಣೆ ಹಚ್ಚಿದ ಪಾತ್ರೆಗೆ ಹಾಕಿ, ಇಡ್ಲಿ ಬೇಯಿಸುವ ಹಾಗೆ ಇಪ್ಪತ್ತು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಸ್ಟವ್ ಆಫ್ ಮಾಡುವ ಮುನ್ನ ಒಂದು ಕಡ್ಡಿ ಅಥವಾ ಫೋರ್ಕ್ ನ್ನು ಚುಚ್ಚಿ ಕೇಕ್ ಸಂಪೂರ್ಣ ಬೆಂದಿದೆಯೆಂದು ಖಾತ್ರಿ ಪಡಿಸಿಕೊಳ್ಳಿ. ಚುಚ್ಚಿದ ಕಡ್ಡಿಗೆ ಹಸಿ ಹಿಟ್ಟು ಅಂಟಿರಬಾರದು. ನಿಮ್ಮಲ್ಲಿ ಓವೆನ್ ಇದ್ದರೆ ಓವನ್ ನಲ್ಲಿ ಸಹ ಬೇಕ್ ಮಾಡಬಹುದು. 
  5. ಅಥವಾ ಬೆಣ್ಣೆ ಬಿಸ್ಕತ್ ಮಾಡಿದಂತೆ, ಕುಕ್ಕರ್ ತಳಕ್ಕೆ ಉಪ್ಪು ಅಥವಾ ಮರಳನ್ನು ಹಾಕಿಯೂ ಬೇಯಿಸಬಹುದು.
  6. ಬೇಯಿಸಿದ ಕೇಕ್ ತಣ್ಣಗಾಗುವವರೆಗೆ ಕಾಯಿರಿ. ನಂತರ ಎಚ್ಚರಿಕೆಯಿಂದ ತೆಗೆಯಿರಿ. ಈ ಕೇಕ್ ನ್ನು ಹೀಗೆ ತಿನ್ನಬಹುದು. ಅಥವಾ ಕೆಳಗೆ ತಿಳಿಸಿದಂತೆ ಕ್ರೀಮ್ ಮಾಡಿ, ಹಚ್ಚಿ ತಿನ್ನಬಹುದು. 
  7. ಕೇಕ್ ಗೆ ಕ್ರೀಮ್ ತಯಾರಿಸಲು, ಮೊದಲಿಗೆ ಬೆಣ್ಣೆಯನ್ನು ನಯವಾಗಿಸಿ. ನಂತರ ಹೇಳಿರುವ ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ವಿಸ್ಕ್ ಅಥವಾ ಬೀಟರ್ ನಿಂದ ಚೆನ್ನಾಗಿ ಕಲಸಿ. 
  8. ಕ್ರೀಮ್ ನ್ನು ಕೇಕ್ ಮೇಲೆ ಹಚ್ಚಿ, ಮೇಲಿನಿಂದ ನಿಮ್ಮಿಷ್ಟದಂತೆ ಅಲಂಕಾರ ಮಾಡಿ. ಫ್ರಿಡ್ಜ್ ನಲ್ಲಿ ಹತ್ತು ನಿಮಿಷ ಇಟ್ಟು, ನಂತರ ಸವಿದು ಆನಂದಿಸಿ.

ಗುರುವಾರ, ಡಿಸೆಂಬರ್ 15, 2016

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ

Peas pulao recipe in Kannada

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 1 ಕಪ್ ಹಸಿ ಬಟಾಣಿ 
  3. 1.5 ಕಪ್ ನೀರು
  4. 0.5 ಕಪ್ ತೆಂಗಿನ ಕಾಯಿಹಾಲು
  5. 4 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
  6. 1 ಸಣ್ಣ ಪುಲಾವ್ ಎಲೆ
  7. 1 ಮರಾಟಿ ಮೊಗ್ಗು
  8. 2 ದಳ ಜಾಪತ್ರೆ (ಬೇಕಾದಲ್ಲಿ)
  9. 1 ಏಲಕ್ಕಿ
  10. 1/2 ಬೆರಳುದ್ದ ಚಕ್ಕೆ 
  11. 5 - 6 ಲವಂಗ
  12. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  13. 5 ಗೋಡಂಬಿ ತುಂಡು ಮಾಡಿದ್ದು 
  14. 4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  15. 1 - 2 ಹಸಿರು ಮೆಣಸಿನಕಾಯಿ
  16. 2 ಟೇಬಲ್ ಚಮಚ ಕತ್ತರಿಸಿದ ಪುದೀನಾ ಎಲೆ ಅಥವಾ ಮೆಂತೆ ಸೊಪ್ಪು (ಬೇಕಾದಲ್ಲಿ)
  17. 2 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  18. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  19. 2 ಚಮಚ ನಿಂಬೆ ರಸ (ಬೇಕಾದಲ್ಲಿ)
  20. ಉಪ್ಪು ರುಚಿಗೆ ತಕ್ಕಷ್ಟು


ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ. 
  2. ಬಟಾಣಿ ಸುಲಿಯಿರಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಪುದಿನ ಎಲೆಗಳನ್ನು ಕತ್ತರಿಸಿ. 
  3. ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ. 
  4. ಕುಕ್ಕರ್ ನಲ್ಲಿ ತುಪ್ಪ ಅಥವಾ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
  6. ಕತ್ತರಿಸಿದ ಪುದಿನ ಎಲೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  7. ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಗುಚಿ. 
  8. ಮತ್ತು ಸುಲಿದ ಬಟಾಣಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  9. ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ. 
  10. ನೀರು ಮತ್ತು ತೆಂಗಿನ ಕಾಯಿ ಹಾಲು ಹಾಕಿ ಮಗುಚಿ.
  11. ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. 
  12. ಒತ್ತಡ ಇಳಿದ ಕೂಡಲೇ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಕಲಸಿ. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಸವಿಯಿರಿ.

ಬುಧವಾರ, ಡಿಸೆಂಬರ್ 14, 2016

Alugadde hookosu gojju in Kannada | ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ

Alugadde hookosu gojju in Kannada

Alugadde hookosu gojju in Kannada | ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೂಕೋಸು
  2.  1/2 ಕಪ್ ಕತ್ತರಿಸಿದ ಆಲೂಗಡ್ಡೆ
  3.  1/2 ಕಪ್ ಹಸಿ ಬಟಾಣಿ (ಬದಲಿಗೆ ಆಲೂಗಡ್ಡೆಯನ್ನು ಹೆಚ್ಚಿಸಬಹುದು)
  4.  1/2 ಟೀಸ್ಪೂನ್ ಜೀರಿಗೆ
  5.  1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  6.  1/4 ಟೀಸ್ಪೂನ್ ಗರಂ ಮಸಾಲಾ
  7.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  8. 1/4 ಟೀಸ್ಪೂನ್ ಅರಿಶಿನ ಪುಡಿ 
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು  (ಬೇಕಾದಲ್ಲಿ) 
  11. 1 ಟೇಬಲ್ ಚಮಚ ಅಡುಗೆ ಎಣ್ಣೆ 
  12. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಕತ್ತರಿಸಿದ ಈರುಳ್ಳಿ 
  2. 1 ಕತ್ತರಿಸಿದ ದೊಡ್ಡ ಟೊಮೇಟೊ
  3. 4 ಎಸಳು ಬೆಳ್ಳುಳ್ಳಿ
  4. 1cm ಉದ್ದದ ಶುಂಠಿ

ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ:

  1. ಹೂಕೋಸನ್ನು ಆಯ್ದು, ಕುದಿಯುವ ಉಪ್ಪು ನೀರಿನಲ್ಲಿ ಎರಡು ನಿಮಿಷ ಹಾಕಿ ತೆಗೆದಿಟ್ಟುಕೊಳ್ಳಿ.
  2. ಮಿಕ್ಸಿಯಲ್ಲಿ ಅರೆಯಲು ಹೇಳಿದ ಪದಾರ್ಥಗಳನ್ನು ನುಣ್ಣನೆ ಅರೆದಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ. 
  4. ಜೀರಿಗೆ ಸಿಡಿದ ಮೇಲೆ ಅರೆದ ಪೇಸ್ಟ್ ನ್ನು ಹಾಕಿ ಬಾಡಿಸಿ. 
  5. ನಂತರ ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಮಗುಚಿ. 
  6. ಅದಕ್ಕೆ ಹೂಕೋಸು, ಹೆಚ್ಚಿದ ಆಲೂಗಡ್ಡೆ ಮತ್ತು ಹಸಿ ಬಟಾಣಿಯನ್ನು ಹಾಕಿ.
  7. ರುಚಿಗೆ ತಕ್ಕಷ್ಟು ಉಪ್ಪು ಮತ್ತು ೧ ಕಪ್ ನೀರು ಹಾಕಿ ಕುದಿಸಿ. 
  8. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ತರಕಾರಿಗಳು ಮೆತ್ತಗೆ ಬೇಯುವವರೆಗೆ ಬೇಯಿಸಿ. 
  9. ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
  10. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಮಂಗಳವಾರ, ಡಿಸೆಂಬರ್ 13, 2016

Malnad style gojjavalakki or huli avalakki recipe | ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ

Malnad style gojjavalakki or huli avalakki recipe

Malnad style gojjavalakki or huli avalakki recipe | ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗಟ್ಟಿ ಅವಲಕ್ಕಿ
  2. 1/4 ಕಪ್ ತೆಂಗಿನ ತುರಿ
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  4. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  5. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 2 - 4 ಕೆಂಪು ಮೆಣಸಿನಕಾಯಿ
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. ಚಿಟಿಕೆ ಇಂಗು
  7. 4 - 6 ಕರಿಬೇವಿನ ಎಲೆ
  8. 1/4 ಟೀಸ್ಪೂನ್ ಅರಿಶಿನ ಪುಡಿ
  9. 4 ಟೇಬಲ್ ಚಮಚ ಅಡುಗೆ ಎಣ್ಣೆ

ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ ಮತ್ತು 2 ಟೀಸ್ಪೂನ್ ಕಡಲೆಬೇಳೆಯನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. 
  2. ಗಟ್ಟಿ ಅವಲಕ್ಕಿಯನ್ನು ತೊಳೆದು 5 ನಿಮಿಷಗಳ ಕಾಲ ನೆನೆಸಿ. ನೆನೆಸುವ ಸಮಯ ಅವಲಕ್ಕಿಯ ದಪ್ಪ ಅವಲಂಬಿಸಿ ಬದಲಾಗಬಹುದು. ಹುಣಿಸೇಹಣ್ಣನ್ನು ಸಹ ನೀರಿನಲ್ಲಿ ನೆನೆಸಿಡಿ. 
  3. ಅವಲಕ್ಕಿ ನೆನೆಯುವ ಸಮಯದಲ್ಲಿ ಒಗ್ಗರಣೆಯನ್ನು ತಯಾರು ಮಾಡಿ ಕೊಳ್ಳೋಣ. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ. 
  4. ನಂತರ ಅರಿಶಿನ ಪುಡಿ, ಕರಿಬೇವು ಮತ್ತು ಇಂಗು ಸೇರಿಸಿ ಸ್ಟವ್ ಆಫ್ ಮಾಡಿ.
  5. ಈಗ ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  6. ಚೆನ್ನಾಗಿ ಮಗುಚಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ. 
  7. ಈಗ ನೆನೆಸಿದ ಅವಲಕ್ಕಿಯ ನೀರು ಹಿಂಡಿ ತೆಗೆದು ಹಾಕಿ. 
  8. ಚೆನ್ನಾಗಿ ಕಲಸಿ. 
  9. ಮುಚ್ಚಳವನ್ನು ಮುಚ್ಚಿ. 3 ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
  10. 3 ನಿಮಿಷಗಳ ನಂತರ ಮುಚ್ಚಳವನ್ನು ತೆರೆದು, ಮಾಡಿಟ್ಟ ಮಸಾಲೆ ಪುಡಿ ಮತ್ತು ತೆಂಗಿನ ತುರಿ ಹಾಕಿ. 
  11. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. 
  12. ರುಚಿಕರ ಮಲೆನಾಡು ಶೈಲಿಯ ಗೊಜ್ಜವಲಕ್ಕಿಯನ್ನು ತಿಂದು ಆನಂದಿಸಿ.

ಸೋಮವಾರ, ಡಿಸೆಂಬರ್ 12, 2016

Tomato uppinakayi recipe in Kannada | ಟೊಮೇಟೊ ಉಪ್ಪಿನಕಾಯಿ ಮಾಡುವ ವಿಧಾನ

Tomato uppinakayi recipe in Kannada

Tomato uppinakayi recipe in Kannada | ಟೊಮೇಟೊ ಉಪ್ಪಿನಕಾಯಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು:

  1. 8 ಟೊಮೇಟೊ
  2. 4 ಟಿಸ್ಪೂನ್ ಸಾಸಿವೆ
  3. 5 ಟಿಸ್ಪೂನ್ ಜೀರಿಗೆ
  4. 1/4 ಟಿಸ್ಪೂನ್ ಮೆಂತೆ
  5. 3 - 5 ಟಿಸ್ಪೂನ್ ಕೆಂಪು ಮೆಣಸಿನಪುಡಿ (ನಿಮ್ಮ ರುಚಿಗೆ ತಕ್ಕಂತೆ)
  6. 3 ಟಿಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 8 ಟಿಸ್ಪೂನ್ ಅಡುಗೆ ಎಣ್ಣೆ
  2. 1/2 ಟಿಸ್ಪೂನ್ ಸಾಸಿವೆ
  3. 8 ಕರಿಬೇವಿನ ಎಲೆ
  4. 1/4 ಟಿಸ್ಪೂನ್ ಇಂಗು

ಟೊಮೇಟೊ ಉಪ್ಪಿನಕಾಯಿ ಮಾಡುವ ವಿಧಾನ:

  1. ಟೊಮ್ಯಾಟೊವನ್ನು ತೊಳೆದು, ನೀರಾರಿಸಿ, ದೊಡ್ಡದಾಗಿ ಹೆಚ್ಚಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಹುರಿದು, ಪುಡಿ ಮಾಡಿಟ್ಟುಕೊಳ್ಳಿ. 
  3. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಹೆಚ್ಚಿದ ಟೊಮೇಟೊ, ಉಪ್ಪು, ಮಸಾಲೆ ಪುಡಿ ಮತ್ತು ಕೆಂಪು ಮೆಣಸಿನಪುಡಿ ಹಾಕಿ ಮಗುಚಿ. 
  5. ಸಣ್ಣ ಉರಿಯಲ್ಲಿ 15 - 20 ನಿಮಿಷಗಳ ಕಾಲ ಬೇಯಿಸಿ. ಜಾಸ್ತಿ ಸಮಯ ಕೆಡದೇ ಇರಬೇಕಾದರೆ ನೀರಾರುವವರೆಗೆ ಮಗುಚಿ.  
  6. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ.  ನೀರಾರುವವರೆಗೆ ಮಗುಚಿದಲ್ಲಿ 5 - 6 ತಿಂಗಳುಗಳ ಕಾಲ ಕೆಡುವುದಿಲ್ಲ. ನಿಮಗೆ ಉಪ್ಪಿನಕಾಯಿ ಜಾಸ್ತಿ ಹುಳಿ ಬೇಕೆನಿಸಿದಲ್ಲಿ ಸ್ವಲ್ಪ ನಿಂಬೆ ರಸವನ್ನು ಉಪ್ಪಿನಕಾಯಿ ತಣ್ಣಗಾದ ಮೇಲೆ ಸೇರಿಸಬಹುದು.


ಶುಕ್ರವಾರ, ಡಿಸೆಂಬರ್ 9, 2016

Benne biscuit recipe in Kannada | ಬೆಣ್ಣೆ ಬಿಸ್ಕತ್ ಮಾಡುವ ವಿಧಾನ

Benne biscuit recipe in Kannada

Benne biscuit recipe in Kannada | ಬೆಣ್ಣೆ ಬಿಸ್ಕತ್ ಮಾಡುವ ವಿಧಾನ

ಬೆಣ್ಣೆ ಬಿಸ್ಕತ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
  2. 3/4 ಕಪ್ ಸಕ್ಕರೆ 
  3. 1/4 ಕಪ್ ಒಣ ಕೊಬ್ಬರಿ ಪುಡಿ (ಬೇಕಾದಲ್ಲಿ)
  4. ತುಪ್ಪ ಅಥವಾ ಎಣ್ಣೆ ಹಿಟ್ಟು ಕಲಸಲು 
  5. 1 ಏಲಕ್ಕಿ (ಬೇಕಾದಲ್ಲಿ)

ಬೆಣ್ಣೆ ಬಿಸ್ಕತ್ ಮಾಡುವ ವಿಧಾನ:

  1. ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
  2. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು (ಅಥವಾ ಗೋಧಿ ಹಿಟ್ಟು), ಸಕ್ಕರೆ ಪುಡಿ, ಕೊಬ್ಬರಿ ಪುಡಿ (ಬೇಕಾದಲ್ಲಿ) ಮತ್ತು ತುಪ್ಪ (ಅಥವಾ ಎಣ್ಣೆ) ಹಾಕಿ ಮೆತ್ತಗಿನ ಹಿಟ್ಟನ್ನು ತಯಾರಿಸಿ ಕೊಳ್ಳಿ. 
  3. ಸಣ್ಣ ನೆಲ್ಲಿಕಾಯಿ ಗಾತ್ರದ ಚಪ್ಪಟೆ ಉಂಡೆಗಳನ್ನು ಮಾಡಿ, ಮೈಕ್ರೋವೇವ್ ಓವೆನ್ ನಲ್ಲಿಟ್ಟು, ಕಡಿಮೆ ಉಷ್ಣಾಂಶದಲ್ಲಿ (180W) 7 - 8 ನಿಮಿಷ ಬೇಯಿಸಿ. ಸಮಯ ಓವೆನ್ ನಿಂದ ಓವೆನ್ ಗೆ ಬದಲಾಗಬಹುದು. 
  4. ಓವೆನ್ ಇಲ್ಲವಾದಲ್ಲಿ ಕುಕ್ಕರ್ ತಳಕ್ಕೆ ಉಪ್ಪು ಅಥವಾ ಮರಳನ್ನು ಹಾಕಿ. ಮೇಲಿನಿಂದ ಕುಕ್ಕರ್ ಪ್ಲೇಟ್ ಅಥವಾ ಯಾವುದಾದರೂ ಹಳೆ ಪ್ಲೇಟ್ ಇರಿಸಿ. ಉಪ್ಪು ಬಳಸಿದಲ್ಲಿ ಕುಕ್ಕರ್ ಸ್ವಲ್ಪ ಕಲೆಯಾಗುವ ಕಾರಣ ಹಳೆಯ ಕುಕ್ಕರ್ ಬಳಸುವುದು ಉತ್ತಮ.
  5. ಕುಕ್ಕರ್ ಸ್ವಲ್ಪ ಬಿಸಿ ಆದಮೇಲೆ ಇನ್ನೊಂದು ತಟ್ಟೆಯಲ್ಲಿ ಬಿಸ್ಕತ್ ನ ಉಂಡೆಗಳನ್ನಿರಿಸಿ. 
  6. ಕುಕ್ಕರ್ ನ ಗ್ಯಾಸ್ಕೆಟ್ ಮತ್ತು ವೆಯಿಟ್ ತೆಗೆದು, ಮುಚ್ಚಳ ಮುಚ್ಚಿ, ಹತ್ತು ನಿಮಿಷ ಬೇಯಿಸಿ. 
  7. ಹೀಗೆ ಎಲ್ಲ ಬಿಸ್ಕತ್ ಗಳನ್ನೂ ಮಾಡಿ, ಸವಿದು ಆನಂದಿಸಿ.


ಬುಧವಾರ, ಡಿಸೆಂಬರ್ 7, 2016

balekai chips recipe in Kannada | ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ

balekai chips recipe in Kannada

balekai chips recipe in Kannada | ಬಾಳೆಕಾಯಿ  ಚಿಪ್ಸ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಬಾಳೆಕಾಯಿ
  2. 1/2 ಟೀಸ್ಪೂನ್ ಉಪ್ಪು
  3. 1/4 ಟೀಸ್ಪೂನ್ ಅರಶಿನ
  4. 4 ಟೇಬಲ್ ಚಮಚ ನೀರು
  5. ಎಣ್ಣೆ ಕಾಯಿಸಲು

ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ:

  1. ಬಾಳೆಕಾಯಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ. 
  2. ಒಂದು ಸಣ್ಣ ಬಟ್ಟಲಿನಲ್ಲಿ ನೀರು, ಉಪ್ಪು ಮತ್ತು ಅರಶಿನ ಹಾಕಿ, ಅರಶಿನದ ಉಪ್ಪು ನೀರು ಸಿದ್ಧ ಮಾಡಿಟ್ಟು ಕೊಳ್ಳಿ. 
  3. ಬಾಳೆಕಾಯಿಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಬಾಳೆಕಾಯಿ ಬಿಲ್ಲೆಗಳನ್ನು ಒಂದೊಂದಾಗಿ ಹಾಕಿ. ಅಥವಾ ಸಾಧ್ಯವಾದಲ್ಲಿ ಎಣ್ಣೆಯ ಮೇಲೆ ನೇರವಾಗಿ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ).
  5. ಕಾಯುತ್ತಿರುವ ಚಿಪ್ಸ್ ಗೆ 1/2 ಟೀ ಚಮಚದಷ್ಟು ಅರಶಿನದ ಉಪ್ಪು ನೀರು ಹಾಕಿ. 
  6. ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.

ಮಂಗಳವಾರ, ಡಿಸೆಂಬರ್ 6, 2016

Cheese dose recipe in Kannada | ಚೀಸ್ ದೋಸೆ ಮಾಡುವ ವಿಧಾನ

Cheese dose recipe in Kannada

Cheese dose recipe in Kannada | ಚೀಸ್ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ದೋಸೆಗೆ ಬೇಕಾಗುವಷ್ಟು ಸೆಟ್ ದೋಸೆ ಹಿಟ್ಟು 
  2. 4 ಟೇಬಲ್ ಸ್ಪೂನ್ ತುರಿದ ಚೀಸ್
  3. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ 
  5. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  6. 1/4 ಟೀಸ್ಪೂನ್ ಪಿಜ್ಜಾ ಅಥವಾ ಪಾಸ್ತಾ ಮಸಾಲೆ (ಬೇಕಾದಲ್ಲಿ)
  7. ಬೆಣ್ಣೆ ಅಥವಾ ತುಪ್ಪ ಕಾಯಿಸಲು
  8. ಉಪ್ಪು ರುಚಿಗೆ ತಕ್ಕಷ್ಟು.

ಚೀಸ್ ದೋಸೆ ಮಾಡುವ ವಿಧಾನ:

  1. ಒಂದು ದೊಡ್ಡ ಸೌಟು ಹಿಟ್ಟನ್ನು ಬಿಸಿ ತವಾ ಮೇಲೆ ಸುರಿದು ದೋಸೆ ಮಾಡಿ. 
  2. ಮೇಲಿನಿಂದ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಚೀಸ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. 
  3. ಮುಚ್ಚಳ ಮುಚ್ಚಿ ಬೇಯಿಸಿ. 
  4. ಮುಚ್ಚಳ ತೆರೆದು ಮೇಲಿನಿಂದ ಬೆಣ್ಣೆ ಅಥವಾ ತುಪ್ಪ ಹಾಕಿ. ಜೊತೆಗೆ ಪಿಜ್ಜಾ ಅಥವಾ ಪಾಸ್ತಾ ಮಸಾಲೆಯನ್ನು ಹಾಕಿ. ಅಥವಾ ನಿಮ್ಮಿಷ್ಟದ ಯಾವುದೇ ಮಸಾಲೆಯನ್ನು ಹಾಕಬಹುದು. 
  5. ತವ ಮೇಲೆ ದೋಸೆಯನ್ನು ಮಡಿಸಿ. ಕಾಯಿ ಚಟ್ನಿ ಅಥವಾ ಸಾಗುವಿನೊಂದಿಗೆ ಬಡಿಸಿ. ಮಕ್ಕಳಿಗೆ ಟೊಮೇಟೊ ಸಾಸ್ ನೊಂದಿಗೆ ಕೊಡಬಹುದು.

ಶುಕ್ರವಾರ, ಡಿಸೆಂಬರ್ 2, 2016

Uddina vade recipe in Kannada | ಉದ್ದಿನ ವಡೆ ಮಾಡುವ ವಿಧಾನ

Uddina vade recipe in Kannada

Uddina vade recipe in Kannada | ಉದ್ದಿನ ವಡೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಉದ್ದಿನಬೇಳೆ 
  2. 1/2 ಕಪ್ ಅಕ್ಕಿ
  3. 1/4 ಕಪ್ ನೀರು
  4. 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  5. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  6. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  7. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ತೆಂಗಿನ ಕಾಯಿ (ಬೇಕಾದಲ್ಲಿ)
  8. ನಿಮ್ಮ ರುಚಿ ಪ್ರಕಾರ ಉಪ್ಪು

ಉದ್ದಿನ ವಡೆ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ. 
  2. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಬಟ್ಟಲಿನಲ್ಲಿ ಹಾಕಿ ನೀರಾರಲು ಬಿಡಿ. 
  3. ಅಕ್ಕಿ ನೀರಾರಿದ ಮೇಲೆ, ಒಂದು ಬಾಣಲೆಗೆ ಹಾಕಿ ಬಿಳಿ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. 
  4. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ, ಸಾರಣಿಸಿ ಪಕ್ಕಕ್ಕಿಡಿ. 
  5. ಉದ್ದಿನಬೇಳೆ ನೆನೆದ ನಂತರ ನೀರು ಬಗ್ಗಿಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ರುಬ್ಬಿ ಕೊಳ್ಳಿ. 1/4 ಕಪ್ ನಷ್ಟು ನೀರು ಸೇರಿಸಬಹುದು.
  6. ರುಬ್ಬಿದ ಹಿಟ್ಟನ್ನು ಪಾತ್ರೆಗೆ ಹಾಕಿ. ಅಗತ್ಯವಿದ್ದಷ್ಟು ಹುರಿದು ಸಿದ್ಧ ಪಡಿಸಿದ ಅಕ್ಕಿ ಹಿಟ್ಟನ್ನು ಸೇರಿಸಿ. 
  7. ನಂತರ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಶುಂಠಿ, ತೆಂಗಿನಕಾಯಿ ಮತ್ತು ಉಪ್ಪು ಹಾಕಿ ಕಲಸಿ.
  8. ಈಗ ಕೈಗೆ ನೀರು ಮುಟ್ಟಿಸಿ ವಡೆಗಳನ್ನು ಮಾಡಿ ಬಿಸಿ ಎಣ್ಣೆಯಲ್ಲಿ ಕಾಯಿಸಿ. ವಡೆ ಮಾಡಲು ಕಷ್ಟವೆನಿಸಿದಲ್ಲಿ ಗೋಳಿಬಜೆ ಅಥವಾ ಮಂಗಳೂರು ಬಜ್ಜಿಯಂತೆ ಮಾಡಿ. 
  9. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.


ಗುರುವಾರ, ಡಿಸೆಂಬರ್ 1, 2016

Iyengar puliyogare recipe in Kannada | ಐಯಂಗಾರ್ ಪುಳಿಯೋಗರೆ ಮಾಡುವ ವಿಧಾನ

Iyengar puliyogare recipe in Kannada | ಐಯಂಗಾರ್ ಪುಳಿಯೋಗರೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಸೋನಾ ಮಸೂರಿ ಅಕ್ಕಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 2 ಟೀಸ್ಪೂನ್ ಉದ್ದಿನ ಬೇಳೆ (ಬೇಕಾದಲ್ಲಿ)
  4. 2 ಟೀಸ್ಪೂನ್ ಕಡಲೆಬೇಳೆ 
  5. 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಬೀಜ ಅಥವಾ ಶೇಂಗಾ
  6. 8 - 10 ಗೋಡಂಬಿ
  7. 1 ಟೀಸ್ಪೂನ್ ಎಳ್ಳು
  8. 5 - 6 ಕರಿಬೇವಿನ ಎಲೆ
  9. 2 ಟೇಬಲ್ ಸ್ಪೂನ್ ಕೊಬ್ಬರಿ ತುರಿ
  10. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಪುಳಿಯೋಗರೆ ಮಾಡುವ ವಿಧಾನ:

  1. ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ. 
  2. ನಂತರ ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಹಾಕಿ ಒಗ್ಗರಣೆ ತಯಾರಿಸಿ. 
  3. ನಂತರ ಬೇಯಿಸಿಟ್ಟ ಅನ್ನಕ್ಕೆ, ಒಗ್ಗರಣೆ ಮತ್ತು 2 ಟೇಬಲ್ ಸ್ಪೂನ್ ನಷ್ಟು ಅಥವಾ ರುಚಿಗೆ ತಕ್ಕಷ್ಟು ಗೊಜ್ಜು ಹಾಕಿ ಕಲಸಿ. ಚೆನ್ನಾಗಿ ಕಲಸಿ ಬಡಿಸಿ.

Iyengar style puliyogare gojju recipe in Kannada | ಐಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ

Iyengar style puliyogare gojju recipe | ಐಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು - ಸಣ್ಣ ಅಳತೆ: ( ಅಳತೆ ಕಪ್ = 240 ಎಂಎಲ್)

  1. 6 ಟೇಬಲ್ ಚಮಚ ಪುಳಿಯೋಗರೆ ಪುಡಿ ಅಥವಾ ಮೈಸೂರು ಸಾರಿನ ಪುಡಿ 
  2. 1/4 ಕಪ್ ಅಡುಗೆ ಎಣ್ಣೆ 
  3. ಕಿತ್ತಳೆ ಗಾತ್ರದ ಹುಣಸೆ ಹಣ್ಣು 
  4. ಕಿತ್ತಳೆ ಗಾತ್ರದ ಬೆಲ್ಲ 
  5. 5 ಟೇಬಲ್ ಚಮಚ ಎಳ್ಳು
  6. 3 ಟೇಬಲ್ ಚಮಚ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)

ಬೇಕಾಗುವ ಪದಾರ್ಥಗಳು - ದೊಡ್ಡ ಅಳತೆ:

  1. 100gm ಪುಳಿಯೋಗರೆ ಪುಡಿ ಅಥವಾ ಮೈಸೂರು ಸಾರಿನ ಪುಡಿ 
  2. 50gm ಅಡುಗೆ ಎಣ್ಣೆ 
  3. 1/4kg ಹುಣಸೆ ಹಣ್ಣು 
  4. 1/2kg ಬೆಲ್ಲ 
  5. 100gm ಎಳ್ಳು
  6. ಉಪ್ಪು ನಿಮ್ಮ ರುಚಿ ಪ್ರಕಾರ

ಐಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ :

  1. ಹುಣಿಸೆಹಣ್ಣನ್ನು 3 ಕಪ್ ನೀರಿನಲ್ಲಿ ನೆನೆಸಿಡಿ. 
  2. ಎಳ್ಳನ್ನು ಎಣ್ಣೆ ಹಾಕದೆ ಹುರಿಯಿರಿ. ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  3. ನಂತರ ಬಾಣಲೆಯಲ್ಲಿ ಹುಣಿಸೆರಸ ಹಾಕಿ ಕುದಿಯಲು ಇಡಿ. 
  4. ಅದಕ್ಕೆ ಬೆಲ್ಲ ಮತ್ತು ಸಾರಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. 
  5. ನಂತರ ೧/೪ ಕಪ್ ಎಣ್ಣೆ ಹಾಕಿ ಮತ್ತು ಉಪ್ಪು ಹಾಕಿ. ಸಣ್ಣ ಉರಿಯಲ್ಲಿ ಮಗುಚುತ್ತಾ ಕುದಿಸುವುದನ್ನು ಮುಂದುವರೆಸಿ. 
  6. ಗೊಜ್ಜು ಸ್ವಲ್ಪ ಗಟ್ಟಿಯಾದಾಗ ಎಳ್ಳಿನ ಪುಡಿ ಸೇರಿಸಿ. 
  7. ಒಂದೆರಡು ನಿಮಿಷದಲ್ಲಿ ಗೊಜ್ಜು ಎಣ್ಣೆ ಬಿಡಲು ಪ್ರಾರಂಭಿಸಿದಾಗ ಸ್ಟವ್ ಆಫ್ ಮಾಡಿ. ಪುಳಿಯೋಗರೆ ಗೊಜ್ಜು ತಯಾರಾಯಿತು. 
  8. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
Related Posts Plugin for WordPress, Blogger...