Athrasa or Kajjaya recipe in Kannada | ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ
ಅತ್ರಾಸ ಅಥವಾ ಕಜ್ಜಾಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.25 ಕಪ್ ಅಕ್ಕಿ
- 1 ಕಪ್ ಬೆಲ್ಲ
- 1/4 ಕಪ್ ನೀರು
- 5 ಚಮಚ ತುಪ್ಪ ಅಥವಾ ಎಣ್ಣೆ
- 2 ಏಲಕ್ಕಿ
- 2 ಟೇಬಲ್ ಚಮಚ ಬಿಳಿ ಎಳ್ಳು (ಬೇಕಾದಲ್ಲಿ)
- 1 ಟೇಬಲ್ ಚಮಚ ಗಸಗಸೆ (ಬೇಕಾದಲ್ಲಿ)
- ಕಾಯಿಸಲು ತುಪ್ಪ ಅಥವಾ ಎಣ್ಣೆ
ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 2 ಗಂಟೆ ಕಾಲ ನೆನೆಯಲು ಬಿಡಿ.
- 2 ಗಂಟೆಯ ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಒಂದು ಬಟ್ಟೆಯಲ್ಲಿ ಹರಡಿ ನೀರಾರಲು ಬಿಡಿ.
- ಸುಮಾರು ಒಂದು ಘಂಟೆಯ ನಂತರ ಅಥವಾ ಅಕ್ಕಿ ಸ್ವಲ್ಪ ಒದ್ದೆಯಿರುವಾಗ ಮಿಕ್ಸಿಯಲ್ಲಿ, ಏಲಕ್ಕಿಯೊಂದಿಗೆ ಪುಡಿ ಮಾಡಿ.
- ಸಾರಣಿಸಿ ಅಥವಾ ಜರಡಿ ಹಿಡಿದು ನಯವಾದ ಅಕ್ಕಿ ಹಿಟ್ಟನ್ನು ಸಿದ್ಧ ಮಾಡಿ. ಒಂದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ.
- ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ.
- ಒಂದೆಳೆ ಪಾಕ ಮಾಡಿ ಅಥವಾ ನೀರಿನಲ್ಲಿ ಸ್ವಲ್ಪ ಬೆಲ್ಲದ ಪಾಕ ಹಾಕಿದಾಗ ಮೆತ್ತಗಿನ ಮುದ್ದೆಯಾಗುವವರೆಗೆ ಅಥವಾ ನೊರೆ ನೊರೆಯಾದ ದಪ್ಪ ಪಾಕ ಆಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ.
- ಕೂಡಲೇ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ. ದಪ್ಪ ಪೇಸ್ಟ್ ನಂತಹ ಹಿಟ್ಟು ರೆಡಿಯಾಗುವುದು.
- ಸ್ವಲ್ಪ ಬಿಸಿ ಆರಿದ ಮೇಲೆ ಒಂದು ಸ್ಟೀಲ್ ಡಬ್ಬಕ್ಕೆ ಹಾಕಿ ಮೇಲಿನಿಂದ 5 ಚಮಚ ತುಪ್ಪ ಅಥವಾ ಎಣ್ಣೆ ಸುರಿದು ಮುಚ್ಚಿಡಿ.
- ಸಂಪೂರ್ಣ ತಣ್ಣಗಾದ ಮೇಲೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರುವುದನ್ನು ನೀವು ಗಮನಿಸಬಹುದು. ಆದರೂ ಒಂದು ಕೈಯಲ್ಲಿ ತೆಗೆದು ಉಂಡೆ ಮಾಡುವಷ್ಟು ಮೆತ್ತಗಿರುತ್ತದೆ. ಸಾಧ್ಯವಾದಲ್ಲಿ ಒಂದು ದಿನ ಇಟ್ಟರೆ ಅತ್ರಸ ಅಥವಾ ಕಜ್ಜಾಯ ಚೆನ್ನಾಗಿ ಬರುವುದು.
- ಸಣ್ಣ ನಿಂಬೆ ಗಾತ್ರದ ಉಂಡೆ ತೆಗೆದುಕೊಂಡು ಎಣ್ಣೆ ಹಚ್ಚಿದ ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ತಟ್ಟಿ ಬಿಸಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕಾಯಿಸಿ.
- ಗಮನಿಸಿ ಎಣ್ಣೆ ಬಿಸಿ ಇರಬೇಕು. ಕಾಯಿಸುವುದು ಸಣ್ಣ ಉರಿಯಲ್ಲಿ ಆಗಬೇಕು. ಕಜ್ಜಾಯ ಅಥವಾ ಅತ್ರಸ ಬೇಗನೆ ಕಾಯುತ್ತದೆ. ಸ್ವರ ಅಥವಾ ಗುಳ್ಳೆ ನಿಂತ ಕೂಡಲೇ ತೆಗೆಯಿರಿ. ಜಾಸ್ತಿ ಕಾಯಿಸಿದರೆ ತುಂಬ ಗರಿ ಗರಿಯಾಗುವುದು.
- ತೆಗೆಯುವ ಮೊದಲು ಎರಡು ಸಟ್ಟುಗದಿಂದ ಒತ್ತಿದಲ್ಲಿ ಹೆಚ್ಚಿನ ಎಣ್ಣೆ ತೆಗೆಯಬಹುದು.
- ತಣ್ಣಗಾದ ಮೇಲೆ ಡಬ್ಬದಲ್ಲಿ ತುಂಬಿಸಿಡಿ. ರುಚಿ ರುಚಿಯಾದ ಕಜ್ಜಾಯ ಸವಿದು ಆನಂದಿಸಿ. ದೀಪಾವಳಿ ಹಬ್ಬದ ಶುಭಾಶಯಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ