Navane or siri dhanya pongal recipe in Kannada | ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ನವಣೆ ಅಥವಾ ಇನ್ನಾವುದೇ ಸಿರಿಧಾನ್ಯ
- 1/2 ಕಪ್ ಹೆಸರುಬೇಳೆ
- 4 ಟೇಬಲ್ ಸ್ಪೂನ್ ತುಪ್ಪ
- 1/2 ಟೀ ಸ್ಪೂನ್ ಜೀರಿಗೆ
- 1/4 ಟೀ ಸ್ಪೂನ್ ಅರಶಿನ ಪುಡಿ
- 1/2 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
- 8 - 10 ಗೋಡಂಬಿ
- 1-2 ಹಸಿರುಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- 8 - 10 ಕರಿಬೇವಿನ ಎಲೆ
- 1/4 ಕಪ್ ತೆಂಗಿನತುರಿ
- ಉಪ್ಪು ರುಚಿಗೆ ತಕ್ಕಷ್ಟು
ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ:
- ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
- ಒಂದು ಕುಕ್ಕರ್‌ನಲ್ಲಿ ಹುರಿದ ಹೆಸರುಬೇಳೆ ಮತ್ತು ನವಣೆಯನ್ನು ಹಾಕಿ ತೊಳೆಯಿರಿ. ನಂತರ 3 ಕಪ್ ನೀರು ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
- ಈಗ ಶುಂಠಿಯನ್ನು ಕತ್ತರಿಸಿ, ಕಾಳುಮೆಣಸನ್ನು ಜಜ್ಜಿ, ಗೋಡಂಬಿಯನ್ನು ತುಂಡು ಮಾಡಿ, ತೆಂಗಿನಕಾಯಿ ತುರಿದಿಟ್ಟುಕೊಳ್ಳಿ ಮತ್ತು ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
- ನಂತರ ಒಂದು ಬಾಣಲೆಯನ್ನು ಬಿಸಿಮಾಡಿ, ತುಪ್ಪ ಮತ್ತು ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು ಮತ್ತು ಅರಶಿನ ಪುಡಿಯನ್ನು ಹಾಕಿ. ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
- ತೆಂಗಿನ ತುರಿಯನ್ನು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಈಗ ಬೇಯಿಸಿದ ನವಣೆ ಮತ್ತು ಬೇಳೆ ಮಿಶ್ರಣವನ್ನು ಹಾಕಿ.
- ಸುಮಾರು 1 ಕಪ್ ನಷ್ಟು ನೀರು ಅಥವಾ ಬಿಸಿಬೇಳೆಬಾತ್ ನಂತೆ ತೆಳ್ಳಗಾಗುವಷ್ಟು ನೀರು ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಸಿ. ಬಿಸಿ ಬಿಸಿ ಮತ್ತು ಆರೋಗ್ಯದಾಯಕ ನವಣೆ ಪೊಂಗಲ್ ನ್ನು ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ