Rave parota recipe in Kannada | ರವೇ ಪರೋಟ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1.5 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
4 ಟೀಸ್ಪೂನ್ ಅಡುಗೆ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು.
ಸ್ಟಫ್ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ರವೇ
1/2 ಕಪ್ ಹಾಲು
1/2 ಕಪ್ ನೀರು
1 ಟೀಸ್ಪೂನ್ ತುಪ್ಪ
2 ಟೀಸ್ಪೂನ್ ಸಕ್ಕರೆ
ರವೇ ಪರೋಟ ಮಾಡುವ ವಿಧಾನ:
ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ.
ಒಂದು ಪಾತ್ರೆಯಲ್ಲಿ ಹಾಲು, ನೀರು ಮತ್ತು ಸಕ್ಕರೆಯನ್ನು ಹಾಕಿ ಕುದಿಯಲು ಇಡಿ.
ಕುದಿಯಲು ಪ್ರಾರಂಭವಾದ ಕೂಡಲೇ ರವೆಯನ್ನು ಹಾಕಿ ಮಗುಚಿ.
ಪೇಸ್ಟ್ ನಂತಾದಾಗ ಸ್ಟವ್ ಆಫ್ ಮಾಡಿ. ಏಕೆಂದರೆ ಬಿಸಿ ಆರಿದ ಮೇಲೆ ಗಟ್ಟಿ ಆಗುತ್ತದೆ.
1 ಟೀಸ್ಪೂನ್ ತುಪ್ಪ ಹಾಕಿ, ಮಗುಚಿ, ತಣ್ಣಗಾಗಲು ಬಿಡಿ.
ತಣ್ಣಗಾದ ಮೇಲೆ ರವೆಯ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಈ ರವೆ ಉಂಡೆಗಳು ಮೃದುವಾಗಿರಬೇಕು. ಇಲ್ಲವಾದಲ್ಲಿ ಸ್ವಲ್ಪ ಹಾಲು ಹಾಕಿ ಕಲಸಿ, ಸರಿ ಮಾಡಿಕೊಳ್ಳಿ.
ಈಗ ರವೇ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಒಂದು ಬಟ್ಟಲಿನ ಆಕಾರ ಮಾಡಿ. ಅದರೊಳಗೆ ಒಂದು ರವೇ ಉಂಡೆಯನ್ನು ಇರಿಸಿ.
ತುದಿಗಳನ್ನು ಒಟ್ಟಿಗೆ ತಂದು ರವೆಯನ್ನು ಒಳಗೆ ಸೇರಿಸಿ.
ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ರವೇ ಸೇರಿಸಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ.
ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಯಾವುದೇ ಗೊಜ್ಜು ಅಥವಾ ಸಕ್ಕರೆ-ತುಪ್ಪ ದೊಂದಿಗೆ ಬಡಿಸಿ.
Rave idli recipe in Kannada | ರವೇ ಇಡ್ಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಮೀಡಿಯಂ ರವೆ
1/2 ಕಪ್ ಮೊಸರು (ಹುಳಿ ಇದ್ದರೆ ಉತ್ತಮ)
1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
1/4 ಟೀಸ್ಪೂನ್ ಅಡುಗೆ ಸೋಡಾ ಅಥವಾ 1/2 ಟೀಸ್ಪೂನ್ ಏನೊ ಫ್ರೂಟ್ ಸಾಲ್ಟ್
ಎಣ್ಣೆ ಅಥವಾ ತುಪ್ಪ (ಇಡ್ಲಿ ತಟ್ಟೆಗೆ ಹಚ್ಚಲು)
2 ಟೇಬಲ್ ಸ್ಪೂನ್ ಕ್ಯಾರಟ್ ತುರಿ
8 - 10 ಹುರಿದ ಗೋಡಂಬಿ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಉದ್ದಿನಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
ಚಿಟಿಕೆ ಇಂಗು
ಚಿಟಿಕೆ ಅರಿಶಿನ ಪುಡಿ
2 ಟೀಸ್ಪೂನ್ ಅಡುಗೆ ಎಣ್ಣೆ
ರವೇ ಇಡ್ಲಿ ಮಾಡುವ ವಿಧಾನ:
ಒಂದು ಬಾಣಲೆ ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
ಸಾಸಿವೆ ಸಿಡಿದ ಕೂಡಲೇ ಹೆಚ್ಚಿದ ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ ಹುರಿಯಿರಿ.
ನಂತರ ಇಂಗು ಮತ್ತು ಅರಿಶಿನ ಪುಡಿ ಸೇರಿಸಿ.
ಕೂಡಲೇ ರವೇ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಒಂದೈದು ನಿಮಿಷ ಹುರಿಯಬೇಕಾಗಬಹುದು.
ಆಮೇಲೆ ಹುರಿದ ರವೆಯನ್ನು ಒಂದು ಪಾತ್ರೆಗೆ ಹಾಕಿ.
ಬಿಸಿ ಆರಿದ ಮೇಲೆ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
ಮೊಸರು ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ.
ಅಡುಗೆ ಸೋಡಾ ಬಳಸುತ್ತೀರಾದಲ್ಲಿ ಅಡುಗೆ ಸೋಡಾ ಬೆರೆಸಿ ಅರ್ಧ ಘಂಟೆ ಬಿಡಿ. ಏನೊ ಫ್ರೂಟ್ ಸಾಲ್ಟ್ ಆದಲ್ಲಿ ಬೆರೆಸಿದ ಕೂಡಲೇ ಇಡ್ಲಿ ಮಾಡಿ.
ಇಡ್ಲಿ ಮಾಡಲು ತುಪ್ಪ ಅಥವಾ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ 10 - 12 ನಿಮಿಷ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
Balehannu dose recipe in Kannada | ಬಾಳೆಹಣ್ಣು ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )
1 ಕಪ್ ದೋಸೆ ಅಕ್ಕಿ
1 ಟೀಸ್ಪೂನ್ ಮೆಂತ್ಯ
1/4 ಕಪ್ ಅವಲಕ್ಕಿ
2 ದೊಡ್ಡ ಬಾಳೆಹಣ್ಣು ಅಥವಾ 4 ಸಣ್ಣ ಬಾಳೆಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
ಬಾಳೆಹಣ್ಣು ದೋಸೆ ಮಾಡುವ ವಿಧಾನ:
ಅಕ್ಕಿ ಮತ್ತು ಮೆಂತೆಯನ್ನು ತೊಳೆದು 3 - 4 ಘಂಟೆಗಳ ಕಾಲ ನೆನೆಸಿ.
ಅರೆಯುವ ಮೊದಲು ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆ ಹಾಕಿ.
ನೆನೆಸಿದ ನಂತರ ನೀರು ಬಗ್ಗಿಸಿ ತೆಗೆಯಿರಿ. ಅಕ್ಕಿ, ಮೆಂತೆ, ಅವಲಕ್ಕಿ ಮತ್ತು ಸಿಪ್ಪೆ ಸುಲಿದ ಬಾಳೆಹಣ್ಣನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಸುರಿಯಿರಿ. ಮುಚ್ಚಳ ಮುಚ್ಚಿ 7 - 8 ಘಂಟೆಗಳ ಕಾಲ ಅಥವಾ ಒಂದು ರಾತ್ರಿ ಹುದುಗಲು ಬಿಡಿ.
ಮಾರನೇ ದಿನ ಉಪ್ಪು ಹಾಕಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ದೋಸೆ ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
ಬಿಸಿ ದೋಸೆ ಕಾವಲಿಗೆ ಎಣ್ಣೆ ಸವರಿ ಒಂದು ಸೌಟು ಹಿಟ್ಟನ್ನು ಸುರಿಯಿರಿ. ತುಂಬ ತೆಳ್ಳಗೆ ಮಾಡ ಬೇಡಿ.
ಕೆಲವು ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ತುಪ್ಪ ಅಥವಾ ಎಣ್ಣೆ ಹಾಕಿ. ದೋಸೆಯನ್ನು ತೆಗೆಯಿರಿ. ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗು ನೊಂದಿಗೆ ಬಡಿಸಿ.
Ragi halbai recipe in Kannada | ರಾಗಿ ಹಾಲ್ಬಾಯಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ರಾಗಿ
1/4 ಕಪ್ ತೆಂಗಿನ ತುರಿ
1/2 ಕಪ್ ಬೆಲ್ಲ
1 ಟೇಬಲ್ ಸ್ಪೂನ್ ತುಪ್ಪ
ಒಂದು ಚಿಟಿಕೆ ಏಲಕ್ಕಿ ಪುಡಿ
1.25 ಕಪ್ ನೀರು (ಅರೆಯಲು ಬಳಸಿದ ನೀರನ್ನು ಸೇರಿಸಿದೆ)
ರಾಗಿ ಹಾಲ್ಬಾಯಿ ಮಾಡುವ ವಿಧಾನ:
ರಾಗಿಯನ್ನು ತೊಳೆದು 3-4 ಗಂಟೆಗಳ ಕಾಲ ನೆನೆಯಲು ಬಿಡಿ.
ಬೆಲ್ಲಕ್ಕೆ 1/4 ಕಪ್ ನೀರು ಹಾಕಿ ಕುದಿಸಿ. ಒಂದು ಕುದಿ ಬಂದ ಕೂಡಲೇ ಸ್ಟವ್ ಆಫ್ ಮಾಡಿ. ಇದನ್ನು ನಾವು ಸ್ವಲ್ಪ ಸಮಯದ ನಂತರ ಉಪಯೋಗಿಸುತ್ತೇವೆ.
ನೆನೆಸಿದ ರಾಗಿ ಮತ್ತು ತೆಂಗಿನ ತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.
ಅರೆದ ನಂತರ, ಬಟ್ಟೆ ಅಥವಾ ಜರಡಿಯ ಸಹಾಯದಿಂದ ಸೋಸಿ. ಸೋಸಿ ಉಳಿದ ಮಿಶ್ರಣಕ್ಕೆ ಪುನಃ ನೀರು ಸೇರಿಸಿ ಅರೆಯಿರಿ. ಹೀಗೆ 2 ಬಾರಿ ಅರೆದು ಸೋಸಿ, ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ತೆಗೆಯಿರಿ.
ಒಂದು ದಪ್ಪ ತಳದ ಬಾಣಲೆಗೆ ಸೋಸಿದ ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ಸುರಿಯಿರಿ. ಉಳಿದ ನೀರನ್ನು ಸೇರಿಸಿ ಮತ್ತು ಬೆಲ್ಲದ ನೀರನ್ನು ಸೋಸಿ, ಸೇರಿಸಿ.
ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ.
ಗಟ್ಟಿಯಾದ ಕೂಡಲೇ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
ಸ್ವಲ್ಪ ಸಮಯದ ನಂತರ ಹಾಲುಬಾಯಿಯಲ್ಲಿ ಹೊಳತೆ ಕಾಣಬಹುದು ಮತ್ತು ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಪ್ಲೇಟ್ ಗೆ ಸುರಿಯಿರಿ. ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿದು ಆನಂದಿಸಿ.