Avarekalu akki rotti recipe in Kannada | ಅವರೇಕಾಳು ಅಕ್ಕಿರೊಟ್ಟಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿಹಿಟ್ಟು
1.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
1 ಕಪ್ ಅವರೇಕಾಳು
2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
2 ಸಣ್ಣಗೆ ಹೆಚ್ಚಿದ ಈರುಳ್ಳಿ
1/2 ಕಪ್ ತೆಂಗಿನ ತುರಿ
4 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀಸ್ಪೂನ್ ಜೀರಿಗೆ
ಉಪ್ಪು ರುಚಿಗೆ ತಕ್ಕಷ್ಟು
1/4 ಟೀಸ್ಪೂನ್ ಇಂಗು
1/4 ಕಪ್ ಅಡುಗೆ ಎಣ್ಣೆ
25x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಅವರೇಕಾಳು ಅಕ್ಕಿ ರೊಟ್ಟಿ ಮಾಡುವ ವಿಧಾನ:
ಅವರೇಕಾಳನ್ನು ಕುಕ್ಕರ್ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ.
ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
ಈಗ ಬೇಯಿಸಿದ ಅವರೇಕಾಳು, ಕತ್ತರಿಸಿದ ಈರುಳ್ಳಿ , ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಜೀರಿಗೆ, ತೆಂಗಿನ ತುರಿ ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.
Rave dose recipe in Kannada | ರವೆ ದೋಸೆ ಮಾಡುವ ವಿಧಾನ
Quick Video: Rave dose recipe
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ ಹಿಟ್ಟು
1/4 ಕಪ್ ಮೀಡಿಯಂ ರವೆ
1/8 ಕಪ್ ಮೈದಾ ಹಿಟ್ಟು
2.5 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ; ದೋಸೆಕಲ್ಲು ಮತ್ತು ಹಿಟ್ಟಿನ ಗುಣಮಟ್ಟ ಅವಲಂಬಿಸಿ)
ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು)
ಉಪ್ಪು ರುಚಿಗೆ ತಕ್ಕಷ್ಟು
ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
5 - 6 ಜಜ್ಜಿದ ಕಾಳುಮೆಣಸು
1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1 ಟೇಬಲ್ ಚಮಚ ತೆಂಗಿನ ತುರಿ (ನಾನು ಬಳಸಲಿಲ್ಲ)
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
ಚಿಟಿಕೆ ಇಂಗು (ನಾನು ಬಳಸಲಿಲ್ಲ)
ಚಿಟಿಕೆ ಅರಿಶಿನ ಪುಡಿ (ನಾನು ಬಳಸಲಿಲ್ಲ)
ರವೆ ದೋಸೆ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಹಿಟ್ಟು ತೆಗೆದುಕೊಳ್ಳಿ.
ನೀರು, ಉಪ್ಪು ಮತ್ತು ನಿಮ್ಮಿಚ್ಛೆಯ ಪದಾರ್ಥಗಳನ್ನು ಸೇರಿಸಿ. ನಾನು ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕಾಳುಮೆಣಸು ಮತ್ತು ಶುಂಠಿ ಬಳಸಿದ್ದೇನೆ.
ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. ಗಮನಿಸಿ ರವೆ ದೋಸೆ ಹಿಟ್ಟು ನೀರ್ ದೋಸೆಯಂತೆ ತೆಳ್ಳಗಿರುತ್ತದೆ.
ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
Uppu huli or masale neer dose recipe in Kannada | ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
1/2 ಕಪ್ ತೆಂಗಿನ ತುರಿ
3 ಕಪ್ ನೀರು (ಅರೆಯುವ ನೀರು ಸೇರಿಸಿ)
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
2 - 4 ಕೆಂಪು ಮೆಣಸಿನಕಾಯಿ
1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ.
ನೀರ್ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಸೇರಿಸಿ. ಬೇಕಾದಲ್ಲಿ ಹಸಿರು ಮೆಣಸಿನಕಾಯಿ ಮತ್ತು ಬೆಲ್ಲ ಸೇರಿಸಿ.
ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ.
ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.
Palak parota recipe in Kannada | ಪಾಲಕ್ ಪರೋಟ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
ಗೋಧಿ ಹಿಟ್ಟು (10 ದೊಡ್ಡ ಚಪಾತಿಗಾಗುವಷ್ಟು)
1 ಕಟ್ಟು ಪಾಲಕ್ ಸೊಪ್ಪು
1ಸೆಮೀ ಉದ್ದದ ಶುಂಠಿ
4 ಬೇಳೆ ಬೆಳ್ಳುಳ್ಳಿ
1 - 2 ಹಸಿರು ಮೆಣಸಿನಕಾಯಿ
2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
1/4 ಟೀಸ್ಪೂನ್ ಓಮ ಅಥವಾ ಅಜವೈನ್
10 ಟೀಸ್ಪೂನ್ ಅಡುಗೆ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಪಾಲಕ್ ಪರೋಟ ಮಾಡುವ ವಿಧಾನ:
ಪಾಲಕ್ ಸೊಪ್ಪನ್ನು ತೊಳೆದು ಕತ್ತರಿಸಿ.
ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಆದಷ್ಟು ಕಡಿಮೆ ನೀರು ಉಪಯೋಗಿಸಿ.
ನಂತರ ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಂಡು, ಅದಕ್ಕೆ ಅರೆದ ಪಾಲಕ್ ಸೊಪ್ಪಿನ ಮಿಶ್ರಣ, ಉಪ್ಪು ಮತ್ತು ಓಮ (ಅಜವೈನ್) ಹಾಕಿ ಕಲಸಿ.
ಕೊನೆಯಲ್ಲಿ 4 ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಇಪ್ಪತ್ತು ನಿಮಿಷ ಮುಚ್ಚಿಡಿ.
ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
Hesaru bele saaru recipe in Kannada | ಹೆಸರುಬೇಳೆ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/4 ಕಪ್ ಹೆಸರುಬೇಳೆ
1/2 ಕಪ್ ತೆಂಗಿನತುರಿ
1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
1/4 ಟೀಸ್ಪೂನ್ ಸಾಸಿವೆ
1.5 ಲೀ ನೀರು
4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
ಒಂದು ಚಿಟಿಕೆ ಅರಶಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/4 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಜೀರಿಗೆ
ಒಂದು ದೊಡ್ಡ ಚಿಟಿಕೆ ಇಂಗು
4 - 5 ಕರಿಬೇವಿನ ಎಲೆ
1 ಟೀಸ್ಪೂನ್ ಅಡುಗೆ ಎಣ್ಣೆ
ಹೆಸರುಬೇಳೆ ಸಾರು ಮಾಡುವ ವಿಧಾನ:
ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ, ಅರಶಿನ ಮತ್ತು ಹಸಿರು ಮೆಣಸಿನ ಕಾಯಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಕಾದಲ್ಲಿ ಹಸಿರು ಮೆಣಸಿನ ಕಾಯಿಯನ್ನು ಅರೆಯುವಾಗ ಸೇರಿಸಿಯಬಹುದು
ತೆಂಗಿನತುರಿ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆಗೆ ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪು, ಉಳಿದ ನೀರು ಸೇರಿಸಿ ಕುದಿಸಿ.
ಸ್ಟವ್ ಆಫ್ ಮಡಿದ ಮೇಲೆ ಲಿಂಬೆ ಹಣ್ಣಿನ ರಸ ಸೇರಿಸಿ.
ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Oodhalu or siridhanya dose recipe in Kannada | ಊಧಲು ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
1 ಕಪ್ ಊಧಲು ಅಥವಾ ಯಾವುದೇ ಸಿರಿಧಾನ್ಯ
1/3 ಕಪ್ ಉದ್ದಿನ ಬೇಳೆ
1/2 ಟೀಸ್ಪೂನ್ ಮೆಂತ್ಯ
2 - 4 ಟೇಬಲ್ ಚಮಚ ದಪ್ಪ ಅವಲಕ್ಕಿ / ಗಟ್ಟಿ ಆವಲಕ್ಕಿ
ಉಪ್ಪು ರುಚಿಗೆ ತಕ್ಕಷ್ಟು.
ದೋಸೆ ಹಿಟ್ಟು ಮಾಡುವ ವಿಧಾನ:
ಸಿರಿಧಾನ್ಯ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
ಅವಲಕ್ಕಿ ಯನ್ನು ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ತೆಳು ಅವಲಕ್ಕಿ ಆದಲ್ಲಿ ನೆನೆಸಬೇಕಾಗಿಲ್ಲ.
ನೆನೆಸಿದ ನಂತರ ನೀರು ಬಗ್ಗಿಸಿ. ಸಿರಿಧಾನ್ಯ, ಉದ್ದಿನಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಅಗತ್ಯವಿದ್ಧಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಅರೆದು ಒಂದು ಪಾತ್ರೆಗೆ ಹಾಕಿ.
ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಉದ್ದಿನ ದೋಸೆ ಮಾಡುವ ವಿಧಾನ:
ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿಮಾಡಿ ಕೊಳ್ಳಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
Mosaru kodu bale recipe in Kannada | ಮೊಸರು ಕೋಡುಬಳೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1/2 ಕಪ್ ಅಕ್ಕಿ ಹಿಟ್ಟು
1/2 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
1/2 ಕಪ್ ನೀರು
1 - 2 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು
1 ಟೀಸ್ಪೂನ್ ಜೀರಿಗೆ
2 ಟೀಸ್ಪೂನ್ ಹೆಸರುಬೇಳೆ
1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೇಬಲ್ ಚಮಚ ಹೆಚ್ಚಿದ ಕರಿಬೇವು
ಒಂದು ದೊಡ್ಡ ಚಿಟಿಕೆ ಇಂಗು
ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಎಣ್ಣೆ ಕೋಡುಬಳೆ ಕಾಯಿಸಲು
ಮೊಸರು ಕೋಡುಬಳೆ ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಮೊಸರು, ನೀರು, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಜೀರಿಗೆ, ಹೆಸರುಬೇಳೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹೆಚ್ಚಿದ ಕರಿಬೇವು, ಇಂಗು, ಉಪ್ಪು ಮತ್ತು ಒಂದು ಚಮಚ ಎಣ್ಣೆ ತೆಗೆದುಕೊಳ್ಳಿ.
ಸ್ಟವ್ ಮೇಲಿಟ್ಟು ಒಂದು ನಿಮಿಷ ಕುದಿಸಿ.
ನಂತರ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
ಬಿಸಿ ಆರಿದ ಮೇಲೆ ಹಿಟ್ಟನ್ನು ಕೈಯಿಂದ ಚೆನ್ನಾಗಿ ನಾದಿ.
ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು, ಕೋಡುಬಳೆಗಳನ್ನು ಮಾಡಿ.
ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಈ ಕೋಡುಬಳೆ ಕೆಂಪಾಗಬಾರದು ಮತ್ತು ಗರಿಗರಿ ಇರುವುದಿಲ್ಲ. ಹಾಗಾಗಿ ಸ್ವಲ್ಪ ಹೊಂಬಣ್ಣ ಬಂಡ ಕೂಡಲೇ ತೆಗೆಯಿರಿ. ಬಿಸಿ ಚಹಾದೊಂದಿಗೆ ಅಥವಾ ಬೆಳಗ್ಗಿನ ತಿಂಡಿಯೊಂದಿಗೆ ಸವಿದು ಆನಂದಿಸಿ.
Sambar powder recipe in Kannada | ಸಾಂಬಾರ್ ಪೌಡರ್ ಮಾಡುವ ವಿಧಾನ
ಸಾಂಬಾರ್ ಪೌಡರ್ ವಿಡಿಯೋ
ಬೇಕಾಗುವ ಪದಾರ್ಥಗಳು - ಉಡುಪಿ ಶೈಲಿ: (ಅಳತೆ ಕಪ್ = 240 ಎಂ ಎಲ್)
15 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
6 ಚಮಚ ಉದ್ದಿನಬೇಳೆ
3 ಚಮಚ ಕಡ್ಲೆಬೇಳೆ
10 - 12 ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ
2 ಚಮಚ ಜೀರಿಗೆ
1 ಚಮಚ ಮೆಂತೆ
1/2 ಚಮಚ ಇಂಗು
2 ಚಮಚ ಅಡುಗೆ ಎಣ್ಣೆ
ಬೇಕಾಗುವ ಪದಾರ್ಥಗಳು - ಮೈಸೂರು ಶೈಲಿ: (ಅಳತೆ ಕಪ್ = 240 ಎಂ ಎಲ್)
15 - 20 ಒಣ ಮೆಣಸಿನಕಾಯಿ (ಬ್ಯಾಡಗಿ ಮತ್ತು ಗುಂಟೂರ್ ಮಿಶ್ರ ಮಾಡಿ)
6 ಚಮಚ ಉದ್ದಿನಬೇಳೆ
3 ಚಮಚ ತೊಗರಿ ಬೇಳೆ
3 ಚಮಚ ಮಸೂರ್ ದಾಲ್ ಅಥವಾ ಕಡ್ಲೆಬೇಳೆ (ಬೇಕಾದಲ್ಲಿ)
10 - 12 ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ
2 ಚಮಚ ಜೀರಿಗೆ
1 ಚಮಚ ಮೆಂತೆ
1 ಚಮಚ ಸಾಸಿವೆ (ಬೇಕಾದಲ್ಲಿ)
1 ಚಮಚ ಕರಿಮೆಣಸು ಅಥವಾ ಕಾಳುಮೆಣಸು (ಬೇಕಾದಲ್ಲಿ)
1/2 ಚಮಚ ಇಂಗು
2 ಚಮಚ ಅಡುಗೆ ಎಣ್ಣೆ
ಸಾಂಬಾರ್ ಪೌಡರ್ ಮಾಡುವ ವಿಧಾನ:
ನಿಮಗೆ ಯಾವ ಶೈಲಿಯ ಸಾಂಬಾರ್ ಪೌಡರ್ ಅಥವಾ ಹುಳಿ ಪುಡಿ ಬೇಕೋ ಆ ಪಟ್ಟಿಗನುಸಾರವಾಗಿ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿಯಿರಿ.
ನಂತರ ಅದೇ ಬಾಣಲೆಗೆ ಬೇಳೆಗಳನ್ನು ಹಾಕಿ ಸ್ವಲ್ಪ ಕಂಡು ಬಣ್ಣ ಬರುವವರೆಗೆ ಹುರಿಯಿರಿ.
ನಂತರ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಮೆಂತೆ, ಕಾಳುಮೆಣಸು ಮತ್ತು ಇಂಗು ಹಾಕಿ, ಸಣ್ಣ ಉರಿಯಲ್ಲಿ ಮಸಾಲೆಗಳ ಸುವಾಸನೆ ಬರುವವರೆಗೆ ಹುರಿಯಿರಿ. ಗಮನಿಸಿ, ದೊಡ್ಡ ಅಳತೆಯಾದಲ್ಲಿ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಬೇಕು.
ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
ಘಮಘಮಿಸುವ ಸಾಂಬಾರ್ ಪೌಡರ್ ಅಥವಾ ಹುಳಿ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸದ್ಯದಲ್ಲೇ ಈ ಪುಡಿ ಉಪಯೋಗಿಸಿ ಸಾಂಬಾರ್ ಮಾಡುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.