ಮಂಗಳವಾರ, ಏಪ್ರಿಲ್ 12, 2016

masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ

masoppu saaru and raagi mudde recipe in kannada

masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ 


ಮಸೊಪ್ಪು ಸಾರು ಮತ್ತು ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಅಡುಗೆಯಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ ಇತ್ಯಾದಿ ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಮಸೊಪ್ಪು ಸಾರನ್ನು ಬೆರಕೆ ಸೊಪ್ಪು (ಪಾಲಕ್, ಮೆಂತೆ, ದಂಟು, ಸಬ್ಸಿಗೆ) ಗಳಿಂದ ತಯಾರಿಸಲಾಗುತ್ತದೆ. ಆದರೆ ಇವಿಷ್ಟಲ್ಲದೆ ಬೇರೆ ಯಾವುದೇ ಸೊಪ್ಪನ್ನು ಸಹ ಬೆರಕೆಯಾಗಿ ನಿಮ್ಮ ರುಚಿಗೆ ತಕ್ಕಂತೆ ಉಪಯೋಗಿಸಬಹುದು. ಪಾಲಕ್ ಸೊಪ್ಪು ಮಾತ್ರ ಉಪಯೋಗಿಸಿ ಸಹ ಮಸೊಪ್ಪು ಸಾರನ್ನು ತಯಾರಿಸಬಹುದು. ನಾನು ಪಾಲಕ್ ಮತ್ತು ದಂಟಿನ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೇನೆ. 
ಇನ್ನು ರಾಗಿ ಮುದ್ದೆ ನಿಮಗೆಲ್ಲ ತಿಳಿದಿರುವಂತೆ ರಾಗಿ ಹಿಟ್ಟು, ಉಪ್ಪು ಮತ್ತು ನೀರು ಉಪಯೋಗಿಸಿ ತಯಾರಿಸಲಾಗುತ್ತದೆ. ರಾಗಿ ಮುದ್ದೆಯನ್ನು ಯಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು. 
ಈ ಅಡುಗೆಯನ್ನು ನಾನು ನನ್ನ ಪಕ್ಕದಮನೆ ಆಂಟಿ ಯಿಂದ ಕಲಿತದ್ದು. ಮಸೊಪ್ಪನ್ನು ಕೊಂಚ ಬೇರೆ ವಿಧಾನದಲ್ಲೂ ಮಾಡುತ್ತಾರೆಂದು ಕೇಳಿದ್ದೇನೆ. ನೀವು ಮಾಡುವ ವಿಧಾನ ಬೇರೆಯಾಗಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ. 

ಬೇಕಾಗುವ ಪದಾರ್ಥಗಳು (ಮಸೊಪ್ಪು ಸಾರಿಗೆ): (ಅಳತೆ ಕಪ್ = 120 ಎಂ ಎಲ್)

 1. 1 ಕಟ್ಟು ಸೊಪ್ಪು (ಪಾಲಕ್, ಪಾಲಕ್+ದಂಟು, ಪಾಲಕ್+ದಂಟು+ಮೆಂತೆ+ಸಬ್ಸಿಗೆ, ಇತ್ಯಾದಿ)
 2. 1.5 ಕಪ್ ತೊಗರಿ ಬೇಳೆ 
 3. 1 ಸಣ್ಣಗೆ ಹೆಚ್ಚಿದ ಈರುಳ್ಳಿ
 4. 1 ಸಣ್ಣಗೆ ಹೆಚ್ಚಿದ ಟೊಮೇಟೊ 
 5. 2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
 6. ಒಂದು ದೊಡ್ಡ ಚಿಟಿಕೆ ಅರಶಿನ ಪುಡಿ 
 7. 2 - 4 ಹಸಿರು ಮೆಣಸಿನಕಾಯಿ 
 8. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು 
 9. 1/2 ಟಿಸ್ಪೂನ್ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ 
 10. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು 
 11. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1 ಒಣ ಮೆಣಸಿನಕಾಯಿ
 2. 1/4 ಟೀಸ್ಪೂನ್ ಸಾಸಿವೆ
 3. 1/4 ಟೀಸ್ಪೂನ್ ಜೀರಿಗೆ
 4. 4 -5 ಎಸಳು ಕತ್ತರಿಸಿದ ಬೆಳ್ಳುಳ್ಳಿ 
 5. ಒಂದು ದೊಡ್ಡ ಚಿಟಿಕೆ ಇಂಗು 
 6. 4 - 5 ಕರಿಬೇವಿನ ಎಲೆ 
 7. 2 ಟೀಸ್ಪೂನ್ ಅಡುಗೆ ಎಣ್ಣೆ

ಬೇಕಾಗುವ ಪದಾರ್ಥಗಳು (ರಾಗಿ ಮುದ್ದೆಗೆ): (ಅಳತೆ ಕಪ್ = 120 ಎಂ ಎಲ್)

 1. 2 + 1/2 ಕಪ್ ನೀರು ( 1/2 ಕಪ್ ಕೊನೆಯಲ್ಲಿ ಬಳಸಲಾಗುತ್ತದೆ)
 2. 2 ಕಪ್ ರಾಗಿ ಹಿಟ್ಟು
 3. ಉಪ್ಪು ರುಚಿಗೆ ತಕ್ಕಷ್ಟು (ಬೇಕಾದಲ್ಲಿ)

ಮಸ್ಸೊಪ್ಪು ಸಾರು ಮಾಡುವ ವಿಧಾನ:

 1. ಸೊಪ್ಪನ್ನು ಸ್ವಚ್ಛಗೊಳಿಸಿ ಸಣ್ಣಗೆ ಕತ್ತರಿಸಿ. 
 2. ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ತೊಳೆದು, ಅರಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. 
 3. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೊಪ್ಪು, ಈರುಳ್ಳಿ, ಟೊಮೆಟೊ, ತೆಂಗಿನ ತುರಿ ಮತ್ತು ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಹಾಕಿ. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
 4. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆದು, ಬೆಂದ ಪದಾರ್ಥಗಳನ್ನು ಕಡಗೋಲು ಉಪಯೋಗಿಸಿ ಚೆನ್ನಾಗಿ ಮಸೆಯಿರಿ ಅಥವಾ ಕಡೆಯಿರಿ. ಇಲ್ಲವೇ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಿರಿ. ನಾನು ಅಗಲವಾದ ಸೌಟಿನ ಹಿಂಭಾಗ ಉಪಯೋಗಿಸಿ ಮಸೆಯುತ್ತೇನೆ. ಹೀಗೆ ಸೊಪ್ಪು ಮತ್ತು ಬೇಳೆಯನ್ನು ಮಸೆಯುವುದರಿಂದಲೇ ಈ ಸಾರಿಗೆ ಮಸೊಪ್ಪು ಎಂಬ ಹೆಸರು ಬಂದಿದೆ.
 5. ಈಗ ಒಂದು ಸಣ್ಣ ಬಾಣಲೆ ತೆಗೆದುಕೊಂಡು ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಇಂಗು, ಕರಿಬೇವು ಬಳಸಿಕೊಂಡು ಒಗ್ಗರಣೆ ತಯಾರಿಸಿ.
 6. ಆ ಒಗ್ಗರಣೆಯನ್ನು ಮಸೆದ ಸೊಪ್ಪು ಮತ್ತು ಬೇಳೆಯಿರುವ ಕುಕ್ಕರ್ ಗೆ ಸೇರಿಸಿ. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ. 
 7. 1/2 ಚಮಚ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ ಸೇರಿಸಿ, ಸ್ಟವ್ ಆನ್ ಮಾಡಿ, ಕುದಿಯಲು ಇಡಿ.
 8. ಕತ್ತರಿಸಿದ ಕೊತ್ತುಂಬರಿ ಸೊಪ್ಪನ್ನು ಸೇರಿಸಿ. ಸಾರು ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆರಿಸಿ. ಬಿಸಿ ರಾಗಿ ಮುದ್ದೆಯೊಂದಿಗೆ ಬಡಿಸಿ.

ರಾಗಿ ಮುದ್ದೆ ಮಾಡುವ ವಿಧಾನ:

 1. ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಳ್ಳಿ. 2 ಟೀಸ್ಪೂನ್ ರಾಗಿ ಹಿಟ್ಟು ಸೇರಿಸಿ.  ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಕುದಿಯಲು ಇಡಿ. ಹೀಗೆ ಮಾಡಿದಲ್ಲಿ ರಾಗಿ ಮುದ್ದೆ ಗಂಟಾಗುವುದಿಲ್ಲ. 
 2. ನೀರು ಕುದಿಯಲು ಪ್ರಾರಂಭವಾದ ಕೂಡಲೇ  2 ಕಪ್  ರಾಗಿ ಹಿಟ್ಟು ಸೇರಿಸಿ.  ಗಮನಿಸಿ ಮಗುಚಬೇಡಿ. ಹಾಗೆ ಕುದಿಯಲು ಬಿಡಿ. 
 3. ಮಧ್ಯಮ ಜ್ವಾಲೆಯಲ್ಲಿ 7 - 8 ನಿಮಿಷಗಳ ಕಾಲ ಕುದಿಯಲು ಬಿಡಿ. ರಾಗಿ ಮುದ್ದೆಯ ಪ್ರಮಾಣದ ಮೇಲೆ ಸಮಯ ಬದಲಾಗ ಬಹುದು. 
 4. ಸುಮಾರು 7 - 8 ನಿಮಿಷಗಳಾದ ಕೂಡಲೇ ಜ್ವಾಲೆಯನ್ನು ಕಡಿಮೆ ಮಾಡಿ, ಮರದ ಕೋಲು (ರಾಗಿ ಮುದ್ದೆ ಕೋಲು) ಅಥವಾ ಮರದ ಸೌಟಿನಿಂದ ಚೆನ್ನಾಗಿ ಮಗುಚಿ.
 5. 2 - 3 ನಿಮಿಷಗಳ ಕಾಲ ಗಂಟುಗಳಿಲ್ಲದಂತೆ ಚೆನ್ನಾಗಿ ಮಗುಚಬೇಕಾಗುತ್ತದೆ. 
 6. ನಂತರ 1/2 ಕಪ್ ನೀರು ಸಿಂಪಡಿಸಿ ಮತ್ತೆ ಚೆನ್ನಾಗಿ ಮಗುಚಿ ಸ್ಟೌವ್ ಆಫ್ ಮಾಡಿ. ಈ ರೀತಿ ಮಾಡುವುದರಿಂದ ರಾಗಿ ಮುದ್ದೆ ಮೆತ್ತಗಾಗಿ ಚೆನ್ನಾಗಿ ಬರುತ್ತದೆ. 
 7. ತಕ್ಷಣ ಒಂದು ಪ್ಲೇಟ್ ಅಥವಾ ಮರದ ಹಲಗೆಯ ಮೇಲೆ ಸುರಿದು, ನೀರು ಮುಟ್ಟಿ ಕೊಂಡು ಕೈಯಿಂದ  ಟೆನಿಸ್ ಬಾಲ್ ಗಾತ್ರದ ರಾಗಿ ಮುದ್ದೆಗಳನ್ನು ಮಾಡಿ. ಹೀಗೆ ಮಾಡುವಾಗ ರಾಗಿ ಮುದ್ದೆ ನಿಮ್ಮ ಬೆರಳುಗಳಿಗೆ ಅಂಟಿಕೊಳ್ಳ ಬಾರದು. ಅಂಟಿದಲ್ಲಿ ರಾಗಿ ಮುದ್ದೆ ಸರಿಯಾಗಿ ಬೆಂದಿಲ್ಲವೆಂದು ಅರ್ಥ. ಈಗ ಬಿಸಿ ರಾಗಿ ಮುದ್ದೆಯನ್ನು ಮಸ್ಸೊಪ್ಪು ಸಾರು ಅಥವಾ ಇನ್ನಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಮೊಸರಿನೊಂದಿಗೂ ಬಡಿಸಬಹುದು. ಆರೋಗ್ಯಕರ ಊಟವನ್ನು ಹೊಟ್ಟೆ ಭರ್ತಿ ಆನಂದಿಸಿ. 

7 ಕಾಮೆಂಟ್‌ಗಳು:

 1. ಕನ್ನಡದಲ್ಲಿ ಈ ರೆಸಿಪಿಯನ್ನು ಓದಿದ್ದೇ ಸಂತೋಷ. ನಮ್ಮ ರೈತ ಜನರ ಮನೆರುಚಿಯನ್ನು ಪರಿಚಯಿಸಿದ್ದಕ್ಕೆ ಅನಂತ ವಂದನೆಗಳು :)

  ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...