Ghee rice recipe in Kannada | ತುಪ್ಪ ಅನ್ನ ಮಾಡುವ ವಿಧಾನ
ರುಚಿಕರ ಮತ್ತು ಸರಳ ಘೀ ರೈಸ್ ಅಥವಾ ತುಪ್ಪದ ಅನ್ನ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ಅಡುಗೆಯನ್ನು ತುಪ್ಪ, ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ, ಶುಂಟಿ ಮತ್ತು ಇನ್ನು ಕೆಲವು ಮಸಾಲೆ ಪದಾರ್ಥಗಳನ್ನು ಉಪಯೋಗಿಸಿ ಮಾಡಲಾಗುತ್ತದೆ.
ವಿಶೇಷವೆಂದರೆ ಈ ಅಡುಗೆ ಯ ವಿಡಿಯೋವನ್ನು ಸಹ ಮಾಡಿದ್ದೇನೆ. ಕೆಳಗಿರುವ ವೀಡಿಯೊವನ್ನು ವೀಕ್ಷಿಸಿ ಹೇಗಿತ್ತೆಂದು ತಿಳಿಸಿ.
ಅಡುಗೆ ಸಮಯ : 30 ನಿಮಿಷ
ಪ್ರಮಾಣ : ಇಬ್ಬರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಕಪ್ ಬಾಸಮತಿ ಅಕ್ಕಿ
- 4 ಟೇಬಲ್ ಚಮಚ ತುಪ್ಪ
- 1 ಸಣ್ಣ ಪುಲಾವ್ ಎಲೆ
- 1 ಮರಾಟಿ ಮೊಗ್ಗು
- 2 ದಳ ಜಾಪತ್ರೆ (ಬೇಕಾದಲ್ಲಿ)
- 1 ಏಲಕ್ಕಿ
- 1/2 ಬೆರಳುದ್ದ ಚಕ್ಕೆ
- 5 - 6 ಲವಂಗ
- 1/4 ಟೀಸ್ಪೂನ್ ಕರಿಮೆಣಸು
- 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
- 5 ಗೋಡಂಬಿ ತುಂಡು ಮಾಡಿದ್ದು
- 4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
- 1 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
- 4 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಅಲಂಕಾರಕ್ಕೆ ಬೇಕಾಗುವ ಪದಾರ್ಥಗಳು:
- 5 ಗೋಡಂಬಿ
- 1/4 ಈರುಳ್ಳಿ ಉದ್ದವಾಗಿ ಸೀಳಿದ್ದು
- 2 ಹಸಿರು ಮೆ ಣಸಿನಕಾಯಿ ಸೀಳಿದ್ದು
ತುಪ್ಪ ಅನ್ನ ಮಾಡುವ ವಿಧಾನ:
- ಅಕ್ಕಿ ತೊಳೆದು, ನೀರು ಬಗ್ಗಿಸಿ ಪಕ್ಕಕ್ಕಿಡಿ.
- ಕುಕ್ಕರ್ ನಲ್ಲಿ ತುಪ್ಪ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ, ಲವಂಗ ಮತ್ತು ಕರಿಮೆಣಸು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
- ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ.
- ನೀರು ಹಾಕಿ ಮಗುಚಿ.
- ಉಪ್ಪು ಸೇರಿಸಿ ಪುನಃ ಮಗುಚಿ.
- ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ವಿಷಲ್ ಮಾಡಿ.
- ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ತೆಗೆದುಕೊಂಡು ತುಪ್ಪದನ್ನವನ್ನು ಬಿಡಿಸಿ ಅಥವಾ ಹರಡಿ. ಈಗ ಅಲಂಕಾರಕ್ಕೆ ಮತ್ತು ರುಚಿಗೆ ಹಾಕುವ ಪದಾರ್ಥಗಳನ್ನು ಹುರಿಯಬೇಕು. ಮೊದಲಿಗೆ ಒಂದು ಬಾಣಲೆಯಲ್ಲಿ 1 ಟಿಸ್ಪೂನ್ ತುಪ್ಪ ಹಾಕಿ ಗೋಡಂಬಿ ಸೇರಿಸಿ ಹುರಿಯಿರಿ.
- ಈಗ ಅದೇ ಬಾಣಲೆಗೆ ಸೀಳಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ.
- ಈಗ ಘೀ ರೈಸ್ ಅಥವಾ ತುಪ್ಪದನ್ನವನ್ನು ಹುರಿದ ಗೋಡಂಬಿ, ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯಿಂದ ಅಲಂಕರಿಸಿ. ಟೊಮೆಟೊ ಸಾಸ್ ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ