ಬುಧವಾರ, ಏಪ್ರಿಲ್ 20, 2016

Carrot parota recipe in Kannada | ಕ್ಯಾರಟ್ ಪರೋಟ ಮಾಡುವ ವಿಧಾನ


carrot parota in kannada

Carrot parota recipe in Kannada | ಕ್ಯಾರಟ್  ಪರೋಟ ಮಾಡುವ ವಿಧಾನ


ಕ್ಯಾರಟ್ ಪರೋಟವನ್ನು ತುರಿದ ಕ್ಯಾರಟ್, ಸ್ವಲ್ಪ ಆಲೂಗಡ್ಡೆ ಮತ್ತು ಮಸಾಲಾ ಪದಾರ್ಥಗಳನ್ನು ಉಪಯೋಗಿಸಿ ಮಾಡಲಾಗಿದೆ.  ಇದೊಂದು ಮಸಾಲೆ ತುಂಬಿಸಿ ಮಾಡಿದ ಪರೋಟವಾಗಿದ್ದು ನಾನು ಈಗಾಗಲೇ ವಿವರಿಸಿದ ಅಲೂ ಪರೋಟವನ್ನು ಹೋಲುತ್ತದೆ. ಜೀರ್ಣದ ಸಮಸ್ಯೆಯಿರುವವರು ಅಲೂ ಪರೋಟದ ಬದಲು ಈ ರೀತಿಯ ಪರೋಟ ಮಾಡಿ ತಿಂದರೆ ರುಚಿಕರವಾಗಿದ್ದು ಅವರ ಆರೋಗ್ಯಕ್ಕೂ ಒಳ್ಳೆಯದು. 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 40 ನಿಮಿಷ
ಪ್ರಮಾಣ : 8 ಪರೋಟ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಮಧ್ಯಮ ಗಾತ್ರದ ಕ್ಯಾರಟ್
  2. 1 ಮಧ್ಯಮ ಗಾತ್ರದ ಆಲೂಗಡ್ಡೆ
  3. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  7. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ
  8. 2 ಟೀಸ್ಪೂನ್ ಕತ್ತರಿಸಿದ ಕರಿಬೇವಿನ ಸೊಪ್ಪು
  9. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತುಂಬರಿ ಸೊಪ್ಪು
  10. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
  11. ಒಂದು ದೊಡ್ಡ ಚಿಟಿಕೆ ಇಂಗು 
  12. 2 ಟೀಸ್ಪೂನ್ ಅಡುಗೆ ಎಣ್ಣೆ
  13. ಉಪ್ಪು ರುಚಿಗೆ ತಕ್ಕಷ್ಟು.

ಆಲೂ ಪರೋಟ ಮಾಡುವ ವಿಧಾನ:

  1. ಆಲೂಗಡ್ಡೆ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಕುಕ್ಕರ್‌ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಸಿಪ್ಪೆ ತೆಗೆದು ಪುಡಿ ಮಾಡಿಟ್ಟು ಕೊಳ್ಳಿ. ಕ್ಯಾರಟ್ ನ್ನು ತೊಳೆದು ತುರಿದಿಟ್ಟು ಕೊಳ್ಳಿ. 
  2. ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ. 
  3. ಕ್ಯಾರಟ್ ಪರೋಟದ ಮಸಾಲೆ ಮಾಡಲು, ಮೊದಲಿಗೆ ಒಲೆ ಹತ್ತಿಸಿ ಮಧ್ಯಮ ಉರಿಯಲ್ಲಿಡಿ. ಒಲೆ ಮೇಲೆ ಬಾಣಲೆ ಇರಿಸಿ, ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಜೀರಿಗೆ ಹಾಕಿ. 
  4. ತಕ್ಷಣ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಕೈಯಾಡಿಸಿ.
  5. ನಂತರ ಕತ್ತರಿಸಿದ ಕರಿಬೇವಿನ ಸೊಪ್ಪು ಹಾಕಿ. ಕೂಡಲೇ ಕೊತ್ತುಂಬರಿ ಸೊಪ್ಪು ಸೇರಿಸಿ ಮಗುಚಿ. 
  6. ತುರಿದ ಕ್ಯಾರಟ್, ಅರಶಿನ ಪುಡಿ ಮತ್ತು ಇಂಗು ಸೇರಿಸಿ ಒಂದೆರಡು ನಿಮಿಷ ಹುರಿದು ಒಲೆ ಆರಿಸಿ.
  7. ಈಗ ಅದೇ ಬಾಣಲೆಗೆ ಪುಡಿಮಾಡಿದ ಆಲೂಗಡ್ಡೆ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿ.
  8. ಈಗ ಕ್ಯಾರಟ್ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಎರಡೂ ಕೈ ಬೆರಳುಗಳನ್ನು ಬಳಸಿ ಒಂದು ಬಟ್ಟಲಿನ ಆಕಾರ ಮಾಡಿ. ಆ ಬಟ್ಟಲಿನ ಆಕಾರದೊಳಗೆ ಒಂದು ಸಣ್ಣ ನಿಂಬೆ ಗಾತ್ರದ ಮಸಾಲೆ ಇರಿಸಿ.
  9. ಎಚ್ಚರಿಕೆಯಿಂದ ತುದಿಗಳನ್ನು ಒಟ್ಟಿಗೆ ತಂದು ಮಸಾಲೆಯನ್ನು ಒಳಗೆ ಸೇರಿಸಿ. ಹೊರಗಿನ ಹಿಟ್ಟು ಹೆಚ್ಚು ಕಡಿಮೆ ಎಲ್ಲ ಕಡೆ ಒಂದೇ ದಪ್ಪವಿರುವಂತೆ ಜಾಗ್ರತೆವಹಿಸಿ. ನಿಧಾನವಾಗಿ ಅದನ್ನು ಒತ್ತಿ ಸ್ವಲ್ಪ ಚಪ್ಪಟೆ ಮಾಡಿ.
  10. ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ಚಪ್ಪಟೆ ಮಾಡಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
  11. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ. 
  12. ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಮೊಸರು ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...