Carrot badami payasa in Kannada | ಕ್ಯಾರಟ್ ಬಾದಾಮಿ ಪಾಯಸ ಮಾಡುವ ವಿಧಾನ
ಕ್ಯಾರಟ್ ಬಾದಾಮಿ ಪಾಯಸ ಬಹಳ ಸುಲಭ, ರುಚಿಕರ ಮತ್ತು ಮಕ್ಕಳಿಗೆ ಇಷ್ಟವಾಗುವಂಥ ಸಿಹಿ ತಿನಿಸಾಗಿದೆ. ನಾನು ಈಗಾಗಲೇ ವಿವರಿಸಿರುವ ಅನಾನಸ್ ಪಾಯಸ ಮತ್ತು ಈ ಕ್ಯಾರಟ್ ಬಾದಾಮಿ ಪಾಯಸವನ್ನು ನನ್ನತ್ತೆ ಯಿಂದ ಕಲಿತದ್ದು.
ಕ್ಯಾರಟ್ ಬಾದಾಮಿ ಪಾಯಸವನ್ನು ಕ್ಯಾರಟ್, ಬಾದಾಮಿ, ಹಾಲು ಮತ್ತು ಸಕ್ಕರೆ ಉಪಯೋಗಿಸಿ ತಯಾರಿಸಲಾಗುತ್ತದೆ.
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂ ಎಲ್)
- 2 ಮಧ್ಯಮ ಗಾತ್ರದ ಕ್ಯಾರೆಟ್
- 20 - 25 ಬಾದಾಮಿ
- 2 ಕಪ್ ಹಾಲು
- 2 ಕಪ್ ನೀರು (ಬೇಯಿಸಲು ಮತ್ತು ಅರೆಯಲು ಬೇಕಾದ ನೀರು ಸೇರಿಸಿ)
- 12 ಟಿಸ್ಪೂನ್ ಅಥವಾ 3/4 ಕಪ್ ಸಕ್ಕರೆ ಅಥವಾ ನಿಮ್ಮ ರುಚಿಗೆ ತಕ್ಕಷ್ಟು
- ಒಂದು ಚಿಟಿಕೆ ಏಲಕ್ಕಿ ಪುಡಿ
- 1 ಟೇಬಲ್ ಸ್ಪೂನ್ ತುಂಡು ಮಾಡಿದ ಗೋಡಂಬಿ
- 10 ಒಣ ದ್ರಾಕ್ಷಿ
- 2 ಟಿಸ್ಪೂನ್ ತುಪ್ಪ
ಕ್ಯಾರಟ್ ಬಾದಾಮಿ ಪಾಯಸ ಮಾಡುವ ವಿಧಾನ:
- ಮೊದಲಿಗೆ ಬಾದಾಮಿಯನ್ನು ಕನಿಷ್ಟ ಒಂದು ಘಂಟೆ ಕಾಲ ನೆನೆಸಿ ಸಿಪ್ಪೆ ತೆಗೆಯಿರಿ. ಸಮಯದ ಅಭಾವವಿದ್ದಲ್ಲಿ ಕುಕ್ಕರ್ನಲ್ಲಿ ಹಾಕಿ ಒಂದು ವಿಷಲ್ ಮಾಡಿ ನಂತರ ಸಿಪ್ಪೆ ತೆಗೆಯಿರಿ.
- ಕ್ಯಾರೆಟನ್ನು ತೊಳೆದು ಕತ್ತರಿಸಿಕೊಳ್ಳಿ. ನಂತರ ಕ್ಯಾರೆಟ್ ಮತ್ತು ಸಿಪ್ಪೆ ತೆಗೆದ ಬಾದಾಮಿಯನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
- ಬೇಯಿಸಿದ ಕ್ಯಾರಟ್ ಮತ್ತು ಬಾದಾಮಿ ತಣ್ಣಗಾಗುವವರೆಗೆ ಕಾಯಿರಿ. ನಂತರ ನೀರನ್ನು ಬಸಿದು ಪಕ್ಕಕ್ಕಿಡಿ. ಅದನ್ನು ಮುಂದೆ ಪಾಯಸ ಕುದಿಸುವಾಗ ಸೇರಿಸಲಿದ್ದೇವೆ.
- ಈಗ ಬೇಯಿಸಿದ ಬಾದಾಮಿಯನ್ನು ಮಾತ್ರ ಮಿಕ್ಸಿ ಜಾರಿಗೆ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಕೊಳ್ಳಿ.
- ಈಗ ಅದೇ ಮಿಕ್ಸಿ ಜಾರಿಗೆ ಬೇಯಿಸಿದ ಕ್ಯಾರಟ್ ಹಾಕಿ.
- ಕ್ಯಾರಟ್ ನುಣ್ಣಗಾಗುವವರೆಗೆ ಪುನಃ ಅರೆಯಿರಿ.
- ಈಗ ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಬಸಿದಿಟ್ಟ ನೀರು, ಉಳಿದ ನೀರು, ಹಾಲು ಮತ್ತು ಸಕ್ಕರೆ ಹಾಕಿ.
- ಒಮ್ಮೆ ಚೆನ್ನಾಗಿ ಮಗುಚಿ ಕುದಿಸಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಪಾಯಸ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಕುದಿಯುತ್ತಿರಲಿ.
- ಈ ಸಮಯದಲ್ಲಿ ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿಯಿರಿ.
- ತುಪ್ಪದ ಸಮೇತ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಕುದಿಯುತ್ತಿರುವ ಪಾಯಸಕ್ಕೆ ಸೇರಿಸಿ. ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ