Tomato dosa recipe in Kannada | ಟೊಮೇಟೊ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
2 ದೊಡ್ಡ ಟೊಮೇಟೊ
2 ಟೇಬಲ್ ಚಮಚ ತೊಗರಿಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
1/2 ಟೀಸ್ಪೂನ್ ಜೀರಿಗೆ
1 - 2 ಕೆಂಪು ಮೆಣಸಿನಕಾಯಿ
1cm ಗಾತ್ರದ ಶುಂಠಿ
7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
2 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಟೊಮೇಟೊ ದೋಸೆ ಮಾಡುವ ವಿಧಾನ:
ಅಕ್ಕಿ ಮತ್ತು ತೊಗರಿಬೇಳೆಯನ್ನು ತೊಳೆದು ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ರಾತ್ರೆಯಿಡೀ ಬೇಕಾದರೂ ನೆನೆಸಬಹುದು.
ನಂತರ ನೀರನ್ನು ಬಗ್ಗಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಬಗ್ಗಿಸಿ.
ನಂತರ ಕತ್ತರಿಸಿದ ಟೊಮೇಟೊ, ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಶುಂಠಿಯನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ಅರೆಯಿರಿ.
ಅಕ್ಕಿ ಹಿಟ್ಟು ಇರುವ ಪಾತ್ರೆಗೆ ಹಾಕಿ.
ಈಗ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
ಚೆನ್ನಾಗಿ ಕಲಸಿ ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾದ ಹಿಟ್ಟನ್ನು ತಯಾರಿಸಿ. ಸಮಯವಿದ್ದರೆ ಒಂದು 30 ನಿಮಿಷ ಹಿಟ್ಟನ್ನು ಹಾಗೆ ಬಿಡಿ.
ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ ಬಿಸಿ ಮಾಡಿ. ಕಬ್ಬಿಣದ ದೋಸೆ ಕಾವಲಿಯಾದಲ್ಲಿ ಎಣ್ಣೆ ಹಚ್ಚಿ. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ.
ಸ್ವಲ್ಪ ಹೊತ್ತು ಮುಚ್ಚಳವನ್ನು ಮುಚ್ಚಿ.
ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಎರಡು ಬದಿ ಕಾಯಿಸಿ. ಬೆಣ್ಣೆ ಮತ್ತು ಕಾಯಿ ಚಟ್ನಿ ಯೊಂದಿಗೆ ಬಡಿಸಿ.
Ragi laddu or ragi unde recipe | ರಾಗಿ ಲಾಡು ಮಾಡುವ ವಿಧಾನ
ragi unde or ladoo video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ರಾಗಿ ಹಿಟ್ಟು
1/4 ಕಪ್ ಕೊಬ್ಬರಿ ತುರಿ
3/4 ಕಪ್ ಬೆಲ್ಲ ಪುಡಿ ಮಾಡಿದ್ದು
1/4 ಕಪ್ ನೀರು
2 ಟೇಬಲ್ ಚಮಚ ತುಪ್ಪ
2 ಟೇಬಲ್ ಚಮಚ ಗೋಡಂಬಿ ಚೂರು
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ರಾಗಿ ಲಾಡು ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ 1 ಟೇಬಲ್ ಚಮಚ ತುಪ್ಪ ಬಿಸಿ ಮಾಡಿ, ಗೋಡಂಬಿಯನ್ನು ಹುರಿದು ಪಕ್ಕಕ್ಕಿಡಿ.
ನಂತರ ಅದೇ ಬಾಣಲೆಗೆ ಇನ್ನೊಂದು ಟೇಬಲ್ ಚಮಚ ತುಪ್ಪ ಮತ್ತು ರಾಗಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಬಣ್ಣ ಬದಲಾವಣೆ ಅಥವಾ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ.
ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಇನ್ನೊಂದು ನಿಮಿಷ ಹುರಿದು, ಗೋಡಂಬಿಯೊಂದಿಗೆ ಪಕ್ಕಕ್ಕಿಡಿ.
ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಗಮನಿಸಿ ಪಾಕ ಹೆಚ್ಚಾಗ ಬಾರದು. ಒಂದೆಳೆ ಪಾಕ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
ಕೂಡಲೇ ಬೆಲ್ಲದ ಪಾಕವನ್ನು ಹುರಿದ ರಾಗಿ ಹಿಟ್ಟು, ಕೊಬ್ಬರಿ ತುರಿ ಮತ್ತು ಗೋಡಂಬಿ ಮಿಶ್ರಣದ ಮೇಲೆ ಸುರಿಯಿರಿ.
ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆಗಳನ್ನು ಮಾಡಿ ಸವಿಯಿರಿ. ಈ ಉಂಡೆ ಅಥವಾ ರಾಗಿ ಲಾಡು ಬಿಸಿಯಲ್ಲಿ ಸ್ವಲ್ಪ ಮೆತ್ತಗಿದ್ದು, ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ.
Moolangi sambar recipe in Kannada | ಮೂಲಂಗಿ ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
2 ಮಧ್ಯಮ ಗಾತ್ರದ ಮೂಲಂಗಿ
1 ದೊಡ್ಡ ಟೊಮೇಟೊ
1 ದೊಡ್ಡ ಈರುಳ್ಳಿ
4 ಟೇಬಲ್ ಚಮಚ ತೊಗರಿಬೇಳೆ
1/4 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು (ಬೇಕಾದಲ್ಲಿ)
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/ ಕಪ್ ತೆಂಗಿನ ತುರಿ
2 - 4 ಕೆಂಪು ಮೆಣಸಿನಕಾಯಿ
1.5 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/4 ಟೀಸ್ಪೂನ್ ಜೀರಿಗೆ
7 - 8 ಮೆಂತ್ಯ ಕಾಳು (ಬೇಕಾದಲ್ಲಿ)
ಒಂದು ಚಿಟಿಕೆ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ಮೂಲಂಗಿ ಸಾಂಬಾರ್ ಮಾಡುವ ವಿಧಾನ:
ಮೂಲಂಗಿ ಮತ್ತು ಟೊಮೇಟೊವನ್ನು ತೊಳೆದು ಕತ್ತರಿಸಿ. ಈರುಳ್ಳಿಯನ್ನೂ ಕತ್ತರಿಸಿ.
ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ಅರ್ಧ ಬೆಂದಿರುತ್ತದೆ.
ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಪುನಃ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ತರಕಾರಿಯೊಂದಿಗೆ ಸಂಪೂರ್ಣ ಬೆಂದಿರುತ್ತದೆ.
ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ.
ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Seke undlaka recipe in Kannada | ಸೆಕೆ ಉಂಡ್ಲಕ ಮಾಡುವ ವಿಧಾನ
ಸೆಕೆ ಉಂಡ್ಲಕ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ ಹಿಟ್ಟು
1 ಕಪ್ ತೆಂಗಿನ ತುರಿ
1/2 ಕಪ್ ಬೆಲ್ಲ
1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
1 - 2 ಏಲಕ್ಕಿ
2 ಟೀಸ್ಪೂನ್ ತುಪ್ಪ
ಉಪ್ಪು ರುಚಿಗೆ ತಕ್ಕಷ್ಟು
ಸೆಕೆ ಉಂಡ್ಲಕ ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ 1.5 ಕಪ್ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
ನಂತರ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಮುಚ್ಚಳ ಮುಚ್ಚಿ ಬಿಸಿ ಆರಲು ಬಿಡಿ.
ಅಕ್ಕಿ ಹಿಟ್ಟು ಬಿಸಿ ಆರಿದ ಮೇಲೆ, ಕೈಗೆ ತುಪ್ಪ ಸವರಿಕೊಂಡು, ಸಣ್ಣ ಗೋಲಿ ಗಾತ್ರದ ಉಂಡೆಗಳನ್ನು ಮಾಡಿ.
ಸೆಕೆಯಲ್ಲಿ (ಆವಿಯಲ್ಲಿ) ತುಪ್ಪ ಸವರಿದ ಪ್ಲೇಟ್ ನಲ್ಲಿಟ್ಟು 10 ನಿಮಿಷ ಬೇಯಿಸಿ.
ಆ ಸಮಯದಲ್ಲಿ ಮಿಕ್ಸಿ ಜಾರಿಗೆ ತೆಂಗಿನ ತುರಿ, ಏಲಕ್ಕಿ ಮತ್ತು ಬೆಲ್ಲ ಹಾಕಿ ನೀರು ಹಾಕದೆ ಪುಡಿ ಮಾಡಿ.
ಪುಡಿಮಾಡಿದ ತೆಂಗಿನ ತುರಿ ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ. ಕಾಯಿ-ಬೆಲ್ಲ ಸಿದ್ಧ ಮಾಡಿಕೊಳ್ಳಿ. ಗಮನಿಸಿ, ನೀರಾರುವಂತೆ ಸ್ವಲ್ಪ ಮಗುಚಿದರೆ ಸಾಕು. ಸ್ಟವ್ ಆಫ್ ಮಾಡಿ.
ಈಗ ಬೇಯಿಸಿದ ಅಕ್ಕಿ ಹಿಟ್ಟಿನ ಉಂಡೆಗಳನ್ನು ಕಾಯಿ-ಬೆಲ್ಲ ಕ್ಕೆ ಹಾಕಿ ಮಗುಚಿ.
Udupi style idli sambar recipe | ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
1/4 ಕಪ್ ತೊಗರಿಬೇಳೆ
1 ಸಣ್ಣ ಗಾತ್ರದ ಆಲೂಗಡ್ಡೆ ಅಥವಾ ಇನ್ನಾವುದೇ ಮೆತ್ತಗೆ ಬೇಯುವ ತರಕಾರಿ
1 ಸಣ್ಣ ಗಾತ್ರದ ನುಗ್ಗೆಕಾಯಿ
1 ಸಣ್ಣ ಗಾತ್ರದ ಬದನೇಕಾಯಿ
1 ದೊಡ್ಡ ಗಾತ್ರದ ಈರುಳ್ಳಿ
1 ಮಧ್ಯಮ ಗಾತ್ರದ ಟೊಮೇಟೊ
1/4 ಟೀಸ್ಪೂನ್ ಅರಿಶಿನ ಪುಡಿ
ಒಂದು ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು (ಅಥವಾ ನಿಮ್ಮ ರುಚಿ ಪ್ರಕಾರ)
1/2 ಟೀಸ್ಪೂನ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
ಉಪ್ಪು ನಿಮ್ಮ ರುಚಿ ಪ್ರಕಾರ
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಥವಾ 3 ಟೀಸ್ಪೂನ್ ಸಾಂಬಾರ್ ಪೌಡರ್ )
2 - 4 ಕೆಂಪು ಮೆಣಸಿನಕಾಯಿ
1 ಟೀಸ್ಪೂನ್ ಉದ್ದಿನ ಬೇಳೆ
1/2 ಟೀಸ್ಪೂನ್ ಉದ್ದಿನ ಬೇಳೆ
1.5 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
1/4 ಟೀಸ್ಪೂನ್ ಜೀರಿಗೆ
8 - 10 ಕಾಳು ಮೆಂತೆ ಅಥವಾ ಮೆಂತ್ಯ
ಒಂದು ದೊಡ್ಡ ಚಿಟಿಕೆ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
1/4 ಟೀಸ್ಪೂನ್ ಮೆಂತೆ ಅಥವಾ ಮೆಂತ್ಯ
1/4 ಟೀಸ್ಪೂನ್ ಸಾಸಿವೆ
5 - 6 ಕರಿಬೇವಿನ ಎಲೆ
ಒಂದು ದೊಡ್ಡ ಚಿಟಿಕೆ ಇಂಗು
2 ಟೀಸ್ಪೂನ್ ಅಡುಗೆ ಎಣ್ಣೆ
ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:
ಈ ಸಾಂಬಾರ್ ನ್ನು ಸಾಂಬಾರ್ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಹಾಗಾಗಿ ನಿಮ್ಮಲ್ಲಿ ಸಾಂಬಾರ್ ಪುಡಿ ಇಲ್ಲದಿದ್ದರೆ, ಮೇಲೆ "ಮಸಾಲೆಗೆ" ಎಂದು ಪಟ್ಟಿ ಮಾಡಿರುವ ಪದಾರ್ಥಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
ಎಲ್ಲ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಹೆಚ್ಚಿದ ಬದನೆಕಾಯಿಯನ್ನು ನೀರಿನಲ್ಲಿ ಹಾಕಿಡಿ.
ನಂತರ ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ತೊಳೆದು, ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ.
ನಂತರ ಬೇಳೆಯಿರುವ ಕುಕ್ಕರ್ ಗೆ, ಮೇಲೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಹಾಕಿ, ಪುನಃ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
ಒತ್ತಡ ಇಳಿದ ಮೇಲೆ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ ಕುದಿಸಿ.
ಅಗತ್ಯವಿದ್ದಷ್ಟು ನೀರು ಮತ್ತು ಸಾಂಬಾರ್ ಪೌಡರ್ ಹಾಕಿ ಕುದಿಸಿ.
ಕೆಂಪು ಮೆಣಸು, ಸಾಸಿವೆ, ಮೆಂತೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
Banana milkshake recipe in Kannada | ಬಾಳೆಹಣ್ಣು ಮಿಲ್ಕ್ ಶೇಕ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
4 ಸಣ್ಣ ಅಥವಾ 2 ದೊಡ್ಡ ಚೆನ್ನಾಗಿ ಕಳಿತ ಬಾಳೆಹಣ್ಣು
4 ಟೀಸ್ಪೂನ್ ಸಕ್ಕರೆ
2 ಟೀಸ್ಪೂನ್ ಗೋಡಂಬಿ
2 ಟೀಸ್ಪೂನ್ ನೆಲಗಡಲೆ ಅಥವಾ ಶೇಂಗಾ
2 ಟೀಸ್ಪೂನ್ ಹಾರ್ಲಿಕ್ಸ್ ಅಥವಾ ಇನ್ನಾವುದೇ ಪುಡಿ
1 ಕಪ್ ಕುದಿಸಿ ಆರಿಸಿದ ಹಾಲು
ಬಾಳೆಹಣ್ಣು ಮಿಲ್ಕ್ ಶೇಕ್ ಮಾಡುವ ವಿಧಾನ:
ಕುದಿಸಿ ಆರಿಸಿದ ಹಾಲನ್ನು ಫ್ರೀಜರ್ ನಲ್ಲಿ ಗಟ್ಟಿ ಆಗಲು ಇಡಿ. ನೆಲಗಡಲೆಯನ್ನು ಹುರಿದು ಸಿಪ್ಪೆ ತೆಗೆಯಿರಿ.
ಮಿಕ್ಸಿ ಜಾರಿಗೆ ಸಿಪ್ಪೆ ಸುಲಿದ ಬಾಳೆಹಣ್ಣು, ಸಕ್ಕರೆ, ಗೋಡಂಬಿ, ಹುರಿದು ಸಿಪ್ಪೆ ತೆಗೆದ ನೆಲಗಡಲೆ, ಹಾರ್ಲಿಕ್ಸ್ ಮತ್ತು ಫ್ರೀಜರ್ ನಲ್ಲಿಟ್ಟು ಗಟ್ಟಿ ಮಾಡಿದ ಹಾಲು ಹಾಕಿ ನುಣ್ಣನೆ ಅರೆಯಿರಿ.
ರುಚಿ ರುಚಿಯಾದ ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿದು ಆನಂದಿಸಿ. ಈ ಮಿಲ್ಕ್ ಶೇಕ್ ನ್ನುಮಾಡಿದ ಕೂಡಲೇ ಸವಿಯಬೇಕು.
Unde kadubu recipe in Kannada | ಉಂಡೆ ಕಡುಬು ಅಥವಾ ಪುಂಡಿ ಗಟ್ಟಿ ಮಾಡುವ ವಿಧಾನ
ಉಂಡೆ ಕಡುಬು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಸೋನಾ ಮಸೂರಿ ಅಕ್ಕಿ
1/2 ಕಪ್ ತೆಂಗಿನ ತುರಿ
2 ಕಪ್ ನೀರು
ಉಪ್ಪು ರುಚಿಗೆ ತಕ್ಕಷ್ಟು
ಉಂಡೆ ಕಡುಬು ಅಥವಾ ಪುಂಡಿ ಗಟ್ಟಿ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ.
ನಂತರ ಮಿಕ್ಸಿಯಲ್ಲಿ ತೆಂಗಿನ ತುರಿಯೊಂದಿಗೆ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ.
ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು.
ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
Ellu bella recipe in Kannada | ಎಳ್ಳು ಬೆಲ್ಲ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
250gm ಶೇಂಗಾ ಅಥವಾ ಕಡ್ಲೆಕಾಯಿ
250gm ಹುರಿಗಡಲೆ ಅಥವಾ ಕಡಲೆಪಪ್ಪು
1 ಒಣ ಕೊಬ್ಬರಿ
100gm ಬಿಳಿ ಎಳ್ಳು
250gm ಅಚ್ಚು ಬೆಲ್ಲ
1/4 ಕಪ್ ಜೀರಿಗೆ ಮಿಠಾಯಿ (ಬೇಕಾದಲ್ಲಿ)
1/4 ಕಪ್ ಸಣ್ಣ ಸಕ್ಕರೆ ಮಿಠಾಯಿ (ಬೇಕಾದಲ್ಲಿ)
ಎಳ್ಳು ಬೆಲ್ಲ ಮಾಡುವ ವಿಧಾನ:
ಒಣ ಕೊಬ್ಬರಿಯನ್ನು ಸಣ್ಣದಾಗಿ ಹೆಚ್ಚಿ. ತುರಿಮಣೆ ಸಹಾಯದಿಂದ ಕೊಬ್ಬರಿಯ ಕಪ್ಪುಭಾಗವನ್ನು ತುರಿದು ತೆಗೆದು ನಂತರ ಹೆಚ್ಚಬಹುದು. ನಮ್ಮ ಮನೆಯಲ್ಲಿ ಕಪ್ಪು ಭಾಗವನ್ನು ತೆಗೆಯುವುದಿಲ್ಲ. ಹೆಚ್ಚಿದ ಕೊಬ್ಬರಿಯನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೆ ಒಣಗಿಸಿ ಅಥವಾ ತಪ್ಪ ತಳದ ಬಾಣಲೆಯಲ್ಲಿ ಬಿಸಿ ಮಾಡಿ.
ಹುರಿಗಡಲೆಯನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೆ ಒಣಗಿಸಿ ಅಥವಾ ತಪ್ಪ ತಳದ ಬಾಣಲೆಯಲ್ಲಿ ಬಿಸಿ ಮಾಡಿ.
ಕಡ್ಲೆಕಾಯಿ ಅಥವಾ ನೆಲಗಡಲೆಯನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ಸಿಪ್ಪೆ ಬೇರ್ಪಡಿಸಿ.