Boodu kumbalakai majjige huli in Kannada | ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ
ಇದೊಂದು ಬಹಳ ರುಚಿಕರವಾದ, ಅಷ್ಟೇನೂ ಖಾರ ಅಥವಾ ಮಸಾಲೆ ಹೊಂದಿರದ ಹುಳಿ ಅಥವಾ ಸಾಂಬಾರ್ ಆಗಿದ್ದು ಮಜ್ಜಿಗೆ ಹುಳಿ, ಹುಳಿಶಾಕ, ಪಳದ್ಯ ಎಂಬ ಹೆಸರಿನಿಂದ ಕರೆಯುತ್ತಾರೆ.
ಮಜ್ಜಿಗೆ ಹುಳಿಯನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಕರ್ನಾಟಕದ ಕೆಲ ಭಾಗಗಳಲ್ಲಿ ಕಡ್ಲೇಬೇಳೆ ಹಾಕಿ ಮಜ್ಜಿಗೆ ಹುಳಿ ತಯಾರಿಸುವುದು ರೂಢಿಯಲ್ಲಿದೆ. ಆದರೆ ಈ ಮಜ್ಜಿಗೆ ಹುಳಿಗೆ ಕಡಲೆಬೇಳೆ ಹಾಕುವುದಿಲ್ಲ. ಮತ್ತು ಈ ರೀತಿಯ ಮಜ್ಜಿಗೆ ಹುಳಿ ಮಲೆನಾಡು ಪ್ರದೇಶದಲ್ಲಿ ಮಾಡುತ್ತಾರೆ. ನಮ್ಮ ಮನೆಯಲ್ಲಿ ಇದು ಎಲ್ಲರ ಅಚ್ಚುಮೆಚ್ಚಿನ ಅಡುಗೆ..ನೀವು ಒಮ್ಮೆ ಮಾಡಿ ನೋಡಿ.
ಮಜ್ಜಿಗೆ ಹುಳಿ ವಿಡಿಯೋ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 kg ಬೂದು ಕುಂಬಳಕಾಯಿ
- 1 - 2 ಹಸಿರು ಮೆಣಸಿನಕಾಯಿ
- 1/4 ಕಪ್ ಹುಳಿಮಜ್ಜಿಗೆ ಅಥವಾ 1/2 ಕಪ್ ಮಜ್ಜಿಗೆ
- 1 ಟೀಸ್ಪೂನ್ ಅಕ್ಕಿ
- 1/4 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಸಾಸಿವೆ
- 1 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:
- ಬೂದು ಕುಂಬಳಕಾಯಿಯನ್ನು ತೊಳೆದು ಉದ್ದುದ್ದವಾಗಿ ಕತ್ತರಿಸಿ. ಸಿಪ್ಪೆ ಮತ್ತು ತಿರುಳನ್ನು ತೆಗೆದು 2cm ಉದ್ದದ ತುಂಡುಗಳಾಗಿ ಕತ್ತರಿಸಿ. ನಂತರ ಕುಕ್ಕರ್ ನಲ್ಲಿ ಸೀಳಿದ ಹಸಿರು ಮೆಣಸಿನಕಾಯಿ, ಕತ್ತರಿಸಿದ ಕುಂಬಳಕಾಯಿ, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ.
- ಮಸಾಲೆ ಅರೆಯಲು ತೆಂಗಿನತುರಿ , 1/4 ಟೀಸ್ಪೂನ್ ಸಾಸಿವೆ, 1/4 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ತೊಳೆದ ಅಕ್ಕಿ ತೆಗೆದುಕೊಳ್ಳಿ.
- ಹಾಗೂ ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ.
- ರುಬ್ಬಿದ ಮಸಾಲೆಯನ್ನು ಬೇಯಿಸಿದ ಕುಂಬಳಕಾಯಿಗೆ ಸೇರಿಸಿ.
- ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
- ಚೆನ್ನಾಗಿ ಕಲಸಿ, ಕುದಿಯಲು ಇಡಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ.
- ಸ್ಟವ್ ಆಫ್ ಮಾಡಿದ ನಂತರ ಮೊಸರು ಅಥವಾ ಮಜ್ಜಿಗೆ ಸೇರಿಸಿ ಕಲಸಿ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ.
ನಿಮ್ಮ ರೆಸಿಪಿ ತುಂಬಾ ಚೆನ್ನಾಗಿದೆ. ತುಂಬಾ ಸರಳವಾಗಿದೆ. 👌
ಪ್ರತ್ಯುತ್ತರಅಳಿಸಿ