Rave dose recipe in Kannada | ರವೆ ದೋಸೆ ಮಾಡುವ ವಿಧಾನ
Quick Video: Rave dose recipe
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ ಹಿಟ್ಟು
1/4 ಕಪ್ ಮೀಡಿಯಂ ರವೆ
1/8 ಕಪ್ ಮೈದಾ ಹಿಟ್ಟು
2.5 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ; ದೋಸೆಕಲ್ಲು ಮತ್ತು ಹಿಟ್ಟಿನ ಗುಣಮಟ್ಟ ಅವಲಂಬಿಸಿ)
ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು)
ಉಪ್ಪು ರುಚಿಗೆ ತಕ್ಕಷ್ಟು
ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
5 - 6 ಜಜ್ಜಿದ ಕಾಳುಮೆಣಸು
1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1 ಟೇಬಲ್ ಚಮಚ ತೆಂಗಿನ ತುರಿ (ನಾನು ಬಳಸಲಿಲ್ಲ)
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
ಚಿಟಿಕೆ ಇಂಗು (ನಾನು ಬಳಸಲಿಲ್ಲ)
ಚಿಟಿಕೆ ಅರಿಶಿನ ಪುಡಿ (ನಾನು ಬಳಸಲಿಲ್ಲ)
ರವೆ ದೋಸೆ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಹಿಟ್ಟು ತೆಗೆದುಕೊಳ್ಳಿ.
ನೀರು, ಉಪ್ಪು ಮತ್ತು ನಿಮ್ಮಿಚ್ಛೆಯ ಪದಾರ್ಥಗಳನ್ನು ಸೇರಿಸಿ. ನಾನು ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕಾಳುಮೆಣಸು ಮತ್ತು ಶುಂಠಿ ಬಳಸಿದ್ದೇನೆ.
ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. ಗಮನಿಸಿ ರವೆ ದೋಸೆ ಹಿಟ್ಟು ನೀರ್ ದೋಸೆಯಂತೆ ತೆಳ್ಳಗಿರುತ್ತದೆ.
ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
ಒಂದು ಅಗಲವಾದ ಬಟ್ಟಲಿಗೆ ಗೋಧಿ ಹಿಟ್ಟು, ಸಣ್ಣ ರವೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.
ನಂತರ 2 ಟೇಬಲ್ ಚಮಚ ಬಿಸಿ ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ.
ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟನ್ನು ತಯಾರಿಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು.
ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.
ಚಿನ್ನದ ಹೊಂಬಣ್ಣ ಬರುವವರೆಗೆ ಎರಡು ಬದಿ ಕಾಯಿಸಿ. ಸಾಂಬಾರ್ ಅಥವಾ ಆಲೂ ಭಾಜಿಯೊಂದಿಗೆ ಬಡಿಸಿ.
Davanagere benne dose in kannada | ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ
ತಯಾರಿ ಸಮಯ: 15 ಗಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ದೋಸೆ ಅಕ್ಕಿ
1/2 ಕಪ್ ಉದ್ದಿನ ಬೇಳೆ
2 - 3 ಕಪ್ ಮಂಡಕ್ಕಿ
1 ಟೀಸ್ಪೂನ್ ಮೆಂತ್ಯ
2 ಟೀಸ್ಪೂನ್ ಮೈದಾ ಹಿಟ್ಟು
1 ಟೀಸ್ಪೂನ್ ಸಕ್ಕರೆ
1/4 ಟೀಸ್ಪೂನ್ ಅಡುಗೆ ಸೋಡಾ
1/4 ಕಪ್ ಬೆಣ್ಣೆ
ಉಪ್ಪು ರುಚಿಗೆ ತಕ್ಕಷ್ಟು.
ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ:
ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
ಮಂಡಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ.
ಈಗ ಮಿಕ್ಸಿ ಜಾರ್ ಗೆ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
ನಂತರ ನೆನೆಸಿದ ಮಂಡಕ್ಕಿಯನ್ನು ಅರೆದು ಅದೇ ಪಾತ್ರೆಗೆ ಸೇರಿಸಿ. ಚಳಿ ಪ್ರದೇಶವಾದಲ್ಲಿ ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಿಟ್ಟು ಹುದುಗುವ ಮೊದಲೇ ಸೇರಿಸಿ.
ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
7-8 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಒಂದು ಸಣ್ಣ ಬಟ್ಟಲಿನಲ್ಲಿ ಸೋಡಾ, ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಸೇರಿಸಿ. ಚೆನ್ನಾಗಿ ಕಲಸಿ . ದಾವಣಗೆರೆ ಬೆಣ್ಣೆ ದೋಸೆಯ ಹಿಟ್ಟು ತಯಾರಾಯಿತು.
ದೋಸೆ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ. ಹೆಚ್ಚು ಹರಡ ಬೇಡಿ. ಹಾಗು ಮುಚ್ಚಳ ಮುಚ್ಚ ಬೇಕಾಗಿಲ್ಲ.
5 ಸೆಕೆಂಡುಗಳ ನಂತರ ಸಣ್ಣ ಸಣ್ಣ ಬೆಣ್ಣೆಯ ತುಣುಕುಗಳನ್ನು ದೋಸೆಯ ಮೇಲೆ ಅಲ್ಲಲ್ಲಿ ಧಾರಾಳವಾಗಿ ಹಾಕಿ.
ದೋಸೆಯ ಅಂಚು ಹೊಂಬಣ್ಣಕ್ಕೆ ತಿರುಗಿದ ಕೂಡಲೇ ದೋಸೆಯನ್ನು ತೆಗೆಯಿರಿ. ಬೇಕಾದಲ್ಲಿ ಇನ್ನೊಂದು ಬದಿ ಒಂದೈದು ಸೆಕೆಂಡ್ ಗಳ ಕಾಲ ಬೇಯಿಸಿ.
soft idli using idli rave in Kannada | ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ
ಇಡ್ಲಿ ರವೆ ಉಪಯೋಗಿಸಿ ಮೃದುವಾದ ಇಡ್ಲಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ನಮ್ಮಲ್ಲಿ ಬಹುತೇಕ ಎಲ್ಲರೂ ಅವರದೇ ಆದ ವಿಧಾನದಲ್ಲಿ ಮೃದು ಮತ್ತು ರುಚಿಕರ ಇಡ್ಲಿ ತಯಾರಿಸುತ್ತಾರೆ. ನಾನು ಮಾಡುವ ವಿಧಾನವನ್ನು ಕೆಲ ಸಲಹೆಗಳನ್ನು ಇಲ್ಲಿ ವಿವರಿಸಿದ್ದೇನೆ. ಕೆಳಗೆ ತಿಳಿಸಿರುವ ಅಳತೆ ಹವಾಮಾನ ಮತ್ತು ಅರೆಯಲು ಮಿಕ್ಸಿ ಅಥವಾ ಗ್ರೈಂಡರ್ ಎಂಬುದರ ಮೇಲೆ ಅವಲಂಬಿತವಾಗಿದೆ.
ತಯಾರಿ ಸಮಯ: 14 - 15 ಘಂಟೆ ಅಡುಗೆ ಸಮಯ : 30 ನಿಮಿಷ ಪ್ರಮಾಣ : 30 - 40 ಇಡ್ಲಿಗಳು
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಇಡ್ಲಿ ರವಾ
1/2 - 3/4 ಕಪ್ ಉದ್ದಿನ ಬೇಳೆ
1/4 - 1/2 ಟೀಸ್ಪೂನ್ ಮೆಂತ್ಯ
0 - 1/2 ಕಪ್ ಅವಲಕ್ಕಿ
ಉಪ್ಪು ನಿಮ್ಮ ರುಚಿ ಪ್ರಕಾರ
ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ:
ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ.
4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ.
ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ. ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ, 5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.
ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ.
masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ
ಮಸೊಪ್ಪು ಸಾರು ವಿಡಿಯೋ
ಮಸೊಪ್ಪು ಸಾರು ಮತ್ತು ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಅಡುಗೆಯಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ ಇತ್ಯಾದಿ ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಮಸೊಪ್ಪು ಸಾರನ್ನು ಬೆರಕೆ ಸೊಪ್ಪು (ಪಾಲಕ್, ಮೆಂತೆ, ದಂಟು, ಸಬ್ಸಿಗೆ) ಗಳಿಂದ ತಯಾರಿಸಲಾಗುತ್ತದೆ. ಆದರೆ ಇವಿಷ್ಟಲ್ಲದೆ ಬೇರೆ ಯಾವುದೇ ಸೊಪ್ಪನ್ನು ಸಹ ಬೆರಕೆಯಾಗಿ ನಿಮ್ಮ ರುಚಿಗೆ ತಕ್ಕಂತೆ ಉಪಯೋಗಿಸಬಹುದು. ಪಾಲಕ್ ಸೊಪ್ಪು ಮಾತ್ರ ಉಪಯೋಗಿಸಿ ಸಹ ಮಸೊಪ್ಪು ಸಾರನ್ನು ತಯಾರಿಸಬಹುದು. ನಾನು ಪಾಲಕ್ ಮತ್ತು ದಂಟಿನ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೇನೆ.
ಇನ್ನು ರಾಗಿ ಮುದ್ದೆ ನಿಮಗೆಲ್ಲ ತಿಳಿದಿರುವಂತೆ ರಾಗಿ ಹಿಟ್ಟು, ಉಪ್ಪು ಮತ್ತು ನೀರು ಉಪಯೋಗಿಸಿ ತಯಾರಿಸಲಾಗುತ್ತದೆ. ರಾಗಿ ಮುದ್ದೆಯನ್ನು ಯಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು.
ಈ ಅಡುಗೆಯನ್ನು ನಾನು ನನ್ನ ಪಕ್ಕದಮನೆ ಆಂಟಿ ಯಿಂದ ಕಲಿತದ್ದು. ಮಸೊಪ್ಪನ್ನು ಕೊಂಚ ಬೇರೆ ವಿಧಾನದಲ್ಲೂ ಮಾಡುತ್ತಾರೆಂದು ಕೇಳಿದ್ದೇನೆ. ನೀವು ಮಾಡುವ ವಿಧಾನ ಬೇರೆಯಾಗಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ.
ಬೇಕಾಗುವ ಪದಾರ್ಥಗಳು (ಮಸೊಪ್ಪು ಸಾರಿಗೆ): (ಅಳತೆ ಕಪ್ = 120 ಎಂ ಎಲ್)
1 ಕಟ್ಟು ಸೊಪ್ಪು (ಪಾಲಕ್, ಪಾಲಕ್+ದಂಟು, ಪಾಲಕ್+ದಂಟು+ಮೆಂತೆ+ಸಬ್ಸಿಗೆ, ಇತ್ಯಾದಿ)
1.5 ಕಪ್ ತೊಗರಿ ಬೇಳೆ
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೇಟೊ
2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
ಒಂದು ದೊಡ್ಡ ಚಿಟಿಕೆ ಅರಶಿನ ಪುಡಿ
2 - 4 ಹಸಿರು ಮೆಣಸಿನಕಾಯಿ
ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
1/2 ಟಿಸ್ಪೂನ್ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ
1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/4 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಜೀರಿಗೆ
4 -5 ಎಸಳು ಕತ್ತರಿಸಿದ ಬೆಳ್ಳುಳ್ಳಿ
ಒಂದು ದೊಡ್ಡ ಚಿಟಿಕೆ ಇಂಗು
4 - 5 ಕರಿಬೇವಿನ ಎಲೆ
2 ಟೀಸ್ಪೂನ್ ಅಡುಗೆ ಎಣ್ಣೆ
ಬೇಕಾಗುವ ಪದಾರ್ಥಗಳು (ರಾಗಿ ಮುದ್ದೆಗೆ): (ಅಳತೆ ಕಪ್ = 120 ಎಂ ಎಲ್)
2 + 1/2 ಕಪ್ ನೀರು ( 1/2 ಕಪ್ ಕೊನೆಯಲ್ಲಿ ಬಳಸಲಾಗುತ್ತದೆ)
2 ಕಪ್ ರಾಗಿ ಹಿಟ್ಟು
ಉಪ್ಪು ರುಚಿಗೆ ತಕ್ಕಷ್ಟು (ಬೇಕಾದಲ್ಲಿ)
ಮಸ್ಸೊಪ್ಪು ಸಾರು ಮಾಡುವ ವಿಧಾನ:
ಸೊಪ್ಪನ್ನು ಸ್ವಚ್ಛಗೊಳಿಸಿ ಸಣ್ಣಗೆ ಕತ್ತರಿಸಿ.
ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ತೊಳೆದು, ಅರಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೊಪ್ಪು, ಈರುಳ್ಳಿ, ಟೊಮೆಟೊ, ತೆಂಗಿನ ತುರಿ ಮತ್ತು ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಹಾಕಿ. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆದು, ಬೆಂದ ಪದಾರ್ಥಗಳನ್ನು ಕಡಗೋಲು ಉಪಯೋಗಿಸಿ ಚೆನ್ನಾಗಿ ಮಸೆಯಿರಿ ಅಥವಾ ಕಡೆಯಿರಿ. ಇಲ್ಲವೇ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಿರಿ. ನಾನು ಅಗಲವಾದ ಸೌಟಿನ ಹಿಂಭಾಗ ಉಪಯೋಗಿಸಿ ಮಸೆಯುತ್ತೇನೆ. ಹೀಗೆ ಸೊಪ್ಪು ಮತ್ತು ಬೇಳೆಯನ್ನು ಮಸೆಯುವುದರಿಂದಲೇ ಈ ಸಾರಿಗೆ ಮಸೊಪ್ಪು ಎಂಬ ಹೆಸರು ಬಂದಿದೆ.
ಈಗ ಒಂದು ಸಣ್ಣ ಬಾಣಲೆ ತೆಗೆದುಕೊಂಡು ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಇಂಗು, ಕರಿಬೇವು ಬಳಸಿಕೊಂಡು ಒಗ್ಗರಣೆ ತಯಾರಿಸಿ.
ಆ ಒಗ್ಗರಣೆಯನ್ನು ಮಸೆದ ಸೊಪ್ಪು ಮತ್ತು ಬೇಳೆಯಿರುವ ಕುಕ್ಕರ್ ಗೆ ಸೇರಿಸಿ. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ.
1/2 ಚಮಚ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ ಸೇರಿಸಿ, ಸ್ಟವ್ ಆನ್ ಮಾಡಿ, ಕುದಿಯಲು ಇಡಿ.
ಕತ್ತರಿಸಿದ ಕೊತ್ತುಂಬರಿ ಸೊಪ್ಪನ್ನು ಸೇರಿಸಿ. ಸಾರು ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆರಿಸಿ. ಬಿಸಿ ರಾಗಿ ಮುದ್ದೆಯೊಂದಿಗೆ ಬಡಿಸಿ.
ರಾಗಿ ಮುದ್ದೆ ಮಾಡುವ ವಿಧಾನ:
ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಳ್ಳಿ. 2 ಟೀಸ್ಪೂನ್ ರಾಗಿ ಹಿಟ್ಟು ಸೇರಿಸಿ. ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಕುದಿಯಲು ಇಡಿ. ಹೀಗೆ ಮಾಡಿದಲ್ಲಿ ರಾಗಿ ಮುದ್ದೆ ಗಂಟಾಗುವುದಿಲ್ಲ.
ನೀರು ಕುದಿಯಲು ಪ್ರಾರಂಭವಾದ ಕೂಡಲೇ 2 ಕಪ್ ರಾಗಿ ಹಿಟ್ಟು ಸೇರಿಸಿ. ಗಮನಿಸಿ ಮಗುಚಬೇಡಿ. ಹಾಗೆ ಕುದಿಯಲು ಬಿಡಿ.
ಮಧ್ಯಮ ಜ್ವಾಲೆಯಲ್ಲಿ 7 - 8 ನಿಮಿಷಗಳ ಕಾಲ ಕುದಿಯಲು ಬಿಡಿ. ರಾಗಿ ಮುದ್ದೆಯ ಪ್ರಮಾಣದ ಮೇಲೆ ಸಮಯ ಬದಲಾಗ ಬಹುದು.
ಸುಮಾರು 7 - 8 ನಿಮಿಷಗಳಾದ ಕೂಡಲೇ ಜ್ವಾಲೆಯನ್ನು ಕಡಿಮೆ ಮಾಡಿ, ಮರದ ಕೋಲು (ರಾಗಿ ಮುದ್ದೆ ಕೋಲು) ಅಥವಾ ಮರದ ಸೌಟಿನಿಂದ ಚೆನ್ನಾಗಿ ಮಗುಚಿ.
2 - 3 ನಿಮಿಷಗಳ ಕಾಲ ಗಂಟುಗಳಿಲ್ಲದಂತೆ ಚೆನ್ನಾಗಿ ಮಗುಚಬೇಕಾಗುತ್ತದೆ.
ನಂತರ 1/2 ಕಪ್ ನೀರು ಸಿಂಪಡಿಸಿ ಮತ್ತೆ ಚೆನ್ನಾಗಿ ಮಗುಚಿ ಸ್ಟೌವ್ ಆಫ್ ಮಾಡಿ. ಈ ರೀತಿ ಮಾಡುವುದರಿಂದ ರಾಗಿ ಮುದ್ದೆ ಮೆತ್ತಗಾಗಿ ಚೆನ್ನಾಗಿ ಬರುತ್ತದೆ.
ತಕ್ಷಣ ಒಂದು ಪ್ಲೇಟ್ ಅಥವಾ ಮರದ ಹಲಗೆಯ ಮೇಲೆ ಸುರಿದು, ನೀರು ಮುಟ್ಟಿ ಕೊಂಡು ಕೈಯಿಂದ ಟೆನಿಸ್ ಬಾಲ್ ಗಾತ್ರದ ರಾಗಿ ಮುದ್ದೆಗಳನ್ನು ಮಾಡಿ. ಹೀಗೆ ಮಾಡುವಾಗ ರಾಗಿ ಮುದ್ದೆ ನಿಮ್ಮ ಬೆರಳುಗಳಿಗೆ ಅಂಟಿಕೊಳ್ಳ ಬಾರದು. ಅಂಟಿದಲ್ಲಿ ರಾಗಿ ಮುದ್ದೆ ಸರಿಯಾಗಿ ಬೆಂದಿಲ್ಲವೆಂದು ಅರ್ಥ. ಈಗ ಬಿಸಿ ರಾಗಿ ಮುದ್ದೆಯನ್ನು ಮಸ್ಸೊಪ್ಪು ಸಾರು ಅಥವಾ ಇನ್ನಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಮೊಸರಿನೊಂದಿಗೂ ಬಡಿಸಬಹುದು. ಆರೋಗ್ಯಕರ ಊಟವನ್ನು ಹೊಟ್ಟೆ ಭರ್ತಿ ಆನಂದಿಸಿ.
" ಮಂಗಳೂರು ಬನ್ಸ್" ಕರ್ನಾಟಕದ ಉಡುಪಿ - ಮಂಗಳೂರು ಪ್ರದೇಶದ ಒಂದು ಜನಪ್ರಿಯವಾದ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಮಂಗಳೂರು ಬನ್ಸ್ ನಲ್ಲಿ ಮೈದಾ ಮತ್ತು ಬಾಳೆ ಹಣ್ಣು ಮುಖ್ಯ ಪದಾರ್ಥಗಳಾಗಿವೆ. ಇದೊಂದು ಸಿಹಿ ಮತ್ತು ಮೃದುವಾದ ಪೂರಿ ಯಾಗಿದ್ದು, ಸಾಮಾನ್ಯ ಪೂರಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಮಂಗಳೂರು ಬನ್ಸ್ ಗೆ ಕನಿಷ್ಟ 4-6 ಘಂಟೆ ಹಿಟ್ಟು ಹುದುಗುವ ಸಮಯವಿದೆ. ಮಂಗಳೂರು ಬನ್ಸ್ ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ. ಆದರೆ ಇದು ಯಾವುದೇ ಇಲ್ಲದೆಯೂ ಹಾಗೆ ತಿನ್ನಲು ಸಹ ಬಹಳ ರುಚಿಯಾಗಿರುತ್ತದೆ. ಈ ಬನ್ಸ್ ಗಳನ್ನು ಒಂದೆರಡು ದಿನಗಳ ಕಾಲ ಇಟ್ಟು ತಿನ್ನಬಹುದು.
ಮಂಗಳೂರ್ ಬನ್ಸ್ ಗಳಲ್ಲಿ ಮೈದಾ ಮತ್ತು ಬೇಕಿಂಗ್ ಸೋಡಾ ಬಳಸಲಾಗುತ್ತದೆ. ಆದ್ದರಿಂದ ನೀವು ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸುವವರಾದಲ್ಲಿ ಮೈದಾ ಬದಲಿಗೆ ಗೋಧಿ ಹಿಟ್ಟು ಬಳಸಿ. ಅಡಿಗೆ ಸೋಡಾದ ಪ್ರಮಾಣ ಕಡಿಮೆ ಮಾಡಲು ಹುಳಿ ಮೊಸರು ಬಳಸಿ ಮತ್ತು ಹೆಚ್ಚು ಸಮಯ ಹಿಟ್ಟು ಹುದುಗಲು ಬಿಡಿ. ಆದರೆ ಒಮ್ಮೆಯಾದರೂ ಈ ರುಚಿಕರವಾದ ಮಂಗಳೂರು ಬನ್ಸ್ ಮಾಡಿ ತಿನ್ನಿ.
ಬಾಳೆಹಣ್ಣು ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಹಿಚುಕಿ. ನಂತರ ಅದೇ ಬಟ್ಟಲಿಗೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಉಪ್ಪು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ.
ಈಗ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ಹಿಟ್ಟು ಹುದುಗಲು ಕನಿಷ್ಟ 4 ಗಂಟೆಗಳ ಕಾಲ ಬಿಡಿ ( ಸಾಧ್ಯವಾದರೆ ಒಂದು ರಾತ್ರಿ ಹಿಟ್ಟು ಹುದುಗಲು ಬಿಡಿ). ನಿಮಗೆ ಹೆಚ್ಚು ಮೃದು ಮತ್ತು ಉಬ್ಬಿದ ಮಂಗಳೂರು ಬನ್ ಬೇಕಾದಲ್ಲಿ ಹೆಚ್ಚು ಸಮಯ ಹುದುಗಲು ಬಿಡಿ.
ಹಿಟ್ಟು ಹುದುಗಿದ ನಂತರ ಹಿಟ್ಟು ತುಂಬಾ ಮೃದು ಎನಿಸಿದರೆ 1 ಅಥವಾ 2 ಟೀಸ್ಪೂನ್ ಮೈದಾ ಹಿಟ್ಟು ಸೇರಿಸಿ ಪುನಃ ಚೆನ್ನಾಗಿ ಕಲಸಿ. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಪೂರಿಯಂತೆ ಲಟ್ಟಿಸಿ ಆದರೆ ಸ್ವಲ್ಪ ದಪ್ಪನಾಗಿರಲಿ. ಎಲ್ಲ ಪೂರಿಯನ್ನು ಲಟ್ಟಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಲಟ್ಟಿಸಿಕೊಂಡ ಪೂರಿಯನ್ನು ಒಂದೊಂದಾಗಿ ಚಿನ್ನದ ಹೊಂಬಣ್ಣ ಬರುವವರೆಗೆ ಕಾಯಿಸಿ. ಬಿಸಿಯಾಗಿರುವಾಗಲೇ ಚಟ್ನೀ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಹಾಗೆ ತಿನ್ನಲು ಸಹ ಬಲು ರುಚಿಯಾಗಿರುತ್ತದೆ.
ಇಡ್ಲಿ - ಸಾಂಬಾರ್ ಕರ್ನಾಟಕದ ಬಹಳ ಸಾಮಾನ್ಯ ಉಪಹಾರ ವಾಗಿದ್ದು, ಸಾಂಬಾರ್ ಮತ್ತು ಚಟ್ನಿ ಮಾಡುವ ವಿಧಾನ ಒಂದು ಸ್ಥಳದಿಂದ ಇನ್ನೊಂದಕ್ಕೆ ಬದಲಾಗುತ್ತವೆ . ನೀವು ಎಂದಾದರೂ ಬೆಂಗಳೂರು ಹೋಟೆಲ್‌ಗಳಲ್ಲಿ ಅಥವಾ ದರ್ಶಿನಿಗಳಲ್ಲಿ ( ಫಾಸ್ಟ್ ಫುಡ್ ) ಇಡ್ಲಿ - ಸಾಂಬಾರ್ ತಿಂದಿದ್ದರೆ, ಇಡ್ಲಿ ಎಷ್ಟು ರುಚಿಕರವಾಗಿದೆ ಎನ್ನುವಿರಿ...ಕಾರಣ ಅವರು ಇಡ್ಲಿ ಜೊತೆಗೆ ನೀಡುವ ಸಾಂಬಾರ್ ಇಡ್ಲಿಯ ರುಚಿಯನ್ನು ಅಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ... ಕರ್ನಾಟಕದ ಇತರ ಪ್ರದೇಶಗಳಲ್ಲೂ ಸಾಂಬಾರ್ ರುಚಿಕರವಾಗಿರುತ್ತದೆ ಆದರೆ ಸ್ವಲ್ಪ ಭಿನ್ನವಾಗಿ ಇರುತ್ತದೆ ಬೇರೆ ಸಾಂಬಾರ್ ಗಳ ಪಾಕವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಸುಲಭ ಮತ್ತು ಸರಳವಾದ ಸಾಂಬಾರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.
ಇಡ್ಲಿ ಸಾಂಬಾರ್ ವಿಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಸಾಂಬಾರ್ ಈರುಳ್ಳಿ ಅಥವಾ 1 ದೊಡ್ಡ ಈರುಳ್ಳಿ
1 ಕ್ಯಾರೆಟ್
1 ಸಣ್ಣ ಆಲೂಗಡ್ಡೆ(ಬೇಕಾದಲ್ಲಿ)
1 ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/4 ಕಪ್ ತೆಂಗಿನ ತುರಿ
2-3 ಒಣ ಮೆಣಸಿನ ಕಾಯಿ
2 ಟೀಸ್ಪೂನ್ ತೊಗರಿ ಬೇಳೆ
1 ಟೀಸ್ಪೂನ್ ಕಡ್ಲೆ ಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/4 ಟೀಸ್ಪೂನ್ ಮೆಂತೆ
5-6 ಕಾಳು ಮೆಣಸು
1/2 ಬೆರಳುದ್ದ ಚಕ್ಕೆ
ಒಂದು ದೊಡ್ಡ ಚಿಟಿಕೆ ಇಂಗು
1 ಹಸಿ ಮೆಣಸಿನ ಕಾಯಿ
4-5 ಕರಿ ಬೇವಿನ ಎಲೆ
1 ಟೊಮ್ಯಾಟೋ
2 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನ ಕಾಯಿ
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:
ಕ್ಯಾರೆಟ್, ಆಲೂಗಡ್ಡೆ ಮತ್ತು ಈರುಳ್ಳಿ ಗಳನ್ನು ಸ್ವಚ್ಛ ಗೊಳಿಸಿ ಹೆಚ್ಚಿಕೊಳ್ಳಿ. ಒಂದು ಕುಕ್ಕರ್ ನಲ್ಲಿ ಈ ತರಕಾರಿಗಳನ್ನು ಹಾಕಿ ನೀರು ಮತ್ತು ಸ್ವಲ್ಪ ಉಪ್ಪಿನೊಂದಿಗೆ 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
ಒಂದು ಬಾಣಲೆ ಯನ್ನು ಸ್ಟೋವ್ ಮೇಲೆ ಇಡಿ. ಉರಿ ಕಡಿಮೆ ಇರಲಿ. 1 ಟೀಸ್ಪೂನ್ ಎಣ್ಣೆ ಹಾಕಿ ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಅದೇ ಬಾಣಲೆಗೆ ತೊಗರಿಬೇಳೆ , ಕಡ್ಲೆ ಬೇಳೆ ಮತ್ತು ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿಯಿರಿ. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಮೆಂತ್ಯ , ಕಾಳು ಮೆಣಸು ಮತ್ತು ಚಕ್ಕೆ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
ಈಗ ಇಂಗು , ಕರಿಬೇವಿನ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಕೊನೆಯಲ್ಲಿ ಕತ್ತರಿಸಿದ ಟೊಮೆಟೊ ಸೇರಿಸಿ, 10 ಸೆಕೆಂಡ್ ಗಳ ಕಾಲ ಹುರಿದು ಸ್ಟೌವ್ ಆಫ್ ಮಾಡಿ.
ಹುರಿದ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ತೆಂಗಿನ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆಯಿರಿ.
ತರಕಾರಿಗಳು ಬೆಂದ ಮೇಲೆ ಅದೇ ಕುಕ್ಕರ್ಗೆ ಅರೆದ ಮಸಾಲಾ ಹಾಕಿ. ಉಪ್ಪು , ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಒಂದು ಕುದಿ ಬರಿಸಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿ, ಒಮ್ಮೆ ಮಗುಚಿ ಸ್ಟೋವ್ ಆಫ್ ಮಾಡಿ. ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.
ಮದ್ದೂರ್ ವಡೆ ಕರ್ನಾಟಕದ ಜನಪ್ರಿಯ ಖಾದ್ಯವಾಗಿದೆ. ಮದ್ದೂರ್ ಮಂಡ್ಯದ ಬಳಿ ಇರುವ ಸಣ್ಣ ಪಟ್ಟಣವಾಗಿದ್ದು, ಮೈಸೂರು - ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾಣ ಸಿಗುತ್ತದೆ. ಈ ಖಾದ್ಯ ಮದ್ದೂರಿನಲ್ಲಿ ಹುಟ್ಟಿರುವ ಕಾರಣ ಇದನ್ನು ಮದ್ದೂರ್ ವಡೆ ಎಂದು ಕರೆಯಲಾಗುತ್ತದೆ. ಬಹಳ ರುಚಿಕರವಾಗಿರುವ ಈ ಅಡುಗೆಯನ್ನು ನೀವು ಒಮ್ಮೆ ಮಾಡಿದಲ್ಲಿ ಪುನಃ ಮಾಡಲು ಇಚ್ಚಿಸುತ್ತೀರಿ.
ನೀವು ಬೆಂಗಳೂರು ಮತ್ತು ಮೈಸೂರು ನಡುವೆ ಟ್ರೈನ್ ಅಥವಾ ಬಸ್ ನಲ್ಲಿ ಪ್ರಯಾಣಿಸಿದರೆ, ಮದ್ದೂರು ಬಂದಾಗ ಅಲ್ಲಿ ಬಕೆಟ್ ಗಳಲ್ಲಿ ಮದ್ದೂರ್ ವಡೆಯನ್ನು ಮಾರುತ್ತಾ ಬರುವವರು ಕಾಣಸಿಗುತ್ತಾರೆ. ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಈ ವಡೆಗಳಿಗೋಸ್ಕರ ಕಾಯುತ್ತಾರೆ. ನಾನು ಮೊಟ್ಟ ಮೊದಲ ಸಲ ಈ ವಡೆಯನ್ನು ಸವಿದಿದ್ದು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗಲೇ.
ಮದ್ದೂರು ವಡೆ ಹೊರಗಿನಿಂದ ಗಟ್ಟಿಯಾಗಿ ಕಾಣಿಸಿದರೂ, ಒಳಗಿನಿಂದ ಮೃದುವಾಗಿರುತ್ತದೆ. ನೀರುಳ್ಳಿಯ ಸ್ವಾದ ವಡೆಯ ರುಚಿಯನ್ನು ಹೆಚ್ಚಿಸುತ್ತದೆ. ಈ ವಡೆಯನ್ನು ಮೈದಾ ಹಿಟ್ಟು, ಅಕ್ಕಿ ಹಿಟ್ಟು, ರವೆ ಮತ್ತು ಈರುಳ್ಳಿಯನ್ನು ಮುಖ್ಯ ಪದಾರ್ಥಗಳಾಗಿ ಉಪಯೋಗಿಸಿ ಮಾಡುತ್ತಾರೆ.
ಮದ್ದೂರ್ ವಡೆ ವೀಡಿಯೊ
ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
1 ಕಪ್ ಮೈದಾ
1/2 ಕಪ್ ಅಕ್ಕಿ ಹಿಟ್ಟು
1/2 ಕಪ್ ಚಿರೋಟಿ ರವೆ / ಸಣ್ಣ ರವೆ
1 ಮಧ್ಯಮ ಗಾತ್ರದ ಈರುಳ್ಳಿ
1 - 2 ಹಸಿ ಮೆಣಸಿನ ಕಾಯಿ
1/4 ಟೀಸ್ಪೂನ್ ಹೆಚ್ಚಿದ ಶುಂಠಿ
1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವು
1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
ಚಿಟಿಕೆ ಇಂಗು
2 ಟೀಸ್ಪೂನ್ ತುಪ್ಪ / 2 ಟೇಬಲ್ ಸ್ಪೂನ್ ಬಿಸಿ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕಾಯಿಸಲು
ಮದ್ದೂರ್ ವಡೆ ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ, ಅಕ್ಕಿ ಹಿಟ್ಟು ಮತ್ತು ರವೆಯನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು ಮತ್ತು ತುಪ್ಪ / ಬಿಸಿ ಎಣ್ಣೆ ಹಾಕಿ ಕಲಸಿ. ನಂತರ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಹಸಿಮೆಣಸು ಮತ್ತು ಇಂಗು ಹಾಕಿ.
ನೀರು ಹಾಕದೆ ಚೆನ್ನಾಗಿ ಕಲಸಿ. 10 ನಿಮಿಷ ಹಾಗೆ ಬಿಡಿ. ನಂತರ ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ಗಟ್ಟಿಯಾದ ಹಿಟ್ಟು ಕಲಸಿ.
ಒಂದು ದಪ್ಪ ಪ್ಲಾಸ್ಟಿಕ್ ಹಾಳೆ ತೆಗೆದು ಕೊಂಡು, ಎಣ್ಣೆ ಹಚ್ಚಿ. ನಿಂಬೆ ಹಣ್ಣಿನ ಗಾತ್ರದ ಹಿಟ್ಟನ್ನು ಇಟ್ಟು, ಕೈಯಲ್ಲಿ ತಟ್ಟಿ, ವೃತ್ತಾಕಾರ ಮಾಡಿ.
ಒಂದು ಬಾಣಲೆಯಲ್ಲಿ ಎಣ್ಣೆ ಇಟ್ಟು, ಎಣ್ಣೆ ಕಾದ ಮೇಲೆ, ಜಾಗ್ರತೆಯಿಂದ ತಟ್ಟಿದ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. ಕಡಿಮೆ ಉರಿಯಲ್ಲಿ ಹೊಂಬಣ್ಣ ಬರುವ ವರೆಗೆ ಕಾಯಿಸಿರಿ. ತೆಂಗಿನಕಾಯಿ ಚಟ್ನಿ ಮತ್ತು ಟೀ ಯೊಂದಿಗೆ ಬಡಿಸಿ.
Neer dose Recipe in Kannada | ನೀರು ದೋಸೆ | ಬರೀ ಅಕ್ಕಿ ದೋಸೆ
ನೀರ್ ದೋಸೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಅತ್ಯಂತ ಪ್ರಸಿದ್ಧ ಅಡುಗೆಯಾಗಿದೆ. ನೀರ್ ದೋಸೆ ಯನ್ನು ಹೆಚ್ಚಾಗಿ ಮಂಗಳೂರು ಮತ್ತು ಉಡುಪಿ ಭಾಗದ ಅಡುಗೆಯಾಗಿ ಗುರುತಿಸಲಾಗಿದೆ. ಆದರೆ ಈ ದೋಸೆ ಕುಂದಾಪುರ ಮತ್ತು ಮಲೆನಾಡು ಪ್ರದೇಶದಾದ್ಯಂತ ಬಹಳ ಹಳೆಯ ಕಾಲದಿಂದ ಆಚರಣೆಯಲ್ಲಿದೆ. ಮಲೆನಾಡಿನಲ್ಲಿ ಸಾಧಾರಣವಾಗಿ ಇದನ್ನು " ಬರೀ ಅಕ್ಕಿ ದೋಸೆ " ಎಂದು ಕುಂದಾಪುರ ಪ್ರದೇಶದಲ್ಲಿ "ತೆಳ್ಳಿನ್ ದೋಸೆ" ಎಂದು ಕರೆಯಲಾಗುತ್ತದೆ. ನೀರ್ ದೋಸೆಯಲ್ಲಿ ಹಿಟ್ಟು ಹುದುಗುವಿಕೆ ಬೇಕಾಗದೇ ಇರುವುದರಿಂದ, ಅಕ್ಕಿಯೊಂದನ್ನು ನೆನೆಸಿಟ್ಟರೆ, ಆಮೇಲೆ ಅತೀ ಕಡಿಮೆ ಸಮಯದಲ್ಲಿ ದೋಸೆ ತಯಾರಿಸಬಹುದು. ತೆಳುವಾದ ಗರಿಗರಿ ದೋಸೆ ತಯಾರಿಸಲು ಸ್ವಲ್ಪ ಅನುಭವದ ಅಗತ್ಯವಿದೆ. ಚೆನ್ನಾಗಿರುವ ದೋಸೆ ತಯಾರಿಸುವಲ್ಲಿ ಒಳ್ಳೆ ಗುಣಮಟ್ಟದ ದೋಸೆ ಕಾವಲಿ, ಸರಿಯಾದ ಪ್ರಮಾಣದ ನೀರು ಮತ್ತು ಒಳ್ಳೆ ಗುಣಮಟ್ಟದ ಅಕ್ಕಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದೆರಡು ಸಲ ಪ್ರಯತ್ನಿಸಿದರೆ ನಿಮಗೆ ಈ ಅಂಶಗಳು ಮನದಟ್ಟಾಗುತ್ತವೆ.
ಕೇವಲ ಅಕ್ಕಿ, ಉಪ್ಪು ಮತ್ತು ನೀರನ್ನು ಉಪಯೋಗಿಸಿ ಈ ದೋಸೆ ಮಾಡಲಾಗುವುದು. ಕರಾವಳಿ ಪ್ರದೇಶದಲ್ಲಿ ಸ್ವಲ್ಪ ತೆಂಗಿನಕಾಯಿ ಯನ್ನು ಸಹ ಸೇರಿಸುತ್ತಾರೆ. ಇದರಿಂದ ದೋಸೆ ಮೃದುವಾಗಿ, ಸ್ವಲ್ಪ ಬೇರೆ ರುಚಿ ಇರುತ್ತದೆ. ಈ ದೋಸೆ ಮಾಡಲು ಅದಕ್ಕೆಂದೇ ಸಿಗುವ ಕಬ್ಬಿಣದ ಹೆಂಚು ಬಳಸಲಾಗುತ್ತದೆ. ಆದರೆ ನಾನ್-ಸ್ಟಿಕ್ ತವ ಉಪಯೋಗಿಸಿ ಸಹ ಮಾಡಬಹುದು. ಇನ್ನೂ ಈ ದೋಸೆ ಮಾಡಲು ನೀವು ಯಾವುದೇ ಅಕ್ಕಿಯನ್ನು ಉಪಯೋಗಿಸ ಬಹುದು. ಸಾಧಾರಣವಾಗಿ ದೋಸೆ ಅಕ್ಕಿ ಉಪಯೋಗಿಸುತ್ತಾರೆ, ಈ ಅಕ್ಕಿಯಿಂದ ಮಾಡಿದ ದೋಸೆ ಮೃದುವಾಗಿದ್ದು ರುಚಿಕರವಾಗಿರುತ್ತದೆ. ಸೋನಾ ಮಸೂರಿ ಅಥವಾ ಯಾವುದೇ ಉತ್ತಮ ಗುಣಮಟ್ಟದ ಅಕ್ಕಿ ಬಳಸಿದಲ್ಲಿ ದೋಸೆ ಮಾಡಲು ಸುಲಭವಾಗಿರುತ್ತದೆ ಆದರೆ ಅಷ್ಟು ಮೃದುವಾಗಿರುವುದಿಲ್ಲ. ಈ ಸಂದರ್ಭದಲ್ಲಿ ತೆಂಗಿನಕಾಯಿ ಉಪಯೋಗಿಸ ಬಹುದು. ನೀವು ಮೊದಲ ಬಾರಿ ಈ ದೋಸೆ ಪ್ರಯತ್ನಿಸುತ್ತಿದ್ದೀರಾದರೆ ಸೋನಾ ಮಸೂರಿ ಉಪಯೋಗಿಸಿ ಅಥವಾ ದೋಸೆ ಅಕ್ಕಿ ಮತ್ತು ಸೋನಾ ಮಸೂರಿ ಸಮಕ್ಕೆ ಸಮ ಬೆರೆಸಿ. ಈ ದೋಸೆಯನ್ನು ಬಿಸಿ ಯಾಗಿರುವಾಗ ತಿನ್ನಲು ರುಚಿ.ಚಟ್ನೀ, ಕಾಯಿಹಾಲು, ಕಾಯಿಬೆಲ್ಲ, ಸಕ್ಕರೆತುಪ್ಪ, ರಸಾಯನ ಹೀಗೆ ಯಾವುದರೊಟ್ಟಿಗೆ ಬೇಕಾದರೂ ತಿನ್ನ ಬಹುದು.
ದಯವಿಟ್ಟು ಗಮನಿಸಿ, ನೀವು ದೋಸೆ ಅಕ್ಕಿ ಬಳಸುತ್ತೀರಾದರೆ ಸ್ವಲ್ಪ ಕಡಿಮೆ ನೀರು ಸಾಕಾಗುತ್ತದೆ. ಸೋನಾ ಮಸೂರಿ ಅಥವಾ ಬೇರೆ ಒಳ್ಳೆ ಗುಣ ಮಟ್ಟದ ಅಕ್ಕಿ ಬಳಸಿದಲ್ಲಿ ಹೆಚ್ಚು ನೀರು ಸೇರಿಸಬಹುದು.
ನೀರ್ ದೋಸೆಯ ಮೇಲೆ ನಾನು ಒಂದು ವಿಡಿಯೋ ಮಾಡಿದ್ದೇನೆ. ಅದನ್ನು ಈ ಕೆಳಗೆ ನೀವು ವೀಕ್ಷಿಸಬಹುದು.
ತಯಾರಿ ಸಮಯ: 5 ಗಂಟೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
1/4 ಕಪ್ ತೆಂಗಿನ ತುರಿ (ಬೇಕಾದಲ್ಲಿ)
3 - 4 ಕಪ್ ನೀರು (ಅರೆಯುವ ನೀರು ಸೇರಿಸಿ)
ಉಪ್ಪು ರುಚಿಗೆ ತಕ್ಕಷ್ಟು
ನೀರ್ ದೋಸೆ ಮಾಡುವ ವಿಧಾನ:
ನೀರ್ ದೋಸೆ ಮಾಡಲು ಅಕ್ಕಿಯನ್ನು ಕನಿಷ್ಠ 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಾನು ಸಾಮಾನ್ಯವಾಗಿ ಒಂದು ರಾತ್ರಿ ನೆನೆಸುತ್ತೇನೆ. ಮರುದಿನ ಬೆಳಿಗ್ಗೆ ನೀರನ್ನು ಬಗ್ಗಿಸಿ ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬುವ ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ. ಸೋನಾಮಸೂರಿಯಂಥ ಅಕ್ಕಿ ಆದಲ್ಲಿ ಸ್ವಲ್ಪ ಜಾಸ್ತಿ ಹೊತ್ತು ರುಬ್ಬ ಬೇಕಾಗುತ್ತದೆ. ತೆಂಗಿನ ಕಾಯಿ ಸೇರಿಸುವುದಾದರೆ ಸೇರಿಸಿ. ನೀರ್ ದೋಸೆ ಹಿಟ್ಟು ಬಹಳ ನಯವಾದ ಇರಬೇಕು. 2 ಬೆರಳುಗಳ ನಡುವೆ ಹಿಟ್ಟನ್ನು ಮುಟ್ಟಿ ನೋಡಿದಾಗ ನಯವಾಗಿರಬೇಕು.
ನೀರ್ ದೋಸೆ ಹಿಟ್ಟು ರುಬ್ಬಿಯಾದ ಮೇಲೆ ಒಂದು ಪಾತ್ರೆಗೆ ಹಾಕಿ. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ನೀವು ಮೊತ್ತ ಮೊದಲು ಈ ದೋಸೆ ಮಾಡುತ್ತಿರುವಿರಾದರೆ, ಹಿಟ್ಟಿಗೆ ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿ ಕೊಳ್ಳ ಬಹುದು. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಒಲೆ ದೊಡ್ಡ ಉರಿಯಲ್ಲಿರಲಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ನೀರ್ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ನೀರ್ ದೋಸೆ ಮಾಡಲು ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ನೀರ್ ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.
Bisibele bath recipe in kannada | ಬಿಸಿಬೇಳೆ ಬಾತ್ ಮಾಡುವ ವಿಧಾನ
ಬಿಸಿಬೇಳೆ ಬಾತ್ ಕರ್ನಾಟಕ ದ ಬಹು ಜನಪ್ರಿಯ ಅಡುಗೆಯಾಗಿದ್ದು, ಇದ್ದನ್ನು ಬಿಸಿಬೇಳೆ ಹುಳಿಯನ್ನ ಎಂದೂ ಕರೆಯುತ್ತಾರೆ. ಇದರ ಪಾಕವಿಧಾನ ಬಹಳ ಸುದೀರ್ಘ ವಾಗಿದ್ದರೂ, ಇಲ್ಲಿ ಆದಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ. ಬಿಸಿಬೇಳೆ ಬಾತ್ ನ್ನು ಸಾಧಾರಣವಾಗಿ ಕಾರ ಬೂಂದಿ ಅಥವಾ ಮೊಸರು ಬಜ್ಜಿ (ಸಲಾಡ್) ಯೊಂದಿಗೆ ಬಡಿಸುತ್ತಾರೆ. ಆದರೆ ಇದರಲ್ಲಿ ಎಲ್ಲ ತರದ ಮಸಾಲೆ, ತರಕಾರಿ, ಉಪ್ಪು, ಹುಳಿ, ಬೆಲ್ಲ ಹೀಗೆ ಎಲ್ಲವೂ ಇರುವುದರಿಂದ, ಏನೂ ಇಲ್ಲದೆ ಹಾಗೇ ಸಹ ತಿನ್ನಲು ರುಚಿಯಾಗಿರುತ್ತದೆ. ಎಲ್ಲ ಅಡುಗೆಯಂತೆ ಬಿಸಿಬೇಳೆ ಬಾತ್ ಪಾಕ ವಿಧಾನದಲ್ಲೂ ಸಣ್ಣ ಸಣ್ಣ ವ್ಯತ್ಯಾಸಗಳೊಂದಿಗೆ, ಅನೇಕ ವಿಧಗಳಿವೆ. ಆದರೆ ಇಲ್ಲಿರುವ ಪಾಕವಿಧಾನ ಹೆಚ್ಚಾಗಿ ಎಲ್ಲೆಡೆ ಚಾಲ್ತಿಯಲ್ಲಿದ್ದು, ಬಹಳ ರುಚಿಕರವಾಗಿರುತ್ತದೆ. ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ.
ತಯಾರಿ ಸಮಯ: 30 ನಿಮಿಷ ಅಡುಗೆ ಸಮಯ : 1 ಗಂಟೆ ಪ್ರಮಾಣ : 3 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂಎಲ್ )
3/4 ಕಪ್ ತೊಗರಿಬೇಳೆ
1 ಕಪ್ ಅಕ್ಕಿ (ಸೋನಾ ಮಸೂರಿ ಆಥವಾ ಊಟದ ಅಕ್ಕಿ)
10 ಬೀನ್ಸ್
1 ಕ್ಯಾರೆಟ್
1 ನವಿಲ್ ಕೋಸು
1 ಆಲೂಗಡ್ಡೆ
2 ಟೇಬಲ್ ಸ್ಪೂನ್ ನೆನೆಸಿದ ನೆಲಗಡಲೆ
2 ಟೇಬಲ್ ಸ್ಪೂನ್ ನೆನೆಸಿದ ಬಟಾಣಿ
1 ಟೊಮ್ಯಾಟೋ
1 ನಿಂಬೆ ಗಾತ್ರದಷ್ಟು ಹುಣಿಸೆ ಹಣ್ಣು
1 ನಿಂಬೆ ಗಾತ್ರದಷ್ಟು ಬೆಲ್ಲ
ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:
2-4 ಒಣ ಮೇಣಸಿನಕಾಯಿ
1 ಟೀಸ್ಪೂನ್ ಕಡ್ಲೆ ಬೇಳೆ
2 ಟೀಸ್ಪೂನ್ ಉದ್ದಿನ ಬೇಳೆ
1/4 ಟೀಸ್ಪೂನ್ ಮೆಂತೆ
1/4 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
2 ಟೀಸ್ಪೂನ್ ಕೊತ್ತಂಬರಿ ಬೀಜ
ಒಂದು ದೊಡ್ಡ ಚಿಟಿಕೆ ಇಂಗು
1/2 ಬೆರಳುದ್ದ ಚಕ್ಕೆ
8-10 ಲವಂಗ
1 ಏಲಕ್ಕಿ
1 ಟೀಸ್ಪೂನ್ ಗಸಗಸೆ
1/2 ಟೀಸ್ಪೂನ್ ಅಡುಗೆ ಎಣ್ಣೆ
2 ಟೇಬಲ್ ಸ್ಪೂನ್ ಒಣಕೊಬ್ಬರಿ ಅಥವಾ ಕಾಯಿತುರಿ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1/2 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಕಡ್ಲೆ ಬೇಳೆ
2 ಟೀಸ್ಪೂನ್ ಉದ್ದಿನ ಬೇಳೆ
8-10 ಗೋಡಂಬಿ
7 - 8 ಕರಿಬೇವಿನ ಎಲೆ
1/4 ಟೀಸ್ಪೂನ್ ಅರಿಶಿನ ಪುಡಿ
4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ
ಬಿಸಿಬೇಳೆ ಬಾತ್ ಮಾಡುವ ವಿಧಾನ (ಅಳತೆ ಕಪ್ = 120 ಎಂಎಲ್ ):
ಕನಿಷ್ಠ 5 ಲೀಟರ್ ಸಾಮರ್ಥ್ಯದ ಪ್ರೆಶರ್ ಕುಕರ್ ತೆಗೆದುಕೊಳ್ಳಿ. ಪ್ರೆಶರ್ ಕುಕರ್ ಗೆ ತೊಗರಿಬೇಳೆ ಹಾಕಿ, ತೊಳೆಯಿರಿ. ನಂತರ 2 ಕಪ್ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದೆರಡು ಹುಂಡು ಎಣ್ಣೆ ಹಾಕಿ 2 ವಿಷಲ್ ಕೂಗಿಸಿ.
ಎಲ್ಲ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿ, ನೆನೆಸಿದ ನೆಲಗಡಲೆ ಮತ್ತು ಬಟಾಣಿ ಹಾಕಿ ತೊಳೆಯಿರಿ. ಈಗ ತರಕಾರಿ, ಅಕ್ಕಿ ಮತ್ತು ಕಾಳುಗಳನ್ನು ಅರ್ಧ ಬೆಂದ ಬೇಳೆಯೊಂದಿಗೆ ಅದೇ ಕುಕ್ಕರ್‌ನಲ್ಲಿ ಹಾಕಿ. 4 ಕಪ್ ನೀರು ಸೇರಿಸಿ, ಒಮ್ಮೆ ಚೆನ್ನಾಗಿ ಕಲಸಿ, ಪುನಃ 2 ವಿಷಲ್ ಬರಿಸಿ.
ಈಗ ಮಸಾಲಾ ಪುಡಿ ಮಾಡಲು ಒಂದು ಬಾಣಲೆ ತೆಗೆದುಕೊಂಡು 1/2 ಚಮಚ ಎಣ್ಣೆ ಹಾಕಿ. ಸ್ಟೋವ್ ಮಧ್ಯಮ ಉರಿಯಲ್ಲಿಟ್ಟು, ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಕೊಬ್ಬರಿ ಅಥವಾ ಕಾಯಿತುರಿ ಹೊರತು ಪಡಿಸಿ, ಮಿಕ್ಕೆಲ್ಲ ಪದಾರ್ಥಗಳನ್ನು 5 ಸೆಕೆಂಡುಗಳ ಅಂತರದಲ್ಲಿ ಒಂದೊಂದಾಗಿ ಸೇರಿಸುತ್ತಾ ಹುರಿಯಿರಿ. ( ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತೆ, ಸಾಸಿವೆ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಇಂಗು ಮತ್ತು ಗಸಗಸೆ). ಬೇಳೆ ಗಳು ಕಂದು ಬಣ್ಣಕ್ಕೆ ಬರುವವರೆಗೆ ನಿರಂತರವಾಗಿ ಹುರಿಯುತ್ತಾ ಇರಿ. ಉರಿ ಜಾಸ್ತಿಯಾಯಿತೆನ್ನಿಸಿದರೆ ಕಡಿಮೆಮಾಡಿಕೊಳ್ಳಿ. ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿಕೊಳ್ಳಿ.
ಈಗ ಒಣಕೊಬ್ಬರಿ ಅಥವಾ ಕಾಯಿತುರಿ ಹಾಕಿ ಪುನಃ ಪುಡಿ ಮಾಡಿ.
ನಂತರ ಅದೇ ಬಾಣಲೆ ತೆಗೆದುಕೊಂಡು ಎಣ್ಣೆ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಅರಿಶಿನ ಪುಡಿ, ಕರಿಬೇವಿನ ಸೊಪ್ಪು ಸೇರಿಸಿ ಸ್ಟೋವ್ ಆಫ್ ಮಾಡಿ. ಕೂಡಲೇ ಪುಡಿ ಮಾಡಿದ ಮಸಾಲಾ, ಉಪ್ಪು , ಬೆಲ್ಲ , ಹುಣಸೆ ರಸ ಸೇರಿಸಿ ಕಲಸಿ.
ಈಗ ಬೇಯಿಸಿದ ಪದಾರ್ಥಗಳನ್ನು ಒಗ್ಗರಣೆ ಮತ್ತು ಮಸಾಲೆ ಇರುವ ಬಾಣಲೆಗೆ ಹಾಕಿ. ಚಿಕ್ಕ ಬಾಣಲೆ ಆದಲ್ಲಿ ಒಗ್ಗರಣೆ ಮತ್ತು ಮಸಾಲೆಯನ್ನು ನೀವು ಕುಕ್ಕರ್ ಗೆ ಸೇರಿಸಬಹುದು.
ಈಗ ಬೇಕಾದಷ್ಟು ನೀರು ಸೇರಿಸಿ (ಅಂದಾಜು 4 ಕಪ್ ನಷ್ಟು), ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ.
ಇದನ್ನು ಬಿಸಿ ಬಿಸಿಯಾಗಿ ತಿನ್ನಲು ರುಚಿ, ಆದ್ದರಿಂದಲೇ ಹೆಸರು "ಬಿಸಿ-ಬೇಳೆ ಬಾತ್" ಎಂದು ಇರಬಹುದು. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಬಡಿಸಿ. ಹಾಗೇ ಸಹ ತಿನ್ನಬಹುದು.
ದೋಸೆ ಹಿಟ್ಟಿಗೆ ಬೇಕಾದ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
2 ಕಪ್ ದೋಸೆ ಅಕ್ಕಿ
1/2 ಕಪ್ ಉದ್ದಿನ ಬೇಳೆ ( ಮಿಕ್ಸೀ ಬಳಸುತ್ತೀರಾದರೆ 1/4 ಕಪ್ ಹೆಚ್ಚುವರಿ ಸೇರಿಸಿ )
1 ಟೀಸ್ಪೂನ್ ಮೆಂತ್ಯ
2 ಟೇಬಲ್ ಸ್ಪೂನ್ ಕಡ್ಲೆಬೇಳೆ / ತೊಗರಿಬೇಳೆ
1/4 ಕಪ್ ದಪ್ಪ ಅವಲಕ್ಕಿ / ಗಟ್ಟಿ ಆವಲಕ್ಕಿ
ಉಪ್ಪು ರುಚಿಗೆ ತಕ್ಕಷ್ಟು.
ಆಲೂ ಪಲ್ಯಕ್ಕೆ ಬೇಕಾದ ಪದಾರ್ಥಗಳು:
2 ಮಧ್ಯಮ ಗಾತ್ರದ ಆಲೂಗಡ್ಡೆ
2 ಮಧ್ಯಮ ಗಾತ್ರದ ಈರುಳ್ಳಿ
1/2 ಚಮಚ ಸಾಸಿವೆ
1/4 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡ್ಲೆ ಬೇಳೆ
2-4 ಹಸಿ ಮೆಣಸು
1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ
8-10 ಗೋಡಂಬಿ
1/4 ಟೀಸ್ಪೂನ್ ಅರಿಶಿನ ಪುಡಿ
ಇಂಗು ಒಂದು ಚಿಟಿಕೆ
7 - 8 ಕರಿಬೇವಿನ ಎಲೆ
2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು.
ಕೆಂಪು ಚಟ್ನಿಗೆ ಬೇಕಾಗುವ ಪದಾರ್ಥಗಳು:
2 ಟೇಬಲ್ ಸ್ಪೂನ್ ಕಡ್ಲೆ ಬೇಳೆ
3-6 ಒಣ ಮೆಣಸಿನಕಾಯಿ
8-10 ಸಾಂಬಾರ್ ನೀರುಳ್ಳಿ / ಒಂದು ಸಣ್ಣ ಈರುಳ್ಳಿ
4-5 ಬೇಳೆ ಬೆಳ್ಳುಳ್ಳಿ
ಹುಣಸೆ ಹಣ್ಣು ಒಂದು ಸಣ್ಣ ನಿಂಬೆ ಗಾತ್ರ
2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
ದೋಸೆ ಹಿಟ್ಟು ಮಾಡುವ ವಿಧಾನ:
ದಪ್ಪ / ಗಟ್ಟಿ ಅವಲಕ್ಕಿ ಹೊರತುಪಡಿಸಿ ದೋಸೆ ಹಿಟ್ಟಿಗೆ ಸೂಚಿಸಿರುವ ಎಲ್ಲಾ ಪದಾರ್ಥಗಳನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲೇ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
ನೀರನ್ನು ಬಗ್ಗಿಸಿ ಶೇಕರಿಸಿಟ್ಟುಕೊಳ್ಳಿ, ಏಕೆಂದರೆ ಇದೇ ನೀರನ್ನು ರುಬ್ಬುವ ಸಂದರ್ಭದಲ್ಲಿ ಬಳಸಲಾಗುತ್ತದೆ. ಹೀಗೆ ಮಾಡುವುದರಿಂದ ಹಿಟ್ಟು ಚೆನ್ನಾಗಿ ಹುದುಗುತ್ತದೆ. ದೋಸೆ ಹಿಟ್ಟು ರುಬ್ಬಲು ಪ್ರಾರಂಭಿಸುವ ಮುನ್ನ ದಪ್ಪಅವಲಕ್ಕಿ / ಗಟ್ಟಿ ಅವಲಕ್ಕಿ ಯನ್ನು ತೊಳೆದು ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
ಈಗ ಗ್ರೈಂಡೆರ್ ಗೆ, ನೆನೆಸಿ ನೀರು ಬಗ್ಗಿಸಿದ ಪದಾರ್ಥಗಳು ಮತ್ತು ಅವಲಕ್ಕಿ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿತ್ತಾ ರುಬ್ಬಿರಿ. ನೀವು ಮಿಕ್ಸೀಯನ್ನೂ ಬಳಸಬಹುದು ಆದರೆ ಪದಾರ್ಥಗಳ ಪಟ್ಟಿಯಲ್ಲಿ ಹೇಳಿದಂತೆ ಉದ್ದಿನ ಬೇಳೆ ಪ್ರಮಾಣ ಹೆಚ್ಚಿಸಲು ಮರೆಯದಿರಿ. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 8-9 ಘಂಟೆ ಕಾಲ ಬಿಡಿ. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಆಲೂಗಡ್ಡೆ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗ ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ತಂಪಾದ ಮೇಲೆ ಸಿಪ್ಪೆಯನ್ನು ತೆಗೆದು, ಪುಡಿ ಮಾಡಿಕೊಳ್ಳಿ. ಹಾಗೂ ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಗೋಡಂಬಿ ಯನ್ನು ಹಾಕಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಹೆಚ್ಚಿದ ಹಸಿ ಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ 5 ಸೆಕೆಂಡುಗಳ ಕಾಲ ಕೈಯಾಡಿಸಿ.
ನಂತರ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. ಒಂದು ಕ್ಷಣ ಕೈಯಾಡಿಸಿ, ತದನಂತರ ಕತ್ತರಿಸಿದ ಈರುಳ್ಳಿ ಯನ್ನು ಹಾಕಿ, ಈರುಳ್ಳಿ ಮೃದುವಾಗುವವರೆಗೆ ಮಗುಚಿ.
ಈಗ ಪುಡಿ ಮಾಡಿಟ್ಟುಕೊಂಡ ಆಲೂಗಡ್ಡೆ ಸೇರಿಸಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿರಿ. ಕೊನೆಯಲ್ಲಿ ಕತ್ತರಿಸಿಟ್ಟು ಕೊಂಡ ಕೊತ್ತಂಬರಿ ಸೊಪ್ಪು ಮತ್ತೆ ಮಗುಚಿ.
ಕೆಂಪು ಚಟ್ನಿ ಮಾಡುವ ವಿಧಾನ:
ಒಂದು ಬಾಣಲೆಯನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಕಡ್ಲೆ ಬೇಳೆ ಯನ್ನು ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು ಒಂದು ನಿಮಿಷ ಕೈಯಾಡಿಸಿ.
ತಂಪಾದ ಮೇಲೆ ಮಿಕ್ಸೀ ಜಾರ್ ಗೆ ಹಾಕಿ, ಹುಣಸೆ ಹಣ್ಣು ಮತ್ತು ತೆಂಗಿನಕಾಯಿಯೊಂದಿಗೆ ರುಬ್ಬಿಕೊಳ್ಳಿ. ಚಟ್ನಿ ದಪ್ಪ ಇದ್ದು ಹರಡಲು ಸಾದ್ಯವಾಗುವಂತಿರಬೇಕು.
ದೋಸೆ ತಯಾರಿಸುವ ವಿಧಾನ:
ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿಮಾಡಿ ಕೊಳ್ಳಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಅಥವಾ ಬೆಣ್ಣೆ ಹಾಗೂ ಕೆಂಪು ಚಟ್ನೀಯನ್ನು ಹಚ್ಚಿ ( ಕೆಂಪು ಚಟ್ನಿ ಮತ್ತು ಎಣ್ಣೆ / ತುಪ್ಪ / ಬೆಣ್ಣೆ ಯನ್ನು ಮೊದಲೇ ಮಿಶ್ರ ಮಾಡಿಟ್ಟು ಕೊಂಡರೆ ಹರಡಲು ಸುಲಭವಾಗುವುದು). 2 ಟೇಬಲ್ ಸ್ಪೂನ್ಆಲೂಗಡ್ಡೆ ಪಲ್ಯ ಇರಿಸಿ, ನಿಮಗೆ ಇಷ್ಟವಾದ ಶೈಲಿಯಲ್ಲಿ ದೋಸೆ ಮಡಚಿ.
ಈಗ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಎರಡರ ಜೊತೆಗೆ ಬಡಿಸಿ. ಬೇಕಾದಲ್ಲಿ ಒಂದು ತುಂಡು ಬೆಣ್ಣೆಯನ್ನು ಇಟ್ಟು ಬಡಿಸಿರಿ.