Basale soppu sambar recipe in Kannada | ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1 ಕಟ್ಟು ಬಸಳೆ ಸೊಪ್ಪು
1/4 ಕಪ್ ಅಲಸಂದೆ ಕಾಳು ಅಥವಾ ಹುರಿದ ಹುರುಳಿಕಾಳು
1/4 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು
ಮಸಾಲೆಗೆ ಬೇಕಾಗುವ ಪದಾರ್ಥಗಳು:
1 ಕಪ್ ತೆಂಗಿನ ತುರಿ
2 - 4 ಒಣ ಮೆಣಸಿನಕಾಯಿ
2 ಟೀಸ್ಪೂನ್ ಕೊತ್ತಂಬರಿ ಬೀಜ
1/2 ಟೀಸ್ಪೂನ್ ಸಾಸಿವೆ
2 ಬೇಳೆ ಬೆಳ್ಳುಳ್ಳಿ
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ:
ಬಸಳೆ ಎಲೆ ಮತ್ತು ದಂಟನ್ನು ಬೇರೆ ಮಾಡಿ ತೊಳೆಯಿರಿ. ದಂಟನ್ನು ಬೆರಳುದ್ದ ಕತ್ತರಿಸಿ. ಸೊಪ್ಪನ್ನು ಸಣ್ಣಗೆ ಕತ್ತರಿಸಿ.
ಒಂದು ಕುಕ್ಕರ್ ನಲ್ಲಿ ಅಲಸಂದೆ ಕಾಳನ್ನು (ಅಥವಾ ಹುರಿದ ಹುರುಳಿಕಾಳು) ತೆಗೆದುಕೊಂಡು ತೊಳೆಯಿರಿ. ಅದಕ್ಕೆ ಕತ್ತರಿಸಿದ ಬಸಳೆ ಸೊಪ್ಪಿನ ದಂಟನ್ನು ಹಾಕಿ, ಅರ್ಧ ಲೋಟ ನೀರು ಹಾಕಿ, ಒಂದು ವಿಷಲ್ ಮಾಡಿ.
ನಂತರ ಅದಕ್ಕೆ ಕತ್ತರಿಸಿದ ಸೊಪ್ಪು, ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ.
ಅರ್ಧ ಲೋಟ ನೀರು ಹಾಕಿ ಪುನಃ ಒಂದು ವಿಷಲ್ ಮಾಡಿ ಬೇಯಿಸಿ ಕೊಳ್ಳಿ.
ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಸಾಸಿವೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ.
ಕೊನೆಯಲ್ಲಿ ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಅರೆದು ತೆಗೆಯಿರಿ.
ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1.5 ಕಪ್ ಉತ್ತಮ ಗುಣಮಟ್ಟದ ದೋಸೆ ಅಕ್ಕಿ
1/2 ಕಪ್ ತೆಂಗಿನ ತುರಿ
1/2ಮುಳ್ಳು ಸೌತೆಕಾಯಿ
2.5 ಕಪ್ ನೀರು
ಉಪ್ಪು ರುಚಿಗೆ ತಕ್ಕಷ್ಟು
ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ.
ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
ಮುಳ್ಳುಸೌತೆಯನ್ನು ಮತ್ತು ತೆಂಗಿನಕಾಯಿಯನ್ನು ತುರಿದಿಡಿ.
ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಮೊದಲಿಗೆ ತುರಿದ ಮುಳ್ಳು ಸೌತೆ ಮತ್ತು ತೆಂಗಿನ ತುರಿ ಹಾಕಿ.
ನಂತ್ರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ.
ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು.
ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
Halasina hannina mulka recipe in Kannada | ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ
ಮುಳ್ಕ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ ಅಥವಾ ಅಕ್ಕಿ ಹಿಟ್ಟು
2 ಕಪ್ ಕತ್ತರಿಸಿದ ಹಲಸಿನ ಹಣ್ಣು
1/2 ಕಪ್ ತೆಂಗಿನ ತುರಿ
1/2 ಕಪ್ ಪುಡಿ ಮಾಡಿದ ಬೆಲ್ಲ
ಎಣ್ಣೆ ಕಾಯಿಸಲು
ಒಂದು ಚಿಟಿಕೆ ಅಥವಾ ರುಚಿಗೆ ತಕ್ಕಷ್ಟು ಉಪ್ಪು.
ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ೨ ಘಂಟೆ ನೆನೆಸಿಡಿ.
ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು, ಒಂದು ಇಂಚು ಉದ್ದಕ್ಕೆ ಕತ್ತರಿಸಿ.
ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲದೊಂದಿಗೆ ನಯವಾಗಿ ಅರೆಯಿರಿ. ಅರೆಯಲು ನೀರು ಬಳಸಬೇಡಿ.
ಅರೆಯಲು ತುಂಬ ಗಟ್ಟಿ ಮತ್ತು ಕಷ್ಟವೆನಿಸಿದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು.
ಅಥವಾ ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲವನ್ನು ಅರೆದು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಹಾಕಿ ಕಲಸಬಹುದು. ಅಕ್ಕಿ ಹಿಟ್ಟು ಹಾಕಿದಲ್ಲಿ ಚೆನ್ನಾಗಿ ಕಲಸಲು ಮರೆಯದಿರಿ. ಇಲ್ಲವಾದಲ್ಲಿ ಎಣ್ಣೆಯಲ್ಲಿ ಸಿಡಿಯಬಹುದು.
ಅರೆದ ಹಿಟ್ಟು ತಪ-ತಪನೆ ಬೀಳುವಷ್ಟು ಗಟ್ಟಿಯಾಗಿರಲಿ. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
ಗುಳ್ಳೆಗಳು ನಿಂತ ಮೇಲೆ ಅಥಾವ ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆಯಿರಿ. ಬಿಸಿ ಅಥಾವ ತಣ್ಣಗೆ ಸವಿದು ಆನಂದಿಸಿ.
Unde kadubu recipe in Kannada | ಉಂಡೆ ಕಡುಬು ಅಥವಾ ಪುಂಡಿ ಗಟ್ಟಿ ಮಾಡುವ ವಿಧಾನ
ಉಂಡೆ ಕಡುಬು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಸೋನಾ ಮಸೂರಿ ಅಕ್ಕಿ
1/2 ಕಪ್ ತೆಂಗಿನ ತುರಿ
2 ಕಪ್ ನೀರು
ಉಪ್ಪು ರುಚಿಗೆ ತಕ್ಕಷ್ಟು
ಉಂಡೆ ಕಡುಬು ಅಥವಾ ಪುಂಡಿ ಗಟ್ಟಿ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ.
ನಂತರ ಮಿಕ್ಸಿಯಲ್ಲಿ ತೆಂಗಿನ ತುರಿಯೊಂದಿಗೆ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ.
ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ.
ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು.
ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.
Malnad style gojjavalakki or huli avalakki recipe | ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಗಟ್ಟಿ ಅವಲಕ್ಕಿ
1/4 ಕಪ್ ತೆಂಗಿನ ತುರಿ
1 ನೆಲ್ಲಿಕಾಯಿ ಗಾತ್ರದ ಬೆಲ್ಲ
1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆಗೆ ಬೇಕಾಗುವ ಪದಾರ್ಥಗಳು:
2 - 4 ಕೆಂಪು ಮೆಣಸಿನಕಾಯಿ
2 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕಡಲೆಬೇಳೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/2 ಟೀಸ್ಪೂನ್ ಸಾಸಿವೆ
2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆಬೇಳೆ
ಚಿಟಿಕೆ ಇಂಗು
4 - 6 ಕರಿಬೇವಿನ ಎಲೆ
1/4 ಟೀಸ್ಪೂನ್ ಅರಿಶಿನ ಪುಡಿ
4 ಟೇಬಲ್ ಚಮಚ ಅಡುಗೆ ಎಣ್ಣೆ
ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ ಮತ್ತು 2 ಟೀಸ್ಪೂನ್ ಕಡಲೆಬೇಳೆಯನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
ಗಟ್ಟಿ ಅವಲಕ್ಕಿಯನ್ನು ತೊಳೆದು 5 ನಿಮಿಷಗಳ ಕಾಲ ನೆನೆಸಿ. ನೆನೆಸುವ ಸಮಯ ಅವಲಕ್ಕಿಯ ದಪ್ಪ ಅವಲಂಬಿಸಿ ಬದಲಾಗಬಹುದು. ಹುಣಿಸೇಹಣ್ಣನ್ನು ಸಹ ನೀರಿನಲ್ಲಿ ನೆನೆಸಿಡಿ.
ಅವಲಕ್ಕಿ ನೆನೆಯುವ ಸಮಯದಲ್ಲಿ ಒಗ್ಗರಣೆಯನ್ನು ತಯಾರು ಮಾಡಿ ಕೊಳ್ಳೋಣ. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ.
ನಂತರ ಅರಿಶಿನ ಪುಡಿ, ಕರಿಬೇವು ಮತ್ತು ಇಂಗು ಸೇರಿಸಿ ಸ್ಟವ್ ಆಫ್ ಮಾಡಿ.
ಈಗ ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
ಚೆನ್ನಾಗಿ ಮಗುಚಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ.
ಈಗ ನೆನೆಸಿದ ಅವಲಕ್ಕಿಯ ನೀರು ಹಿಂಡಿ ತೆಗೆದು ಹಾಕಿ.
ಚೆನ್ನಾಗಿ ಕಲಸಿ.
ಮುಚ್ಚಳವನ್ನು ಮುಚ್ಚಿ. 3 ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
3 ನಿಮಿಷಗಳ ನಂತರ ಮುಚ್ಚಳವನ್ನು ತೆರೆದು, ಮಾಡಿಟ್ಟ ಮಸಾಲೆ ಪುಡಿ ಮತ್ತು ತೆಂಗಿನ ತುರಿ ಹಾಕಿ.
balekai chips recipe in Kannada | ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ದೊಡ್ಡ ಬಾಳೆಕಾಯಿ
1/2 ಟೀಸ್ಪೂನ್ ಉಪ್ಪು
1/4 ಟೀಸ್ಪೂನ್ ಅರಶಿನ
4 ಟೇಬಲ್ ಚಮಚ ನೀರು
ಎಣ್ಣೆ ಕಾಯಿಸಲು
ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿಡಿ.
ಒಂದು ಸಣ್ಣ ಬಟ್ಟಲಿನಲ್ಲಿ ನೀರು, ಉಪ್ಪು ಮತ್ತು ಅರಶಿನ ಹಾಕಿ, ಅರಶಿನದ ಉಪ್ಪು ನೀರು ಸಿದ್ಧ ಮಾಡಿಟ್ಟು ಕೊಳ್ಳಿ.
ಬಾಳೆಕಾಯಿಯನ್ನು ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಬಾಳೆಕಾಯಿ ಬಿಲ್ಲೆಗಳನ್ನು ಒಂದೊಂದಾಗಿ ಹಾಕಿ. ಅಥವಾ ಸಾಧ್ಯವಾದಲ್ಲಿ ಎಣ್ಣೆಯ ಮೇಲೆ ನೇರವಾಗಿ ಬಿಲ್ಲೆಗಳನ್ನು ಮಾಡಿ (ಸ್ಲಯ್ಸರ್ ಮುಖಾಂತರ).
ಕಾಯುತ್ತಿರುವ ಚಿಪ್ಸ್ ಗೆ 1/2 ಟೀ ಚಮಚದಷ್ಟು ಅರಶಿನದ ಉಪ್ಪು ನೀರು ಹಾಕಿ.
ಸದ್ದು ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಚಹಾ ಅಥವಾ ಕಾಫಿಯೊಂದಿಗೆ ಗರಿ-ಗರಿ ಚಿಪ್ಸ್ ಸವಿದು ಆನಂದಿಸಿ.
Uppu huli or masale neer dose recipe in Kannada | ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
1/2 ಕಪ್ ತೆಂಗಿನ ತುರಿ
3 ಕಪ್ ನೀರು (ಅರೆಯುವ ನೀರು ಸೇರಿಸಿ)
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
2 - 4 ಕೆಂಪು ಮೆಣಸಿನಕಾಯಿ
1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಉಪ್ಪು ಹುಳಿ ಅಥವಾ ಮಸಾಲೆ ನೀರ್ ದೋಸೆ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ.
ನೀರ್ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಸೇರಿಸಿ. ಬೇಕಾದಲ್ಲಿ ಹಸಿರು ಮೆಣಸಿನಕಾಯಿ ಮತ್ತು ಬೆಲ್ಲ ಸೇರಿಸಿ.
ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ.
ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.
Hesaru bele saaru recipe in Kannada | ಹೆಸರುಬೇಳೆ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/4 ಕಪ್ ಹೆಸರುಬೇಳೆ
1/2 ಕಪ್ ತೆಂಗಿನತುರಿ
1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
1/4 ಟೀಸ್ಪೂನ್ ಸಾಸಿವೆ
1.5 ಲೀ ನೀರು
4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
ಒಂದು ಚಿಟಿಕೆ ಅರಶಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/4 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಜೀರಿಗೆ
ಒಂದು ದೊಡ್ಡ ಚಿಟಿಕೆ ಇಂಗು
4 - 5 ಕರಿಬೇವಿನ ಎಲೆ
1 ಟೀಸ್ಪೂನ್ ಅಡುಗೆ ಎಣ್ಣೆ
ಹೆಸರುಬೇಳೆ ಸಾರು ಮಾಡುವ ವಿಧಾನ:
ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ, ಅರಶಿನ ಮತ್ತು ಹಸಿರು ಮೆಣಸಿನ ಕಾಯಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಕಾದಲ್ಲಿ ಹಸಿರು ಮೆಣಸಿನ ಕಾಯಿಯನ್ನು ಅರೆಯುವಾಗ ಸೇರಿಸಿಯಬಹುದು
ತೆಂಗಿನತುರಿ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆಗೆ ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪು, ಉಳಿದ ನೀರು ಸೇರಿಸಿ ಕುದಿಸಿ.
ಸ್ಟವ್ ಆಫ್ ಮಡಿದ ಮೇಲೆ ಲಿಂಬೆ ಹಣ್ಣಿನ ರಸ ಸೇರಿಸಿ.
ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Athrasa or Kajjaya recipe in Kannada | ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ
ಅತ್ರಾಸ ಅಥವಾ ಕಜ್ಜಾಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1.25 ಕಪ್ ಅಕ್ಕಿ
1 ಕಪ್ ಬೆಲ್ಲ
1/4 ಕಪ್ ನೀರು
5 ಚಮಚ ತುಪ್ಪ ಅಥವಾ ಎಣ್ಣೆ
2 ಏಲಕ್ಕಿ
2 ಟೇಬಲ್ ಚಮಚ ಬಿಳಿ ಎಳ್ಳು (ಬೇಕಾದಲ್ಲಿ)
1 ಟೇಬಲ್ ಚಮಚ ಗಸಗಸೆ (ಬೇಕಾದಲ್ಲಿ)
ಕಾಯಿಸಲು ತುಪ್ಪ ಅಥವಾ ಎಣ್ಣೆ
ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 2 ಗಂಟೆ ಕಾಲ ನೆನೆಯಲು ಬಿಡಿ.
2 ಗಂಟೆಯ ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಒಂದು ಬಟ್ಟೆಯಲ್ಲಿ ಹರಡಿ ನೀರಾರಲು ಬಿಡಿ.
ಸುಮಾರು ಒಂದು ಘಂಟೆಯ ನಂತರ ಅಥವಾ ಅಕ್ಕಿ ಸ್ವಲ್ಪ ಒದ್ದೆಯಿರುವಾಗ ಮಿಕ್ಸಿಯಲ್ಲಿ, ಏಲಕ್ಕಿಯೊಂದಿಗೆ ಪುಡಿ ಮಾಡಿ.
ಸಾರಣಿಸಿ ಅಥವಾ ಜರಡಿ ಹಿಡಿದು ನಯವಾದ ಅಕ್ಕಿ ಹಿಟ್ಟನ್ನು ಸಿದ್ಧ ಮಾಡಿ. ಒಂದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ.
ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ.
ಒಂದೆಳೆ ಪಾಕ ಮಾಡಿ ಅಥವಾ ನೀರಿನಲ್ಲಿ ಸ್ವಲ್ಪ ಬೆಲ್ಲದ ಪಾಕ ಹಾಕಿದಾಗ ಮೆತ್ತಗಿನ ಮುದ್ದೆಯಾಗುವವರೆಗೆ ಅಥವಾ ನೊರೆ ನೊರೆಯಾದ ದಪ್ಪ ಪಾಕ ಆಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ.
ಕೂಡಲೇ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ. ದಪ್ಪ ಪೇಸ್ಟ್ ನಂತಹ ಹಿಟ್ಟು ರೆಡಿಯಾಗುವುದು.
ಸ್ವಲ್ಪ ಬಿಸಿ ಆರಿದ ಮೇಲೆ ಒಂದು ಸ್ಟೀಲ್ ಡಬ್ಬಕ್ಕೆ ಹಾಕಿ ಮೇಲಿನಿಂದ 5 ಚಮಚ ತುಪ್ಪ ಅಥವಾ ಎಣ್ಣೆ ಸುರಿದು ಮುಚ್ಚಿಡಿ.
ಸಂಪೂರ್ಣ ತಣ್ಣಗಾದ ಮೇಲೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರುವುದನ್ನು ನೀವು ಗಮನಿಸಬಹುದು. ಆದರೂ ಒಂದು ಕೈಯಲ್ಲಿ ತೆಗೆದು ಉಂಡೆ ಮಾಡುವಷ್ಟು ಮೆತ್ತಗಿರುತ್ತದೆ. ಸಾಧ್ಯವಾದಲ್ಲಿ ಒಂದು ದಿನ ಇಟ್ಟರೆ ಅತ್ರಸ ಅಥವಾ ಕಜ್ಜಾಯ ಚೆನ್ನಾಗಿ ಬರುವುದು.
ಸಣ್ಣ ನಿಂಬೆ ಗಾತ್ರದ ಉಂಡೆ ತೆಗೆದುಕೊಂಡು ಎಣ್ಣೆ ಹಚ್ಚಿದ ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ತಟ್ಟಿ ಬಿಸಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕಾಯಿಸಿ.
ಗಮನಿಸಿ ಎಣ್ಣೆ ಬಿಸಿ ಇರಬೇಕು. ಕಾಯಿಸುವುದು ಸಣ್ಣ ಉರಿಯಲ್ಲಿ ಆಗಬೇಕು. ಕಜ್ಜಾಯ ಅಥವಾ ಅತ್ರಸ ಬೇಗನೆ ಕಾಯುತ್ತದೆ. ಸ್ವರ ಅಥವಾ ಗುಳ್ಳೆ ನಿಂತ ಕೂಡಲೇ ತೆಗೆಯಿರಿ. ಜಾಸ್ತಿ ಕಾಯಿಸಿದರೆ ತುಂಬ ಗರಿ ಗರಿಯಾಗುವುದು.
ತೆಗೆಯುವ ಮೊದಲು ಎರಡು ಸಟ್ಟುಗದಿಂದ ಒತ್ತಿದಲ್ಲಿ ಹೆಚ್ಚಿನ ಎಣ್ಣೆ ತೆಗೆಯಬಹುದು.
ತಣ್ಣಗಾದ ಮೇಲೆ ಡಬ್ಬದಲ್ಲಿ ತುಂಬಿಸಿಡಿ. ರುಚಿ ರುಚಿಯಾದ ಕಜ್ಜಾಯ ಸವಿದು ಆನಂದಿಸಿ. ದೀಪಾವಳಿ ಹಬ್ಬದ ಶುಭಾಶಯಗಳು.
Hesaru bele payasa recipe in Kannada | ಹೆಸರು ಬೇಳೆ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
1 ಸಣ್ಣ ಗಾತ್ರದ ಮುಳ್ಳು ಸೌತೆಕಾಯಿ (ಬೇಕಾದಲ್ಲಿ)
1/2 ಕಪ್ ಹೆಸರು ಬೇಳೆ
1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
2 ಕಪ್ ತೆಂಗಿನಕಾಯಿ ಹಾಲು (2 ಕಪ್ ತೆಂಗಿನ ತುರಿ ಮತ್ತು 2 ಕಪ್ ನೀರಿನಿಂದ ತೆಗೆದ ಕಾಯಿ ಹಾಲು)
2 ಟೀಸ್ಪೂನ್ ತುಪ್ಪ
5-6 ಗೋಡಂಬಿ
8-10 ಒಣದ್ರಾಕ್ಷಿ
2 ಕಪ್ ನೀರು
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಒಂದು ಚಿಟಿಕೆ ಉಪ್ಪು
ಹೆಸರು ಬೇಳೆ ಪಾಯಸ ಮಾಡುವ ವಿಧಾನ:
ಹೆಸರುಬೇಳೆಯನ್ನು ತೊಳೆದು 1.5 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ.
ಮುಳ್ಳು ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ.
ಬೇಯಿಸಿದ ಹೆಸರುಬೇಳೆಗೆ ಸಣ್ಣದಾಗಿ ಕೊಚ್ಚಿದ ಸೌತೆಕಾಯಿ ಮತ್ತು 1/2 ಕಪ್ ನೀರು ಹಾಕಿ.
ಆಗಾಗ್ಯೆ ಮಗುಚುತ್ತಾ 8 - 10 ನಿಮಿಷ ಸೌತೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
1/2 ಕಪ್ ಪುಡಿ ಮಾಡಿದ ಬೆಲ್ಲ ಮತ್ತು ಚಿಟಿಕೆ ಉಪ್ಪು ಸೇರಿಸಿ.
ಬೆಲ್ಲ ಕರಗಿದ ಮೇಲೆ ತೆಂಗಿನ ಕಾಯಿ ಹಾಲನ್ನು ಹಾಕಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ತೆಂಗಿನ ಕಾಯಿ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಥವಾ ಅಂಗಡಿಯಿಂದ ಖರೀದಿಸಬಹುದು. ನಾನು 2 ಕಪ್ ತೆಂಗಿನ ತುರಿ ಮತ್ತು 2 ಕಪ್ ನೀರು ಬಳಸಿಕೊಂಡು ಕಾಯಿ ಹಾಲನ್ನು ತಯಾರಿಸಿದ್ದೇನೆ.
ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ತೆಂಗಿನ ಕಾಯಿ ಹಾಲು ಸೇರಿಸಿದ ನಂತರ ತುಂಬಾ ಹೊತ್ತು ಕುದಿಸಬಾರದು.
ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.