ಮಸಾಲೆ ದೋಸೆ ಮಾಡುವ ವಿಧಾನ:
ತಯಾರಿ ಸಮಯ: 16 ಗಂಟೆ
ಅಡುಗೆ ಸಮಯ : 1 ಗಂಟೆ
ಪ್ರಮಾಣ : 4 ಜನರಿಗೆ
ಮಸಾಲೆ ದೋಸೆ ವಿಡಿಯೋ ಕನ್ನಡದಲ್ಲಿ
ದೋಸೆ ಹಿಟ್ಟಿಗೆ ಬೇಕಾದ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 2 ಕಪ್ ದೋಸೆ ಅಕ್ಕಿ
- 1/2 ಕಪ್ ಉದ್ದಿನ ಬೇಳೆ ( ಮಿಕ್ಸೀ ಬಳಸುತ್ತೀರಾದರೆ 1/4 ಕಪ್ ಹೆಚ್ಚುವರಿ ಸೇರಿಸಿ )
- 1 ಟೀಸ್ಪೂನ್ ಮೆಂತ್ಯ
- 2 ಟೇಬಲ್ ಸ್ಪೂನ್ ಕಡ್ಲೆಬೇಳೆ / ತೊಗರಿಬೇಳೆ
- 1/4 ಕಪ್ ದಪ್ಪ ಅವಲಕ್ಕಿ / ಗಟ್ಟಿ ಆವಲಕ್ಕಿ
- ಉಪ್ಪು ರುಚಿಗೆ ತಕ್ಕಷ್ಟು.
ಆಲೂ ಪಲ್ಯಕ್ಕೆ ಬೇಕಾದ ಪದಾರ್ಥಗಳು:
- 2 ಮಧ್ಯಮ ಗಾತ್ರದ ಆಲೂಗಡ್ಡೆ
- 2 ಮಧ್ಯಮ ಗಾತ್ರದ ಈರುಳ್ಳಿ
- 1/2 ಚಮಚ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 2-4 ಹಸಿ ಮೆಣಸು
- 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ
- 8-10 ಗೋಡಂಬಿ
- 1/4 ಟೀಸ್ಪೂನ್ ಅರಿಶಿನ ಪುಡಿ
- ಇಂಗು ಒಂದು ಚಿಟಿಕೆ
- 7 - 8 ಕರಿಬೇವಿನ ಎಲೆ
- 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಕೆಂಪು ಚಟ್ನಿಗೆ ಬೇಕಾಗುವ ಪದಾರ್ಥಗಳು:
- 2 ಟೇಬಲ್ ಸ್ಪೂನ್ ಕಡ್ಲೆ ಬೇಳೆ
- 3-6 ಒಣ ಮೆಣಸಿನಕಾಯಿ
- 8-10 ಸಾಂಬಾರ್ ನೀರುಳ್ಳಿ / ಒಂದು ಸಣ್ಣ ಈರುಳ್ಳಿ
- 4-5 ಬೇಳೆ ಬೆಳ್ಳುಳ್ಳಿ
- ಹುಣಸೆ ಹಣ್ಣು ಒಂದು ಸಣ್ಣ ನಿಂಬೆ ಗಾತ್ರ
- 2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
ದೋಸೆ ಹಿಟ್ಟು ಮಾಡುವ ವಿಧಾನ:
- ದಪ್ಪ / ಗಟ್ಟಿ ಅವಲಕ್ಕಿ ಹೊರತುಪಡಿಸಿ ದೋಸೆ ಹಿಟ್ಟಿಗೆ ಸೂಚಿಸಿರುವ ಎಲ್ಲಾ ಪದಾರ್ಥಗಳನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲೇ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
- ನೀರನ್ನು ಬಗ್ಗಿಸಿ ಶೇಕರಿಸಿಟ್ಟುಕೊಳ್ಳಿ, ಏಕೆಂದರೆ ಇದೇ ನೀರನ್ನು ರುಬ್ಬುವ ಸಂದರ್ಭದಲ್ಲಿ ಬಳಸಲಾಗುತ್ತದೆ. ಹೀಗೆ ಮಾಡುವುದರಿಂದ ಹಿಟ್ಟು ಚೆನ್ನಾಗಿ ಹುದುಗುತ್ತದೆ. ದೋಸೆ ಹಿಟ್ಟು ರುಬ್ಬಲು ಪ್ರಾರಂಭಿಸುವ ಮುನ್ನ ದಪ್ಪಅವಲಕ್ಕಿ / ಗಟ್ಟಿ ಅವಲಕ್ಕಿ ಯನ್ನು ತೊಳೆದು ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
- ಈಗ ಗ್ರೈಂಡೆರ್ ಗೆ, ನೆನೆಸಿ ನೀರು ಬಗ್ಗಿಸಿದ ಪದಾರ್ಥಗಳು ಮತ್ತು ಅವಲಕ್ಕಿ ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿತ್ತಾ ರುಬ್ಬಿರಿ. ನೀವು ಮಿಕ್ಸೀಯನ್ನೂ ಬಳಸಬಹುದು ಆದರೆ ಪದಾರ್ಥಗಳ ಪಟ್ಟಿಯಲ್ಲಿ ಹೇಳಿದಂತೆ ಉದ್ದಿನ ಬೇಳೆ ಪ್ರಮಾಣ ಹೆಚ್ಚಿಸಲು ಮರೆಯದಿರಿ. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
- ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 8-9 ಘಂಟೆ ಕಾಲ ಬಿಡಿ. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಆಲೂಗಡ್ಡೆ ಪಲ್ಯ ಮಾಡುವ ವಿಧಾನ:
- ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗ ಮಾಡಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ತಂಪಾದ ಮೇಲೆ ಸಿಪ್ಪೆಯನ್ನು ತೆಗೆದು, ಪುಡಿ ಮಾಡಿಕೊಳ್ಳಿ. ಹಾಗೂ ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
- ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಗೋಡಂಬಿ ಯನ್ನು ಹಾಕಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಹೆಚ್ಚಿದ ಹಸಿ ಮೆಣಸಿನ ಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ 5 ಸೆಕೆಂಡುಗಳ ಕಾಲ ಕೈಯಾಡಿಸಿ.
- ನಂತರ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. ಒಂದು ಕ್ಷಣ ಕೈಯಾಡಿಸಿ, ತದನಂತರ ಕತ್ತರಿಸಿದ ಈರುಳ್ಳಿ ಯನ್ನು ಹಾಕಿ, ಈರುಳ್ಳಿ ಮೃದುವಾಗುವವರೆಗೆ ಮಗುಚಿ.
- ಈಗ ಪುಡಿ ಮಾಡಿಟ್ಟುಕೊಂಡ ಆಲೂಗಡ್ಡೆ ಸೇರಿಸಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿರಿ. ಕೊನೆಯಲ್ಲಿ ಕತ್ತರಿಸಿಟ್ಟು ಕೊಂಡ ಕೊತ್ತಂಬರಿ ಸೊಪ್ಪು ಮತ್ತೆ ಮಗುಚಿ.
ಕೆಂಪು ಚಟ್ನಿ ಮಾಡುವ ವಿಧಾನ:
- ಒಂದು ಬಾಣಲೆಯನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಕಡ್ಲೆ ಬೇಳೆ ಯನ್ನು ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು ಒಂದು ನಿಮಿಷ ಕೈಯಾಡಿಸಿ.
- ತಂಪಾದ ಮೇಲೆ ಮಿಕ್ಸೀ ಜಾರ್ ಗೆ ಹಾಕಿ, ಹುಣಸೆ ಹಣ್ಣು ಮತ್ತು ತೆಂಗಿನಕಾಯಿಯೊಂದಿಗೆ ರುಬ್ಬಿಕೊಳ್ಳಿ. ಚಟ್ನಿ ದಪ್ಪ ಇದ್ದು ಹರಡಲು ಸಾದ್ಯವಾಗುವಂತಿರಬೇಕು.
ದೋಸೆ ತಯಾರಿಸುವ ವಿಧಾನ:
- ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿಮಾಡಿ ಕೊಳ್ಳಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
- 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಅಥವಾ ಬೆಣ್ಣೆ ಹಾಗೂ ಕೆಂಪು ಚಟ್ನೀಯನ್ನು ಹಚ್ಚಿ ( ಕೆಂಪು ಚಟ್ನಿ ಮತ್ತು ಎಣ್ಣೆ / ತುಪ್ಪ / ಬೆಣ್ಣೆ ಯನ್ನು ಮೊದಲೇ ಮಿಶ್ರ ಮಾಡಿಟ್ಟು ಕೊಂಡರೆ ಹರಡಲು ಸುಲಭವಾಗುವುದು). 2 ಟೇಬಲ್ ಸ್ಪೂನ್ಆಲೂಗಡ್ಡೆ ಪಲ್ಯ ಇರಿಸಿ, ನಿಮಗೆ ಇಷ್ಟವಾದ ಶೈಲಿಯಲ್ಲಿ ದೋಸೆ ಮಡಚಿ.
ಈಗ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಎರಡರ ಜೊತೆಗೆ ಬಡಿಸಿ. ಬೇಕಾದಲ್ಲಿ ಒಂದು ತುಂಡು ಬೆಣ್ಣೆಯನ್ನು ಇಟ್ಟು ಬಡಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ