ಬುಧವಾರ, ಜೂನ್ 26, 2019

Pongal mix recipe in Kannada | ಪೊಂಗಲ್ ಮಿಕ್ಸ್ ಮಾಡುವ ವಿಧಾನ

Pongal mix recipe in Kannada

Pongal mix recipe in Kannada | ಪೊಂಗಲ್ ಮಿಕ್ಸ್ ಮಾಡುವ ವಿಧಾನ

ಪೊಂಗಲ್ ಮಿಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ
  2. 3/4 ಕಪ್ ಹೆಸರುಬೇಳೆ
  3. 2 ಟೇಬಲ್ ಸ್ಪೂನ್ ತುಪ್ಪ ಅಥವಾ ಎಣ್ಣೆ
  4. 1 ಟೀ ಸ್ಪೂನ್ ಸಾಸಿವೆ
  5. 1 ಟೀ ಸ್ಪೂನ್ ಜೀರಿಗೆ
  6. 1 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
  7. 2 ಟೇಬಲ್ ಚಮಚ ಗೋಡಂಬಿ
  8. 3 - 5 ಹಸಿರುಮೆಣಸಿನಕಾಯಿ
  9. 1 ಇಂಚು ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು 
  10. 10 - 15 ಕರಿಬೇವಿನ ಎಲೆ
  11. 1/4 ಟೀ ಸ್ಪೂನ್ ಅರಶಿನ ಪುಡಿ
  12. 2 ದೊಡ್ಡ ಚಿಟಿಕೆ ಇಂಗು
  13. 1/4 ಕಪ್ ತೆಂಗಿನತುರಿ
  14. ಉಪ್ಪು ರುಚಿಗೆ ತಕ್ಕಷ್ಟು

ಪೊಂಗಲ್ ಮಿಕ್ಸ್ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಸಂಪೂರ್ಣ ಬಗ್ಗಿಸಿ, ಹರಡಿ, ನೀರಾರಲು ಬಿಡಿ. ತೊಳೆಯದೆಯೂ ಮಾಡಬಹುದು. ಸುಮಾರು ಒಂದು ಘಂಟೆ ಒಣಗಿಸಿದರೆ ಸಾಕಾಗುತ್ತದೆ. 
  2. ಹೆಸರು ಬೇಳೆಯನ್ನು ತೊಳೆದು, ನೀರು ಸಂಪೂರ್ಣ ಬಗ್ಗಿಸಿ, ಹರಡಿ, ನೀರಾರಲು ಬಿಡಿ. ತೊಳೆಯದೆಯೂ ಮಾಡಬಹುದು. ಸುಮಾರು ಒಂದು ಘಂಟೆ ಒಣಗಿಸಿದರೆ ಸಾಕಾಗುತ್ತದೆ. 
  3. ಒಂದು ಬಾಣಲೆಯಲ್ಲಿ ಒಣಗಿದ ಹೆಸರು ಬೇಳೆ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿದು ಪಕ್ಕಕ್ಕಿಡಿ. 
  4. ನಂತರ ಒಣಗಿದ ಅಕ್ಕಿ ಹಾಕಿ ಸ್ವಲ್ಪ ಬಿಳಿ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
  5. ನಂತರ ಒಂದು ಬಾಣಲೆಯನ್ನು ಬಿಸಿಮಾಡಿ, ತುಪ್ಪ (ಅಥವಾ ಎಣ್ಣೆ), ಸಾಸಿವೆ ಮತ್ತು ಜೀರಿಗೆ ಹಾಕಿ.
  6. ಸಾಸಿವೆ ಸಿಡಿದ ಕೂಡಲೇ ಗೋಡಂಬಿ ಮತ್ತು ಕಾಳುಮೆಣಸು ಸೇರಿಸಿ ಹುರಿಯಿರಿ. 
  7. ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
  8. ಕೊನೆಯಲ್ಲಿ ಅರಶಿನ ಪುಡಿ ಮತ್ತು ಇಂಗು ಹಾಕಿ. 
  9. ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಮಗುಚಿ.
  10. ಹುರಿದ ಅಕ್ಕಿ ಮತ್ತು ಬೇಳೆ ಸೇರಿಸಿ, ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. 
  11. ಸ್ಟವ್ ಆಫ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ (ಎರಡು ದೊಡ್ಡ ಚಮಚ) ಚೆನ್ನಾಗಿ ಮಗುಚಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  12. ಪೊಂಗಲ್ ಮಾಡಲು ಕುಕ್ಕರ್‌ನಲ್ಲಿ ಒಂದು ಅಳತೆ ಪೊಂಗಲ್ ಮಿಕ್ಸ್ ಮತ್ತು ನಾಲ್ಕು ಅಳತೆ ನೀರು ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿ. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿ, ಮಗುಚಿ. ಸವಿದು ಆನಂದಿಸಿ. 

ಶುಕ್ರವಾರ, ಜೂನ್ 21, 2019

Sabbakki halwa recipe in Kannada | ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ

Sabbakki halwa recipe in Kannada

Sabbakki halwa recipe in Kannada | ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ


ಸಬ್ಬಕ್ಕಿ ಹಲ್ವಾ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಬ್ಬಕ್ಕಿ
  2. 1/2 ಕಪ್ ಸಕ್ಕರೆ
  3. ಸಣ್ಣ ಚಿಟಿಕೆ ಹಳದಿ ಬಣ್ಣ ಅಥವಾ ಅರಿಶಿನ
  4. 2 - 3 ಟೇಬಲ್ ಚಮಚ ತುಪ್ಪ
  5. 1 ಲೋಟ ನೀರು
  6. 2 ಟೇಬಲ್ ಚಮಚ ಅಥವಾ (2 ಟೇಬಲ್ ಚಮಚ ಹಾಲು + 2 ಟೇಬಲ್ ಚಮಚ ಹಾಲಿನಪುಡಿ)
  7. 2 ಟೇಬಲ್ ಚಮಚ ಗೋಡಂಬಿ
  8. 1 ಟೇಬಲ್ ಚಮಚ ಒಣದ್ರಾಕ್ಷಿ

ಸಬ್ಬಕ್ಕಿ ಹಲ್ವಾ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಸಬ್ಬಕ್ಕಿ ತೆಗೆದುಕೊಂಡು ತೊಳೆಯಿರಿ.
  2. ಆಮೇಲೆ ಒಂದು ಕಪ್ ನೀರು ಹಾಕಿ ಎರಡು ವಿಷಲ್ ಮಾಡಿ ಬೇಯಿಸಿಕೊಳ್ಳಿ. 
  3. ಆ ಸಮಯದಲ್ಲಿ ಒಂದು ಸಣ್ಣ ಬಾಣಲೆಯಲ್ಲಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದಿಟ್ಟುಕೊಳ್ಳಿ. 
  4. ಖೋವಾ ಇಲ್ಲದಿದ್ದಲ್ಲಿ, ಹಾಲನ್ನು ಸ್ವಲ್ಪ ಬಿಸಿಮಾಡಿ, ಹಾಲಿನಪುಡಿಯನ್ನು ಕಲಸಿಟ್ಟುಕೊಳ್ಳಿ. 
  5. ಬೇಯಿಸಿದ ಸಬ್ಬಕ್ಕಿಯನ್ನು, ಒಂದು ಬಾಣಲೆಯಲ್ಲಿ ತೆಗೆದುಕೊಂಡು, ಸಕ್ಕರೆ ಸೇರಿಸಿ ಮಗುಚಿ. ಒಂದೆರಡು ನಿಮಿಷ ಮಗುಚಿದರೆ ಸಾಕು. 
  6. ನಂತರ ಬಣ್ಣ ಮತ್ತು ಒಂದು ಟೇಬಲ್ ಚಮಚ ತುಪ್ಪ ಸೇರಿಸಿ ಮಗುಚಿ. 
  7. ಆಮೇಲೆ ಖೋವಾ ಅಥವಾ ಹಾಲಿನಪುಡಿಯ ಮಿಶ್ರಣ ಸೇರಿಸಿ, ಮಗುಚಿ. 
  8. ಕೊನೆಯಲ್ಲಿ ಉಳಿದ ತುಪ್ಪ ಮತ್ತು ಹುರಿದ ದ್ರಾಕ್ಷಿ-ಗೋಡಂಬಿ ಹಾಕಿ ಮಗುಚಿ. 
  9. ಜಾಸ್ತಿ ಹೊತ್ತು ಮಗುಚುವ ಅವಶ್ಯಕತೆ ಇಲ್ಲ. 
  10. ಹಲ್ವಾ ತಳ ಬಿಡಲು ಪ್ರಾರಂಭವಾದಾಗ, ಅಥವಾ ಹಲ್ವಾ ದಪ್ಪ ಪೇಸ್ಟ್ ನಂತಾದಾಗ ಸ್ಟವ್ ಆಫ್ ಮಾಡಿ. 
  11. ಬಿಸಿ ಆರಿದ ಮೇಲೆ ಹಲ್ವಾ ಸ್ವಲ್ಪ ಗಟ್ಟಿ ಆಗುವುದು. ಸವಿದು ಆನಂದಿಸಿ. 

ಮಂಗಳವಾರ, ಜೂನ್ 18, 2019

Batani gasi recipe in Kannada | ಬಟಾಣಿ ಗಸಿ ಮಾಡುವ ವಿಧಾನ

Batani gasi recipe in Kannada

Batani gasi recipe in Kannada | ಬಟಾಣಿ ಗಸಿ ಮಾಡುವ ವಿಧಾನ

 ಬಟಾಣಿ ಗಸಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಟಾಣಿ
  2. 1 ಆಲೂಗಡ್ಡೆ
  3. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು 
  4. 1 ಟೀಸ್ಪೂನ್ ಬೆಲ್ಲ
  5. ದೊಡ್ಡ ಚಿಟಿಕೆ ಅರಶಿನ ಪುಡಿ 
  6. ಉಪ್ಪು ರುಚಿಗೆ ತಕ್ಕಷ್ಟು
  7. ಸ್ವಲ್ಪ ಕೊತ್ತಂಬರಿ ಸೊಪ್ಪು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಒಣಮೆಣಸಿನಕಾಯಿ
  2. 2 ಟೀಸ್ಪೂನ್ ಕೊತ್ತಂಬರಿ ಬೀಜ 
  3. 1/2 ಟೀಸ್ಪೂನ್ ಜೀರಿಗೆ 
  4. 3/4 ಕಪ್ ತೆಂಗಿನ ತುರಿ 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬಟಾಣಿ ಗಸಿ ಮಾಡುವ ವಿಧಾನ:

  1. ಬಟಾಣಿಯನ್ನು ಒಂದುದಿನ ಅಥವಾ ರಾತ್ರೆಯಿಡಿ ನೆನೆಹಾಕಿ. 
  2. ನಂತ್ರ ನೆನೆಸಿದ ಬಟಾಣಿಯನ್ನು ಕುಕ್ಕರ್ ಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ವಿಷಲ್ ಮಾಡಿ ಬೇಯಿಸಿ. 
  3. ನಂತರ ಅದಕ್ಕೆ ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ, ಅರಶಿನ, ಉಪ್ಪು ಮತ್ತು ನೀರು ಹಾಕಿ. ಪುನಃ ಎರಡು ವಿಷಲ್ ಮಾಡಿ ಬೇಯಿಸಿ.
  4. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿ ಹಾಕಿ ಅರೆಯಿರಿ. 
  5. ಬೇಯಿಸಿದ ಬಟಾಣಿ ಮತ್ತು ಆಲೂಗಡ್ಡೆಗೆ ಅರೆದ ಮಸಾಲೆ ಹಾಕಿ.
  6. ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
  8. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. 
  9. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  10. ಚಪಾತಿ, ರೊಟ್ಟಿ ಅಥವಾ ಪೂರಿಯೊಂದಿಗೆ ಬಡಿಸಿ, ಆನಂದಿಸಿ !!


ಗುರುವಾರ, ಜೂನ್ 13, 2019

Pani puri recipe in Kannada | ಪಾನಿ ಪುರಿ ಮಾಡುವ ವಿಧಾನ

Pani puri recipe in Kannada

Pani puri recipe in Kannada | ಪಾನಿ ಪುರಿ ಮಾಡುವ ವಿಧಾನ 


ಪಾನೀ ಪುರಿ ವಿಡಿಯೋ

ಪೂರಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಣ್ಣ ರವೇ ಅಥವಾ ಚಿರೋಟಿ ರವೇ 
  2. 1 ಟೇಬಲ್ ಚಮಚ ಮೈದಾ ಹಿಟ್ಟು
  3. 1/2 ಟೀಸ್ಪೂನ್ ಉಪ್ಪು 
  4. 1/4 ಟೀಸ್ಪೂನ್ ಅಡುಗೆ ಸೋಡಾ
  5. 1 ಟೀಸ್ಪೂನ್  ಅಡುಗೆ ಎಣ್ಣೆ
  6. ಸುಮಾರು ಅರ್ಧ ಕಪ್ ನೀರು 
  7. ಎಣ್ಣೆ ಪೂರಿ ಕಾಯಿಸಲು

ಆಲೂ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಆಲೂಗಡ್ಡೆ
  2. 1/4 ಟೀಸ್ಪೂನ್ ಉಪ್ಪು 
  3. 1/4 ಟೀಸ್ಪೂನ್ ಅಚ್ಚಖಾರದ ಪುಡಿ
  4. 1/2 ಟೀಸ್ಪೂನ್ ಚಾಟ್ ಮಸಾಲಾ 

ಪಾನಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಹಿಡಿ ಪುದಿನ ಸೊಪ್ಪು 
  2. 1 ಹಿಡಿ ಕೊತ್ತಂಬರಿ ಸೊಪ್ಪು
  3. 2 - 4 ಹಸಿರುಮೆಣಸಿನಕಾಯಿ
  4. 1/2 ಟೀಸ್ಪೂನ್ ಬ್ಲಾಕ್ ಸಾಲ್ಟ್ ಅಥವಾ ಸೈನ್ದವ ಲವಣ
  5. 1 ಟೀಸ್ಪೂನ್ ಚಾಟ್ ಮಸಾಲಾ
  6. ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
  7. ರುಚಿಗೆ ತಕ್ಕಷ್ಟು ಬೆಲ್ಲ
  8. 1/2 ಟೀಸ್ಪೂನ್ ನಿಂಬೆಹಣ್ಣಿನ ರಸ ಅಥವಾ ಆಮಚೂರ್ ಪುಡಿ
  9. ಉಪ್ಪು ರುಚಿಗೆ ತಕ್ಕಷ್ಟು
  10. 1 ದೊಡ್ಡ ಈರುಳ್ಳಿ ಕತ್ತರಿಸಿದ್ದು (ಸರ್ವ್ ಮಾಡಲು ಅಥವಾ ಬಡಿಸಲು)

ಪಾನಿ ಪುರಿ ಮಾಡುವ ವಿಧಾನ:

  1. ಮೊದಲಿಗೆ ಪೂರಿ ಮಾಡಿಕೊಳ್ಳೋಣ. ಒಂದು ಪಾತ್ರೆಯಲ್ಲಿ  ಚಿರೋಟಿ ರವೇ, ಮೈದಾ ಹಿಟ್ಟು, ಉಪ್ಪು ಮತ್ತು ಸೋಡಾ ತೆಗೆದುಕೊಳ್ಳಿ. 
  2. ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ತಿಕ್ಕಿ ಕಲಸಿ. 
  3. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ತಯಾರಿಸಿಕೊಳ್ಳಿ. 
  4. ಒದ್ದೆಬಟ್ಟೆಯನ್ನು ಮುಚ್ಚಿ ಮೂವತ್ತು ನಿಮಿಷ ನೆನೆಯಲು ಬಿಡಿ. 
  5. ನಂತ್ರ ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಅಥವಾ ಸ್ವಲ್ಪ ರವೇ ಸೇರಿಸಿ, ಚೆನ್ನಾಗಿ ನಾದಿ (ಸುಮಾರು ಐದು ನಿಮಿಷ) ಮೃದು ಆದರೆ ಗಟ್ಟಿಯಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರಲಿ. 
  6. ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ತೆಳ್ಳನೆ ಚಪಾತಿ ಲಟ್ಟಿಸಿ. ಮಾಮೂಲಿ ಚಪಾತಿಗಿಂತ ಸ್ವಲ್ಪ ತೆಳ್ಳಗಿರಲಿ. 
  7. ಒಂದು ಲೋಟ ಅಥವಾ ಮುಚ್ಚಳದಿಂದ ಸಣ್ಣ ಸಣ್ಣ ಪೂರಿಗಳನ್ನು ಒತ್ತಿ ತೆಗೆದು, ಬಿಸಿಯಾದ ಎಣ್ಣೆಯಲ್ಲಿ ಕಾಯಿಸಿ. ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಹತ್ತು ಹದಿನೈದು ಸೆಕೆಂಡ್ ಕಾಯಿಸುವುದರಿಂದ ಪೂರಿ ಗರಿ ಗರಿ ಆಗುವುದು. 
  8. ಆಲೂ ಮಸಾಲೆ ಮಾಡಲು ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ. 
  9. ಉಪ್ಪು, ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ, ಕಲಸಿ ಪಕ್ಕಕ್ಕಿಡಿ. 
  10. ಪಾನಿ ಮಾಡಲು ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  11. ಅರೆದ ನಂತ್ರ ಸೋಸಿ, ಸೈನ್ದವ ಲವಣ, ಚಾಟ್ ಮಸಾಲಾ, ಹುಣಿಸೆಹಣ್ಣಿನ ರಸ, ಬೆಲ್ಲ ಮತ್ತು ನಿಂಬೆರಸ ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು-ಹುಳಿ-ಸಿಹಿ-ಖಾರ ಹೊಂದಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕಲಕಿ. 
  12. ಆಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಜೊತೆಯಲ್ಲಿ ಪೂರಿ, ಆಲೂಮಸಾಲೆ ಮತ್ತು ಪಾನಿಯನ್ನು ಬಡಿಸಿ. 
  13. ಪೂರಿಯ ತೆಳುವಾದ ಭಾಗವನ್ನು ತೂತು ಮಾಡಿ, ಆಲೂ ಮಸಾಲೆ, ಈರುಳ್ಳಿ ತುಂಬಿಸಿ, ಪಾನಿಯನ್ನೂ ತುಂಬಿಸಿ, ಸವಿದು ಆನಂದಿಸಿ. 

ಬುಧವಾರ, ಜೂನ್ 12, 2019

Tomlette recipe in Kannada | ಟಾಮ್ಲೆಟ್ ಮಾಡುವ ವಿಧಾನ

Tomlette recipe in Kannada

Tomlette recipe in Kannada | ಟಾಮ್ಲೆಟ್ ಮಾಡುವ ವಿಧಾನ 


ಟಾಮ್ಲೆಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಕಡ್ಲೆಹಿಟ್ಟು
  2. 2 ಟೇಬಲ್ ಚಮಚ ಅಕ್ಕಿಹಿಟ್ಟು
  3. ಚಿಟಿಕೆ ಓಮ 
  4. ಚಿಟಿಕೆ ಜೀರಿಗೆ
  5. 1/4 ಟೀಸ್ಪೂನ್ ಅಚ್ಚಖಾರದ ಪುಡಿ
  6. 1/4 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
  7. 2 ಟೇಬಲ್ ಚಮಚ ಈರುಳ್ಳಿ
  8. ಹಸಿರುಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ನಿಮ್ಮ ಖಾರಕ್ಕೆ ತಕ್ಕಂತೆ)
  9. 1 ಟೇಬಲ್ ಚಮಚ ದೊಣ್ಣೆಮೆಣಸು
  10. 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  11. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  12. ಎಣ್ಣೆ ಕಾಯಿಸಲು

ಟಾಮ್ಲೆಟ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಅದಕ್ಕೆ ಓಮ, ಜೀರಿಗೆ, ಅಚ್ಚಖಾರದ ಪುಡಿ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. 
  3. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸು, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸು ಸೇರಿಸಿ.
  4. ಸ್ವಲ್ಪ ನೀರು ಸೇರಿಸಿ. ಮಿಲ್ಕ್ ಶೇಕ್ ನ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. 
  5.  ತವಾ ಬಿಸಿ ಮಾಡಿ. ಕಲಸಿದ ಹಿಟ್ಟನ್ನು ಸುರಿದು, ದೋಸೆಯಂತೆ ಹರಡಿ. 
  6. ಎರಡು ಬದಿ ಎಣ್ಣೆ ಹಾಕಿ ಕಾಯಿಸಿ. ಸವಿದು ಆನಂದಿಸಿ. 


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಜೂನ್ 8, 2019

Jeerige kashaya recipe in Kannada | ಜೀರಿಗೆ ಕಷಾಯ ಮಾಡುವ ವಿಧಾನ

Jeerige kashaya recipe in Kannada

Jeerige kashaya recipe in Kannada | ಜೀರಿಗೆ ಕಷಾಯ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು (ಮಕ್ಕಳಿಗೆ): (ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಜೀರಿಗೆ
  2. 2 ಲೋಟ ನೀರು
  3. ಚಿಟಿಕೆ ಉಪ್ಪು ಅಥವಾ ಸ್ವಲ್ಪ ಬೆಣ್ಣೆ ಅಥವಾ ಸ್ವಲ್ಪ ಹಾಲು

ಜೀರಿಗೆ ಕಷಾಯ ಮಾಡುವ ವಿಧಾನ:

  1. ಒಂದು ಬಾಣಲೆ ಬಿಸಿ ಮಾಡಿ ಜೀರಿಗೆಯನ್ನು ಚಟಪಟ ಎನ್ನುವಂತೆ ಹುರಿಯಿರಿ. 
  2. ಕೂಡಲೇ ಸ್ಟವ್ ಸಣ್ಣ ಮಾಡಿ, ಎರಡು ಕಪ್ ನೀರು ಸೇರಿಸಿ. 
  3. ಐದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
  4. ಒಂದೆರಡು ನಿಮಿಷ ಬಿಟ್ಟು ಜೀರಿಗೆ ಕಷಾಯವನ್ನು ಲೋಟಕ್ಕೆ ಬಗ್ಗಿಸಿ. ಜೀರಿಗೆ ತಿನ್ನುವ ಅಗತ್ಯವಿಲ್ಲ. 
  5. ಅದಕ್ಕೆ ಚಿಟಿಕೆ ಉಪ್ಪು (ಅಜೀರ್ಣಕ್ಕೆ) ಅಥವಾ ಅರ್ಧ ಚಮಚ ಬೆಣ್ಣೆ (ಉಷ್ಣ ವಾಯು ಮತ್ತು ಮೈಕೈ ನೋವು) ಅಥವಾ ಸ್ವಲ್ಪ ಹಾಲು (ಅಜೀರ್ಣ, ವಾಯು ಉಪದ್ರ ಮತ್ತು ಸೊಂಟ ನೋವು) ಸೇರಿಸಿ ಕುಡಿಯಿರಿ. ಸುಮಾರು 50ml ನಷ್ಟು ಕುಡಿದರೆ ಸಾಕು.  

ಗುರುವಾರ, ಜೂನ್ 6, 2019

Southekayi rotti recipe in Kannada | ಸೌತೆಕಾಯಿ ರೊಟ್ಟಿ ಮಾಡುವ ವಿಧಾನ

Southekayi rotti recipe in Kannada

Southekayi rotti recipe in Kannada | ಸೌತೆಕಾಯಿ ರೊಟ್ಟಿ ಮಾಡುವ ವಿಧಾನ

ಸೌತೆಕಾಯಿ ರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ತುರಿದ ಸೌತೆಕಾಯಿ
  2. 1/2 ಕಪ್ ರವೆ
  3. 1/4 ಕಪ್ ತೆಂಗಿನತುರಿ
  4. 1 - 2 ಹಸಿಮೆಣಸಿನಕಾಯಿ
  5. 1 ಚಮಚ ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
  6. ಒಂದು ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸೌತೆಕಾಯಿ ರೊಟ್ಟಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರವೆ ಮತ್ತು ತುರಿದ ಸೌತೆಕಾಯಿ ತೆಗೆದುಕೊಳ್ಳಿ.
  2. ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ತೆಂಗಿನತುರಿ ಸೇರಿಸಿ. 
  3. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ. 
  5. ಚೆನ್ನಾಗಿ ಕಲಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ಮೆತ್ತಗಿನ ರೊಟ್ಟಿ ಹಿಟ್ಟನ್ನು ಕಲಸಿ 
  6. ಹತ್ತು ನಿಮಿಷ ನೆನೆಯಲು ಬಿಡಿ. 
  7. ಆಮೇಲೆ ತವ ಬಿಸಿಮಾಡಿ. ಎಣ್ಣೆ ಹಚ್ಚಿ, ನಿಂಬೆ ಗಾತ್ರದ ಹಿಟ್ಟು ಹಾಕಿ, ತವ ಮೇಲೆ ತಟ್ಟಿ. ಬೇಕಾದಲ್ಲಿ ಕೈ ಬೆರಳುಗಳಿಗೆ ನೀರು ಮುಟ್ಟಿಸಿಕೊಂಡು ಸಣ್ಣ ಗಾತ್ರದ ರೊಟ್ಟಿ ಮಾಡಿ. ರೊಟ್ಟಿ ತಟ್ಟುವಾಗ ಉರಿ ಕಡಿಮೆ ಇರಲಿ. 
  8. ಉರಿ ಜಾಸ್ತಿ ಮಾಡಿ, ಮೇಲಿನಿಂದ  ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ. ಇನ್ನೊಂದು ಬದಿಯೂ ಕಾಯಿಸಿ. 
  9. ತೆಂಗಿನಕಾಯಿ ಚಟ್ನಿ ಮತ್ತು ತುಪ್ಪದೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...