Ragi laddu or ragi unde recipe | ರಾಗಿ ಲಾಡು ಮಾಡುವ ವಿಧಾನ
ragi unde or ladoo video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ರಾಗಿ ಹಿಟ್ಟು
1/4 ಕಪ್ ಕೊಬ್ಬರಿ ತುರಿ
3/4 ಕಪ್ ಬೆಲ್ಲ ಪುಡಿ ಮಾಡಿದ್ದು
1/4 ಕಪ್ ನೀರು
2 ಟೇಬಲ್ ಚಮಚ ತುಪ್ಪ
2 ಟೇಬಲ್ ಚಮಚ ಗೋಡಂಬಿ ಚೂರು
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ರಾಗಿ ಲಾಡು ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ 1 ಟೇಬಲ್ ಚಮಚ ತುಪ್ಪ ಬಿಸಿ ಮಾಡಿ, ಗೋಡಂಬಿಯನ್ನು ಹುರಿದು ಪಕ್ಕಕ್ಕಿಡಿ.
ನಂತರ ಅದೇ ಬಾಣಲೆಗೆ ಇನ್ನೊಂದು ಟೇಬಲ್ ಚಮಚ ತುಪ್ಪ ಮತ್ತು ರಾಗಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಬಣ್ಣ ಬದಲಾವಣೆ ಅಥವಾ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ.
ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಇನ್ನೊಂದು ನಿಮಿಷ ಹುರಿದು, ಗೋಡಂಬಿಯೊಂದಿಗೆ ಪಕ್ಕಕ್ಕಿಡಿ.
ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಗಮನಿಸಿ ಪಾಕ ಹೆಚ್ಚಾಗ ಬಾರದು. ಒಂದೆಳೆ ಪಾಕ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
ಕೂಡಲೇ ಬೆಲ್ಲದ ಪಾಕವನ್ನು ಹುರಿದ ರಾಗಿ ಹಿಟ್ಟು, ಕೊಬ್ಬರಿ ತುರಿ ಮತ್ತು ಗೋಡಂಬಿ ಮಿಶ್ರಣದ ಮೇಲೆ ಸುರಿಯಿರಿ.
ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆಗಳನ್ನು ಮಾಡಿ ಸವಿಯಿರಿ. ಈ ಉಂಡೆ ಅಥವಾ ರಾಗಿ ಲಾಡು ಬಿಸಿಯಲ್ಲಿ ಸ್ವಲ್ಪ ಮೆತ್ತಗಿದ್ದು, ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ.
masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ
ಮಸೊಪ್ಪು ಸಾರು ವಿಡಿಯೋ
ಮಸೊಪ್ಪು ಸಾರು ಮತ್ತು ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಅಡುಗೆಯಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ ಇತ್ಯಾದಿ ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಮಸೊಪ್ಪು ಸಾರನ್ನು ಬೆರಕೆ ಸೊಪ್ಪು (ಪಾಲಕ್, ಮೆಂತೆ, ದಂಟು, ಸಬ್ಸಿಗೆ) ಗಳಿಂದ ತಯಾರಿಸಲಾಗುತ್ತದೆ. ಆದರೆ ಇವಿಷ್ಟಲ್ಲದೆ ಬೇರೆ ಯಾವುದೇ ಸೊಪ್ಪನ್ನು ಸಹ ಬೆರಕೆಯಾಗಿ ನಿಮ್ಮ ರುಚಿಗೆ ತಕ್ಕಂತೆ ಉಪಯೋಗಿಸಬಹುದು. ಪಾಲಕ್ ಸೊಪ್ಪು ಮಾತ್ರ ಉಪಯೋಗಿಸಿ ಸಹ ಮಸೊಪ್ಪು ಸಾರನ್ನು ತಯಾರಿಸಬಹುದು. ನಾನು ಪಾಲಕ್ ಮತ್ತು ದಂಟಿನ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೇನೆ.
ಇನ್ನು ರಾಗಿ ಮುದ್ದೆ ನಿಮಗೆಲ್ಲ ತಿಳಿದಿರುವಂತೆ ರಾಗಿ ಹಿಟ್ಟು, ಉಪ್ಪು ಮತ್ತು ನೀರು ಉಪಯೋಗಿಸಿ ತಯಾರಿಸಲಾಗುತ್ತದೆ. ರಾಗಿ ಮುದ್ದೆಯನ್ನು ಯಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು.
ಈ ಅಡುಗೆಯನ್ನು ನಾನು ನನ್ನ ಪಕ್ಕದಮನೆ ಆಂಟಿ ಯಿಂದ ಕಲಿತದ್ದು. ಮಸೊಪ್ಪನ್ನು ಕೊಂಚ ಬೇರೆ ವಿಧಾನದಲ್ಲೂ ಮಾಡುತ್ತಾರೆಂದು ಕೇಳಿದ್ದೇನೆ. ನೀವು ಮಾಡುವ ವಿಧಾನ ಬೇರೆಯಾಗಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ.
ಬೇಕಾಗುವ ಪದಾರ್ಥಗಳು (ಮಸೊಪ್ಪು ಸಾರಿಗೆ): (ಅಳತೆ ಕಪ್ = 120 ಎಂ ಎಲ್)
1 ಕಟ್ಟು ಸೊಪ್ಪು (ಪಾಲಕ್, ಪಾಲಕ್+ದಂಟು, ಪಾಲಕ್+ದಂಟು+ಮೆಂತೆ+ಸಬ್ಸಿಗೆ, ಇತ್ಯಾದಿ)
1.5 ಕಪ್ ತೊಗರಿ ಬೇಳೆ
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೇಟೊ
2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
ಒಂದು ದೊಡ್ಡ ಚಿಟಿಕೆ ಅರಶಿನ ಪುಡಿ
2 - 4 ಹಸಿರು ಮೆಣಸಿನಕಾಯಿ
ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
1/2 ಟಿಸ್ಪೂನ್ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ
1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಒಣ ಮೆಣಸಿನಕಾಯಿ
1/4 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಜೀರಿಗೆ
4 -5 ಎಸಳು ಕತ್ತರಿಸಿದ ಬೆಳ್ಳುಳ್ಳಿ
ಒಂದು ದೊಡ್ಡ ಚಿಟಿಕೆ ಇಂಗು
4 - 5 ಕರಿಬೇವಿನ ಎಲೆ
2 ಟೀಸ್ಪೂನ್ ಅಡುಗೆ ಎಣ್ಣೆ
ಬೇಕಾಗುವ ಪದಾರ್ಥಗಳು (ರಾಗಿ ಮುದ್ದೆಗೆ): (ಅಳತೆ ಕಪ್ = 120 ಎಂ ಎಲ್)
2 + 1/2 ಕಪ್ ನೀರು ( 1/2 ಕಪ್ ಕೊನೆಯಲ್ಲಿ ಬಳಸಲಾಗುತ್ತದೆ)
2 ಕಪ್ ರಾಗಿ ಹಿಟ್ಟು
ಉಪ್ಪು ರುಚಿಗೆ ತಕ್ಕಷ್ಟು (ಬೇಕಾದಲ್ಲಿ)
ಮಸ್ಸೊಪ್ಪು ಸಾರು ಮಾಡುವ ವಿಧಾನ:
ಸೊಪ್ಪನ್ನು ಸ್ವಚ್ಛಗೊಳಿಸಿ ಸಣ್ಣಗೆ ಕತ್ತರಿಸಿ.
ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ತೊಳೆದು, ಅರಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೊಪ್ಪು, ಈರುಳ್ಳಿ, ಟೊಮೆಟೊ, ತೆಂಗಿನ ತುರಿ ಮತ್ತು ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಹಾಕಿ. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆದು, ಬೆಂದ ಪದಾರ್ಥಗಳನ್ನು ಕಡಗೋಲು ಉಪಯೋಗಿಸಿ ಚೆನ್ನಾಗಿ ಮಸೆಯಿರಿ ಅಥವಾ ಕಡೆಯಿರಿ. ಇಲ್ಲವೇ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಿರಿ. ನಾನು ಅಗಲವಾದ ಸೌಟಿನ ಹಿಂಭಾಗ ಉಪಯೋಗಿಸಿ ಮಸೆಯುತ್ತೇನೆ. ಹೀಗೆ ಸೊಪ್ಪು ಮತ್ತು ಬೇಳೆಯನ್ನು ಮಸೆಯುವುದರಿಂದಲೇ ಈ ಸಾರಿಗೆ ಮಸೊಪ್ಪು ಎಂಬ ಹೆಸರು ಬಂದಿದೆ.
ಈಗ ಒಂದು ಸಣ್ಣ ಬಾಣಲೆ ತೆಗೆದುಕೊಂಡು ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಇಂಗು, ಕರಿಬೇವು ಬಳಸಿಕೊಂಡು ಒಗ್ಗರಣೆ ತಯಾರಿಸಿ.
ಆ ಒಗ್ಗರಣೆಯನ್ನು ಮಸೆದ ಸೊಪ್ಪು ಮತ್ತು ಬೇಳೆಯಿರುವ ಕುಕ್ಕರ್ ಗೆ ಸೇರಿಸಿ. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ.
1/2 ಚಮಚ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ ಸೇರಿಸಿ, ಸ್ಟವ್ ಆನ್ ಮಾಡಿ, ಕುದಿಯಲು ಇಡಿ.
ಕತ್ತರಿಸಿದ ಕೊತ್ತುಂಬರಿ ಸೊಪ್ಪನ್ನು ಸೇರಿಸಿ. ಸಾರು ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆರಿಸಿ. ಬಿಸಿ ರಾಗಿ ಮುದ್ದೆಯೊಂದಿಗೆ ಬಡಿಸಿ.
ರಾಗಿ ಮುದ್ದೆ ಮಾಡುವ ವಿಧಾನ:
ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಳ್ಳಿ. 2 ಟೀಸ್ಪೂನ್ ರಾಗಿ ಹಿಟ್ಟು ಸೇರಿಸಿ. ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಕುದಿಯಲು ಇಡಿ. ಹೀಗೆ ಮಾಡಿದಲ್ಲಿ ರಾಗಿ ಮುದ್ದೆ ಗಂಟಾಗುವುದಿಲ್ಲ.
ನೀರು ಕುದಿಯಲು ಪ್ರಾರಂಭವಾದ ಕೂಡಲೇ 2 ಕಪ್ ರಾಗಿ ಹಿಟ್ಟು ಸೇರಿಸಿ. ಗಮನಿಸಿ ಮಗುಚಬೇಡಿ. ಹಾಗೆ ಕುದಿಯಲು ಬಿಡಿ.
ಮಧ್ಯಮ ಜ್ವಾಲೆಯಲ್ಲಿ 7 - 8 ನಿಮಿಷಗಳ ಕಾಲ ಕುದಿಯಲು ಬಿಡಿ. ರಾಗಿ ಮುದ್ದೆಯ ಪ್ರಮಾಣದ ಮೇಲೆ ಸಮಯ ಬದಲಾಗ ಬಹುದು.
ಸುಮಾರು 7 - 8 ನಿಮಿಷಗಳಾದ ಕೂಡಲೇ ಜ್ವಾಲೆಯನ್ನು ಕಡಿಮೆ ಮಾಡಿ, ಮರದ ಕೋಲು (ರಾಗಿ ಮುದ್ದೆ ಕೋಲು) ಅಥವಾ ಮರದ ಸೌಟಿನಿಂದ ಚೆನ್ನಾಗಿ ಮಗುಚಿ.
2 - 3 ನಿಮಿಷಗಳ ಕಾಲ ಗಂಟುಗಳಿಲ್ಲದಂತೆ ಚೆನ್ನಾಗಿ ಮಗುಚಬೇಕಾಗುತ್ತದೆ.
ನಂತರ 1/2 ಕಪ್ ನೀರು ಸಿಂಪಡಿಸಿ ಮತ್ತೆ ಚೆನ್ನಾಗಿ ಮಗುಚಿ ಸ್ಟೌವ್ ಆಫ್ ಮಾಡಿ. ಈ ರೀತಿ ಮಾಡುವುದರಿಂದ ರಾಗಿ ಮುದ್ದೆ ಮೆತ್ತಗಾಗಿ ಚೆನ್ನಾಗಿ ಬರುತ್ತದೆ.
ತಕ್ಷಣ ಒಂದು ಪ್ಲೇಟ್ ಅಥವಾ ಮರದ ಹಲಗೆಯ ಮೇಲೆ ಸುರಿದು, ನೀರು ಮುಟ್ಟಿ ಕೊಂಡು ಕೈಯಿಂದ ಟೆನಿಸ್ ಬಾಲ್ ಗಾತ್ರದ ರಾಗಿ ಮುದ್ದೆಗಳನ್ನು ಮಾಡಿ. ಹೀಗೆ ಮಾಡುವಾಗ ರಾಗಿ ಮುದ್ದೆ ನಿಮ್ಮ ಬೆರಳುಗಳಿಗೆ ಅಂಟಿಕೊಳ್ಳ ಬಾರದು. ಅಂಟಿದಲ್ಲಿ ರಾಗಿ ಮುದ್ದೆ ಸರಿಯಾಗಿ ಬೆಂದಿಲ್ಲವೆಂದು ಅರ್ಥ. ಈಗ ಬಿಸಿ ರಾಗಿ ಮುದ್ದೆಯನ್ನು ಮಸ್ಸೊಪ್ಪು ಸಾರು ಅಥವಾ ಇನ್ನಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಮೊಸರಿನೊಂದಿಗೂ ಬಡಿಸಬಹುದು. ಆರೋಗ್ಯಕರ ಊಟವನ್ನು ಹೊಟ್ಟೆ ಭರ್ತಿ ಆನಂದಿಸಿ.
ದಿಢೀರ್ ರಾಗಿ ದೋಸೆ ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಈ ದೋಸೆಗೆ ಕೇವಲ ರಾಗಿ ಹಿಟ್ಟು ಮತ್ತು ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಈ ರಾಗಿ ದೋಸೆ ಬಹಳ ಆರೋಗ್ಯಕರವಾಗಿದ್ದು, ಅದರಲ್ಲೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಸೇವಿಸಿದಲ್ಲಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿಯಾಗಿದೆ.
ನಾನು ಈ ದೋಸೆಯನ್ನು ಬೆಳಗ್ಗಿನ ಉಪಹಾರದ ಪಟ್ಟಿಯಲ್ಲಿ ಸೇರಿಸಿದ್ದೇನೆ. ಆದರೆ ಈ ದೋಸೆಯನ್ನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ರಾತ್ರೆ ಊಟಕ್ಕೆ ಅನ್ನದ ಬದಲಾಗಿ ಪ್ರತಿನಿತ್ಯ ಸೇವಿಸುತ್ತಾರೆ.
ರಾಗಿಯೊಂದಿಗೆ ಬೇರೆ ಬೇರೆ ಹಿಟ್ಟನ್ನು ಬೆರೆಸಿ, ರಾಗಿ ದೋಸೆ ಎಂದು ತಿನ್ನುವ ಬದಲು ಈ ರೀತಿ ರಾಗಿ ಹಿಟ್ಟು ಮಾತ್ರ ಹಾಕಿ ಮಾಡಿದ ದೋಸೆ ಹೆಚ್ಚು ಪ್ರಯೋಜನಕಾರಿ ಎಂದು ನನ್ನ ಅನಿಸಿಕೆ. ಆದರೆ ದೋಸೆ ಮಾಡುವ ಸಮಯದಲ್ಲಿ ನಿಮಗೆ ಕಷ್ಟವೆನ್ನಿಸಿದರೆ ಒಂದು ಅಥವಾ ಎರಡು ಟೇಬಲ್ ಚಮಚ ಗೋಧಿ ಹಿಟ್ಟನ್ನು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ದೋಸೆ ಮಾಡಬಹುದು.
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
2 ಕಪ್ ರಾಗಿ ಹಿಟ್ಟು
2 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು
3 ಕಪ್ ನೀರು (ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
2 ಟೀಸ್ಪೂನ್ ಅಡುಗೆ ಎಣ್ಣೆ.
ದಿಢೀರ್ ರಾಗಿ ದೋಸೆ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಕತ್ತರಿಸಿದ ಕರಿಬೇವಿನ ಎಲೆಗಳನ್ನು ಹಾಕಿ. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ (1 ಲೋಟ ಹಿಟ್ಟಿಗೆ 1.5 ಕಪ್ ನಷ್ಟು ನೀರು ಬೇಕಾಗುತ್ತದೆ). ಉಪ್ಪು ಹಾಕಿ ಕಲಸಿ. ರಾಗಿ ದೋಸೆಗೆ ಹೆಚ್ಚು ಉಪ್ಪು ಅಗತ್ಯವಿರುವುದಿಲ್ಲ.
ಈಗ ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಒಲೆ ದೊಡ್ಡ ಉರಿಯಲ್ಲಿರಲಿ. ರಾಗಿ ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ಕಾವಲಿಯಾದರೆ ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ರಾಗಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ರಾಗಿ ದೋಸೆ ಮಾಡಲು ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು, ನೀರ್ ದೋಸೆ ಅಥವಾ ರವೆ ದೋಸೆ ಮಾಡುವ ವಿಧಾನದಲ್ಲಿ ದೋಸೆ ಮಾಡಿ.
ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ರಾಗಿ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಗೋಧಿ ಹಿಟ್ಟು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ನಂತರ ಪ್ರಯತ್ನಿಸಿ. ಇದನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
ರಾಗಿ ರೊಟ್ಟಿ ಕರ್ನಾಟಕದ ಅತ್ಯಂತ ಟೇಸ್ಟಿ ಮತ್ತು ಅತ್ಯಂತ ಪ್ರಸಿದ್ಧವಾದ ಉಪಹಾರವಾಗಿದೆ. ರಾಗಿ ಒಂದು ಮ್ಯಾಜಿಕ್ ಧಾನ್ಯವಾಗಿದ್ದು, ಅನೇಕ ಪೌಷ್ಟಿಕಾಂಶಗಳಿಗೆ ಮತ್ತು ಆರೋಗ್ಯಕರ ಅಂಶಗಳಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ರಾಗಿ ರೊಟ್ಟಿ ಮಾಡುತ್ತಾರಾದರೂ, ಈ ರೀತಿಯ ರಾಗಿ ರೊಟ್ಟಿ ಬಹಳ ರುಚಿಕರವಾಗಿರುತ್ತದೆ. ನಮ್ಮಲ್ಲಿ ಅನೇಕರು ರಾಗಿ ಒಂದು ರುಚಿ ಇಲ್ಲದ ಧಾನ್ಯ ಎಂದು ಹೀಗೆಳೆಯುತ್ತಾರೆ. ಆದರೆ ಈ ರಾಗಿ ರೊಟ್ಟಿಯನ್ನು ಒಮ್ಮೆ ಪ್ರಯತ್ನಿಸಿ ರುಚಿ ನೋಡಿದರೆ ಅವರಿಗೆ ರಾಗಿ ಎಷ್ಟು ರುಚಿಕರ ಎಂದೆನ್ನಿಸುತ್ತದೆ. ಈ ರಾಗಿ ರೊಟ್ಟಿಯನ್ನು ರಾಗಿಹಿಟ್ಟು, ಈರುಳ್ಳಿ, ಹಸಿರು ಹಸಿರುಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು.
ರಾಗಿರೊಟ್ಟಿ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
3 ಕಪ್ ರಾಗಿಹಿಟ್ಟು
3 ಕಪ್ ನೀರು (ರಾಗಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
3 ಸಣ್ಣಗೆ ಹೆಚ್ಚಿದ ಈರುಳ್ಳಿ
1/4 ಕಪ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು
ಉಪ್ಪು ರುಚಿಗೆ ತಕ್ಕಷ್ಟು
1/4 ಕಪ್ ಅಡುಗೆ ಎಣ್ಣೆ
15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಕರ್ನಾಟಕ ಶೈಲಿಯ ರಾಗಿರೊಟ್ಟಿ ಮಾಡುವ ವಿಧಾನ:
ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ರಾಗಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ರಾಗಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ರಾಗಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ (ನಾನ್-ಸ್ಟಿಕ್ ಆದರೆ ಉತ್ತಮ) ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.