" ಮಂಗಳೂರು ಬನ್ಸ್" ಕರ್ನಾಟಕದ ಉಡುಪಿ - ಮಂಗಳೂರು ಪ್ರದೇಶದ ಒಂದು ಜನಪ್ರಿಯವಾದ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಮಂಗಳೂರು ಬನ್ಸ್ ನಲ್ಲಿ ಮೈದಾ ಮತ್ತು ಬಾಳೆ ಹಣ್ಣು ಮುಖ್ಯ ಪದಾರ್ಥಗಳಾಗಿವೆ. ಇದೊಂದು ಸಿಹಿ ಮತ್ತು ಮೃದುವಾದ ಪೂರಿ ಯಾಗಿದ್ದು, ಸಾಮಾನ್ಯ ಪೂರಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಮಂಗಳೂರು ಬನ್ಸ್ ಗೆ ಕನಿಷ್ಟ 4-6 ಘಂಟೆ ಹಿಟ್ಟು ಹುದುಗುವ ಸಮಯವಿದೆ. ಮಂಗಳೂರು ಬನ್ಸ್ ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ. ಆದರೆ ಇದು ಯಾವುದೇ ಇಲ್ಲದೆಯೂ ಹಾಗೆ ತಿನ್ನಲು ಸಹ ಬಹಳ ರುಚಿಯಾಗಿರುತ್ತದೆ. ಈ ಬನ್ಸ್ ಗಳನ್ನು ಒಂದೆರಡು ದಿನಗಳ ಕಾಲ ಇಟ್ಟು ತಿನ್ನಬಹುದು.
ಮಂಗಳೂರ್ ಬನ್ಸ್ ಗಳಲ್ಲಿ ಮೈದಾ ಮತ್ತು ಬೇಕಿಂಗ್ ಸೋಡಾ ಬಳಸಲಾಗುತ್ತದೆ. ಆದ್ದರಿಂದ ನೀವು ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸುವವರಾದಲ್ಲಿ ಮೈದಾ ಬದಲಿಗೆ ಗೋಧಿ ಹಿಟ್ಟು ಬಳಸಿ. ಅಡಿಗೆ ಸೋಡಾದ ಪ್ರಮಾಣ ಕಡಿಮೆ ಮಾಡಲು ಹುಳಿ ಮೊಸರು ಬಳಸಿ ಮತ್ತು ಹೆಚ್ಚು ಸಮಯ ಹಿಟ್ಟು ಹುದುಗಲು ಬಿಡಿ. ಆದರೆ ಒಮ್ಮೆಯಾದರೂ ಈ ರುಚಿಕರವಾದ ಮಂಗಳೂರು ಬನ್ಸ್ ಮಾಡಿ ತಿನ್ನಿ.
ತಯಾರಿ ಸಮಯ: 5 ಗಂಟೆ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 6
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 6
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು
- 2 ಕಪ್ ಮೈದಾ ಹಿಟ್ಟು
- 3 - 5 ಟೀಸ್ಪೂನ್ ಸಕ್ಕರೆ
- 1/4 ಟೀಸ್ಪೂನ್ ಅಡುಗೆ ಸೋಡಾ
- 5 ಟೀಸ್ಪೂನ್ ಹುಳಿ ಮೊಸರು (ಹುಳಿ ಮೊಸರು ಅಲ್ಲದಿದ್ದಲ್ಲಿ ಸೋಡಾ 1/2 ಚಮಚ)
- 1 ಟೀಸ್ಪೂನ್ ಜೀರಿಗೆ
- ಉಪ್ಪು ರುಚಿಗೆ ತಕ್ಕಷ್ಟು.
ಮಂಗಳೂರ್ ಬನ್ಸ್ ಮಾಡುವ ವಿಧಾನ:
- ಬಾಳೆಹಣ್ಣು ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಹಿಚುಕಿ. ನಂತರ ಅದೇ ಬಟ್ಟಲಿಗೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಉಪ್ಪು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ.
- ಈಗ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ಹಿಟ್ಟು ಹುದುಗಲು ಕನಿಷ್ಟ 4 ಗಂಟೆಗಳ ಕಾಲ ಬಿಡಿ ( ಸಾಧ್ಯವಾದರೆ ಒಂದು ರಾತ್ರಿ ಹಿಟ್ಟು ಹುದುಗಲು ಬಿಡಿ). ನಿಮಗೆ ಹೆಚ್ಚು ಮೃದು ಮತ್ತು ಉಬ್ಬಿದ ಮಂಗಳೂರು ಬನ್ ಬೇಕಾದಲ್ಲಿ ಹೆಚ್ಚು ಸಮಯ ಹುದುಗಲು ಬಿಡಿ.
- ಹಿಟ್ಟು ಹುದುಗಿದ ನಂತರ ಹಿಟ್ಟು ತುಂಬಾ ಮೃದು ಎನಿಸಿದರೆ 1 ಅಥವಾ 2 ಟೀಸ್ಪೂನ್ ಮೈದಾ ಹಿಟ್ಟು ಸೇರಿಸಿ ಪುನಃ ಚೆನ್ನಾಗಿ ಕಲಸಿ. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಪೂರಿಯಂತೆ ಲಟ್ಟಿಸಿ ಆದರೆ ಸ್ವಲ್ಪ ದಪ್ಪನಾಗಿರಲಿ. ಎಲ್ಲ ಪೂರಿಯನ್ನು ಲಟ್ಟಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಲಟ್ಟಿಸಿಕೊಂಡ ಪೂರಿಯನ್ನು ಒಂದೊಂದಾಗಿ ಚಿನ್ನದ ಹೊಂಬಣ್ಣ ಬರುವವರೆಗೆ ಕಾಯಿಸಿ. ಬಿಸಿಯಾಗಿರುವಾಗಲೇ ಚಟ್ನೀ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಹಾಗೆ ತಿನ್ನಲು ಸಹ ಬಲು ರುಚಿಯಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ