ನೀರ್ ದೋಸೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಅತ್ಯಂತ ಪ್ರಸಿದ್ಧ ಅಡುಗೆಯಾಗಿದೆ. ನೀರ್ ದೋಸೆ ಯನ್ನು ಹೆಚ್ಚಾಗಿ ಮಂಗಳೂರು ಮತ್ತು ಉಡುಪಿ ಭಾಗದ ಅಡುಗೆಯಾಗಿ ಗುರುತಿಸಲಾಗಿದೆ. ಆದರೆ ಈ ದೋಸೆ ಕುಂದಾಪುರ ಮತ್ತು ಮಲೆನಾಡು ಪ್ರದೇಶದಾದ್ಯಂತ ಬಹಳ ಹಳೆಯ ಕಾಲದಿಂದ ಆಚರಣೆಯಲ್ಲಿದೆ. ಮಲೆನಾಡಿನಲ್ಲಿ ಸಾಧಾರಣವಾಗಿ ಇದನ್ನು " ಬರೀ ಅಕ್ಕಿ ದೋಸೆ " ಎಂದು ಕುಂದಾಪುರ ಪ್ರದೇಶದಲ್ಲಿ "ತೆಳ್ಳಿನ್ ದೋಸೆ" ಎಂದು ಕರೆಯಲಾಗುತ್ತದೆ. ನೀರ್ ದೋಸೆಯಲ್ಲಿ ಹಿಟ್ಟು ಹುದುಗುವಿಕೆ ಬೇಕಾಗದೇ ಇರುವುದರಿಂದ, ಅಕ್ಕಿಯೊಂದನ್ನು ನೆನೆಸಿಟ್ಟರೆ, ಆಮೇಲೆ ಅತೀ ಕಡಿಮೆ ಸಮಯದಲ್ಲಿ ದೋಸೆ ತಯಾರಿಸಬಹುದು. ತೆಳುವಾದ ಗರಿಗರಿ ದೋಸೆ ತಯಾರಿಸಲು ಸ್ವಲ್ಪ ಅನುಭವದ ಅಗತ್ಯವಿದೆ. ಚೆನ್ನಾಗಿರುವ ದೋಸೆ ತಯಾರಿಸುವಲ್ಲಿ ಒಳ್ಳೆ ಗುಣಮಟ್ಟದ ದೋಸೆ ಕಾವಲಿ, ಸರಿಯಾದ ಪ್ರಮಾಣದ ನೀರು ಮತ್ತು ಒಳ್ಳೆ ಗುಣಮಟ್ಟದ ಅಕ್ಕಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದೆರಡು ಸಲ ಪ್ರಯತ್ನಿಸಿದರೆ ನಿಮಗೆ ಈ ಅಂಶಗಳು ಮನದಟ್ಟಾಗುತ್ತವೆ.
ಕೇವಲ ಅಕ್ಕಿ, ಉಪ್ಪು ಮತ್ತು ನೀರನ್ನು ಉಪಯೋಗಿಸಿ ಈ ದೋಸೆ ಮಾಡಲಾಗುವುದು. ಕರಾವಳಿ ಪ್ರದೇಶದಲ್ಲಿ ಸ್ವಲ್ಪ ತೆಂಗಿನಕಾಯಿ ಯನ್ನು ಸಹ ಸೇರಿಸುತ್ತಾರೆ. ಇದರಿಂದ ದೋಸೆ ಮೃದುವಾಗಿ, ಸ್ವಲ್ಪ ಬೇರೆ ರುಚಿ ಇರುತ್ತದೆ. ಈ ದೋಸೆ ಮಾಡಲು ಅದಕ್ಕೆಂದೇ ಸಿಗುವ ಕಬ್ಬಿಣದ ಹೆಂಚು ಬಳಸಲಾಗುತ್ತದೆ. ಆದರೆ ನಾನ್-ಸ್ಟಿಕ್ ತವ ಉಪಯೋಗಿಸಿ ಸಹ ಮಾಡಬಹುದು. ಇನ್ನೂ ಈ ದೋಸೆ ಮಾಡಲು ನೀವು ಯಾವುದೇ ಅಕ್ಕಿಯನ್ನು ಉಪಯೋಗಿಸ ಬಹುದು. ಸಾಧಾರಣವಾಗಿ ದೋಸೆ ಅಕ್ಕಿ ಉಪಯೋಗಿಸುತ್ತಾರೆ, ಈ ಅಕ್ಕಿಯಿಂದ ಮಾಡಿದ ದೋಸೆ ಮೃದುವಾಗಿದ್ದು ರುಚಿಕರವಾಗಿರುತ್ತದೆ. ಸೋನಾ ಮಸೂರಿ ಅಥವಾ ಯಾವುದೇ ಉತ್ತಮ ಗುಣಮಟ್ಟದ ಅಕ್ಕಿ ಬಳಸಿದಲ್ಲಿ ದೋಸೆ ಮಾಡಲು ಸುಲಭವಾಗಿರುತ್ತದೆ ಆದರೆ ಅಷ್ಟು ಮೃದುವಾಗಿರುವುದಿಲ್ಲ. ಈ ಸಂದರ್ಭದಲ್ಲಿ ತೆಂಗಿನಕಾಯಿ ಉಪಯೋಗಿಸ ಬಹುದು. ನೀವು ಮೊದಲ ಬಾರಿ ಈ ದೋಸೆ ಪ್ರಯತ್ನಿಸುತ್ತಿದ್ದೀರಾದರೆ ಸೋನಾ ಮಸೂರಿ ಉಪಯೋಗಿಸಿ ಅಥವಾ ದೋಸೆ ಅಕ್ಕಿ ಮತ್ತು ಸೋನಾ ಮಸೂರಿ ಸಮಕ್ಕೆ ಸಮ ಬೆರೆಸಿ. ಈ ದೋಸೆಯನ್ನು ಬಿಸಿ ಯಾಗಿರುವಾಗ ತಿನ್ನಲು ರುಚಿ. ಚಟ್ನೀ, ಕಾಯಿಹಾಲು, ಕಾಯಿಬೆಲ್ಲ, ಸಕ್ಕರೆತುಪ್ಪ, ರಸಾಯನ ಹೀಗೆ ಯಾವುದರೊಟ್ಟಿಗೆ ಬೇಕಾದರೂ ತಿನ್ನ ಬಹುದು.
ದಯವಿಟ್ಟು ಗಮನಿಸಿ, ನೀವು ದೋಸೆ ಅಕ್ಕಿ ಬಳಸುತ್ತೀರಾದರೆ ಸ್ವಲ್ಪ ಕಡಿಮೆ ನೀರು ಸಾಕಾಗುತ್ತದೆ. ಸೋನಾ ಮಸೂರಿ ಅಥವಾ ಬೇರೆ ಒಳ್ಳೆ ಗುಣ ಮಟ್ಟದ ಅಕ್ಕಿ ಬಳಸಿದಲ್ಲಿ ಹೆಚ್ಚು ನೀರು ಸೇರಿಸಬಹುದು.
ನೀರ್ ದೋಸೆಯ ಮೇಲೆ ನಾನು ಒಂದು ವಿಡಿಯೋ ಮಾಡಿದ್ದೇನೆ. ಅದನ್ನು ಈ ಕೆಳಗೆ ನೀವು ವೀಕ್ಷಿಸಬಹುದು.
ನೀರ್ ದೋಸೆಯ ಮೇಲೆ ನಾನು ಒಂದು ವಿಡಿಯೋ ಮಾಡಿದ್ದೇನೆ. ಅದನ್ನು ಈ ಕೆಳಗೆ ನೀವು ವೀಕ್ಷಿಸಬಹುದು.
ತಯಾರಿ ಸಮಯ: 5 ಗಂಟೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ : 4 ಜನರಿಗೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
- 1/4 ಕಪ್ ತೆಂಗಿನ ತುರಿ (ಬೇಕಾದಲ್ಲಿ)
- 3 - 4 ಕಪ್ ನೀರು (ಅರೆಯುವ ನೀರು ಸೇರಿಸಿ)
- ಉಪ್ಪು ರುಚಿಗೆ ತಕ್ಕಷ್ಟು
ನೀರ್ ದೋಸೆ ಮಾಡುವ ವಿಧಾನ:
- ನೀರ್ ದೋಸೆ ಮಾಡಲು ಅಕ್ಕಿಯನ್ನು ಕನಿಷ್ಠ 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಾನು ಸಾಮಾನ್ಯವಾಗಿ ಒಂದು ರಾತ್ರಿ ನೆನೆಸುತ್ತೇನೆ. ಮರುದಿನ ಬೆಳಿಗ್ಗೆ ನೀರನ್ನು ಬಗ್ಗಿಸಿ ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬುವ ಬೇಕಾದಷ್ಟು ನೀರನ್ನು ಮಾತ್ರ ಹಾಕಿ. ಜಾಸ್ತಿ ನೀರು ಹಾಕಿದರೆ ನುಣ್ಣಗೆ ರುಬ್ಬಲು ಸ್ವಲ್ಪ ಕಷ್ಟವಾಗುತ್ತದೆ. ಸೋನಾಮಸೂರಿಯಂಥ ಅಕ್ಕಿ ಆದಲ್ಲಿ ಸ್ವಲ್ಪ ಜಾಸ್ತಿ ಹೊತ್ತು ರುಬ್ಬ ಬೇಕಾಗುತ್ತದೆ. ತೆಂಗಿನ ಕಾಯಿ ಸೇರಿಸುವುದಾದರೆ ಸೇರಿಸಿ. ನೀರ್ ದೋಸೆ ಹಿಟ್ಟು ಬಹಳ ನಯವಾದ ಇರಬೇಕು. 2 ಬೆರಳುಗಳ ನಡುವೆ ಹಿಟ್ಟನ್ನು ಮುಟ್ಟಿ ನೋಡಿದಾಗ ನಯವಾಗಿರಬೇಕು.
- ನೀರ್ ದೋಸೆ ಹಿಟ್ಟು ರುಬ್ಬಿಯಾದ ಮೇಲೆ ಒಂದು ಪಾತ್ರೆಗೆ ಹಾಕಿ. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ನೀವು ಮೊತ್ತ ಮೊದಲು ಈ ದೋಸೆ ಮಾಡುತ್ತಿರುವಿರಾದರೆ, ಹಿಟ್ಟಿಗೆ ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿ ಕೊಳ್ಳ ಬಹುದು. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಈಗ ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಒಲೆ ದೊಡ್ಡ ಉರಿಯಲ್ಲಿರಲಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ನೀರ್ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ನೀರ್ ದೋಸೆ ಮಾಡಲು ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
- ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ನೀರ್ ದೋಸೆ ದಪ್ಪ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ