ಭಾನುವಾರ, ಅಕ್ಟೋಬರ್ 25, 2015

Bisibele bath recipe in kannada | ಬಿಸಿಬೇಳೆ ಬಾತ್ ಮಾಡುವ ವಿಧಾನ


Bisibele bath recipe in kannada

Bisibele bath recipe in kannada | ಬಿಸಿಬೇಳೆ ಬಾತ್ ಮಾಡುವ ವಿಧಾನ

ಬಿಸಿಬೇಳೆ ಬಾತ್ ಕರ್ನಾಟಕ ದ ಬಹು ಜನಪ್ರಿಯ ಅಡುಗೆಯಾಗಿದ್ದು, ಇದ್ದನ್ನು ಬಿಸಿಬೇಳೆ ಹುಳಿಯನ್ನ ಎಂದೂ ಕರೆಯುತ್ತಾರೆ. ಇದರ ಪಾಕವಿಧಾನ ಬಹಳ ಸುದೀರ್ಘ ವಾಗಿದ್ದರೂ, ಇಲ್ಲಿ ಆದಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ. ಬಿಸಿಬೇಳೆ ಬಾತ್ ನ್ನು ಸಾಧಾರಣವಾಗಿ ಕಾರ ಬೂಂದಿ ಅಥವಾ ಮೊಸರು ಬಜ್ಜಿ (ಸಲಾಡ್) ಯೊಂದಿಗೆ ಬಡಿಸುತ್ತಾರೆ. ಆದರೆ ಇದರಲ್ಲಿ ಎಲ್ಲ ತರದ ಮಸಾಲೆ, ತರಕಾರಿ, ಉಪ್ಪು, ಹುಳಿ, ಬೆಲ್ಲ ಹೀಗೆ ಎಲ್ಲವೂ ಇರುವುದರಿಂದ, ಏನೂ ಇಲ್ಲದೆ ಹಾಗೇ ಸಹ ತಿನ್ನಲು ರುಚಿಯಾಗಿರುತ್ತದೆ.
ಎಲ್ಲ ಅಡುಗೆಯಂತೆ ಬಿಸಿಬೇಳೆ ಬಾತ್ ಪಾಕ ವಿಧಾನದಲ್ಲೂ ಸಣ್ಣ ಸಣ್ಣ ವ್ಯತ್ಯಾಸಗಳೊಂದಿಗೆ, ಅನೇಕ ವಿಧಗಳಿವೆ. ಆದರೆ ಇಲ್ಲಿರುವ ಪಾಕವಿಧಾನ ಹೆಚ್ಚಾಗಿ ಎಲ್ಲೆಡೆ ಚಾಲ್ತಿಯಲ್ಲಿದ್ದು, ಬಹಳ ರುಚಿಕರವಾಗಿರುತ್ತದೆ. ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ. 



ತಯಾರಿ ಸಮಯ: 30 ನಿಮಿಷ
ಅಡುಗೆ ಸಮಯ : 1 ಗಂಟೆ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂಎಲ್ )

  1. 3/4 ಕಪ್ ತೊಗರಿಬೇಳೆ 
  2. 1 ಕಪ್ ಅಕ್ಕಿ (ಸೋನಾ ಮಸೂರಿ ಆಥವಾ ಊಟದ ಅಕ್ಕಿ) 
  3. 10 ಬೀನ್ಸ್ 
  4. 1 ಕ್ಯಾರೆಟ್ 
  5. 1 ನವಿಲ್ ಕೋಸು 
  6. 1 ಆಲೂಗಡ್ಡೆ 
  7. 2 ಟೇಬಲ್ ಸ್ಪೂನ್ ನೆನೆಸಿದ ನೆಲಗಡಲೆ 
  8. 2 ಟೇಬಲ್ ಸ್ಪೂನ್ ನೆನೆಸಿದ ಬಟಾಣಿ 
  9. 1 ಟೊಮ್ಯಾಟೋ 
  10. 1 ನಿಂಬೆ ಗಾತ್ರದಷ್ಟು ಹುಣಿಸೆ ಹಣ್ಣು 
  11. 1 ನಿಂಬೆ ಗಾತ್ರದಷ್ಟು ಬೆಲ್ಲ 
  12. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:

  1. 2-4 ಒಣ ಮೇಣಸಿನಕಾಯಿ 
  2. 1 ಟೀಸ್ಪೂನ್ ಕಡ್ಲೆ ಬೇಳೆ 
  3. 2 ಟೀಸ್ಪೂನ್ ಉದ್ದಿನ ಬೇಳೆ 
  4. 1/4 ಟೀಸ್ಪೂನ್ ಮೆಂತೆ 
  5. 1/4 ಟೀಸ್ಪೂನ್ ಸಾಸಿವೆ 
  6. 1/2 ಟೀಸ್ಪೂನ್ ಜೀರಿಗೆ 
  7. 2 ಟೀಸ್ಪೂನ್ ಕೊತ್ತಂಬರಿ ಬೀಜ 
  8. ಒಂದು ದೊಡ್ಡ ಚಿಟಿಕೆ ಇಂಗು 
  9. 1/2 ಬೆರಳುದ್ದ ಚಕ್ಕೆ 
  10. 8-10 ಲವಂಗ 
  11. 1 ಏಲಕ್ಕಿ 
  12. 1 ಟೀಸ್ಪೂನ್ ಗಸಗಸೆ 
  13. 1/2 ಟೀಸ್ಪೂನ್ ಅಡುಗೆ ಎಣ್ಣೆ 
  14. 2 ಟೇಬಲ್ ಸ್ಪೂನ್ ಒಣಕೊಬ್ಬರಿ ಅಥವಾ ಕಾಯಿತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ 
  2. 1 ಟೀಸ್ಪೂನ್ ಕಡ್ಲೆ ಬೇಳೆ 
  3. 2 ಟೀಸ್ಪೂನ್ ಉದ್ದಿನ ಬೇಳೆ 
  4. 8-10 ಗೋಡಂಬಿ 
  5. 7 - 8 ಕರಿಬೇವಿನ ಎಲೆ 
  6. 1/4 ಟೀಸ್ಪೂನ್ ಅರಿಶಿನ ಪುಡಿ 
  7. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಬಿಸಿಬೇಳೆ ಬಾತ್ ಮಾಡುವ ವಿಧಾನ (ಅಳತೆ ಕಪ್ = 120 ಎಂಎಲ್ ):

  1. ಕನಿಷ್ಠ 5 ಲೀಟರ್ ಸಾಮರ್ಥ್ಯದ ಪ್ರೆಶರ್ ಕುಕರ್ ತೆಗೆದುಕೊಳ್ಳಿ. ಪ್ರೆಶರ್ ಕುಕರ್ ಗೆ ತೊಗರಿಬೇಳೆ ಹಾಕಿ, ತೊಳೆಯಿರಿ. ನಂತರ 2 ಕಪ್ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದೆರಡು ಹುಂಡು ಎಣ್ಣೆ ಹಾಕಿ 2 ವಿಷಲ್ ಕೂಗಿಸಿ. 
  2. ಎಲ್ಲ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿ, ನೆನೆಸಿದ ನೆಲಗಡಲೆ ಮತ್ತು ಬಟಾಣಿ ಹಾಕಿ ತೊಳೆಯಿರಿ. ಈಗ ತರಕಾರಿ, ಅಕ್ಕಿ ಮತ್ತು ಕಾಳುಗಳನ್ನು ಅರ್ಧ ಬೆಂದ ಬೇಳೆಯೊಂದಿಗೆ ಅದೇ ಕುಕ್ಕರ್‌ನಲ್ಲಿ ಹಾಕಿ. 4 ಕಪ್ ನೀರು ಸೇರಿಸಿ, ಒಮ್ಮೆ ಚೆನ್ನಾಗಿ ಕಲಸಿ, ಪುನಃ 2 ವಿಷಲ್ ಬರಿಸಿ. 
  3. ಈಗ ಮಸಾಲಾ ಪುಡಿ ಮಾಡಲು ಒಂದು ಬಾಣಲೆ ತೆಗೆದುಕೊಂಡು 1/2 ಚಮಚ ಎಣ್ಣೆ ಹಾಕಿ. ಸ್ಟೋವ್ ಮಧ್ಯಮ ಉರಿಯಲ್ಲಿಟ್ಟು, ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಕೊಬ್ಬರಿ ಅಥವಾ ಕಾಯಿತುರಿ ಹೊರತು ಪಡಿಸಿ, ಮಿಕ್ಕೆಲ್ಲ ಪದಾರ್ಥಗಳನ್ನು 5 ಸೆಕೆಂಡುಗಳ ಅಂತರದಲ್ಲಿ ಒಂದೊಂದಾಗಿ ಸೇರಿಸುತ್ತಾ ಹುರಿಯಿರಿ. ( ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತೆ, ಸಾಸಿವೆ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಇಂಗು ಮತ್ತು ಗಸಗಸೆ). ಬೇಳೆ ಗಳು ಕಂದು ಬಣ್ಣಕ್ಕೆ ಬರುವವರೆಗೆ ನಿರಂತರವಾಗಿ ಹುರಿಯುತ್ತಾ ಇರಿ. ಉರಿ ಜಾಸ್ತಿಯಾಯಿತೆನ್ನಿಸಿದರೆ ಕಡಿಮೆಮಾಡಿಕೊಳ್ಳಿ. ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿಕೊಳ್ಳಿ. 
  4. ಈಗ ಒಣಕೊಬ್ಬರಿ ಅಥವಾ ಕಾಯಿತುರಿ ಹಾಕಿ ಪುನಃ ಪುಡಿ ಮಾಡಿ. 
  5. ನಂತರ ಅದೇ ಬಾಣಲೆ ತೆಗೆದುಕೊಂಡು ಎಣ್ಣೆ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಅರಿಶಿನ ಪುಡಿ, ಕರಿಬೇವಿನ ಸೊಪ್ಪು ಸೇರಿಸಿ ಸ್ಟೋವ್ ಆಫ್ ಮಾಡಿ. ಕೂಡಲೇ ಪುಡಿ ಮಾಡಿದ ಮಸಾಲಾ, ಉಪ್ಪು , ಬೆಲ್ಲ , ಹುಣಸೆ ರಸ ಸೇರಿಸಿ ಕಲಸಿ. 
  6. ಈಗ ಬೇಯಿಸಿದ ಪದಾರ್ಥಗಳನ್ನು ಒಗ್ಗರಣೆ ಮತ್ತು ಮಸಾಲೆ ಇರುವ ಬಾಣಲೆಗೆ ಹಾಕಿ. ಚಿಕ್ಕ ಬಾಣಲೆ ಆದಲ್ಲಿ ಒಗ್ಗರಣೆ ಮತ್ತು ಮಸಾಲೆಯನ್ನು ನೀವು ಕುಕ್ಕರ್ ಗೆ ಸೇರಿಸಬಹುದು. 
  7. ಈಗ ಬೇಕಾದಷ್ಟು ನೀರು ಸೇರಿಸಿ (ಅಂದಾಜು 4 ಕಪ್ ನಷ್ಟು), ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. 
  8. ಇದನ್ನು ಬಿಸಿ ಬಿಸಿಯಾಗಿ ತಿನ್ನಲು ರುಚಿ, ಆದ್ದರಿಂದಲೇ ಹೆಸರು "ಬಿಸಿ-ಬೇಳೆ ಬಾತ್" ಎಂದು ಇರಬಹುದು. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಬಡಿಸಿ. ಹಾಗೇ ಸಹ ತಿನ್ನಬಹುದು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

1 ಕಾಮೆಂಟ್‌:

Related Posts Plugin for WordPress, Blogger...