ಮದ್ದೂರ್ ವಡೆ ಕರ್ನಾಟಕದ ಜನಪ್ರಿಯ ಖಾದ್ಯವಾಗಿದೆ. ಮದ್ದೂರ್ ಮಂಡ್ಯದ ಬಳಿ ಇರುವ ಸಣ್ಣ ಪಟ್ಟಣವಾಗಿದ್ದು, ಮೈಸೂರು - ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾಣ ಸಿಗುತ್ತದೆ. ಈ ಖಾದ್ಯ ಮದ್ದೂರಿನಲ್ಲಿ ಹುಟ್ಟಿರುವ ಕಾರಣ ಇದನ್ನು ಮದ್ದೂರ್ ವಡೆ ಎಂದು ಕರೆಯಲಾಗುತ್ತದೆ. ಬಹಳ ರುಚಿಕರವಾಗಿರುವ ಈ ಅಡುಗೆಯನ್ನು ನೀವು ಒಮ್ಮೆ ಮಾಡಿದಲ್ಲಿ ಪುನಃ ಮಾಡಲು ಇಚ್ಚಿಸುತ್ತೀರಿ.
ನೀವು ಬೆಂಗಳೂರು ಮತ್ತು ಮೈಸೂರು ನಡುವೆ ಟ್ರೈನ್ ಅಥವಾ ಬಸ್ ನಲ್ಲಿ ಪ್ರಯಾಣಿಸಿದರೆ, ಮದ್ದೂರು ಬಂದಾಗ ಅಲ್ಲಿ ಬಕೆಟ್ ಗಳಲ್ಲಿ ಮದ್ದೂರ್ ವಡೆಯನ್ನು ಮಾರುತ್ತಾ ಬರುವವರು ಕಾಣಸಿಗುತ್ತಾರೆ. ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಈ ವಡೆಗಳಿಗೋಸ್ಕರ ಕಾಯುತ್ತಾರೆ. ನಾನು ಮೊಟ್ಟ ಮೊದಲ ಸಲ ಈ ವಡೆಯನ್ನು ಸವಿದಿದ್ದು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗಲೇ.
ಮದ್ದೂರು ವಡೆ ಹೊರಗಿನಿಂದ ಗಟ್ಟಿಯಾಗಿ ಕಾಣಿಸಿದರೂ, ಒಳಗಿನಿಂದ ಮೃದುವಾಗಿರುತ್ತದೆ. ನೀರುಳ್ಳಿಯ ಸ್ವಾದ ವಡೆಯ ರುಚಿಯನ್ನು ಹೆಚ್ಚಿಸುತ್ತದೆ. ಈ ವಡೆಯನ್ನು ಮೈದಾ ಹಿಟ್ಟು, ಅಕ್ಕಿ ಹಿಟ್ಟು, ರವೆ ಮತ್ತು ಈರುಳ್ಳಿಯನ್ನು ಮುಖ್ಯ ಪದಾರ್ಥಗಳಾಗಿ ಉಪಯೋಗಿಸಿ ಮಾಡುತ್ತಾರೆ.
ಮದ್ದೂರ್ ವಡೆ ವೀಡಿಯೊ
ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 1 ಕಪ್ ಮೈದಾ
- 1/2 ಕಪ್ ಅಕ್ಕಿ ಹಿಟ್ಟು
- 1/2 ಕಪ್ ಚಿರೋಟಿ ರವೆ / ಸಣ್ಣ ರವೆ
- 1 ಮಧ್ಯಮ ಗಾತ್ರದ ಈರುಳ್ಳಿ
- 1 - 2 ಹಸಿ ಮೆಣಸಿನ ಕಾಯಿ
- 1/4 ಟೀಸ್ಪೂನ್ ಹೆಚ್ಚಿದ ಶುಂಠಿ
- 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವು
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಚಿಟಿಕೆ ಇಂಗು
- 2 ಟೀಸ್ಪೂನ್ ತುಪ್ಪ / 2 ಟೇಬಲ್ ಸ್ಪೂನ್ ಬಿಸಿ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಮದ್ದೂರ್ ವಡೆ ಮಾಡುವ ವಿಧಾನ:
- ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ, ಅಕ್ಕಿ ಹಿಟ್ಟು ಮತ್ತು ರವೆಯನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು ಮತ್ತು ತುಪ್ಪ / ಬಿಸಿ ಎಣ್ಣೆ ಹಾಕಿ ಕಲಸಿ. ನಂತರ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಹಸಿಮೆಣಸು ಮತ್ತು ಇಂಗು ಹಾಕಿ.
- ನೀರು ಹಾಕದೆ ಚೆನ್ನಾಗಿ ಕಲಸಿ. 10 ನಿಮಿಷ ಹಾಗೆ ಬಿಡಿ. ನಂತರ ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ಗಟ್ಟಿಯಾದ ಹಿಟ್ಟು ಕಲಸಿ.
- ಒಂದು ದಪ್ಪ ಪ್ಲಾಸ್ಟಿಕ್ ಹಾಳೆ ತೆಗೆದು ಕೊಂಡು, ಎಣ್ಣೆ ಹಚ್ಚಿ. ನಿಂಬೆ ಹಣ್ಣಿನ ಗಾತ್ರದ ಹಿಟ್ಟನ್ನು ಇಟ್ಟು, ಕೈಯಲ್ಲಿ ತಟ್ಟಿ, ವೃತ್ತಾಕಾರ ಮಾಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಇಟ್ಟು, ಎಣ್ಣೆ ಕಾದ ಮೇಲೆ, ಜಾಗ್ರತೆಯಿಂದ ತಟ್ಟಿದ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. ಕಡಿಮೆ ಉರಿಯಲ್ಲಿ ಹೊಂಬಣ್ಣ ಬರುವ ವರೆಗೆ ಕಾಯಿಸಿರಿ. ತೆಂಗಿನಕಾಯಿ ಚಟ್ನಿ ಮತ್ತು ಟೀ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ