ತುಂಬಿದ ಮೆಣಸಿನಕಾಯಿ ಬಜ್ಜಿ ಅಥವಾ ಬೋಂಡಾ
ತುಂಬಿದ ಮೆಣಸಿನಕಾಯಿ ಬಜ್ಜಿ ಅಥವಾ ಮೆಣಸಿನಕಾಯಿ ಬೋಂಡಾ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ತುಂಬಿದ ಮೆಣಸಿನಕಾಯಿ ಬಜ್ಜಿ ಸಾಧಾರಣ ಬಜ್ಜಿಗಿಂತ ವಿಭಿನ್ನವಾಗಿದ್ದು, ಬಜ್ಜಿ ಕಾಯಿಸುವ ಮೊದಲು ಮತ್ತು ಆಮೇಲೆ ಮಸಾಲೆಯನ್ನು ತುಂಬಲಾಗುತ್ತದೆ. ಮೊದಲಿಗೆ ಜೀರಿಗೆ ಮತ್ತು ಉಪ್ಪು ಹಾಗೂ ಕಾಯಿಸಿದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ತುಂಬಿಸಲಾಗುತ್ತದೆ.
ಈ ಬಜ್ಜಿ ಹೊರಗಿನಿಂದ ಗರಿಗರಿ ಇದ್ದು ಒಳಗೆ ಮೃದುವಾಗಿರುತ್ತದೆ. ಹಾಗೂ ದಪ್ಪನಾದ ಹಿಟ್ಟು ಒಳಗೆ ಮತ್ತು ಹೊರಗೆ ಅಂಟಿಕೊಂಡಿರುತ್ತದೆ. ಈ ರುಚಿಕರವಾದ ಬಜ್ಜಿಯನ್ನು ಮಾಡಿನೋಡಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 8 ಬಜ್ಜಿ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 8 ಬಜ್ಜಿ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 3 ಕಪ್ ಕಡ್ಲೆಹಿಟ್ಟು
- 3 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
- 8 ಬಜ್ಜಿ ಮೆಣಸಿನಕಾಯಿ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 2 ಟೀಸ್ಪೂನ್ ಜಜ್ಜಿದ ಜೀರಿಗೆ ಅಥವಾ ಜೀರಿಗೆ ಪುಡಿ
- 1/4 ಟೀಸ್ಪೂನ್ ಇಂಗು
- ಚಿಟಿಕೆ ಅಡುಗೆ ಸೋಡಾ
- ಎಣ್ಣೆ ಬಜ್ಜಿ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ತುಂಬಲು ಬೇಕಾದ ಪದಾರ್ಥಗಳು:
- 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ (ನೀವು ತುರಿದ ಕ್ಯಾರೆಟ್ ಮತ್ತು ಮೊಳಕೆ ಕಾಳನ್ನು ಸೇರಿಸಬಹುದು)
- 2 ಟೀ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ / 1/2 ಚಮಚ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ತುಂಬಿದ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ:
- ಮೆಣಸಿನ ಕಾಯಿಗಳನ್ನು ತೊಳೆದು, ಉದ್ದವಾಗಿ ಸೀಳಿ ಬೀಜ ತೆಗೆಯಿರಿ.
- ಒಂದು ಬಟ್ಟಲಿನಲ್ಲಿ 2 ಚಮಚ ಜಜ್ಜಿದ ಅಥವಾ ಪುಡಿಮಾಡಿದ ಜೀರಿಗೆ ಮತ್ತು 1 ಚಮಚ ಉಪ್ಪು ತೆಗೆದುಕೊಂಡು ಕಲಸಿ.
- ಈಗ ಸುಮಾರು 1/4 ಚಮಚದಷ್ಟು ಜೀರಿಗೆ ಮತ್ತು ಉಪ್ಪಿನ ಮಿಶ್ರಣವನ್ನು ಸೀಳಿದ ಮೆಣಸಿನಕಾಯಿಯೊಳಗೆ ಹಚ್ಚಿ.
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಅಚ್ಚಖಾರದ ಪುಡಿ, ಇಂಗು, ಸೋಡಾ ಮತ್ತು ಉಪ್ಪನ್ನು ಹಾಕಿ. ನೀರು ಹಾಕಿ ದಪ್ಪಗಿನ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಇಡ್ಲಿ ಹಿಟ್ಟಿನಷ್ಟು ದಪ್ಪವಾಗಿರಲಿ.
- ತುಂಬಿದ ಮೆಣಸಿನಕಾಯಿ ಬಜ್ಜಿಯಲ್ಲಿ ದಪ್ಪನಾದ ಹಿಟ್ಟು ಅಂಟಿಕೊಂಡಿರಬೇಕು. ಹಾಗಾಗಿ ಬಜ್ಜಿ ಕಾಯಿಸುವಾಗ ಹಿಟ್ಟು ತೆಳ್ಳಗೆ ಎನಿಸಿದಲ್ಲಿ ಹಿಟ್ಟನ್ನು ಸರಿಮಾಡಿಕೊಳ್ಳಿ.
- ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಮೆಣಸಿನಕಾಯಿಗಳನ್ನು ಒಂದೊಂದಾಗಿ ಅದ್ದಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ. ಮೆಣಸಿನಕಾಯಿ ಒಳಗೂ ಸಹ ಹಿಟ್ಟು ತುಂಬಿರಬೇಕು.
- ಈಗ ಕಾಯಿಸಿದ ಬಜ್ಜಿಗಳನ್ನು ಪುನಃ ಸೀಳಿ, ಅದರೊಳಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ಚಾಟ್ ಮಸಾಲದ ಮಿಶ್ರಣವನ್ನು ತುಂಬಿಸಿ. ಹಸಿರು ಮೆಣಸಿನಕಾಯಿಯ ಬದಲಾಗಿ ಅಚ್ಚಖಾರದ ಪುಡಿಯನ್ನೂ ಉಪಯೋಗಿಸಬಹುದು. ಚಾಟ್ ಮಸಾಲಾ ಬೇಕಾದಲ್ಲಿ ಮಾತ್ರ ಸೇರಿಸಿ. 2 ಭಾಗಗಳಾಗಿ ಕತ್ತರಿಸಿ ಬಿಸಿ ಚಹಾದೊಂದಿಗೆ ಬಡಿಸಿ.
Super
ಪ್ರತ್ಯುತ್ತರಅಳಿಸಿ