ಉಡುಪಿ ಟೊಮ್ಯಾಟೋ ಸಾರು ಮಾಡುವ ವಿಧಾನ
ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರಿನ ಪಾಕ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಬಡಿಸುವ ಸಾರಿನ ಪಾಕವಿಧಾನ ಇದಾಗಿರುವುದರಿಂದ ಇದನ್ನು ಉಡುಪಿ ಸಮಾರಾಧನೆ ಸಾರು ಎಂದೂ ಕರೆಯಲಾಗುತ್ತದೆ. ಇದೊಂದು ಈರುಳ್ಳಿ-ಬೆಳ್ಳುಳ್ಳಿ ರಹಿತ ಸಾತ್ವಿಕ ಸಾರಾಗಿದ್ದು, ಬಹಳ ರುಚಿಕರವಾಗಿರುತ್ತದೆ.
ನಿನ್ನೆ ನಾನು ನಿಮಗೆ ಉಡುಪಿ ಸಾರಿನ ಪುಡಿ ಮಾಡುವುದು ಹೇಗೆಂದು ತಿಳಿಸಿದ್ದೆ. ನೀವೀಗಾಗಲೇ ಸಾರಿನ ಪುಡಿ ಮಾಡಿರಬಹುದು. ಇಲ್ಲವಾದಲ್ಲಿ ಸಾರಿನ ಪುಡಿ ಮಾಡಿ ಕೊಳ್ಳಿ. ಏಕೆಂದರೆ ಇದೊಂದು ಬಹಳ ರುಚಿಕರವಾದ ಟೊಮ್ಯಾಟೋ ಸಾರು. ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಬಾಯಿ ಚಪ್ಪರಿಸಿಕೊಂಡು ಸವಿಯುವಂತಹ ಈ ರುಚಿಕರ ಸಾರನ್ನು ಮಾಡಿ ನೋಡಿ. ಹೇಗಿತ್ತೆಂದು ತಿಳಿಸಿ.
ಉಡುಪಿ ಟೊಮ್ಯಾಟೋ ಸಾರು ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120ಎಂ ಎಲ್)
4 ಟೇಬಲ್ ಚಮಚ ತೊಗರಿಬೇಳೆ (ಅಥವಾ ಒಂದು ಕೈ)
2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ
1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 - 2 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
1 ಹಸಿರು ಮೆಣಸಿನಕಾಯಿ
2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿ
ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1/2 ಚಮಚ ಸಾಸಿವೆ
1/2 ಟೀಸ್ಪೂನ್ ಜೀರಿಗೆ
ಇಂಗು ಒಂದು ದೊಡ್ಡ ಚಿಟಿಕೆ
5 - 6 ಕರಿಬೇವಿನ ಎಲೆ
2 ಟೀಸ್ಪೂನ್ ತುಪ್ಪ / ಅಡುಗೆ ಎಣ್ಣೆ
ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರು ತಯಾರಿಸುವ ವಿಧಾನ:
- ಕುಕ್ಕರ್ ನಲ್ಲಿ ತೊಗರಿಬೇಳೆ ತೆಗೆದುಕೊಂಡು ತೊಳೆಯಿರಿ. 1 ಕಪ್ ನೀರು, ಅರಿಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ.
- ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆಯಿರಿ. ತೊಗರಿಬೇಳೆ ಅರ್ಧ ಬೆಂದಿರುವುದನ್ನು ನೀವು ನೋಡಬಹುದು.
- ಈಗ ಬೇಳೆಯೊಂದಿಗೆ ಕತ್ತರಿಸಿದ ಟೊಮ್ಯಾಟೊ, ಉಪ್ಪು ಮತ್ತು ಸೀಳಿದ ಹಸಿರುಮೆಣಸಿನಕಾಯಿ ಹಾಕಿ.
- ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಮತ್ತು ಪುನಃ 2 ವಿಷಲ್ ಮಾಡಿ.
- ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳ ತೆರೆಯಿರಿ. ಮತ್ತು ಈಗ ನೀವು ತೊಗರಿಬೇಳೆ ಮತ್ತು ಟೊಮ್ಯಾಟೊ ಎರಡೂ ಚೆನ್ನಾಗಿ ಬೆಂದಿರುವುದನ್ನು ಗಮನಿಸಿ.
- ಈಗ ಅದೇ ಕುಕ್ಕರ್ ಗೆ ಸುಮಾರು 4 ಕಪ್ ನೀರು (500 ಎಂ ಎಲ್) ಮತ್ತು 1 ಟೀ ಚಮಚ ಉಪ್ಪನ್ನು (ಅಥವಾ ನಿಮ್ಮ ರುಚಿ ಪ್ರಕಾರ) ಕುಕ್ಕರ್ ಗೆ ಹಾಕಿ ಸ್ಟೋವ್ ಆನ್ ಮಾಡಿ.
- ನಂತರ 1 - 2 ಚಮಚ ಪುಡಿ ಬೆಲ್ಲವನ್ನು ಸಾರಿರುವ ಕುಕ್ಕರ್ ಗೆ ಹಾಕಿ.
- ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣನ್ನು ನೀರಲ್ಲಿ ನೆನೆಸಿ, ಕಿವುಚಿ, ರಸ ತೆಗೆದು ಸಾರಿರುವ ಕುಕ್ಕರ್ ಗೆ ಸೇರಿಸಿ.
- 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸಾರಿರುವ ಕುಕ್ಕರ್‌ಗೆ ಸೇರಿಸಿ.
- ಈಗ ಸುಮಾರು 1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿಯನ್ನು ಸೇರಿಸಿ. (ಸಾರಿನ ಪುಡಿ ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ಕಿಸಿ)
- ಸಾರು ಚೆನ್ನಾಗಿ ಗಳ ಗಳನೇ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೌವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಹುಳಿ, ಸಿಹಿ ಮತ್ತು ಖಾರವನ್ನು ಈ ಹಂತದಲ್ಲಿ ರುಚಿನೋಡಿ ಸರಿಮಾಡಿಕೊಳ್ಳಬಹುದು.
- ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಮಾಡಿ.
- ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ. ಸಾತ್ವಿಕ ಉಡುಪಿ ರಸಂ ಅಥವಾ ಉಡುಪಿ ಟೊಮ್ಯಾಟೋ ಸಾರು ಸವಿಯಲು ಸಿದ್ಧ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ