ಸೋಮವಾರ, ಮಾರ್ಚ್ 14, 2016

Chitranna recipe in Kannada | ಚಿತ್ರಾನ್ನ ಮಾಡುವ ವಿಧಾನ | ಮಲೆನಾಡಿನ ಕಾಯಿ-ಸಾಸುವೆ ಚಿತ್ರಾನ್ನ


ಮಲೆನಾಡಿನ ಕಾಯಿ-ಸಾಸುವೆ ಚಿತ್ರಾನ್ನ 

ಮಲೆನಾಡು ಶೈಲಿಯ ಕಾಯಿ-ಸಾಸುವೆ ಚಿತ್ರಾನ್ನ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ನಿಂಬೆಹಣ್ಣು ಬಳಸಿಕೊಂಡು ಎರಡು ರೀತಿಯ ಚಿತ್ರಾನ್ನ ತಯಾರಿಸಲಾಗುತ್ತದೆ. ಒಂದು ಈರುಳ್ಳಿ ಹಾಕಿ ಮಾಡುವ ಚಿತ್ರಾನ್ನ ಇನ್ನೊಂದು ಈರುಳ್ಳಿ ಹಾಕದೇ ಮಾಡುವ ಚಿತ್ರಾನ್ನ. ಈಗ ಇಲ್ಲಿ ವಿವರಿಸುವ ಚಿತ್ರಾನ್ನ ಈರುಳ್ಳಿ ಇಲ್ಲದೆ ಮಾಡುವುದಾಗಿದೆ. ಈ ರೀತಿಯ ಚಿತ್ರಾನ್ನ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ.
ನನ್ನ ಪ್ರಕಾರ ಈ ರೀತಿಯ ಚಿತ್ರಾನ್ನ ಹೆಚ್ಚು ರುಚಿಕರವಾಗಿರುತ್ತದೆ. ಇದನ್ನು ನಾನು ಕನಿಷ್ಠ ವಾರಕ್ಕೊಮ್ಮೆಯಾದರೂ ತಯಾರಿಸುತ್ತೇನೆ. ಕಡಲೆಕಾಯಿ ಮತ್ತು ನಿಂಬೆಹಣ್ಣು ಉಪಯೋಗಿಸಿ ಮಾಡುವ ಈ ಚಿತ್ರಾನ್ನ ಬಹಳ ಆರೋಗ್ಯಕರ ಎನ್ನಲಾಗಿದೆ. ಯಾವುದಕ್ಕೂ ನೀವು ಒಮ್ಮೆ ಮಾಡಿ ನೋಡಿ.

ಚಿತ್ರಾನ್ನ ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂ ಎಲ್)
  1. 2 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಕಪ್ ತೆಂಗಿನ ತುರಿ
  3. 2 - 4 ಹಸಿರು ಮೆಣಸಿನಕಾಯಿಗಳು
  4. 1 ಟೀಸ್ಪೂನ್ ಸಾಸಿವೆ
  5. 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  6. 2 ಟೀಸ್ಪೂನ್ ಉದ್ದಿನ ಬೇಳೆ
  7. 2 ಟೀಸ್ಪೂನ್ ಕಡ್ಲೆಬೇಳೆ
  8. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  9. 5 - 6 ಕರಿಬೇವಿನ ಎಲೆ
  10. 2 ಟೀ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  11. 1/4 ಟೀಸ್ಪೂನ್ ಅರಿಶಿನ ಪುಡಿ
  12. 1 ದೊಡ್ಡ ನಿಂಬೆ ಹಣ್ಣು
  13. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ 


ಚಿತ್ರಾನ್ನ ಮಾಡುವ ವಿಧಾನ: 
  1. ಒಂದು ಕುಕ್ಕರ್ ನಲ್ಲಿ  2 ಕಪ್ ಅಕ್ಕಿ ತೆಗೆದುಕೊಂಡು ತೊಳೆಯಿರಿ. ಅನ್ನ ಮಾಡಲು ಬೇಕಾದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ದಯವಿಟ್ಟು ಗಮನಿಸಿ ಈ ರೀತಿಯ ಚಿತ್ರಾನ್ನ ಮಾಡಲು ಅನ್ನ ಸ್ವಲ್ಪ ಮೆತ್ತಗೆ ಬೆಂದಿರಬೇಕು. ಬೇಕಾದಲ್ಲಿ ಅಕ್ಕಿಯೊಂದಿಗೆ ನೆನೆಸಿದ ಬಟಾಣಿ ಕಾಳನ್ನು ಸೇರಿಸಿ ಬೇಯಿಸಿಕೊಳ್ಳಿ.
  2. ಅನ್ನ ಬೇಯುವ ಸಮಯದಲ್ಲಿ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಗ್ಗರಣೆ ಪ್ರಾರಂಭಿಸುವ ಮೊದಲು, ಒಂದು ಮಿಕ್ಸಿ ಜಾರಿನಲ್ಲಿ 1 ಕಪ್ ತೆಂಗಿನ ತುರಿ, 2 ಹಸಿರು ಮೆಣಸಿನಕಾಯಿ ಮತ್ತು 1/2 ಚಮಚ ಸಾಸಿವೆ ಹಾಕಿ.
  3. ಅದನ್ನು ನೀರು ಹಾಕದೇ ಪುಡಿ ಮಾಡಿ ಪಕ್ಕಕ್ಕಿಡಿ. ಇದನ್ನು ಒಗ್ಗರಣೆ ಮಾಡುವಾಗ ಮುಂದೆ ಉಪಯೋಗಿಸಲಾಗುತ್ತದೆ.
  4. ಈಗ ಒಂದು ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  5. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  6. ಸಾಸಿವೆ ಸಿಡಿದ ಕೂಡಲೇ ಅರಿಶಿನ ಪುಡಿ ಮತ್ತು ಕರಿಬೇವು ಸೇರಿಸಿ. ಈ ಹಂತದಲ್ಲಿ ಸ್ಟೋವ್ ಆಫ್ ಮಾಡಿ.
  7. ನಂತರ ಪುಡಿಮಾಡಿದ ತೆಂಗಿನ ತುರಿ, ಸಾಸಿವೆ ಮತ್ತು ಹಸಿಮೆಣಸಿನ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಕಲಸಿ.
  8. ಕೂಡಲೇ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ.
  9. ಕೊನೆಯಲ್ಲಿ ದೊಡ್ಡ ರಸಭರಿತವಾದ ನಿಂಬೆಹಣ್ಣಿನಿಂದ ತೆಗೆದ  ರಸವನ್ನು ಸೇರಿಸಿ. ಗಮನಿಸಿ ಈ ರೀತಿಯ ಚಿತ್ರಾನ್ನವು ಸ್ವಲ್ಪ ಹುಳಿ-ಹುಳಿಯಾಗಿರಬೇಕು. 
  10. ನಂತರ ಬೇಯಿಸಿದ ಅನ್ನ ಸೇರಿಸಿ.
  11. ಎಚ್ಚರಿಕೆಯಿಂದ ಒಂದು ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ.
  12. ಈರುಳ್ಳಿ ಇಲ್ಲದೆ ಮಾಡಿದ ರುಚಿಕರ ಕಾಯಿ ಸಾಸುವೆ ನಿಂಬೆಹಣ್ಣಿನ ಚಿತ್ರಾನ್ನ ಸಿದ್ಧವಾಗಿದೆ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.


To read more and to see step by step pictures click here (ಈ ಅಡುಗೆ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...