Palak soup recipe in Kannada | ಪಾಲಕ್ ಸೂಪ್ ಮಾಡುವ ವಿಧಾನ
ಪಾಲಕ್ ಸೂಪ್ ಒಂದು ಆರೋಗ್ಯಕರ ಅಡುಗೆಯಾಗಿದ್ದು ಬಹಳ ರುಚಿಕರವಾಗಿರುತ್ತದೆ. ಈ ಪಾಲಕ್ ಸೂಪನ್ನು ಪಾಲಕ್ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಟೊಮಾಟೊ ಮತ್ತು ಹಾಲನ್ನು ಉಪಯೋಗಿಸಿ ಮಾಡಲಾಗುತ್ತದೆ. ಇದು ಮಕ್ಕಳಿಗೆ ಬಹಳ ಪ್ರಿಯವಾದ ಅಡುಗೆಯಾಗಿದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣಾಂಶಗಳು ಹೇರಳವಾಗಿದೆ. ಅಲ್ಲದೆ ಅನೇಕ ಔಷಧೀಯ ಗುಣಗಳನ್ನೂ ಹೊಂದಿದೆ. ಹಾಗಾಗಿ ಪಾಲಕ್ ಸೊಪ್ಪಿನ ನಿಯಮಿತ ಸೇವನೆ ಮಾಡಲು ಮರೆಯದಿರಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 250 ಎಂಎಲ್ )
- 1/2 ಕಟ್ಟು ಪಾಲಕ್ ಸೊಪ್ಪು
- 2 ಎಸಳು ಬೆಳ್ಳುಳ್ಳಿ
- 1 ಈರುಳ್ಳಿ
- 1 ದೊಡ್ಡ ಟೊಮೆಟೊ
- 2 ಟೀಸ್ಪೂನ್ ಬೆಣ್ಣೆ
- 1/4 ಟೀಸ್ಪೂನ್ ಕರಿಮೆಣಸು (ಅಥವಾ ನಿಮ್ಮ ರುಚಿ ಪ್ರಕಾರ)
- 1/4 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
- 1 ಕಪ್ ನೀರು
- 1/2 ಕಪ್ ಹಾಲು
ಪಾಲಕ್ ಸೂಪ್ ಮಾಡುವ ವಿಧಾನ:
- ಪಾಲಕ್ ಸೊಪ್ಪನ್ನು ತೊಳೆದು ಕತ್ತರಿಸಿ. ಅಲ್ಲದೆ ಬೆಳ್ಳುಳ್ಳಿ, ಈರುಳ್ಳಿ ಮತ್ತು ಟೊಮೆಟೊಗಳನ್ನು ಸಹ ಕತ್ತರಿಸಿಟ್ಟುಕೊಳ್ಳಿ. ಮೊದಲಿಗೆ ಪಾಲಕ್ ಸೂಪ್ ಮಾಡಲು ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ.
- ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಸುಡದಂತೆ ನೋಡಿಕೊಳ್ಳಿ.
- ನಂತರ ಕತ್ತರಿಸಿದ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿಯಿರಿ.
- ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಪುನಃ ಹುರಿಯಿರಿ.
- ಟೊಮೆಟೊ ಮೆತ್ತಗಾದ ಕೂಡಲೇ ಕತ್ತರಿಸಿದ ಪಾಲಕ್ ಸೊಪ್ಪನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ ಸ್ಟೌವ್ ಆಫ್ ಮಾಡಿ. ಹುರಿದ ಪದಾರ್ಥಗಳು ತಣ್ಣಗಾಗುವವರೆಗೆ ಕಾಯಿರಿ.
- ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 1 ಕಪ್ ನೀರು ಸೇರಿಸಿ ಕುದಿಯಲು ಇಡಿ. ನೀರಿನ ಪ್ರಮಾಣವನ್ನು ನಿಮ್ಮ ಇಷ್ಟದ ಪ್ರಕಾರ ಬದಲಾಯಿಸಬಹುದು. ನಿಮಗೆ ಬೇಕಾದಷ್ಟು ದಪ್ಪ ಅಥವಾ ತೆಳುವಾಗುವಷ್ಟು ನೀರು ಸೇರಿಸಿ.
- ಸೂಪ್ ಕುದಿಯಲು ಪ್ರಾರಂಭವಾದ ಕೂಡಲೇ 1/2 ಕಪ್ ಹಾಲು ಸೇರಿಸಿ ಪುನಃ ಒಂದು ಕುದಿ ಬರಿಸಿ.
- ಕುದಿಯಲು ಪ್ರಾರಂಭವಾದ ಕೂಡಲೇ ಸ್ಟೋವ್ ಆಫ್ ಮಾಡಿ. ಗಮನಿಸಿ ಹಾಲು ಹಾಕಿದ ಮೇಲೆ ಹೆಚ್ಚು ಸಮಯ ಕುದಿಸ ಬೇಡಿ. ರುಚಿಕರ ಪಾಲಕ್ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಸವಿದು, ಆನಂದಿಸಿ.
channagide naanu bellli haakade maaduthene.
ಪ್ರತ್ಯುತ್ತರಅಳಿಸಿಧನ್ಯವಾದಗಳು ಗಿರಿಜಾರವರೆ, ನಿಮ್ಮ ಕಾಮೆಂಟ್ ನೋಡಿ ಸಂತೋಷವಾಯಿತು.. ನಾನು ಇನ್ನೊಮ್ಮೆ ಮಾಡುವಾಗ ಬೆಳ್ಳುಳ್ಳಿ ಹಾಕದೇ ಮಡಿ ನೋಡುತ್ತೇನೆ.
ಅಳಿಸಿಸೂಪರ್
ಪ್ರತ್ಯುತ್ತರಅಳಿಸಿ