ಬೆಂಡೆಕಾಯಿ ಬೋಳು ಕೊದ್ಲು । ಬೆಂಡೆಕಾಯಿ ಬೋಳು ಹುಳಿ
ಬೆಂಡೆಕಾಯಿ ಬೋಳು ಕೊದ್ಲು ಅಥವಾ ಬೆಂಡೆಕಾಯಿ ಬೋಳು ಹುಳಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ಬೆಂಡೆಕಾಯಿ ಮತ್ತು ತೊಗರಿಬೇಳೆ ಹಾಕಿ ಮಾಡಲಾಗುತ್ತದೆ. ತುಳು ಭಾಷೆಯಲ್ಲಿ ಸಾಂಬಾರ್ ನ್ನು ಕೊದ್ಲು ಅಥವಾ ಕೊದ್ದೆಲ್ ಎಂದು ಕರೆಯುತ್ತಾರೆ. ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿರುವ ಈ ಸಾಂಬಾರ್ ನ್ನು ತೆಂಗಿನಕಾಯಿ ಇಲ್ಲದೆ ಮತ್ತು ಯಾವುದೇ ಮಸಾಲೆ ಇಲ್ಲದೆ ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಎಂದು ಕರೆಯುತ್ತಾರೆ.
ಈ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಅಥವಾ ತೆಂಗಿನಕಾಯಿ ಹಾಕದ ಸಾಂಬಾರ್ ನ್ನು ಬದನೇಕಾಯಿ, ತೊಂಡೆಕಾಯಿ, ಬೀನ್ಸ್ ಅಥವಾ ಸೌತೆಕಾಯಿ ಉಪಯೋಗಿಸಿ ಸಹ ಮಾಡಬಹುದು.
ಈ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಅಥವಾ ತೆಂಗಿನಕಾಯಿ ಹಾಕದ ಸಾಂಬಾರ್ ನ್ನು ಬದನೇಕಾಯಿ, ತೊಂಡೆಕಾಯಿ, ಬೀನ್ಸ್ ಅಥವಾ ಸೌತೆಕಾಯಿ ಉಪಯೋಗಿಸಿ ಸಹ ಮಾಡಬಹುದು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 120 ಎಂಎಲ್ )
- 1/4 ಕೆಜಿ ಬೆಂಡೆಕಾಯಿ
- 1/2 ಕಪ್ ತೊಗರಿಬೇಳೆ
- 1 - 2 ಹಸಿಮೆಣಸು
- 1 ಟೀಸ್ಪೂನ್ ಬೆಲ್ಲ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು :
- 1 ಕೆಂಪು ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
- 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
- 1/4 ಟೀಸ್ಪೂನ್ ಇಂಗು
ಬೆಂಡೆಕಾಯಿ ಬೋಳು ಕೊದ್ಲು ಮಾಡುವ ವಿಧಾನ:
- ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ.
- ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ. ಒತ್ತಡ ಇಳಿದ ನಂತರ ಬೇಳೆ ಅರ್ಧ ಬೆನ್ದಿರುವುದನ್ನು ನೀವು ಗಮನಿಸಬಹುದು.
- ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ, ೨ ಸೆ ಮೀ ಉದ್ದದ ಹೋಳುಗಳಾಗಿ ಕತ್ತರಿಸಿ.
- ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬೆಂಡೆಕಾಯಿ, ಸ್ವಲ್ಪ ಉಪ್ಪು, ಬೆಲ್ಲ, ಹುಣಿಸೆ ರಸ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. ೨ ಕಪ್ ನೀರು ಸೇರಿಸಿ ಒಂದು ವಿಷಲ್ ಮಾಡಿ.
- ಒತ್ತಡ ಇಳಿದ ನಂತರ ಮುಚ್ಚಳ ತೆರೆದು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇನ್ನೆರಡು ಕಪ್ ನೀರು ಹಾಕಿ. ನೀರಿನ ಪ್ರಮಾಣವನ್ನು ನಿಮ್ಮಿಷ್ಟದ ಪ್ರಕಾರ ಬದಲಾಯಿಸಬಹುದು.
- ಒಂದು ಕುದಿ ಬರಿಸಿ ಸ್ಟವ್ ಆಫ್ ಮಾಡಿ.
- ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ , ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸಾಂಬಾರ್ಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ