ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ
ಬಾಳೆಹಣ್ಣಿನ ಹಲ್ವಾವನ್ನು ಬಾಳೆಹಣ್ಣು, ಸಕ್ಕರೆ ಮತ್ತು ತುಪ್ಪ ಉಪಯೋಗಿಸಿ ಮಾಡಲಾಗುತ್ತದೆ. ಇದೊಂದು ಸುಲಭವಾದ ಸಿಹಿತಿನಿಸಾಗಿದ್ದು, ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ ಮಾಡಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. ಸಮಯಕ್ಕಿಂತ ತುಂಬ ಹೊತ್ತು ಮಗುಚ ಬೇಕಾದ್ದರಿಂದ ಸ್ವಲ್ಪ ಶ್ರಮವೆನಿಸುತ್ತದೆ.
ಈ ಹಲ್ವಾವನ್ನು ಸಾಧಾರಣವಾಗಿ ನೇಂದ್ರ ಬಾಳೆಹಣ್ಣು ಉಪಯೋಗಿಸಿ ಮಾಡುತ್ತಾ ರಾದರೂ, ಪುಟ್ಟ ಬಾಳೆ ಅಥವಾ ಯಾಲಕ್ಕಿ ಬಾಳೆ ಹಣ್ಣನ್ನು ಉಪಯೋಗಿಸಿ ಮಾಡುವುದು ಸಹ ಚಾಲ್ತಿಯಲ್ಲಿದೆ. ನಾನು ಏಲಕ್ಕಿ ಬಾಳೆಹಣ್ಣು ಉಪಯೋಗಿಸಿ ಮಾಡಿದ್ದೇನೆ. ರುಚಿಯಲ್ಲಿ ಬಹಳ ವ್ಯತ್ಯಾಸವಿಲ್ಲದಿದ್ದರೂ, ಏಲಕ್ಕಿ ಬಾಳೆಹಣ್ಣಿನ ಹಲ್ವಾದ ಬಣ್ಣ ಸ್ವಲ್ಪ ಕಪ್ಪಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸುವ ಈ ಹಲ್ವಾವನ್ನು ನೀವೊಮ್ಮೆ ಮಾಡಿ ಆನಂದಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 8 - 10 ಹಲ್ವಾ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 8 - 10 ಹಲ್ವಾ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 10 - 12 ಚೆನ್ನಾಗಿ ಹಣ್ಣಾದ ಏಲಕ್ಕಿ ಬಾಳೆಹಣ್ಣು (ಅಥವಾ 3 ನೇಂದ್ರ ಬಾಳೆಹಣ್ಣು)
- 2 - 3 ಕಪ್ ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ)
- 1 ಕಪ್ ತುಪ್ಪ
- 2 ಟೇಬಲ್ ಸ್ಪೂನ್ ತುಂಡರಿಸಿದ ಗೋಡಂಬಿ
- ಒಂದು ಚಿಟಿಕೆ ಏಲಕ್ಕಿ ಪುಡಿ (ಬೇಕಾದಲ್ಲಿ)
ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ:
- ಮೊದಲಿಗೆ ತುಂಡರಿಸಿದ ಗೋಡಂಬಿಯನ್ನು ಹುರಿದು ಪಕ್ಕಕ್ಕಿಟ್ಟು ಕೊಳ್ಳಿ. ಹಾಗೇ ಒಂದು ಬಟ್ಟಲಿಗೆ ತುಪ್ಪ ಸವರಿಟ್ಟು ಕೊಳ್ಳಿ. ನಂತರ ಬಾಳೆ ಹಣ್ಣಿನ ಸಿಪ್ಪೆ ಸುಲಿದು ಕತ್ತರಿಸಿ.
- ಸಿಪ್ಪೆ ಸುಲಿದ ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ.
- ಒಂದು ಬಾಣಲೆಗೆ ಅರೆದ ಬಾಳೆಹಣ್ಣು ಮತ್ತು ಸಕ್ಕರೆ ಹಾಕಿ. ಮದ್ಯಮ ಉರಿಯಲ್ಲಿ ಮಗುಚಲು ಪ್ರಾರಂಭಿಸಿ.
- ಸ್ವಲ್ಪ ಸಮಯದ ನಂತರ ಸಕ್ಕರೆ ಕರಗಿ, ಸಕ್ಕರೆ ಮತ್ತು ಬಾಳೆಹಣ್ಣು ಚೆನ್ನಾಗಿ ಹೊಂದಿ ಕೊಂಡಿರುವುದನ್ನು ನೀವು ಕಾಣುವಿರಿ. ಆಗಾಗ್ಯೆ ಮಗುಚುತ್ತ ಇರಿ.
- ಕೆಲವೇ ನಿಮಿಷಗಳಲ್ಲಿ ಬಾಳೆಹಣ್ಣು ಮತ್ತು ಸಕ್ಕರೆ ಕುದಿಯಲು ಪ್ರಾರಂಭಿಸುತ್ತದೆ.
- ಈಗ ಸ್ವಲ್ಪ ತುಪ್ಪ ಹಾಕಿ (ಸುಮಾರು 1/3 ಕಪ್) ಮಗುಚಲು ಪ್ರಾರಂಭಿಸಿ.
- ಆಗೊಮ್ಮೆ ಈಗೊಮ್ಮೆ ಸ್ವಲ್ಪ ಸ್ವಲ್ಪ ತುಪ್ಪ ಹಾಕುತ್ತಾ ಮಗುಚುತ್ತ ಇರಿ. ಸುಮಾರು ೧೦ - ೧೫ ನಿಮಿಷಗಳ ನಂತರ ಬಾಳೆಹಣ್ಣು-ಸಕ್ಕರೆ ಮಿಶ್ರಣದ ಬಣ್ಣ ಬದಲಾಗುವುದನ್ನು ನೀವು ಕಾಣುವಿರಿ. ಹಲ್ವದ ಪ್ರಮಾಣದ ಮೇಲೆ ಸಮಯ ಹೆಚ್ಚು ಕಡಿಮೆ ಆಗ ಬಹುದು.
- ಬಣ್ಣ ಬದಲಾದ ಕೂಡಲೇ ಉಳಿದ ಎಲ್ಲ ತುಪ್ಪವನ್ನು ಹಾಕಿ. ಇಲ್ಲಿಂದ ನೀವು ನಿರಂತರವಾಗಿ ಮಗುಚಲು ಪ್ರಾರಂಭಿಸಬೇಕು. ನಿಮಗೆ ಚಮಚದಲ್ಲಿ ತಿನ್ನುವಂತೆ ಮೆತ್ತಗಿನ ಹಲ್ವಾ ಬೇಕಾದಲ್ಲಿ, ಸುಮಾರು ೫ ನಿಮಿಷಗಳ ಕಾಲ ಮಗುಚಿ ಸ್ಟವ್ ಆಫ್ ಮಾಡಿ. ಬಟ್ಟಲಿಗೆ ಹಾಕಿ ತುಂಡು ಮಾಡುವ ಹದ ಬೇಕಾದಲ್ಲಿ ಮಗುಚುವುದನ್ನು ಮುಂದುವರೆಸಿ.
- ಸುಮಾರು ೧೦ ನಿಮಿಷದ ನಂತರ ಹಲ್ವಾ ತುಪ್ಪ ಬಿಡುವುದನ್ನು ನೀವು ಗಮನಿಸುವಿರಿ. ಕೂಡಲೇ ಹುರಿದ ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಪುನಃ ೫ ನಿಮಿಷಗಳ ಕಾಲ ಮಗುಚಿ ಸ್ಟವ್ ಆಫ್ ಮಾಡಿ.
- ತುಪ್ಪ ಸವರಿದ ಬಟ್ಟಲಿಗೆ ಸುರಿದು ತಣ್ಣಗಾಗಲು ಬಿಡಿ. ತಣಿದ ನಂತರ ಒಂದು ಚಾಕುವಿನ ಸಹಾಯದಿಂದ ಕತ್ತರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ