ಬುಧವಾರ, ಮಾರ್ಚ್ 16, 2016

Mavina midi uppinakayi in kannada | Mavina kayi uppinakayi | ಮಾವಿನ ಮಿಡಿ ಉಪ್ಪಿನಕಾಯಿ


ಮಾವಿನ ಮಿಡಿ ಉಪ್ಪಿನಕಾಯಿ ಮಾಡುವ ವಿಧಾನ

ಮಾವಿನ ಮಿಡಿ ಉಪ್ಪಿನಕಾಯಿ ಪಾಕವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದೊಂದು ಕರ್ನಾಟಕದ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಆಗಿದೆ.  ಈ ಉಪ್ಪಿನಕಾಯಿಯಲ್ಲಿ ಮಾವಿನ ಮಿಡಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆ ಮೂರು ಮುಖ್ಯ ಪದಾರ್ಥಗಳಾಗಿವೆ. ಅರಿಶಿನ, ಕರಿಮೆಣಸು ಮತ್ತು ಇಂಗು ಇತರೆ ಪದಾರ್ಥಗಳಾಗಿದ್ದು ಬೇಕಾದಲ್ಲಿ ಮಾತ್ರ ಉಪಯೋಗಿಸಬಹುದು. 
ಈ ಉಪ್ಪಿನಕಾಯಿ ನೈಸರ್ಗಿಕವಾಗಿ ಕಾಡಿನಲ್ಲಿ ಬೆಳೆಯುವ ಕಾಟು ಮಾವಿನ ಮಿಡಿಯನ್ನು ಉಪಯೋಗಿಸಿ ಮಾಡಲಾಗುತ್ತದೆ. ಅದು ಹೆಚ್ಚು ಹುಳಿ ಮತ್ತು ಪರಿಮಳವನ್ನು ಹೊಂದಿರುತ್ತದೆ.  ಸಾಧಾರಣವಾಗಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಈ ಮಾವಿನ ಮಿಡಿ ದೊರಕುತ್ತದೆ.  ನಾನು ಈ ಉಪ್ಪಿನಕಾಯಿ ಕಲಿತಿದ್ದು ನನ್ನ ಅಮ್ಮನಿಂದ. ನನ್ನತ್ತೆಯೂ ಕೂಡ ಇದೇ ರೀತಿಯಲ್ಲಿ ತಯಾರಿಸುತ್ತಾರೆ ಆದರೆ ಸಾಸಿವೆ ಪ್ರಮಾಣ ಸ್ವಲ್ಪ ಜಾಸ್ತಿಯಿರುತ್ತದೆ. ಉಪ್ಪಿನಕಾಯಿಯ ರುಚಿ ಮಾವಿನ ಮಿಡಿಯ ಗುಣಮಟ್ಟ ಮತ್ತು ಒಣಮೆಣಸಿನಕಾಯಿಯ ಗುಣಮಟ್ಟದ ಮೇಲೆ ಅವಲಂಬಿವಾಗಿರುತ್ತದೆ. 
ಈ ಉಪ್ಪಿನಕಾಯಿ ಮಾಡಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. ಮತ್ತು ತಿನ್ನಲು ನೀವು ಕನಿಷ್ಠ ಒಂದು ತಿಂಗಳು ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಮಾವಿನ ಮಿಡಿ ಉಪ್ಪಿನಕಾಯಿ ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸಮಯದಲ್ಲಿ 500 ಅಥವಾ 1000 ಅಥವಾ 2000 ಮಾವಿನಮಿಡಿಯಿಂದ ಉಪ್ಪಿನಕಾಯಿ ಮಾಡಲಾಗುತ್ತದೆ. ಈ ಉಪ್ಪಿನಕಾಯಿ ಬಹಳ ಕಾಲ ಕೆಡದೇ ಉಳಿಯುವ ಕಾರಣ ಉತ್ತಮ ಮಾವಿನ ಮಿಡಿ ಸಿಕ್ಕಿದಾಗ ದೊಡ್ಡ ಸಂಖ್ಯೆಯಲ್ಲಿ ಉಪ್ಪಿನಕಾಯಿ ತಯಾರಿಸಿ 1 ಅಥವಾ 2 ವರ್ಷಗಳ ಕಾಲ ಬಳಸಲಾಗುತ್ತದೆ. 


ತಯಾರಿ ಸಮಯ: 1 ತಿಂಗಳು 
ಅಡುಗೆ ಸಮಯ: 0
ಪ್ರಮಾಣ: ಬಳಸಲಾದ ಮಾವಿನ ಮಿಡಿ ಸಂಖ್ಯೆಯಷ್ಟು. 

ಬೇಕಾಗುವ ಪದಾರ್ಥಗಳು (ಜಾಸ್ತಿ ಸಂಖ್ಯೆಯಾದಲ್ಲಿ ):

  1. 1000 ಕಾಟು ಮಾವಿನ ಮಿಡಿಗಳು  (1 ರಿಂದ 1.5 " ಉದ್ದ)
  2. 3 ಕೆಜಿ ಕಲ್ಲುಪ್ಪು 
  3. 1 ಕೆಜಿ ಕೆಂಪು ಮೆಣಸಿನಕಾಯಿ / ಮೆಣಸಿನಪುಡಿ (ಮಧ್ಯಮ ಖಾರ )
  4. 1/2 ಕೆಜಿ ಸಾಸಿವೆ
  5. 10 ಗ್ರಾಂ ಇಂಗು
  6. 100 ಗ್ರಾಂ ಕರಿಮೆಣಸು (ಬೇಕಾದಲ್ಲಿ - ಹೆಚ್ಚಿನ ಖಾರ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  7. 50 ಗ್ರಾಂ ಒಣಗಿದ ಜೀರಿಗೆ ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  8. 4 ಬೆರಳುದ್ದ ಅರಿಶಿನ ಕೊಂಬು (ಬೇಕಾದಲ್ಲಿ) 

ಬೇಕಾಗುವ ಪದಾರ್ಥಗಳು (ಕಡಿಮೆ ಸಂಖ್ಯೆಯಾದಲ್ಲಿ ):

  1. 12 ಕಾಟು ಮಾವಿನ ಮಿಡಿಗಳು  (1 ರಿಂದ 1.5 " ಉದ್ದ)
  2. 6 - 8 ಟಿಸ್ಪೂನ್ ಕಲ್ಲುಪ್ಪು 
  3. 12 ಕೆಂಪು ಮೆಣಸಿನಕಾಯಿ / 6 ಟಿಸ್ಪೂನ್ ಮೆಣಸಿನಪುಡಿ (ಮಧ್ಯಮ ಖಾರ )
  4.  3 ಟಿಸ್ಪೂನ್ ಸಾಸಿವೆ
  5. ಒಂದು ಚಿಟಿಕೆ ಇಂಗು
  6. 2 - 4 ಕರಿಮೆಣಸು (ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  7. ಒಂದು ಚಿಟಿಕೆ ಅರಿಶಿನ ಪುಡಿ (ಬೇಕಾದಲ್ಲಿ) 

ಮಾವಿನ ಮಿಡಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಒಣ ಬಟ್ಟೆಯಿಂದ ಮಾವಿನ ಮಿಡಿಯನ್ನು ಒರೆಸಿಕೊಳ್ಳಿ. ಹಾಗೂ ನೀರಿನ ಪಸೆ ಇಲ್ಲದ ಒಂದು ಗಾಜಿನ ಬಾಟಲಿ ಅಥವಾ ಪಿಂಗಾಣಿ ಜಾಡಿಯನ್ನು  ತೆಗೆದುಕೊಳ್ಳಿ. 
  2. ಈಗ ನಡುವೆ ಉಪ್ಪಿನ ಪದರ ಬರುವಂತೆ ಬಾಟಲಿ ಅಥವಾ ಜಾಡಿಯಲ್ಲಿ ಮಾವಿನ ಮಿಡಿ ಮತ್ತು ಉಪ್ಪನ್ನು ಹಾಕಿ.  ನೀವು ಬೇಕಾದಷ್ಟು ಉಪ್ಪನ್ನು ಬಳಸಬಹುದು. ಏಕೆಂದರೆ ಹೆಚ್ಚಿನ ಉಪ್ಪು ಬಾಟಲಿಯ ತಳದಲ್ಲಿ ಹಾಗೆ ಉಳಿಯುತ್ತದೆ. ಮುಚ್ಚಳವನ್ನು ಮುಚ್ಚಿ  ಸುಮಾರು 10 - 15 ದಿನಗಳ ಕಾಲ ಇಡಿ. 
  3. 10 - 15 ದಿನಗಳ ನಂತರ ಮಾವಿನ ಮಿಡಿ ಉಪ್ಪು ನೀರು ಬಿಟ್ಟಿರುವುದನ್ನು ನೀವು ನೋಡಬಹುದು. ಹೆಚ್ಚುವರಿ ಉಪ್ಪು  ತಳದಲ್ಲಿ ಶೇಕರಣೆಯಾಗಿರುವುದನ್ನು ಸಹ ನೋಡಬಹುದು. 
  4. ಈಗ ಮಾವಿನ ಮಿಡಿ ಮತ್ತು ಉಪ್ಪು ನೀರನ್ನು ಬೇರ್ಪಡಿಸಿ. ಕೆಲವು ಮಾವಿನ ಮಿಡಿಗಳು ಹೆಚ್ಚು ನೀರು ಬಿಟ್ಟರೆ ಕೆಲವು ಮಾವಿನ ಮಿಡಿಗಳು ಹೆಚ್ಚು ನೀರು ಬಿಡುವುದಿಲ್ಲ.  
  5. ಈಗ ಬೇರ್ಪಡಿಸಿದ ಉಪ್ಪು ನೀರನ್ನು ಕುದಿಸಿ. ತಣಿಯಲು ಬಿಡಿ. 
  6. ಈಗ ಅಳತೆಯ ಪ್ರಕಾರ ಕೆಂಪು ಮೆಣಸಿನಕಾಯಿ ಅಥವಾ ಮೆಣಸಿನ ಪುಡಿ, ಸಾಸಿವೆ, ಅರಿಶಿನ, ಕರಿಮೆಣಸು ಮತ್ತು ಇಂಗು ತೆಗೆದುಕೊಳ್ಳಿ. ದಯವಿಟ್ಟು ಗಮನಿಸಿ ಕರಿಮೆಣಸು ಬೇಕಾದಲ್ಲಿ ಮಾತ್ರ ಹಾಕಿ.
  7. ಒಮ್ಮೆ ಉಪ್ಪು ನೀರು ತಣ್ಣಗಾದ  ಕೂಡಲೇ ಆ ಉಪ್ಪು ನೀರನ್ನು ಬಳಸಿಕೊಂಡು ಮೇಲೆ ಹೇಳಿದ ಪದಾರ್ಥಗಳನ್ನು ಅರೆದು ಕೊಳ್ಳಿ. ನೀವು ಕೇವಲ ಕುದಿಸಿ ಆರಿಸಿದ ಉಪ್ಪು ನೀರನ್ನು  ಬಳಸಬೇಕು. ಉಪ್ಪು ನೀರು ಜಾಸ್ತಿ ಎನಿಸಿದರೆ ಚೆಲ್ಲಬಹುದು ಅಥವಾ  ಕಡಿಮೆ ಆದಲ್ಲಿ ಸ್ವಲ್ಪ ಉಪ್ಪು ಮತ್ತು ನೀರನ್ನು ಕುದಿಸಿ ಆರಿಸಿ ಬಳಸಬಹುದು.  
  8. ಈಗ ತೆಗೆದಿಟ್ಟ ಮಾವಿನ ಮಿಡಿಗೆ ಅರೆದ ಮಸಾಲೆ ಸೇರಿಸಿ. ಮುಚ್ಚಳವನ್ನು ಮುಚ್ಚಿ ಮತ್ತು ಒಂದು ತಿಂಗಳು ಅಥವಾ ಎರಡು ತಿಂಗಳುಗಳ ಕಾಲ ಹಾಗೇ ಬಿಡಿ. ಗಮನಿಸಿ ಗಾಳಿಯಾಡಬಾರದು. 
  9. ಉಪಯೋಗಿಸುವ ಮೊದಲು ಮಾವಿನ ಮಿಡಿಯನ್ನು ಸಣ್ಣ ತುಂಡು ಗಳಾಗಿ ಕತ್ತರಿಸಿ ಕೊಳ್ಳಿ. ಕತ್ತರಿಸಿದ ಮೇಲೆ ಒಂದೆರಡು ದಿನಗಳ ನಂತರ ಬಳಸಿ. ಹಳೆಯ ಉಪ್ಪಿನಕಾಯಿ ಆದಲ್ಲಿ ಕತ್ತರಿಸಿದ ಕೂಡಲೇ ಬಳಸಬಹುದು.


4 ಕಾಮೆಂಟ್‌ಗಳು:

  1. We prepared this item as per your description for 60 mangoes. It tastes so good. But a little bit salty in taste. What to do to reduce the saltiness.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮಾವಿನ ಮಿಡಿ ತುಂಬ ಎಳೆಯದಾಗಿದ್ದು, ಹುಳಿ ಇಲ್ಲದಿದ್ದರೆ ಹೀಗಾಗುತ್ತದೆ. ಸರಿ ಮಾಡಲು, ಎರಡು ದೊಡ್ಡ ತುಂಬ ಹುಳಿ
      ಇರುವ ಮಾವಿನಕಾಯಿ ತೆಗೆದುಕೊಂಡು, ಕತ್ತರಿಸಿ, ಎರಡು ಮುಷ್ಠಿ ಉಪ್ಪು ಹಾಕಿ, ಎರಡು ದಿನ ಬಿಡಿ. ನಂತರ ಅದರ ಉಪ್ಪು ನೀರನ್ನು ಹಿಂಡಿ ತೆಗೆದು, ಕುದಿಸಿ. ಬಿಸಿ ಆರಿದ ಮೇಲೆ, ಉಪ್ಪುಪ್ಪಾಗಿರುವ ಉಪ್ಪಿನಕಾಯಿಗೆ ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಅಚ್ಚಖಾರದ ಪುಡಿ ಸೇರಿಸಿ. ಚೆನ್ನಾಗಿ ಮಗುಚಿ.

      ಅಳಿಸಿ
  2. Nice detail about making pickle with proper process. But not mentioned about oil for tempering and how to make tempering.

    ಪ್ರತ್ಯುತ್ತರಅಳಿಸಿ
  3. Please mention whether tempering is required and which oil is to be used for tempering and how to make it.

    ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...