ಜುನ್ಕ ವಡಿ ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳೊಂದಿಗೆ ವಿವರಿಸಲಾಗಿದೆ . ಈ ಅಡುಗೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ. ಇದನ್ನು ಕಡ್ಲೆ ಹಿಟ್ಟು , ಈರುಳ್ಳಿ ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. "ಕಡ್ಲೆ ಹಿಟ್ಟಿನ ಪಲ್ಯನ? ಅದು ಹೇಗಿರುತ್ತಪ್ಪಾ" ಅಂತ ಯೋಚನೆ ಮಾಡ್ತ ಇದ್ದೀರ? ಯೋಚನೆ ಮಾಡ್ಲೆಬೇಡಿ. ಇದೊಂದು ಬಹಳ ರುಚಿಕರ ಮತ್ತು ಸುಲಭವಾದ ಅಡುಗೆಯಾಗಿದ್ದು ಚಪಾತಿ ಅಥವಾ ಜೋಳದ ರೊಟ್ಟಿ ಜೊತೆ ಪಲ್ಯದಂತೆ ಬಳಸಲಾಗುತ್ತದೆ. ಅಚ್ಚರಿಯೆಂದರೆ ಈ ರುಚಿಕರ ಮೇಲೋಗರ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಅಪರಿಚಿತ. ಆದರೆ ನೀವು ಎಂದಾದರೂ ಕಾಮತ್ ಹೋಟೆಲ್ಗಳಲ್ಲಿ "ಜೋಳದ ರೊಟ್ಟಿ ಊಟ" ಸವಿದಿದ್ದರೆ ಇದರ ಹೆಸರು ಮತ್ತು ಹೇಗೆ ಮಾಡಲಾಗಿದೆ ಎಂದು ತಿಳಿಯದೆ ನೀವು ಈಗಾಗಲೇ ಇದನ್ನು ತಿಂದಿರುತ್ತೀರಿ.
ಜುನ್ಕ ವಡಿ ಅಥವಾ ಕಡ್ಲೆಹಿಟ್ಟಿನ ಪಲ್ಯವನ್ನು ಬಳಸುವ ನೀರಿನ ಪ್ರಮಾಣ ಅವಲಂಬಿಸಿ ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಜಾಸ್ತಿ ನೀರು ಬಳಸಿ ದಪ್ಪ ಪೇಸ್ಟ್ ನಂತೆ, ಸ್ವಲ್ಪ ನೀರು ಚಿಮುಕಿಸಿ ಪುಡಿ ಪುಡಿಯಂತೆ ಅಥವಾ ನಾನು ಇಲ್ಲಿ ವಿವರಿಸಿದಂತೆ ತಯಾರಿಸಲಾಗುತ್ತದೆ. ದಪ್ಪ ಪೇಸ್ಟ್ ನಂತೆ ಮಾಡಲು 1 ಕಪ್ ಕಡ್ಲೆಹಿಟ್ಟನ್ನು 2 ಕಪ್ ನೀರಲ್ಲಿ ಕಲಸಿಟ್ಟು ಕೊಂಡು ಮಾಡಲಾಗುತ್ತದೆ. ಪುಡಿ ಪುಡಿಯಾಗಿ ಮಾಡಲು ಕಡ್ಲೆಹಿಟ್ಟನ್ನು ಹುರಿದು, ನಂತರ ನೀರು ಚಿಮುಕಿಸಿ ಮಾಡಲಾಗುತ್ತದೆ. ನೀವು ಚೆನ್ನಾಗಿ ಜೀರ್ಣವಾಗಲು ಸಣ್ಣದಾಗಿ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಅಥವಾ ಇಂಗು ಸಹ ಸೇರಿಸಬಹುದು.
ನಾನು ಬೆಳಗಾವಿ ಮೂಲದ ನನ್ನ ಪ್ರೀತಿಯ ಸ್ನೇಹಿತೆ ವೀಣಾರಿಂದ ಈ ಪಲ್ಯ ಕಲಿತೆ. ನೀವು ಮಾಡಿನೋಡಿ. ನಿಮಗೆ ಖಂಡಿತ ಇಷ್ಟವಾಗುವುದು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: 3 ಜನರಿಗೆ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್)
- 2 ಕಪ್ ಕಡ್ಲೆ ಹಿಟ್ಟು
- 1 ದೊಡ್ಡ ಈರುಳ್ಳಿ
- 1-2 ಚಮಚ ಕೆಂಪು ಮೆಣಸಿನ ಪುಡಿ / 1 ಟೀಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್
- 5-6 ಕರಿಬೇವಿನ ಎಲೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಅರಿಶಿನ ಪುಡಿ
- 3/4 ಕಪ್ ನೀರು ( +1/4 ಕಪ್ ಹಾಲು ಬಳಸದಿದ್ದರೆ)
- 1/4 ಕಪ್ ಹಾಲು (ಬೇಕಾದಲ್ಲಿ)
- 8-10 ಟೀಸ್ಪೂನ್ ಅಡುಗೆ ಎಣ್ಣೆ
- 1 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿ ಪ್ರಕಾರ)
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು
ಉತ್ತರ ಕರ್ನಾಟಕದ ಜುನ್ಕ ವಡಿ ಮಾಡುವ ವಿಧಾನ:
- ಈರುಳ್ಳಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಕೊಳ್ಳಿ. ಕಡ್ಲೆಹಿಟ್ಟನ್ನು ಸಾರಣಿಸಿ ಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಕರಿಬೇವು ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಕೂಡಲೇ ಅರಶಿನ ಮತ್ತು ಅಚ್ಚಕಾರದ ಪುಡಿ ಸೇರಿಸಿ ಮಗುಚಿ. ಕೂಡಲೇ 3/4 ಕಪ್ ನೀರು ಮತ್ತು 1/4 ಕಪ್ ಹಾಲು ಹಾಕಿ. ಹಾಲು ಹಾಕುವುದಿಲ್ಲವಾದಲ್ಲಿ 1 ಕಪ್ ನೀರು ಹಾಕಿ.
- ಸಕ್ಕರೆ ಮತ್ತು ಉಪ್ಪು ಹಾಕಿ ಕುದಿಸಿ.
- ನೀರು ಕುದಿಯಲು ಪ್ರಾರಂಭವಾದ ಕೂಡಲೇ, 2 ಕಪ್ ಕಡ್ಲೆ ಹಿಟ್ಟು ಹಾಕಿ, ಚೆನ್ನಾಗಿ ಗಂಟಾಗದಂತೆ ಮಗುಚಿ. ಮಗುಚುವಾಗ ಉರಿ ಕಡಿಮೆಯಿರಲಿ.
- ಒಂದೆರಡು ನಿಮಿಷ ಮಗುಚಿದ ಮೇಲೆ. ೨ ಚಮಚ ಎಣ್ಣೆಯನ್ನು ಹಾಕಿ ಪುನಃ ಮಗುಚಿ. ಒಂದು ತಟ್ಟೆಗೆ ಹಾಕಿ, ಬರ್ಫಿಯಂತೆ ತುಂಡು ಮಾಡಿ. ಇಲ್ಲವೇ ಚಪಾತಿ ಅಥವಾ ಜೋಳದ ರೊಟ್ಟಿಯೊಂದಿಗೆ ಹಾಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ