ರಾಗಿ ರೊಟ್ಟಿ ಕರ್ನಾಟಕದ ಅತ್ಯಂತ ಟೇಸ್ಟಿ ಮತ್ತು ಅತ್ಯಂತ ಪ್ರಸಿದ್ಧವಾದ ಉಪಹಾರವಾಗಿದೆ. ರಾಗಿ ಒಂದು ಮ್ಯಾಜಿಕ್ ಧಾನ್ಯವಾಗಿದ್ದು, ಅನೇಕ ಪೌಷ್ಟಿಕಾಂಶಗಳಿಗೆ ಮತ್ತು ಆರೋಗ್ಯಕರ ಅಂಶಗಳಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ರಾಗಿ ರೊಟ್ಟಿ ಮಾಡುತ್ತಾರಾದರೂ, ಈ ರೀತಿಯ ರಾಗಿ ರೊಟ್ಟಿ ಬಹಳ ರುಚಿಕರವಾಗಿರುತ್ತದೆ. ನಮ್ಮಲ್ಲಿ ಅನೇಕರು ರಾಗಿ ಒಂದು ರುಚಿ ಇಲ್ಲದ ಧಾನ್ಯ ಎಂದು ಹೀಗೆಳೆಯುತ್ತಾರೆ. ಆದರೆ ಈ ರಾಗಿ ರೊಟ್ಟಿಯನ್ನು ಒಮ್ಮೆ ಪ್ರಯತ್ನಿಸಿ ರುಚಿ ನೋಡಿದರೆ ಅವರಿಗೆ ರಾಗಿ ಎಷ್ಟು ರುಚಿಕರ ಎಂದೆನ್ನಿಸುತ್ತದೆ. ಈ ರಾಗಿ ರೊಟ್ಟಿಯನ್ನು ರಾಗಿಹಿಟ್ಟು, ಈರುಳ್ಳಿ, ಹಸಿರು ಹಸಿರುಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು.
ರಾಗಿರೊಟ್ಟಿ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 3 ಕಪ್ ರಾಗಿಹಿಟ್ಟು
- 3 ಕಪ್ ನೀರು (ರಾಗಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
- 2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
- 3 ಸಣ್ಣಗೆ ಹೆಚ್ಚಿದ ಈರುಳ್ಳಿ
- 1/4 ಕಪ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು
- ಉಪ್ಪು ರುಚಿಗೆ ತಕ್ಕಷ್ಟು
- 1/4 ಕಪ್ ಅಡುಗೆ ಎಣ್ಣೆ
- 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಕರ್ನಾಟಕ ಶೈಲಿಯ ರಾಗಿರೊಟ್ಟಿ ಮಾಡುವ ವಿಧಾನ:
- ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ರಾಗಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
- ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
- ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
- ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ರಾಗಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
- ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ರಾಗಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ (ನಾನ್-ಸ್ಟಿಕ್ ಆದರೆ ಉತ್ತಮ) ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
- ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ