ಕರ್ನಾಟಕ ಶೈಲಿಯ ಖಾರಾ ಮತ್ತು ಸಿಹಿ ಪೊಂಗಲ್ ಮಾಡುವ ವಿಧಾನವನ್ನು ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಕರ್ನಾಟಕದಲ್ಲಿ ಮಾಡುವ ಖಾರ ಪೊಂಗಲ್ ಸಾಮಾನ್ಯ ಪೊಂಗಲ್ ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದು ಕರ್ನಾಟಕದಲ್ಲಿ ಪ್ರಸಿದ್ಧವಾದ ಬೆಳಗ್ಗಿನ ತಿಂಡಿಯಾಗಿದೆ. ಕರ್ನಾಟಕ ಶೈಲಿಯ ಖಾರಾ ಪೊಂಗಲ್ ನ್ನು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ ಆದ್ದರಿಂದ ಇದಕ್ಕೆ ಚಟ್ನಿಯ ಅಗತ್ಯವಿರುವುದಿಲ್ಲ, ಹಾಗೆ ತಿನ್ನಬಹುದು. ಮತ್ತು ಕರ್ನಾಟಕ ಶೈಲಿಯ ಖಾರಾ ಪೊಂಗಲ್ ನಲ್ಲಿ, ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮಾನ ಪ್ರಮಾಣದಲ್ಲಿ ಹಾಕಲಾಗುತ್ತದೆ ಆದರೆ ಸಾಮಾನ್ಯ ಪೊಂಗಲ್ನಲ್ಲಿ ಹೆಸರುಬೇಳೆ ಬಹಳ ಕಡಿಮೆ ಬಳಸಲಾಗುತ್ತದೆ.
ಕರ್ನಾಟಕದ ಸಿಹಿ ಪೊಂಗಲ್ ಪಾಕವಿಧಾನ ಸಾಮಾನ್ಯವಾಗಿ ಮಾಡುವ ಸಿಹಿ ಪೊಂಗಲ್ ನ್ನು ಹೋಲುತ್ತದೆ. ಆದರೆ ಸಾಮಾನ್ಯವಾಗಿ ಮಾಡುವ ಸಿಹಿ ಪೊಂಗಲ್ ನಲ್ಲಿ ತೆಂಗಿನ ತುರಿ ಬಳಸುವುದಿಲ್ಲ. ಈ ಸಿಹಿ ಪೊಂಗಲ್ ಗೆ ನಿಮಗೆ ಇಷ್ಟವಿದ್ದಲ್ಲಿ ಸ್ವಲ್ಪ ಹಾಲನ್ನು ಸೇರಿಸಬಹುದು ಆದರೆ ನಾನು ಸೇರಿಸುವುದಿಲ್ಲ. ಕರ್ನಾಟಕದ ಕೆಲವು ಸ್ಥಳಗಳಲ್ಲಿ ಈ ಖಾರಾ ಮತ್ತು ಸಿಹಿ ಪೊಂಗಲ್ ನ್ನು "ಹುಗ್ಗಿ" ಅಥವಾ "ಹುಗ್ಗಿ ಅನ್ನ" ಎಂದು ಕರೆಯಲಾಗುತ್ತದೆ. ಇಲ್ಲಿ ನಾನು ಸಿಹಿ ಮತ್ತು ಖಾರಾ ಪೊಂಗಲ್ ಎರಡರ ಪಾಕವಿಧಾನಗಳನ್ನು ವಿವರಿಸಿದ್ದೇನೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 45 ನಿಮಿಷ
ಪ್ರಮಾಣ: 3 ಜನರಿಗೆ
ಅಡುಗೆ ಸಮಯ : 45 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 3/4 ಕಪ್ ಊಟದ ಅಕ್ಕಿ (1/2 ಕಪ್ ಖಾರ ಪೊಂಗಲ್ ಗೆ + 1/4 ಕಪ್ ಸಿಹಿ ಪೊಂಗಲ್ ಗೆ)
- 3/4 ಕಪ್ ಹೆಸರುಬೇಳೆ (1/2 ಕಪ್ ಖಾರ ಪೊಂಗಲ್ ಗೆ + 1/4 ಕಪ್ ಸಿಹಿ ಪೊಂಗಲ್ ಗೆ)
ಖಾರ ಪೊಂಗಲ್ ಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಟೇಬಲ್ ಸ್ಪೂನ್ ತುಪ್ಪ
- 1/2 ಟೀ ಸ್ಪೂನ್ ಜೀರಿಗೆ
- 1/4 ಟೀ ಸ್ಪೂನ್ ಅರಶಿನ ಪುಡಿ
- 1/2 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
- 8 - 10 ಗೋಡಂಬಿ
- 1-2 ಹಸಿರುಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- 8 - 10 ಕರಿಬೇವಿನ ಎಲೆ
- 1/4 ಕಪ್ ತೆಂಗಿನತುರಿ
- ಉಪ್ಪು ರುಚಿಗೆ ತಕ್ಕಷ್ಟು
ಸಿಹಿ ಪೊಂಗಲ್ ಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಟೇಬಲ್ ಸ್ಪೂನ್ ತುಪ್ಪ
- 1/2 ಕಪ್ ಬೆಲ್ಲ
- 1/4 ಕಪ್ ತೆಂಗಿನತುರಿ
- 8 - 10 ಗೋಡಂಬಿ
- 8 - 10 ಒಣ ದ್ರಾಕ್ಷಿ
- ಒಂದು ಚಿಟಿಕೆ ಉಪ್ಪು
ಖಾರ ಪೊಂಗಲ್ ಮಾಡುವ ವಿಧಾನ:
- ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
- ಒಂದು ಕುಕ್ಕರ್‌ನಲ್ಲಿ ಹುರಿದ ಬೇಳೆ ಮತ್ತು ಅಕ್ಕಿಯನ್ನು ಹಾಕಿ ಎರಡು ಬಾರಿ ತೊಳೆಯಿರಿ.
- ನಂತರ 4 ಕಪ್ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ. ಗಮನಿಸಿ, ಪೊಂಗಲ್ ಗೆ ಬೇಳೆ ಮತ್ತು ಅಕ್ಕಿ ಸ್ವಲ್ಪ ಮೆತ್ತಗೆ ಬೆಂದರೆ ಚೆನ್ನ.
- ಈಗ ಶುಂಠಿಯನ್ನು ಕತ್ತರಿಸಿ, ಕಾಳುಮೆಣಸನ್ನು ಜಜ್ಜಿ, ಗೋಡಂಬಿಯನ್ನು ತುಂಡು ಮಾಡಿ, ತೆಂಗಿನಕಾಯಿ ತುರಿದಿಟ್ಟುಕೊಳ್ಳಿ ಮತ್ತು ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ನಂತರ ಒಂದು ದೊಡ್ಡ ಬಾಣಲೆ ಒಲೆಯ ಮೇಲಿಟ್ಟು, ತುಪ್ಪ ಮತ್ತು ಜೀರಿಗೆ ಹಾಕಿ.
- ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು ಮತ್ತು ಅರಶಿನ ಪುಡಿಯನ್ನು ಹಾಕಿ. ಸ್ವಲ್ಪ ಹೊತ್ತು ಹುರಿದ ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
- ತೆಂಗಿನ ತುರಿಯನ್ನು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಈಗ 2/3 ಭಾಗದಷ್ಟು ಬೇಯಿಸಿದ ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ (ಉಳಿದ 1/3 ಭಾಗ ಸಿಹಿ ಪೊಂಗಲ್ ಗೆ ಉಳಿಸಿಕೊಳ್ಳಿ). ನಂತರ ಸುಮಾರು 2 ಕಪ್ ನಷ್ಟು ನೀರು ಹಾಕಿ, ಮಗುಚಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುದಿಸಿ. ಕರ್ನಾಟಕ ಶೈಲಿಯ ಪೊಂಗಲ್ ಬಿಸಿಬೇಳೆ ಬಾತ್ ನಷ್ಟು ತೆಳ್ಳಗಿರಬೇಕು. ಬಿಸಿ ಬಿಸಿ ಖಾರ ಪೊಂಗಲ್ ನ್ನು ಸಿಹಿ ಪೊಂಗಲ್ ನೊಂದಿಗೆ ಬಡಿಸಿ.
ಸಿಹಿ ಪೊಂಗಲ್ ಮಾಡುವ ವಿಧಾನ:
- ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಒಂದು ಕಪ್ ನೀರು ಮತ್ತು ಒಂದು ಕಪ್ ಬೆಲ್ಲ ಹಾಕಿ ಕುದಿಸಿ. ಬೆಲ್ಲ ಕರಗಿದ ಕೂಡಲೇ ಸ್ಟೋವ್ ಆಫ್ ಮಾಡಿ.
- ಇನ್ನೊಂದು ಸಣ್ಣ ಬಾಣಲೆಯಲ್ಲಿ ಖಾರ ಪೊಂಗಲ್ ಮಾಡಿ ಉಳಿಸಿದ, ಬೇಯಿಸಿದ ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ. ಬೆಲ್ಲದ ನೀರನ್ನು ಜರಡಿಯ ಮೂಲಕ ಸೋಸಿ ಹಾಕಿ.
- ಒಂದು ಚಿಟಿಕೆ ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚುತ್ತಾ ಕುದಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಉರಿಯನ್ನು ಕಡಿಮೆ ಮಾಡಿ.
- ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹುರಿಯಿರಿ. ಕುದಿಯುತ್ತಿರುವ ಸಿಹಿ ಪೊಂಗಲ್ ಗೆ ಹಾಕಿ ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಖಾರ ಪೊಂಗಲ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ