ಬುಧವಾರ, ಜನವರಿ 13, 2016

Nellikai uppinakayi recipe in Kannada | ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ


ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ 

ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಇದೊಂದು ದಿಡೀರ್, ಆರೋಗ್ಯಕರ ಮತ್ತು ಸುಲಭವಾಗಿ ಮಾಡಬಲ್ಲ ಉಪ್ಪಿನಕಾಯಿಯಾಗಿದೆ. ನೆಲ್ಲಿಕಾಯಿ ಹೇರಳವಾಗಿ ಸಿಗುತ್ತಿರುವ ಈ ಸಮಯದಲ್ಲೇ, ಈ ರುಚಿಕರ ಮತ್ತು ಸುಲಭ ಉಪ್ಪಿನಕಾಯಿಯನ್ನು ಹಾಕಿಬಿಡೋಣ ಎಂದುಕೊಂಡೆ. ಈ ಉಪ್ಪಿನಕಾಯಿಯನ್ನು ಫ್ರಿಡ್ಜ್ ನಲ್ಲಿಟ್ಟರೆ ಎರಡು ತಿಂಗಳು ಕೆಡದೆ ಉಳಿಯಬಲ್ಲದು. ಇಲ್ಲವಾದಲ್ಲಿ 15 ದಿನಗಳ ಒಳಗೆ ಉಪಯೋಗಿಸಿ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ನೆಲ್ಲಿಕಾಯಿ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಇದು ಅನೇಕ ಕಾಯಿಲೆಗಳಿಗೆ ಪರಿಹಾರ ಒದಗಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅತ್ಯಂತ ಸಮೃದ್ಧವಾಗಿದೆ. ಕ್ಯಾಲ್ಸಿಯಮ್, ರಂಜಕ , ಕಬ್ಬಿಣ, ಕೆರೋಟಿನ್ ಹಾಗೂ ವಿಟಮಿನ್ ಬಿ ಕಾಂಪ್ಲೆಕ್ಸ್ ಹೀಗೆ ಅನೇಕ ಖನಿಜ ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಶೀಘ್ರದಲ್ಲೇ ನಾವು ಮುಂಬರುವ ದಿನಗಳಲ್ಲಿ ನೆಲ್ಲಿಕಾಯಿಯ ಬಗ್ಗೆ ಸವಿಸ್ತಾರವಾದ ಲೇಖನ ಮತ್ತು ನೆಲ್ಲಿಕಾಯಿಯ ಹಲವಾರು ಅಡುಗೆಗಳನ್ನು ಪೋಸ್ಟ್ ಮಾಡಲಿದ್ದೇವೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: 15 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 15 ನೆಲ್ಲಿಕಾಯಿ
  2. 15-20 ಒಣ ಮೆಣಸಿನಕಾಯಿ
  3. 3 ಟೀಸ್ಪೂನ್ ಸಾಸಿವೆ
  4. 1.5 ಟೀಸ್ಪೂನ್ ಜೀರಿಗೆ
  5. 1/4 ಟೀಸ್ಪೂನ್ ಮೆಂತೆ
  6. 1/2 ಕಪ್ ಉಪ್ಪು (ರುಚಿಗೆ ತಕ್ಕಷ್ಟು)

ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ನೆಲ್ಲಿಕಾಯಿ ಮತ್ತು ಉಪ್ಪು ಹಾಕಿ. ನೆಲ್ಲಿಕಾಯಿ ಮುಳುಗುವಷ್ಟು ನೀರು ಹಾಕಿ 5 ನಿಮಿಷಗಳ ಕಾಲ ಕುದಿಸಿ.
  2. ತಣ್ಣಗಾದ ಮೇಲೆ ಉಪ್ಪು ನೀರನ್ನು ಬಗ್ಗಿಸಿ ಪಕ್ಕದಲ್ಲಿಡಿ. ನೆಲ್ಲಿಕಾಯಿಯ ಬೀಜ ತೆಗೆದು, ತುಂಡು ಮಾಡಿಕೊಳ್ಳಿ. ಬೆಂದಮೇಲೆ ಮೆತ್ತಗಾಗುವುದರಿಂದ ಸುಲಭವಾಗಿ ಬೀಜವನ್ನು ಬೇರ್ಪಡಿಸಬಹುದು. ನಂತರ ಒಂದು ಜರಡಿಯ ಸಹಾಯದಿಂದ ಸೋಸುತ್ತ ಬಗ್ಗಿಸಿಟ್ಟ ಉಪ್ಪು ನೀರನ್ನು ಹಾಕಿ. ನಿಮಗೆ ದಪ್ಪ ರಸದ ಉಪ್ಪಿನಕಾಯಿ ಬೇಕಾದಲ್ಲಿ ಸ್ವಲ್ಪ ಉಪ್ಪು ನೀರು ಸೇರಿಸಿ ಅನಂತರ ಬೇಕಾದಷ್ಟು ಉಪ್ಪು ಹಾಕಬಹುದು. ನೀವು ಉಪಯೋಗಿಸುವ ಯಾವುದೇ ಪಾತ್ರೆಯಲ್ಲಿ ನೀರಿನ ಪಸೆ ಇಲ್ಲದಂತೆ ನೋಡಿಕೊಳ್ಳಿ.
  3. ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  4. ಆ ಪುಡಿಯನ್ನು ತುಂಡುಮಡಿದ ನೆಲ್ಲಿಕಾಯಿ ಮತ್ತು ಉಪ್ಪು ನೀರಿರುವ ಪಾತ್ರೆಗೆ ಹಾಕಿ, ಚೆನ್ನಾಗಿ ಮಗುಚಿ. ನೆಲ್ಲಿಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ.

4 ಕಾಮೆಂಟ್‌ಗಳು:

Related Posts Plugin for WordPress, Blogger...