ನೀವು ಮಾರುಕಟ್ಟೆಯಲ್ಲಿ ತಾಜಾ ಕೊತ್ತುಂಬರಿ ಸೊಪ್ಪಿನ ದೊಡ್ಡ ಕಟ್ಟು ಬಹಳ ಕಡಿಮೆ ಬೆಲೆಯಲ್ಲಿ ದೊರಕಿತೆಂದು ಖರೀದಿ ಮಾಡಿ ಬಿಟ್ಟಿದ್ದೀರಾ? ನಂತರ ಆ ತಾಜಾ ನಾಟಿ ಕೊತ್ತಂಬರಿ ಸೊಪ್ಪನ್ನು ಏನು ಮಾಡುವುದು ಹೇಗೆ ಉಪಯೋಗಿಸುವುದು ಎಂದು ಆಲೋಚಿಸುತ್ತಿದ್ದೀರಾ? ಚಿಂತಿಸಬೇಡಿ, ಇಲ್ಲೊಂದು ಕೊತ್ತುಂಬರಿ ಸೊಪ್ಪನ್ನು ಬಳಸಿ ಮಾಡಬಹುದಾದ ಸರಳ ಮತ್ತು ರುಚಿಕರ ಚಟ್ನಿ ವಿಧಾನವನ್ನು ವಿವರಿಸಲಾಗಿದೆ. ಈ ಕೊತ್ತಂಬರಿ ಚಟ್ನಿ ಇತರ ಚಟ್ನಿ ಗಳಿಗಿಂತ ಭಿನ್ನವಾಗಿದ್ದು ಇದನ್ನು ನೀವು ತೊಕ್ಕು ಅಥವಾ ಉಪ್ಪಿನಕಾಯಿ ರೀತಿಯಲ್ಲಿ ಬಳಸ ಬೇಕಾಗುತ್ತದೆ. ಈ ಚಟ್ನಿಯನ್ನು ತೆಂಗಿನಕಾಯಿ ಮತ್ತು ನೀರು ಸೇರಿಸದೆ ತಯಾರಿಸಲಾಗುತ್ತದೆ. ಈ ಚಟ್ನಿಗೆ ಒಗ್ಗರಣೆಯ ಅಗತ್ಯವಿರುವುದಿಲ್ಲ.
ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಕೊತ್ತುಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಹುಣಸೆ ಹಣ್ಣು ಮತ್ತು ಉಪ್ಪು ಬಳಸಿ ತಯಾರಿಸಲಾಗುತ್ತದೆ. ಈ ಚಟ್ನಿ ಸುಲಭವಾಗಿ ಹಾಳಾಗುವುದಿಲ್ಲ ಹಾಗಾಗಿ ಫ್ರಿಡ್ಜ್ ನಲ್ಲಿ ಇಟ್ಟಲ್ಲಿ ನೀವು ಇದನ್ನು ಕೆಲವು ವಾರಗಳ ಕಾಲ ಉಪಯೋಗಿಸಬಹುದು. ಈ ಬಹಳ ಸುಲಭವಾದ ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಕೊತ್ತಂಬರಿ ಸೊಪ್ಪಿನ ತೊಕ್ಕಿನ ಪಾಕವಿಧಾನವನ್ನು ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಈ ಕೆಳಗೆ ವಿವರಿಸಲಾಗಿದೆ.
ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಜನರಿಗೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಜನರಿಗೆ
ಬೇಕಾಗುವ ಪದಾರ್ಥಗಳು:
- 1 ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು
- 6-10 ಹಸಿರು ಮೆಣಸಿನಕಾಯಿ
- 1 ಸಣ್ಣ ನಿಂಬೆ ಗಾತ್ರದ ಹುಣಿಸೆ ಹಣ್ಣು
- 2 ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವ ವಿಧಾನ:
- ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ತೊಳೆದು, ನೀರಾರಸಿ ಕತ್ತರಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಹಸಿರುಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ನಂತರ ತೆಗೆದು ಪಕ್ಕಕ್ಕಿಡಿ.
- ಈಗ ಅದೇ ಬಾಣಲೆಗೆಕತ್ತರಿಸಿದ ಸೊಪ್ಪನ್ನು ಹಾಕಿ, ಸಣ್ಣ ಉರಿಯಲ್ಲಿ, ಸೊಪ್ಪು ಬಾಡುವವರೆಗೆ ಹುರಿದುಕೊಳ್ಳಿ.
- ಹುರಿದ ಸೊಪ್ಪು ತಣ್ಣಗಾಗುವವರೆಗೆ ಕಾಯಿರಿ. ನಂತರ ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಅರೆಡುಕೊಳ್ಳಿ. ಗಮನಿಸಿ ನೀರು ಸೇರಿಸದೆ ಅರೆಯಬೇಕು. ಈಗ ಈ ಚಟ್ನಿಯನ್ನು, ಅನ್ನ, ರೊಟ್ಟಿ, ಪರೊಟದೊಂದಿಗೆ ಉಪ್ಪಿನಕಾಯಿ ಅಥವಾ ತೊಕ್ಕಿನಂತೆ ಬಡಿಸಿ.
😍
ಪ್ರತ್ಯುತ್ತರಅಳಿಸಿ