ದಿಢೀರ್ ರಾಗಿ ದೋಸೆ ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಈ ದೋಸೆಗೆ ಕೇವಲ ರಾಗಿ ಹಿಟ್ಟು ಮತ್ತು ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಈ ರಾಗಿ ದೋಸೆ ಬಹಳ ಆರೋಗ್ಯಕರವಾಗಿದ್ದು, ಅದರಲ್ಲೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಸೇವಿಸಿದಲ್ಲಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿಯಾಗಿದೆ.
ನಾನು ಈ ದೋಸೆಯನ್ನು ಬೆಳಗ್ಗಿನ ಉಪಹಾರದ ಪಟ್ಟಿಯಲ್ಲಿ ಸೇರಿಸಿದ್ದೇನೆ. ಆದರೆ ಈ ದೋಸೆಯನ್ನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ರಾತ್ರೆ ಊಟಕ್ಕೆ ಅನ್ನದ ಬದಲಾಗಿ ಪ್ರತಿನಿತ್ಯ ಸೇವಿಸುತ್ತಾರೆ.
ರಾಗಿಯೊಂದಿಗೆ ಬೇರೆ ಬೇರೆ ಹಿಟ್ಟನ್ನು ಬೆರೆಸಿ, ರಾಗಿ ದೋಸೆ ಎಂದು ತಿನ್ನುವ ಬದಲು ಈ ರೀತಿ ರಾಗಿ ಹಿಟ್ಟು ಮಾತ್ರ ಹಾಕಿ ಮಾಡಿದ ದೋಸೆ ಹೆಚ್ಚು ಪ್ರಯೋಜನಕಾರಿ ಎಂದು ನನ್ನ ಅನಿಸಿಕೆ. ಆದರೆ ದೋಸೆ ಮಾಡುವ ಸಮಯದಲ್ಲಿ ನಿಮಗೆ ಕಷ್ಟವೆನ್ನಿಸಿದರೆ ಒಂದು ಅಥವಾ ಎರಡು ಟೇಬಲ್ ಚಮಚ ಗೋಧಿ ಹಿಟ್ಟನ್ನು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ದೋಸೆ ಮಾಡಬಹುದು.
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 2 ಜನರಿಗೆ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಕಪ್ ರಾಗಿ ಹಿಟ್ಟು
- 2 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
- 3 ಕಪ್ ನೀರು (ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
- 2 ಟೀಸ್ಪೂನ್ ಅಡುಗೆ ಎಣ್ಣೆ.
ದಿಢೀರ್ ರಾಗಿ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಕತ್ತರಿಸಿದ ಕರಿಬೇವಿನ ಎಲೆಗಳನ್ನು ಹಾಕಿ. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ (1 ಲೋಟ ಹಿಟ್ಟಿಗೆ 1.5 ಕಪ್ ನಷ್ಟು ನೀರು ಬೇಕಾಗುತ್ತದೆ). ಉಪ್ಪು ಹಾಕಿ ಕಲಸಿ. ರಾಗಿ ದೋಸೆಗೆ ಹೆಚ್ಚು ಉಪ್ಪು ಅಗತ್ಯವಿರುವುದಿಲ್ಲ.
- ಈಗ ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಒಲೆ ದೊಡ್ಡ ಉರಿಯಲ್ಲಿರಲಿ. ರಾಗಿ ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ಕಾವಲಿಯಾದರೆ ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ರಾಗಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ರಾಗಿ ದೋಸೆ ಮಾಡಲು ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು, ನೀರ್ ದೋಸೆ ಅಥವಾ ರವೆ ದೋಸೆ ಮಾಡುವ ವಿಧಾನದಲ್ಲಿ ದೋಸೆ ಮಾಡಿ.
- ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ರಾಗಿ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಗೋಧಿ ಹಿಟ್ಟು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ನಂತರ ಪ್ರಯತ್ನಿಸಿ. ಇದನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ