ಬುಧವಾರ, ಜನವರಿ 27, 2016

Rave uppittu recipe | ರವೆ ಉಪ್ಪಿಟ್ಟು | ಸಜ್ಜಿಗೆ ಉಪ್ಪಿಟ್ಟು


ರವೆ ಉಪ್ಪಿಟ್ಟು ಮಾಡುವ ವಿಧಾನ 

ಕರ್ನಾಟಕ ಶೈಲಿಯ ರವೆ ಉಪ್ಪಿಟ್ಟು ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳ ಮೂಲಕ ವಿವರಿಸಲಾಗಿದೆ. ಉಪ್ಪಿಟ್ಟು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮತ್ತು ಸರಳ ಉಪಹಾರವಾಗಿದೆ. ನಮ್ಮಲ್ಲಿ ಬಹುತೇಕ ಎಲ್ಲರಿಗೂ ರವೆ ಉಪ್ಪಿಟ್ಟು ಮಾಡುವ ವಿಧಾನ ಖಂಡಿತ ತಿಳಿದಿರುತ್ತದೆ. ಆದರೆ ಈ ಲೇಖನವನ್ನು ಹೊಸದಾಗಿ ಅಡುಗೆ ಕಲಿಯುತ್ತಿರುವವರಿಗೋಸ್ಕರ ಮತ್ತು ವೆಬ್‌ಸೈಟ್ನಲ್ಲಿ ಈ ಜನಪ್ರಿಯ ಪಾಕವಿಧಾನವನ್ನು ಸೇರಿಸುವುದಕ್ಕೋಸ್ಕರ ಬರೆಯುತ್ತಿದ್ದೇನೆ.
ಕರ್ನಾಟಕದಲ್ಲಿ ಇದನ್ನು ಉಪ್ಪಿಟ್ಟು ಅಥವಾ ಉಪುಮಾ ಎಂಬ ಹೆಸರಿನಿಂದ ಕರೆಯುತ್ತಾರೆ. ಮಂಗಳೂರು ಪ್ರದೇಶದಲ್ಲಿ ಸಜ್ಜಿಗೆ ಉಪ್ಪಿಟ್ಟು ಎಂಬ ಹೆಸರು ರೂಢಿಯಲ್ಲಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಉಪ್ಪಿಟ್ಟನ್ನು ಪೇಣಿ ರವೆ, ಬನ್ಸಿ ರವೆ, ಅಕ್ಕಿ ರವೆ, ಶಾವಿಗೆ ಅಥವಾ ಅಕ್ಕಿ ಬಳಸಿಕೊಂಡು ತಯಾರಿಸಲಾಗುತ್ತದೆ. ತರಕಾರಿ ಉಪ್ಪಿಟ್ಟು ಕೂಡ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಎಲ್ಲ ಉಪ್ಪಿಟ್ಟಿನ ಪಾಕವಿಧಾನ ಸ್ವಲ್ಪ ಸ್ವಲ್ಪ ಭಿನ್ನವಾಗಿರುತ್ತವೆ. ಹಾಗೂ ನಾವು ಮುಂಬರುವ ದಿನಗಳಲ್ಲಿ ಒಂದೊಂದನ್ನೇ ವಿವರಿಸುತ್ತೇವೆ.
ರವಾ ಉಪ್ಪಿಟ್ಟು ಅತ್ಯಂತ ಜನಪ್ರಿಯ ಉಪಹಾರವಾಗಿದ್ದರೂ ಸಹ ಇದನ್ನು ಕೆಲವರು ಬಹಳ ಇಷ್ಟ ಪಟ್ಟು ತಿಂದರೆ ಇನ್ನೂ ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ನನಗೆ ಮಾತ್ರ ಇದು ತುಂಬಾ ಇಷ್ಟ. ಆದರೆ ಇದು ಬಹಳ ಪೌಷ್ಟಿಕ ಆಹಾರವಾಗಿರುವುದರಿಂದ ನಿಮಗೆ ಇಷ್ಟವಿಲ್ಲದಿದ್ದರೂ ಆಗಾಗ್ಯೆ ಮಾಡಿ ತಿನ್ನಲು ಮರೆಯದಿರಿ.
ಉಪ್ಪಿಟ್ಟು ಪಾಕವಿಧಾನ ದಕ್ಷಿಣ ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತದೆ. ವ್ಯತ್ಯಾಸಗಳು ಅದರ ಬಣ್ಣ ಮತ್ತು ಬಳಸುವ ನೀರಿನ ಪ್ರಮಾಣದಲ್ಲಿವೆ. ಈ ರುಚಿಕರ ಮತ್ತು ಸರಳ ಉಪ್ಪಿಟ್ಟಿನ ಪಾಕವಿಧಾನವನ್ನು ಒಮ್ಮೆ ಅನುಸರಿಸಿ ನೋಡಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್)

  1. 2 ಕಪ್ ರವೆ (ಸಣ್ಣ ರವೆ)
  2. 4 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ (1 ಟೀಸ್ಪೂನ್ ಸಕ್ಕರೆ + ಒಂದು ಚಿಟಿಕೆ ಇಂಗು, ಈರುಳ್ಳಿ ಬಳಸದೆ ಇದ್ದಲ್ಲಿ)
  7. 1-2 ಹಸಿರು ಮೆಣಸಿನಕಾಯಿ
  8. 5-6 ಕರಿ ಬೇವಿನ ಎಲೆ
  9. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  10. 1/4 ಟೀಸ್ಪೂನ್ ಅರಶಿನ ಪುಡಿ
  11. 4-5 ಟೀಸ್ಪೂನ್ ಅಡುಗೆ ಎಣ್ಣೆ
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  14. 1/2 ಕಪ್ ತೆಂಗಿನತುರಿ
  15. 1 ಟೀಸ್ಪೂನ್ ನಿಂಬೆ ಹಣ್ಣಿನ ರಸ (ಬೇಕಾದಲ್ಲಿ)

ಪೇಣಿ ರವೆ ಉಪ್ಪಿಟ್ಟು ಮಾಡುವ ವಿಧಾನ:

  1. ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿ. ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನೀರನ್ನು ಹಾಕಿ ಕುದಿಯಲು ಇಡಿ. ನೀರು ಕುದಿಯುವುದರೊಳಗೆ ಉಪ್ಪಿಟ್ಟಿಗೆ ಒಗ್ಗರಣೆ ಸಿದ್ಧಪಡಿಸಿಕೊಳ್ಳೋಣ. ಏಕೆಂದರೆ ಕುದಿಯುವ ನೀರು ಕೊನೆಯಲ್ಲಿ ಬೇಕಾಗುತ್ತದೆ.
  2. ಅದಕ್ಕಾಗಿ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  3. ಈರುಳ್ಳಿ ಮೆತ್ತಗಾದ ಮೇಲೆ 2 ಕಪ್ ರವೆ ಮತ್ತು ಅರಶಿನ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ.
  4. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ನೀರು ಇಂಗುವವರೆಗೆ ಮಗುಚಿ. ನೀರು ಇಂಗಲು ಒಂದು ನಿಮಿಷ ಸಾಕಾಗುತ್ತದೆ.
  5. ನಂತರ ಮುಚ್ಚಳ ಮುಚ್ಚಿ 3 - 4 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಆಮೇಲೆ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ರಸ ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, ಸ್ಟೋವ್ ಆಫ್ ಮಾಡಿ. ಒಂದು ನಿಮಿಷದ ನಂತರ ಮತ್ತೊಮ್ಮೆ ಮಗುಚಿ, ಬಿಸಿಯಾಗಿರುವಾಗಲೇ ಸಕ್ಕರೆ, ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ಬಡಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...