ಮನೆಯಲ್ಲಿ ಗಟ್ಟಿ ಮೊಸರು ಮಾಡುವುದು ಹೇಗೆಂದು ತಿಳಿದುಕೊಳ್ಳಿ. ಮನೆಯಲ್ಲಿ ಮಾಡಿದೆ ಮೊಸರು ಶುದ್ಧ, ರುಚಿಕರ ಮತ್ತು ಮಾಡಲು ಬಹಳ ಸರಳವಾಗಿದೆ. ನಮ್ಮ ಮನೆಗಳಲ್ಲಿ ಮೊಸರು ಅಥವಾ ಮಜ್ಜಿಗೆ ಇಲ್ಲದ ಊಟವನ್ನು ಅಪೂರ್ಣವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಮೊಸರು ಮಾಡುವುದು ದೈನಂದಿನ ಪ್ರಕ್ರಿಯೆಯಾಗಿದೆ. ನಾನು ಈ ಗಟ್ಟಿ ಮೊಸರು ಮಾಡುವ ವಿಧಾನವನ್ನು, ಮೊಸರು ಮಾಡಲು ತೊಂದರೆ ಅನುಭವಿಸುತ್ತಿರುವವರಿಗೋಸ್ಕರ ವಿವರಿಸುತ್ತಿದ್ದೇನೆ.. ನಮ್ಮಲ್ಲಿ ಅನೇಕರು ಮೊಸರನ್ನು ಅಂಗಡಿಯಲ್ಲಿ ಖರೀದಿಸುತ್ತೀರಿ. ಆದರೆ ಮನೆಯಲ್ಲಿ ಮೊಸರು ಮಾಡುವುದು ಬಹಳ ಸುಲಭ ಮತ್ತು ನೀವು ಒಮ್ಮೆ ಮೊಸರು ಮಾಡುವುದನ್ನು ಸರಿಯಾಗಿ ಕಲಿತುಕೊಂಡರೆ ನಂತರ ಅಂಗಡಿಗಳಿಂದ ಮೊಸರು ಖರೀದಿ ಮಾಡುವುದನ್ನು ಖಂಡಿತ ನಿಲ್ಲಿಸುವಿರಿ.
ಮನೆಯಲ್ಲಿ ಗಟ್ಟಿ ಮೊಸರು ಮಾಡುವ ವಿಧಾನ:
- ಮನೆಯಲ್ಲಿ ಮೊಸರು ಮಾಡಲು ಮೊದಲಿಗೆ ನೀರು ಬೆರೆಸದೇ ಹಾಲನ್ನು ಕುದಿಸಬೇಕು. ನಿಮಗೆ ಹಾಲು ನೀರಾಗಿದೆ ಎನಿಸಿದರೆ ಕೆಲವು ನಿಮಿಷಗಳ ಕಾಲ ಹೆಚ್ಚು ಕುದಿಸಿ. ಯಾವಾಗಲೂ ಮೊಸರು ಮಾಡುವ ಸ್ವಲ್ಪ ಮೊದಲು ಹಾಲನ್ನು ಕುದಿಸಬೇಕು. ಯಾವಾಗಲೋ ಕುದಿಸಿ ಇಟ್ಟ ಹಾಲಿಂದ ಮೊಸರು ಮಾಡಲು ಹೊರಟರೆ ಚೆನ್ನಾಗಿ ಬರುವುದಿಲ್ಲ, ಜೊತೆಗೆ ಮೊಸರು ಆಗುವ ಮೊದಲೇ ಹಾಲು ಹಾಳಾಗುವ ಸಾಧ್ಯತೆಯೂ ಇದೆ.
- ಹಾಲು ಬೆಚ್ಚಗಾಗುವವರೆಗೆ ಕಾಯಿರಿ. ಗಮನಿಸಿ, ಹಾಲು ಬಿಸಿಯಾಗಿರಬಾರದು ಮತ್ತು ಪೂರ್ತಿ ತಣ್ಣಗೆ ಸಹ ಆಗಬಾರದು. ಈ ಬೆಚ್ಚಗಾಗಿರುವ ಹಾಲಿಗೆ 1 ರಿಂದ 2 ಚಮಚದಷ್ಟು ಮೊಸರು ಹಾಕಿ ಚೆನ್ನಾಗಿ ಮಗುಚಬೇಕು. ನೀವು ಪ್ಯಾಕೆಟ್ ಹಾಲು ಬಳಸುತ್ತಿದ್ದರೆ ಅಥವಾ ಚಳಿ ಪ್ರದೇಶದಲ್ಲಿದ್ದರೆ 2 ಚಮಚದಷ್ಟು ಮೊಸರು ಹಾಕಿ.., ಇಲ್ಲವೇ 1 ಚಮಚ ಸಾಕಾಗುತ್ತದೆ.
- ಈಗ ಮುಚ್ಚಳ ಮುಚ್ಚಿ 6-7 ಘಂಟೆಗಳ ಕಾಲ ಹಾಗೆ ಇಡಿ. ಮೊಸರು ಆಗಲು ಬೇಕಾದ ಈ ಸಮಯ ಕೂಡ ನೀವಿರುವ ಪ್ರದೇಶದ ಹವಾಮಾನವನ್ನು ಅವಲಂಬಿಸಿರುತ್ತದೆ. ಈ ಸಮಯದಲ್ಲಿ ಪಾತ್ರೆಯನ್ನು ಅಲ್ಲಾಡಿಸಬಾರದು. ಜಾಸ್ತಿ ಮೊಸರು ಹಾಕುವುದು ಅಥವಾ ತುಂಬಾ ಸಮಯ ಬಿಡುವುದು ಮಾಡಿದಲ್ಲಿ ಮೊಸರು ಹುಳಿಯಾಗುವ ಸಾಧ್ಯತೆಯೂ ಇದೆ. ಹೇಳಿದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊಸರು ಮಾಡಿದಲ್ಲಿ ರುಚಿಕರ ಗಟ್ಟಿ ಮೊಸರು ಮಾಡಲು ಸಾಧ್ಯವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ