ಗುರುವಾರ, ಜನವರಿ 7, 2016

Akki rotti recipe in Kannada | ಮಲೆನಾಡು ಶೈಲಿಯ ಅಕ್ಕಿರೊಟ್ಟಿ


ಮಲೆನಾಡು ಶೈಲಿಯ ಎಣ್ಣೆ ಅಕ್ಕಿರೊಟ್ಟಿ

ಅಕ್ಕಿ ರೊಟ್ಟಿ ಕರ್ನಾಟಕದ ಅತ್ಯಂತ ಟೇಸ್ಟಿ ಮತ್ತು ಅತ್ಯಂತ ಪ್ರಸಿದ್ಧವಾದ ಉಪಹಾರವಾಗಿದೆ. ಅಕ್ಕಿ ರೊಟ್ಟಿ ಕರ್ನಾಟಕ ರಾಜ್ಯದಾದ್ಯಂತ ಆಚರಣೆಯಲ್ಲಿದೆ, ಆದರೆ ಪದಾರ್ಥಗಳು ಮತ್ತು ಪಾಕವಿಧಾನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ. ಈ ಕೆಳಗೆ ವಿವರಿಸಿರುವ ಅಕ್ಕಿ ರೊಟ್ಟಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ. ಈ ಅಕ್ಕಿ ರೊಟ್ಟಿಯನ್ನು ಅಕ್ಕಿಹಿಟ್ಟು, ಈರುಳ್ಳಿ, ಹಸಿರು ಹಸಿರುಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು. 
ಅಕ್ಕಿರೊಟ್ಟಿ ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಅಕ್ಕಿಹಿಟ್ಟು
  2. 2.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 2 - 4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 4 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
  6. ಉಪ್ಪು ರುಚಿಗೆ ತಕ್ಕಷ್ಟು
  7. ರೊಟ್ಟಿ ಮಾಡಲು ಅಡುಗೆ ಎಣ್ಣೆ
  8. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಮಲೆನಾಡು ಶೈಲಿಯ ಅಕ್ಕಿರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
  2. ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  3. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
  4. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  5. ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ (ನಾನ್-ಸ್ಟಿಕ್ ಆದರೆ ಉತ್ತಮ) ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
  6. ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...