ಟೊಮ್ಯಾಟೋ ಬಾತ್ ಅಥವಾ ಟೊಮ್ಯಾಟೋ ರೈಸ್ ಅಥವಾ ಟೊಮ್ಯಾಟೋ ಪಲಾವ್ ನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಇದೊಂದು ಕರ್ನಾಟಕದ ಜನಪ್ರಿಯ ಬೆಳಗ್ಗಿನ ಉಪಹಾರವಾಗಿದ್ದು ಇದನ್ನು ಮಕ್ಕಳು ಸಹ ಬಹಳ ಇಷ್ಟಪಡುತ್ತಾರೆ. ಟೊಮ್ಯಾಟೋ ಬಾತ್ ಬಹಳ ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಇದನ್ನು ಬೆಳಗ್ಗಿನ ಉಪಹಾರ ಅಥವಾ ಊಟದ ಸಮಯದಲ್ಲಿ ಬಡಿಸಬಹುದು. ಈ ಟೊಮ್ಯಾಟೋ ಬಾತ್ ಸಾಧಾರಣವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಇದನ್ನು ಅಕ್ಕಿ, ಈರುಳ್ಳಿ, ಟೊಮ್ಯಾಟೋ ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾಗುತ್ತದೆ.
ಸಾಧಾರಣವಾಗಿ ಕರ್ನಾಟಕದಲ್ಲಿ, ಟೊಮ್ಯಾಟೋ ಬಾತ್ ನ್ನು ಎರಡು ರೀತಿಯಲ್ಲಿ ತಯಾರಿಸುತ್ತಾರೆ. ಒಂದು ಮಸಾಲೆ ಅರೆದು, ಮತ್ತು ಇನ್ನೊಂದು ಅರೆಯದೇ ನೇರವಾಗಿ ಮಸಾಲೆ ಮತ್ತು ಮಾಸಲಾ ಪುಡಿಗಳನ್ನು ಉಪಯೋಗಿಸಿ ಮಾಡುವುದು. ಈಗ ನಾನು ಇಲ್ಲಿ ವಿವರಿಸುವ ಟೊಮ್ಯಾಟೋ ಬಾತ್ ಮಸಾಲೆ ಅರೆದು ಮಾಡುವ ವಿಧಾನವಾಗಿದ್ದು, ಬಹಳ ರುಚಿಕರವಾಗಿರುತ್ತದೆ. ಹಾಗೂ ಇದನ್ನು ಪ್ರೆಶರ್ ಕುಕ್ಕರ್ ಉಪಯೋಗಿಸಿ ಮಾಡಲಾಗುತ್ತದೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 3 ಜನರಿಗೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 2 ಕಪ್ ಅಕ್ಕಿ (ಸೋನಾ ಮಸೂರಿ)
- 2 ದೊಡ್ಡ ಈರುಳ್ಳಿ
- 4 ದೊಡ್ಡ ಟೊಮ್ಯಾಟೋ
- 1/2 ಟೀಸ್ಪೂನ್ ಸಾಸಿವೆ
- 2 ಚಕ್ರ ಮೊಗ್ಗು / ಪುಲಾವ್ ಎಲೆ
- 1/4 ಟೀಸ್ಪೂನ್ ಅರಶಿನ ಪುಡಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 8-10 ಟೀಸ್ಪೂನ್ ಅಡುಗೆ ಎಣ್ಣೆ
- 4 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
- 2 ಟೀಸ್ಪೂನ್ ಕಲ್ಲುಪ್ಪು(ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
ಬೇಕಾಗುವ ಪದಾರ್ಥಗಳು (ಮಸಾಲೆ ಅರೆಯಲು):
- 1 ಕಪ್ ತೆಂಗಿನತುರಿ
- 2ಸೆಮೀ ಉದ್ದದ ಶುಂಠಿ
- 5-6 ಎಸಳು ಬೆಳ್ಳುಳ್ಳಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 2-4 ಒಣ ಮೆಣಸಿನಕಾಯಿ
- 1 ಬೆರಳುದ್ದ ಚಕ್ಕೆ
- 8-10 ಲವಂಗ
- 1 ಏಲಕ್ಕಿ
- 1 ಕಪ್ ನೀರು ಅರೆಯಲು
ಟೊಮ್ಯಾಟೋ ಬಾತ್ | ಟೊಮ್ಯಾಟೋ ರೈಸ್ ಮಾಡುವ ವಿಧಾನ:
- ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
- ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ. ಈಗ ಒಂದು 3ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಹಾಕಿ. 1/2 ಟೀಸ್ಪೂನ್ ಸಾಸಿವೆ ಮತ್ತು ಚಕ್ರ ಮೊಗ್ಗು ಹಾಕಿ, ಹುರಿಯಿರಿ.
- ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
- ಅರಶಿನ ಮತ್ತು ಉಪ್ಪು ಹಾಕಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಅರೆದ ಮಸಾಲೆ ಹಾಕಿ, ಮಸಾಲೆಯ ಹಸಿ ವಾಸನೆ ಹೋಗುವವರೆಗೆ ಅಂದರೆ ಒಂದೆರಡು ನಿಮಿಷ ಹುರಿಯಿರಿ.
- ಮಸಾಲೆ ಹುರಿಯುತ್ತಿರುವಾಗಲೇ 2 ಕಪ್ ಅಕ್ಕಿ ತೊಳೆದು ಹಾಕಿ. 4 ಕಪ್ ನೀರು ಹಾಕಿ(ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ). 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ಒಮ್ಮೆ ಚೆನ್ನಾಗಿ ಮಗುಚಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.
super.....
ಪ್ರತ್ಯುತ್ತರಅಳಿಸಿ