ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ ತುಂಬಾ ಸರಳ ಮತ್ತು ರುಚಿಕರ ಚಟ್ನಿಯಾಗಿದ್ದು ಅನ್ನದೊಂದಿಗೆ ಚೆನ್ನಾಗಿ ಸೇರುತ್ತದೆ. ನಾವು ಸಾಧಾರಣವಾಗಿ ಕಲ್ಲಂಗಡಿ ಹಣ್ಣಿನ ಜೂಸ್ ಮಾಡುವಾಗ ಅಥವಾ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿನ್ನುವಾಗ ಅದರ ಬಿಳಿಭಾಗವನ್ನು ತೆಗೆಯುತ್ತೇವೆ. ಹಾಗೆ ತೆಗೆದ ಬಿಳಿಭಾಗವನ್ನು ನೀವು ಎಸೆಯುತ್ತೀರಾದರೆ, ಒಮ್ಮೆ ಈ ಚಟ್ನಿ ಪ್ರಯತ್ನಿಸಿ. ಇದು ಬಹಳ ರುಚಿಕರವಾಗಿರುತ್ತದೆ.
ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಹಾಗಾಗಿ ಅದನ್ನು ಬಿಸಾಡುವ ಬದಲು ಈ ಚಟ್ನಿ ಅಥವಾ ಇನ್ನಾವುದೇ ರೂಪದಲ್ಲಿ ತಿನ್ನುವುದು ಆರೋಗ್ಯದ ದೃಷ್ಟಿಯಲ್ಲೂ ಮತ್ತು ಪರಿಸರದ ದೃಷ್ಟಿಯಲ್ಲೂ ಒಳ್ಳೆಯದು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 4 ಕಪ್ ಕಲ್ಲಂಗಡಿ ಹಣ್ಣಿನ ಬಿಳಿ ಭಾಗ
- 1 ಕಪ್ ತೆಂಗಿನ ತುರಿ
- 1-2 ಒಣ ಮೆಣಸಿನಕಾಯಿ / ಹಸಿ ಮೆಣಸಿನಕಾಯಿ
- 4 ಟೀಸ್ಪೂನ್ ಉದ್ದಿನ ಬೇಳೆ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
- 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು.
ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ ಮಾಡುವ ವಿಧಾನ:
- ಕಲ್ಲಂಗಡಿ ಹಣ್ಣನ್ನು ತೊಳೆದು ಕತ್ತರಿಸಿ. ಹಣ್ಣಿನ ಬಿಳಿಭಾಗವನ್ನು ತೆಗೆದುಕೊಂಡು 1 ಇಂಚು ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪವೇ ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಿ.
- ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವ ವರೆಗೆ ಹುರಿಯಿರಿ.
- ಬೇಯಿಸಿದ ಬಿಳಿಭಾಗ ತಣ್ಣಗಾಗುವ ವರೆಗೆ ಕಾದು, ಒಂದು ಮಿಕ್ಸೀ ಜಾರಿಗೆ ಬೇಯಿಸಿದ ಬಿಳಿಭಾಗ ಮತ್ತು ತೆಂಗಿನ ತುರಿ ಸೇರಿಸಿ ಅರೆದು ಕೊಳ್ಳಿ. ಅದಕ್ಕೆ ಹುಣಸೆ ಹಣ್ಣು ಮತ್ತು ಹುರಿದ ಮಸಾಲೆ ಸೇರಿಸಿ ಪುನಃ 10 ಸೆಕೆಂಡುಗಳ ಕಾಲ ಅರೆಯಿರಿ. ಈ ರುಚಿಕರವಾದ ಚಟ್ನಿಯನ್ನು ಬಿಸಿಯಾದ ಅನ್ನದೊಂದಿಗೆ ಅಥವಾ ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ