ಬೀಟ್ರೂಟ್ ಪಲ್ಯದ ಪಾಕವಿಧಾನವನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಬೀಟ್ರೂಟ್ ಪಲ್ಯವನ್ನು ತುರಿದ ಬೀಟ್ರೂಟ್, ತೆಂಗಿನಕಾಯಿ ತುರಿ ಮತ್ತು ಕೆಲವು ಮಸಾಲೆಗಳು ಬಳಸಿಕೊಂಡು ತಯಾರಿಸಲಾಗುತ್ತದೆ. ಈ ಪಲ್ಯವನ್ನು ಅನ್ನ ಅಥವಾ ಚಪಾತಿ ಜೊತೆ ಬಡಿಸಬಹುದು.
ಕೆಲವು ತರಕಾರಿಗಳು ಸ್ವಾಭಾವಿಕವಾಗಿ ರುಚಿಕರವಾಗಿರುತ್ತದೆ. ಮತ್ತು ಅವುಗಳಿಂದ ಅಡುಗೆ ತಯಾರಿಸುವಾಗ ಹೆಚ್ಚಿನ ಮಾಸಲಾ ಪದಾರ್ಥಗಳನ್ನು ಸೇರಿಸುವ ಅಗತ್ಯವೂ ಇರುವುದಿಲ್ಲ. ಅಥವಾ ಹಾಗೇನಾದರೂ ಬಹಳಷ್ಟು ಮಸಾಲೆಗಳನ್ನು ಬಳಸಿದಲ್ಲಿ ಆ ತರಕಾರಿಯ ಸ್ವಾಭಾವಿಕ ರುಚಿ ಮತ್ತು ಸ್ವಾದ ಕಡಿಮೆಯಾಗಿ ಮಸಾಲೆ ರುಚಿಯೇ ಎದ್ದು ಕಾಣುವುದು. ಇದಕ್ಕೆ ಈಗ ನಾನು ವಿವರಿಸಲಿರುವ ಬೀಟ್ರೂಟ್ ಪಲ್ಯವೇ ಉದಾಹರಣೆ. ಇದು ಬಹಳ ಸುಲಭ ಮತ್ತು ಆರೋಗ್ಯಕರ ಅಡುಗೆಯಾಗಿದ್ದು ಇದಕ್ಕೆ ಹೆಚ್ಚಿನ ಮಸಾಲೆಗಳನ್ನು ಬಳಸಲಾಗುವುದಿಲ್ಲ.
ಬೀಟ್ರೂಟ್ ಪೋಷಕಾಂಶಗಳು ಮತ್ತು ಅನೇಕ ಔಷಧೀಯ ಮೌಲ್ಯಗಳನ್ನು ಹೊಂದಿರುವ ಒಂದು ಸಂಪೂರ್ಣ ತರಕಾರಿ. ಬೀಟ್ರೂಟ್ನಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ, ಕಬ್ಬಿಣ, ವಿಟಮಿನ್ ಎ, ಬಿ 6 ಮತ್ತು ಸಿ, ಫೋಲಿಕ್ ಆಮ್ಲ, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಆಂಟಿ ಆಕ್ಸಿಡೆಂಟ್ಸ್ ಮತ್ತು ನಾರಿನಂಶ ಹೇರಳವಾಗಿವೆ. ಅನೇಕ ಅಧ್ಯಯನಗಳು ಬೀಟ್ರೂಟ್ನ ನಿಯಮಿತ ಬಳಕೆ ಬೊಜ್ಜು, ಮಧುಮೇಹ ಮತ್ತು ಹೃದಯ ರೋಗದ ಅಪಾಯವನ್ನು ತಡೆಗಟ್ಟಬಹುದೆಂದು ತಿಳಿಸಿವೆ. ಅಲ್ಲದೆ ಬೀಟ್‌ರೂಟ್ ದೇಹದ ತೂಕ ಕಡಿಮೆ ಮಾಡಲು, ಚರ್ಮದ ಕಾಂತಿಗೆ ಮತ್ತು ಸೊಂಪಾದ ಕೂದಲಿಗೆ ಸಹಕಾರಿ ಎನ್ನಲಾಗಿದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಬೀಟ್ರೂಟ್ ಸೇವನೆ ಮಾಡುವುದು ಒಳ್ಳೆಯದು.
ಬೀಟ್‌ರೂಟ್ ಪಲ್ಯ ವೀಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಮಧ್ಯಮ ಗಾತ್ರದ ಬೀಟ್ರೂಟ್
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 4 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1 ಚಿಟಿಕೆ ಅರಿಶಿನ ಪುಡಿ
- 4 - 5 ಕರಿಬೇವಿನ ಎಲೆ
- 1-2 ಹಸಿರು ಮೆಣಸಿನ ಕಾಯಿ
- 1/2 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು
- 1/4 ಕಪ್ ನೀರು
ಬೀಟ್‌ರೂಟ್ ಪಲ್ಯ ಮಾಡುವ ವಿಧಾನ:
- ಬೀಟ್‌ರೂಟನ್ನು ಸಿಪ್ಪೆ ತೆಗೆದು, ತೊಳೆದು, ತುರಿಯಿರಿ.
- ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ ಮತ್ತು ಕರಿಬೇವಿನ ಎಲೆ ಹಾಕಿ.
- ತುರಿದ ಬೀಟ್‌ರೂಟ್, ಉಪ್ಪು ಮತ್ತು ನೀರು ಹಾಕಿ ಮಗುಚಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
- ಬೀಟ್‌ರೂಟ್ ಬೇಯುವವರೆಗೆ ಕಾಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ. ನಂತರ ತೆಂಗಿನತುರಿ ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ