ರುಚಿಕರ ಅನಾನಸ್ ಹಣ್ಣಿನ ಪಾಯಸವನ್ನು ಇಲ್ಲಿ ವಿವರಿಸಲಾಗಿದೆ. ಈ ಪಾಯಸವನ್ನು ಅನಾನಸ್ ಹಣ್ಣು, ಬೆಲ್ಲ ಮತ್ತು ತೆಂಗಿನ ಕಾಯಿ ಹಾಲನ್ನು ಉಪಯೋಗಿಸಿ ಮಾಡಲಾಗುತ್ತದೆ. ತೆಂಗಿನ ಕಾಯಿ ಹಾಲನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು, ಇಲ್ಲವಾದಲ್ಲಿ ಅಂಗಡಿಯಿಂದಲೂ ಕೊಂಡು ಕೊಳ್ಳಬಹುದು.
ಈ ಪಾಯಸವನ್ನು ನಾನು ನನ್ನ ಅತ್ತೆಯಿಂದ ಕಲಿತೆ. ನನ್ನತ್ತೆ ಅನೇಕ ರೀತಿಯ ಪಾಯಸ ಮಾಡುತ್ತಾರೆ. ಹಲಸಿನ ಹಣ್ಣಿನ ಪಾಯಸ, ಗೆಣಸಿನ ಪಾಯಸ, ಗಸಗಸೆ ಪಾಯಸ, ಕ್ಯಾರೆಟ್ ಪಾಯಸ, ಮುಳ್ಳುಸೌತೆ ಪಾಯಸ, ಗೋಧಿ ಪಾಯಸ ಹೀಗೆ ಪಟ್ಟಿ ಮುಂದುವರೆಯುತ್ತದೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂ ಎಲ್)
- 1 ಮಧ್ಯಮ ಗಾತ್ರದ ಅನಾನಸ್ / 2 ಕಪ್ ಸಣ್ಣದಾಗಿ ಹೆಚ್ಚಿದ ಅನಾನಸ್
- 2 ಕಪ್ ಬೆಲ್ಲ (ನಿಮ್ಮ ರುಚಿ ಪ್ರಕಾರ)
- 4 ಕಪ್ ಹಾಲು ತೆಂಗಿನಕಾಯಿ.
- 3 ಟೀಸ್ಪೂನ್ ಅಕ್ಕಿ ಹಿಟ್ಟು
- 2 ಟೀಸ್ಪೂನ್ ತುಪ್ಪ
- 8-10 ಗೋಡಂಬಿ
- 8-10 ಒಣದ್ರಾಕ್ಷಿ
- 2 ಕಪ್ ನೀರು
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- ಒಂದು ಚಿಟಿಕೆ ಉಪ್ಪು
ಅನಾನಸ್ ಹಣ್ಣಿನ ಪಾಯಸ ಮಾಡುವ ವಿಧಾನ:
- ಒಂದು ಮಧ್ಯಮ ಗಾತ್ರದ ಚೆನ್ನಾಗಿ ಹಣ್ಣಾಗಿರುವ ಅನಾನಸ್ ತೆಗೆದುಕೊಂಡು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.
- ಈಗ ಅನಾನಸ್ ಹಣ್ಣನ್ನು ಉದ್ದಕ್ಕೆ ಕತ್ತರಿಸಿ ಮಧ್ಯಭಾಗದ ಗಟ್ಟಿ ದಿಂಡು ಅಥವಾ ತಿರುಳನ್ನು ತೆಗೆಯಿರಿ.
- ಈಗ ಅನಾನಸ್ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ.
- ಒಂದು ಪಾತ್ರೆಯಲ್ಲಿ 2 ಕಪ್ ಪುಡಿ ಮಾಡಿದ ಬೆಲ್ಲ ಮತ್ತು 2 ಕಪ್ ನೀರು ತೆಗೆದುಕೊಂಡು ಕುದಿಯಲು ಇಡಿ.
- ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ಈ ಬೆಲ್ಲದ ನೀರನ್ನು ನಾವು ಸ್ವಲ್ಪ ಸಮಯದ ನಂತರ ಬಳಸಲಿದ್ದೇವೆ.
- ಈಗ ಒಂದು ದಪ್ಪ ತಳದ ಪಾತ್ರೆಯಲ್ಲಿ 2 ಟೀಸ್ಪೂನ್ ತುಪ್ಪ ತೆಗೆದುಕೊಂಡು ಗೋಡಂಬಿ ಹುರಿದು ಪಕ್ಕಕ್ಕಿಡಿ.
- ಈಗ ಅದೇ ಪಾತ್ರೆಯಲ್ಲಿ ಒಣದ್ರಾಕ್ಷಿ ಹುರಿದು ಪಕ್ಕಕ್ಕಿಡಿ.
- ನಂತರ ಆ ಪಾತ್ರೆಗೆ ಸಣ್ಣದಾಗಿ ಹೆಚ್ಚಿದ ಅನಾನಸ್ ತುಂಡುಗಳನ್ನು ಹಾಕಿ ಹುರಿಯಲು ಪ್ರಾರಂಭಿಸಿ.
- ಮಧ್ಯಮ ಜ್ವಾಲೆಯಯಲ್ಲಿ 5 ನಿಮಿಷ ಅನಾನಸ್ ಹಣ್ಣನ್ನು ಹುರಿಯಿರಿ. ಆಗ ಅನಾನಸ್ ಹಣ್ಣಿನ ಚೂರು ಮೃದುವಾಗುತ್ತದೆ ಮತ್ತು ಸ್ವಲ್ಪ ಬಣ್ಣ ಬದಲಾವಣೆಯನ್ನು ನೀವು ಗಮನಿಸಬಹುದು.
- ಈಗ ಹುರಿದ ಅನಾನಸ್ಗೆ ಬೆಲ್ಲದ ನೀರು ಸೇರಿಸಿ. ಒಂದು ಜರಡಿ ಬಳಸಿಕೊಂಡು ಬೆಲ್ಲದ ನೀರನ್ನು ಸೋಸಿ ಹಾಕಿದಲ್ಲಿ ಬೆಲ್ಲದ ಕಲ್ಮಶಗಳನ್ನು ತೆಗೆಯಬಹುದು.
- ಬೆಲ್ಲದ ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಉರಿ ಕಡಿಮೆ ಮಾಡಿ ಅನಾನಸ್ ನ್ನು ಬೆಲ್ಲದ ನೀರಿನಲ್ಲಿ ಬೇಯಲು ಬಿಡಿ.
- ಸುಮಾರು 10 ರಿಂದ 15 ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಅನಾನಸ್ ಚೂರುಗಳು ಬೆಂದು ಇನ್ನಷ್ಟು ಮೃದುವಾಗುತ್ತದೆ.
- ಈಗ ತೆಂಗಿನ ಕಾಯಿ ಹಾಲನ್ನು ಹಾಕಿ. ತೆಂಗಿನ ಕಾಯಿ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಥವಾ ಅಂಗಡಿಯಿಂದ ಖರೀದಿಸಬಹುದು. ನಾನು 4 ಕಪ್ ತೆಂಗಿನ ತುರಿ ಮತ್ತು 4 ಕಪ್ ನೀರು ಬಳಸಿಕೊಂಡು ಕಾಯಿ ಹಾಲನ್ನು ತಯಾರಿಸಿದ್ದೇನೆ. ಕಾಯಿಹಾಲು ತಯಾರಿ ವಿಧಾನವನ್ನು ನಾನೀಗಾಗಲೇ ವಿವರಿಸಿದ್ದೇನೆ.
- ಈಗ ಒಂದು ಬಟ್ಟಲಿನಲ್ಲಿ 3 ಟೀಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ.
- ಈ ಅಕ್ಕಿ ಹಿಟ್ಟು ಪೇಸ್ಟ್ ನ್ನು ಪಾಯಸಕ್ಕೆ ಸೇರಿಸಿ. ಅಕ್ಕಿ ಹಿಟ್ಟು ಪೇಸ್ಟ್ ಸೇರಿಸುವುದರಿಂದ ಪಾಯಸಕ್ಕೆ ಒಳ್ಳೆ ರುಚಿ ಬರುತ್ತದೆ. ಈ ಹಂತದ ನಂತರ ನೀವು ಪಾಯಸವನ್ನು ಆಗಾಗ್ಯೆ ಮಗುಚುತ್ತಾ ಇರಬೇಕಾಗುತ್ತದೆ.
- ಈಗ ಒಂದು ದೊಡ್ಡ ಚಿಟಿಕೆ ಉಪ್ಪು ಸೇರಿಸಿ. ಉಪ್ಪು ಸೇರಿಸಿದಲ್ಲಿ ಪಾಯಸದ ರುಚಿ ಎದ್ದು ಬರುತ್ತದೆ.
- ನಂತರ ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ಪಾಯಸ ಕುಡಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ತೆಂಗಿನ ಕಾಯಿ ಹಾಲು ಸೇರಿಸಿದ ನಂತರ ತುಂಬಾ ಹೊತ್ತು ಪಾಯಸ ಮಗುಚ ಬಾರದು. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
I liked this recipe very much
ಪ್ರತ್ಯುತ್ತರಅಳಿಸಿ