ಶುಕ್ರವಾರ, ಫೆಬ್ರವರಿ 19, 2016

Goli baje - Mangalore bajji in kannada | ಗೋಳಿಬಜೆ ಮಾಡುವ ವಿಧಾನ | ಮಂಗಳೂರು ಬಜ್ಜಿ ಮಾಡುವ ವಿಧಾನ


 ಗೋಳಿಬಜೆ ಮಾಡುವ ವಿಧಾನ

ಗೋಳಿಬಜೆ ಅಥವಾ ಮಂಗಳೂರು ಬಜ್ಜಿ ಸಂಜೆ ಸಮಯದಲ್ಲಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕುರುಕಲು ತಿಂಡಿಯಾಗಿದೆ. ಇದನ್ನು ಮೈದಾ ಹಿಟ್ಟು, ಮೊಸರು ಮತ್ತು ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಇದೊಂದು ಮಂಗಳೂರಿನಲ್ಲಿ ಹುಟ್ಟಿದ ತಿಂಡಿಯಾಗಿದ್ದು ಮಂಗಳೂರಿನಲ್ಲಿ ಗೋಳಿಬಜೆ ಎಂದು ಕರೆಯುತ್ತಾರೆ. ಬೇರೆ ಪ್ರದೇಶಗಳಲ್ಲಿ ಮಂಗಳೂರು ಬಜ್ಜಿ ಅಥವಾ ಮಂಗಳೂರು ಬೋಂಡಾ ಎಂಬ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಮೈಸೂರ್ ಬೋಂಡಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ತಯಾರಿ ಸಮಯ: 3 ಘಂಟೆ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು - ವಿಧಾನ 1: ( ಅಳತೆ ಕಪ್ = 120 ಎಂಎಲ್ )

  1. 1 ಕಪ್ ಮೈದಾ ಹಿಟ್ಟು
  2. 1/2 ಕಪ್ ಮೊಸರು
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಸಕ್ಕರೆ
  5. 1/8 ಟೀಸ್ಪೂನ್ ಅಡುಗೆ ಸೋಡಾ
  6. 1 ಟೀಸ್ಪೂನ್ ಅಕ್ಕಿ ಹಿಟ್ಟು (ಗರಿ ಗರಿಯಾಗಲು - ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು - ವಿಧಾನ 2: ( ಅಳತೆ ಕಪ್ = 120 ಎಂಎಲ್ )
  1. 1 ಕಪ್ ಮೈದಾ ಹಿಟ್ಟು
  2. 1/2 ಕಪ್ ಮೊಸರು
  3. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  4. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು
  5. 1/2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  6. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ತೆಂಗಿನಕಾಯಿ ಚೂರುಗಳು
  7. 1/8 ಟೀಸ್ಪೂನ್ ಅಡುಗೆ ಸೋಡಾ
  8. 1 ಟೀಸ್ಪೂನ್ ಅಕ್ಕಿ ಹಿಟ್ಟು (ಗರಿ ಗರಿಯಾಗಲು - ಬೇಕಾದಲ್ಲಿ)
  9. ಉಪ್ಪು ರುಚಿಗೆ ತಕ್ಕಷ್ಟು

ಗೋಳಿ ಬಜೆ ಅಥವಾ ಮಂಗಳೂರು ಬಜ್ಜಿ ಮಾಡುವ ವಿಧಾನ 1:

  1. ಮೈದಾ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಸಕ್ಕರೆ, ಉಪ್ಪು, ಜೀರಿಗೆ ಮತ್ತು ಸೋಡಾ ಹಾಕಿ.
  2. ಈಗ ಅದಕ್ಕೆ 1/2 ಕಪ್ ಮೊಸರು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಚಪಾತಿಗಿಂತ ಮೆತ್ತಗೆ ಮತ್ತು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ಜಾಸ್ತಿ ಗಟ್ಟಿಯಾದಲ್ಲಿ ಗೋಳಿಬಜೆ ಗಟ್ಟಿಯಾಗುವುದು ಮತ್ತು ಹಿಟ್ಟು ತೆಳ್ಳಗಾದಲ್ಲಿ ಗೋಳಿಬಜೆ ಎಣ್ಣೆ ಹೀರಿಕೊಳ್ಳುವುದು. ಆದ್ದರಿಂದ ಬೇಕಾದಲ್ಲಿ ಹಿಟ್ಟನ್ನು ಹದಗೊಳಿಸಲು 1 ರಿಂದ 2 ಟೀಸ್ಪೂನ್ ನೀರು ಅಥವಾ ಹಿಟ್ಟು ಉಪಯೋಗಿಸಿ.
  3. ಗಂಟು ಇಲ್ಲದಂತೆ ಚೆನ್ನಾಗಿ ಕಲಸಿದ ಮೇಲೆ, ಒಂದು ಮುಚ್ಚಳ ಮುಚ್ಚಿ ಹಿಟ್ಟನ್ನು 2-3 ಘಂಟೆ ಹುದುಗಲು ಬಿಡಬೇಕು. ಸಮಯವಿಲ್ಲವಾದಲ್ಲಿ ಒಂದರ್ಧ ಘಂಟೆ ಬಿಟ್ಟು ಮಾಡಬಹುದು. ಆದರೆ ಗೋಳಿಬಜೆ ಚೆನ್ನಾಗಿ ಬರಲು 2-3 ಘಂಟೆ ಬಿಟ್ಟರೆ ಒಳ್ಳೆಯದು.
  4. ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಎಣ್ಣೆಯಲ್ಲಿ ಜಾಗ್ರತೆಯಿಂದ ಚಿವುಟಿದಂತೆ ಹಾಕಿ.
  5. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ, ಆಗಾಗ್ಯೆ ತಿರುವುತ್ತಾ ಕಾಯಿಸಿ. ಕಾಯಿ ಚಟ್ನಿ ಮತ್ತು ಚಹದೊಂದಿಗೆ ಸವಿಯಿರಿ.

ಗೋಳಿ ಬಜೆ ಅಥವಾ ಮಂಗಳೂರು ಬಜ್ಜಿ ಮಾಡುವ ವಿಧಾನ 2:

  1. ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆ ಮತ್ತು ತೆಂಗಿನಕಾಯಿಯನ್ನು ಕತ್ತರಿಸಿ ಕೊಳ್ಳಿ. ಹಾಗೆ ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  2. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಶುಂಠಿ, ಹಸಿರುಮೆಣಸು, ಕರಿಬೇವಿನ ಎಲೆ, ತೆಂಗಿನಕಾಯಿ ಚೂರು, ಉಪ್ಪು ಮತ್ತು ಅಡುಗೆ ಸೋಡಾ ಹಾಕಿ. ಈಗ ಅದಕ್ಕೆ 1/2 ಕಪ್ ಮೊಸರು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಚಪಾತಿಗಿಂತ ಮೆತ್ತಗೆ ಮತ್ತು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ಜಾಸ್ತಿ ಗಟ್ಟಿಯಾದಲ್ಲಿ ಗೋಳಿಬಜೆ ಗಟ್ಟಿಯಾಗುವುದು ಮತ್ತು ಹಿಟ್ಟು ತೆಳ್ಳಗಾದಲ್ಲಿ ಗೋಳಿಬಜೆ ಎಣ್ಣೆ ಹೀರಿಕೊಳ್ಳುವುದು. ಆದ್ದರಿಂದ ಬೇಕಾದಲ್ಲಿ ಹಿಟ್ಟನ್ನು ಹದಗೊಳಿಸಲು 1 ರಿಂದ 2 ಟೀಸ್ಪೂನ್ ನೀರು ಅಥವಾ ಹಿಟ್ಟು ಉಪಯೋಗಿಸಿ.
  3. ಗಂಟು ಇಲ್ಲದಂತೆ ಚೆನ್ನಾಗಿ ಕಲಸಿದ ಮೇಲೆ, ಒಂದು ಮುಚ್ಚಳ ಮುಚ್ಚಿ ಹಿಟ್ಟನ್ನು 2-3 ಘಂಟೆ ಹುದುಗಲು ಬಿಡಬೇಕು. ಸಮಯವಿಲ್ಲವಾದಲ್ಲಿ ಒಂದರ್ಧ ಘಂಟೆ ಬಿಟ್ಟು ಮಾಡಬಹುದು. ಆದರೆ ಗೋಳಿಬಜೆ ಚೆನ್ನಾಗಿ ಬರಲು 2-3 ಘಂಟೆ ಬಿಟ್ಟರೆ ಒಳ್ಳೆಯದು.
  4. ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಎಣ್ಣೆಯಲ್ಲಿ ಜಾಗ್ರತೆಯಿಂದ ಚಿವುಟಿದಂತೆ ಹಾಕಿ.
  5. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ, ಆಗಾಗ್ಯೆ ತಿರುವುತ್ತಾ ಕಾಯಿಸಿ. ಕಾಯಿ ಚಟ್ನಿ ಮತ್ತು ಚಹದೊಂದಿಗೆ ಸವಿಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...