ಬುಧವಾರ, ಫೆಬ್ರವರಿ 3, 2016

Mangalore style bannada southekayi sambar recipe | ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್



ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್

ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್ ಪಾಕವಿಧಾನ ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಮಂಗಳೂರು ಶೈಲಿಯ ಬಣ್ಣದ-ಸೌತೆಕಾಯಿ ಅಥವಾ ಸಾಂಬಾರ್-ಸೌತೆಕಾಯಿ ಸಾಂಬಾರ್ನ್ನು ತಾಜಾ ಹುರಿದ ಮಸಾಲೆಗಳು ಮತ್ತು ತುರಿದ ತೆಂಗಿನಕಾಯಿ ಬಳಸಿಕೊಂಡು ತಯಾರಿಸಲಾಗುತ್ತದೆ. ಈ ರೀತಿಯ ಸಾಂಬಾರ್ ಮಂಗಳೂರು, ಉಡುಪಿ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ. ಕರ್ನಾಟಕದಲ್ಲಿ ಸಾಂಬಾರ್ನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಮಂಗಳೂರು ಮತ್ತು ಉಡುಪಿ ವಲಯದಲ್ಲಿ "ಕೊದ್ದೆಲ್ ಅಥವಾ ಹುಳಿ" ಎಂದೂ, ಮಲೆನಾಡು ಪ್ರದೇಶದಲ್ಲಿ "ಹುಳಿ ಅಥವಾ ಹುಳಿ-ಸಾರು" ಎಂದೂ, ಉಳಿದ ಪ್ರದೇಶಗಳಲ್ಲಿ ಸಾರು ಅಥವಾ ಸಾಂಬಾರ್ ಎಂದು ಕರೆಯಲಾಗುತ್ತದೆ.
ಕರ್ನಾಟಕದ ಅಡುಗೆ ಎಷ್ಟು ಶ್ರೀಮಂತವಾಗಿದೆ ಎಂದರೆ ಇಲ್ಲಿ ಅನೇಕ ವಿಧವಾದ ಸಾಂಬಾರ್ ಗಳು ಆಚರಣೆಯಲ್ಲಿವೆ. ಸಾಂಬಾರ್ ಪಾಕವಿಧಾನ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಮತ್ತು ಬಳಸುವ ತರಕಾರಿಗಳ ಮೇಲೆ ಅವಲಂಬಿತವಾಗಿದೆ. ಎಷ್ಟರಮಟ್ಟಿಗೆ ಈ ವೆಬ್‌ಸೈಟ್ ನಲ್ಲಿ ನ್ಯಾಯ ಒದಗಿಸಬಲ್ಲೆವೋ ಗೊತ್ತಿಲ್ಲ. ಈಗ ಈ ಮಂಗಳೂರು ಶೈಲಿಯ ಬಣ್ಣದ-ಸೌತೆಕಾಯಿ ಉಪಯೋಗಿಸಿ ಮಾಡುವ ಸಾಂಬಾರ್ ನೊಂದಿಗೆ ಪ್ರಾರಂಭಿಸಿದ್ದೇವೆ. ನಾನು ವಾರದಲ್ಲೊಮ್ಮೆಯಾದರೂ ಈ ತರದ ಸಾಂಬಾರ್ ಮಾಡುತ್ತೇನೆ ಮತ್ತು ಅನ್ನದೊಂದಿಗೆ ರುಚಿಕರವಾಗಿರುತ್ತದೆ. .
ಈ ರೀತಿಯ ಸೌತೆಕಾಯಿ ಸಾಂಬಾರ್ ನಲ್ಲಿ ಹುಣಿಸೆ ಹಣ್ಣು ಬಳಸುವುದಿಲ್ಲ ಏಕೆಂದರೆ ಸೌತೆಕಾಯಿಯಲ್ಲೇ ಹುಳಿ ಅಂಶವಿರುತ್ತದೆ. ಸೌತೆಕಾಯಿ ಬದಲು ಬೂದು-ಕುಂಬಳ ಕಾಯಿಯನ್ನು ಉಪಯೋಗಿಸಬಹುದು. ಬೇಳೆಯ ಬದಲು ನೆನೆಸಿದ ಹೆಸರು ಅಥವಾ ಅಲಸಂದೆ ಕಾಳನ್ನು ಬಳಸಬಹುದು.
ಸೌತೆಕಾಯಿ ಸಾಂಬಾರ್ ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಮಧ್ಯಮ ಗಾತ್ರದ ಬಣ್ಣದ ಸೌತೆಕಾಯಿ / ಸಾಂಬಾರ್-ಸೌತೆಕಾಯಿ
  2. 2 ಟೇಬಲ್ ಚಮಚ ತೊಗರಿಬೇಳೆ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ಬೆಲ್ಲ

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 - 2 ಕಪ್ ತೆಂಗಿನ ತುರಿ (ನೀವಿಷ್ಟ ಪಡುವ ಸಾಂಬಾರ್ನ ದಪ್ಪ ಅವಲಂಬಿಸಿ)
  2. 2 - 3 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. ಒಂದು ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್ ಪಾಕ ವಿಧಾನ:

  1. ಸೌತೆಕಾಯಿಯನ್ನು ತೊಳೆದು, ಕತ್ತರಿಸಿ, ಮಧ್ಯದ ತಿರುಳನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನಿಮಗಿಷ್ಟ ಇದ್ದಲ್ಲಿ ಸಿಪ್ಪೆ ತೆಗೆಯಬಹುದು. ಆದರೆ ನಾನು ತೆಗೆಯುವುದಿಲ್ಲ. ಹೋಳುಗಳನ್ನು ಪುನಃ ಒಮ್ಮೆ ತೊಳೆದುಕೊಳ್ಳಿ ಏಕೆಂದರೆ ಕೆಲವು ಸೌತೆಕಾಯಿಯ ತಿರುಳು ಕಹಿಯಾಗಿರುತ್ತದೆ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. ಒಂದು ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಎರಡು ವಿಶಾಲ್ ಮಾಡಿ. ಅರಶಿನ ಮತ್ತು ಎಣ್ಣೆ ಹಾಕಿದರೆ ಬೇಳೆ ಚೆನ್ನಾಗಿ ಬೇಯುವುದು. ಈ ಹಂತದಲ್ಲಿ ಬೇಳೆ ಅರ್ಧ ಬೆಂದಿರುತ್ತದೆ.
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಸೌತೆಕಾಯಿ ಹೋಳು, 1 ಟೀಸ್ಪೂನ್ ಉಪ್ಪು ಮತ್ತು 2 ಲೋಟ ನೀರು ಹಾಕಿ ಪುನಃ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ತರಕಾರಿಯೊಂದಿಗೆ ಸಂಪೂರ್ಣ ಬೆಂದಿರುತ್ತದೆ.
  4. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಬೆಲ್ಲ ಹಾಕಿ.
  6. ಈಗ ಪುನಃ 1 ಕಪ್ ನೀರು ಅಥವಾ ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

3 ಕಾಮೆಂಟ್‌ಗಳು:

Related Posts Plugin for WordPress, Blogger...