ಹಂತ ಹಂತವಾದ ಚಿತ್ರಗಳ ಮೂಲಕ ಕರ್ನಾಟಕ ಶೈಲಿಯ ಸುಲಭ ಮತ್ತು ಸರಳ ಕೇಸರಿ ಬಾತ್ ಪಾಕವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕೇಸರಿ ಬಾತ್ ಕರ್ನಾಟಕದ ಬಹಳ ಜನಪ್ರಿಯ ಸಿಹಿ ತಿನಿಸಾಗಿದೆ. ಕೇಸರಿ ಬಾತ್ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಸಾಮಾನ್ಯ ದಿನಗಳಲ್ಲಿ ಮತ್ತು ಹಠಾತ್ ಅತಿಥಿಗಳು ಬಂದಾಗ ಹೀಗೆ ಎಲ್ಲ ಸಂದರ್ಭದಲ್ಲೂ ತಯಾರಿಸುವ ಬಹಳ ಸಾಮಾನ್ಯ ಸಿಹಿತಿನಿಸಾಗಿದೆ. ದಕ್ಷಿಣ ಕರ್ನಾಟಕದಲ್ಲಂತೂ ಕೇಸರಿ ಬಾತ್ ಮದುವೆ-ಮುಂಜಿಗಳಲ್ಲಿ ಬೆಳಗ್ಗಿನ ಉಪಹಾರದೊಂದಿಗೆ ಹೆಚ್ಚಾಗಿ ತಯಾರಿಸಲಾಗುತ್ತದೆ. ಕೇಸರಿ ಬಾತ್ ಸಾಧಾರಣವಾಗಿ ಬೆಳಗ್ಗಿನ ತಿಂಡಿಯೊಂದಿಗೆ ತಯಾರಿಸಲಾಗುತ್ತದೆ ಮತ್ತು ಒಂದೇ ತಟ್ಟೆಯಲ್ಲಿ ಉಪ್ಪಿಟ್ಟಿನೊಂದಿಗೆ (ಖಾರಾ ಬಾತ್) ಬಡಿಸಿದಾಗ ಅದನ್ನು "ಚೌ ಚೌ ಬಾತ್" ಎಂದು ಕರೆಯಲಾಗುತ್ತದೆ. ಮಂಗಳೂರು ಪ್ರದೇಶದಲ್ಲಿ ಕೇಸರಿ ಬಾತ್ ನ್ನು ಶೀರಾ ಎಂಬ ಹೆಸರಿನಿಂದ ಕರೆಯುತ್ತಾರೆ. ಉತ್ತರ ಭಾರತದಲ್ಲೂ ಸಹ ಈ ಸಿಹಿ ತಿನಿಸು ಜನಪ್ರಿಯವಾಗಿದೆ ಮತ್ತು ಶೀರಾ ಅಥವಾ ಸೂಜಿ ಹಲ್ವಾ ಎಂಬ ಹೆಸರಿನಿಂದ ಕರೆಯುತ್ತಾರೆ.
ಇನ್ನು "ಕೇಸರಿ ಬಾತ್" ಹೆಸರಿನ ಬಗ್ಗೆ ಹೇಳ ಬೇಕೆಂದರೆ ಈ ಸಿಹಿತಿನಿಸನ್ನು ಸಾಧಾರಣವಾಗಿ ಕೇಸರಿ ಬಣ್ಣ ಉಪಯೋಗಿಸಿ ತಯಾರಿಸುವುದರಿಂದ ಆ ಹೆಸರು ಬಂದಿರಬಹುದು. ಕೇಸರಿ ಬಣ್ಣದೊಂದಿಗೆ ಹಳದಿ ಅಥವಾ ಹಸಿರು ಬಣ್ಣದ ಕೇಸರಿ ಬಾತ್ ತಯಾರಿಸುವುದು ರೂಢಿಯಲ್ಲಿದೆ. ಈ ಬಣ್ಣಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನಾನು ಅರಿಶಿನ ಪುಡಿ ಬಳಸಿದ್ದೇನೆ. ಆದರೆ ಇತ್ತೀಚೆಗೆ ನಾನು ಕೇಸರಿ ಬಾತ್ ಬಗ್ಗೆ ಓದುವಾಗ ಕೆಲವರು ಕೇಸರಿಬಾತ್ ಹೆಸರು "ಕೇಸರಿ ದಳ" ಗಳಿಂದ ಬಂದಿದೆ ಎಂದು ಹೇಳುವುದರ ಜೊತೆಗೆ ಕೇಸರಿಬಾತ್ ಮಾಡುವಾಗ ಕೇಸರಿ ದಳಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿಯಪಟ್ಟೆ. ಆದರೆ ನಾನು ಕರ್ನಾಟಕದಲ್ಲಿ ಕೇಸರಿದಳ ಬಳಸಿಕೊಂಡು ಕೇಸರಿಬಾತ್ ಮಾಡುವುದನ್ನು ಇಲ್ಲಿ ವರೆಗೆ ನೋಡಿಲ್ಲ. ಹಾಗಾಗಿ ಇದೊಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಈ ಕೇಸರಿಬಾತ್ ಬಗ್ಗೆ ಇನ್ನೊಂದು ಹೇಳಲೇ ಬೇಕಾದ ಸಂಗತಿಯೆಂದರೆ ಇದೊಂದು ಅತ್ಯಂತ ಸಾಮಾನ್ಯ ಮತ್ತು ಸರಳ ಪಾಕವಿಧಾನ ಆದರೂ ಇದು ಸ್ವಲ್ಪ ನಾಜೂಕಾದ ಕೆಲಸವಾಗಿದೆ. ರುಚಿಕರವಾದ ಕೇಸರಿಬಾತ್ ತಯಾರಿಕೆಯಲ್ಲಿ ಎಡುವುವವರೇ ಹೆಚ್ಚು. ನಾನು ಇದಕ್ಕೆ ಹೊರತಲ್ಲ. ಎಷ್ಟೋ ಸಮಯದ ನಂತರ ಈಗ ಎಲ್ಲರೂ ಮೆಚ್ಚುವಂತಹ ರುಚಿಕರ ಕೇಸರಿಬಾತ್ ನ್ನು ನಾನು ತಯಾರಿಸಬಲ್ಲೆ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಈ ಪಾಕವಿಧಾನವನ್ನು ನಾನು ಕಲಿತದ್ದು ನನ್ನ ದೊಡ್ಡಣ್ಣನಿಂದ. ಆಶ್ಚರ್ಯಕರ ವಿಷಯವೆಂದರೆ ಬಹಳ ಅಪರೂಪಕ್ಕೆ ಅಡುಗೆ ಮಾಡುವ ಅಣ್ಣನಿಗೆ ಹಲವಾರು ಸಿಹಿತಿನಿಸುಗಳು ಮತ್ತು ಭಕ್ಷ್ಯಗಳು ಮಾಡುವ ಕಲೆ ಮತ್ತು ಪಾಕವಿಧಾನ ಚೆನ್ನಾಗಿ ತಿಳಿದಿದೆ. ನನ್ನಮ್ಮ ಮತ್ತು ನನ್ನ ಅತ್ತೆ ಸಹ ಪಾಕ ಪ್ರವೀಣೆಯರೇ. ಹಾಗಾಗಿ ನನಗೆ ಯಾವುದೇ ಅಡುಗೆಯಲ್ಲಿ ಅನುಮಾನ ಇದ್ದಲ್ಲಿ ನಾನು ಅಣ್ಣಾ, ಅಮ್ಮ ಅಥವಾ ಅತ್ತೆಗೆ ಕರೆ ಮಾಡುತ್ತೇನೆ. ಈಗ ನಾವು ಕರ್ನಾಟಕದ ಕೇಸರಿಬಾತ್ ನ್ನು ಸರಳ ಮತ್ತು ರುಚಿಕರವಾಗಿ ಮಾಡುವ ವಿಧಾನವನ್ನು ನೋಡೋಣ.
ತಯಾರಿ ಸಮಯ: 1 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 2 ಜನರಿಗೆ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 2 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್)
- 1 ಕಪ್ ಪೇಣಿ ರವೆ (ಸಣ್ಣ ರವೆ)
- 3 ಕಪ್ ನೀರು
- 1.5 ಕಪ್ ಸಕ್ಕರೆ
- 0.5 - 1 ಕಪ್ ತುಪ್ಪ (ಧಾರಾಳವಾಗಿರಿ)
- 1/2 ಟೀಸ್ಪೂನ್ ನಿಂಬೆ ಹಣ್ಣಿನ ರಸ (ಬೇಕಾದಲ್ಲಿ, ಹಾಕಿದರೆ ಚೆನ್ನ)
- 1/4 ಟೀಸ್ಪೂನ್ ಅರಶಿನ ಪುಡಿ
- ಒಂದು ಚಿಟಿಕೆ ಉಪ್ಪು
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- 5-6 ಗೋಡಂಬಿ
- 8-10 ಒಣ ದ್ರಾಕ್ಷಿ
ಕರ್ನಾಟಕ ಶೈಲಿಯ ಕೇಸರಿಬಾತ್ ಪಾಕವಿಧಾನ:
- ಒಂದು ಪಾತ್ರೆಯಲ್ಲಿ ನೀರು, ಸಕ್ಕರೆ, ಅರಶಿನಪುಡಿ, ಉಪ್ಪು ಮತ್ತು ಲಿಂಬೆರಸ ಹಾಕಿ ಕುದಿಯಲು ಇಡಿ. ಲಿಂಬೆರಸ ಮತ್ತು ಉಪ್ಪು ಹಾಕುವುದರಿಂದ ಕೇಸರಿಬಾತ್ ರುಚಿ ಹೆಚ್ಚುತ್ತದೆ. ನೀರು ಕುದಿಯಲು ಸ್ವಲ್ಪ ಹೊತ್ತು ಬೇಕಾಗುತ್ತದೆ ಅಷ್ಟರೊಳಗೆ ರವೆ ಹುರಿದು ಕೊಳ್ಳೋಣ. ಅದಕ್ಕಾಗಿ ಒಂದು ಬಾಣಲೆಗೆ ತುಪ್ಪ ಹಾಕಿ.
- ಬಾಣಲೆಯನ್ನು ಸ್ಟೋವ್ ಮೇಲಿರಿಸಿ, ರವೆ, ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಹುರಿಯಲು ಪ್ರಾರಂಭಿಸಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ. ಒಣದ್ರಾಕ್ಷಿ ಉಬ್ಬಲು ಪ್ರಾರಂಭಿಸಿದಾಗ ಉರಿ ತಗ್ಗಿಸಿ.
- ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ.
- ಏಲಕ್ಕಿ ಪುಡಿ ಸೇರಿಸಿ ಮಗುಚಿ. ದಪ್ಪ ಪೇಸ್ಟ್ ನ ಹದಕ್ಕೆ ಬಂದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ. ನೆನಪಿಡಿ ೩-೪ ನಿಮಿಷದೊಳಗೆ ಪೇಸ್ಟ್ ನ ಹದಕ್ಕೆ ಬರುತ್ತದೆ. ಜಾಸ್ತಿ ಹೊತ್ತು ಬೇಯಿಸಬೇಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ