ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಸೇಬುಹಣ್ಣಿನ ಇಡ್ಲಿಯ ಪಾಕವಿಧಾನ ಇಲ್ಲಿದೆ. ಸೇಬುಹಣ್ಣಿನ ಸಿಹಿ ಇಡ್ಲಿಯನ್ನು ತುರಿದ ಸೇಬು, ಸಕ್ಕರೆ ಮತ್ತು ಇಡ್ಲಿ ರವಾ (ಅಕ್ಕಿ ರವೆ ) ಬಳಸಿಕೊಂಡು ತಯಾರಿಸಲಾಗುತ್ತದೆ. ಸೇಬುಹಣ್ಣಿನ ಸೀಸನ್. ಕಡಿಮೆಗೆ ಸಿಕ್ಕಿತೆಂದು ಒಂದಷ್ಟು ತಂದೆ. ಕೊನೆಗೆ ಹೇಗಾದರೂ ಮುಗಿಸಬೇಕಿತ್ತು. ಆದ್ದರಿಂದ, ಸ್ವಲ್ಪ ಯೋಚನೆ ಮಾಡಿ ನನ್ನ ಮಗನಿಗೆ ೧೦ ಘಂಟೆಯ ಸ್ನಾಕ್ಸ್ ಸಮಯಕ್ಕೆ ಈ ರೀತಿಯ ಇಡ್ಲಿ ತಯಾರಿಸಿದೆ. ಏನಾಶ್ಚರ್ಯ? ಹೇಗಾಗುವುದೋ ಎಂದು ಕೊಂಡು ಮಾಡಿದ ಸೇಬುಹಣ್ಣಿನ ಸಿಹಿ ಇಡ್ಲಿ ಬಹಳ ರುಚಿಕರವಾಗಿತ್ತು. ನನ್ನ ಮಗ ತುಪ್ಪದೊಂದಿಗೆ 2 ಇಡ್ಲಿಯನ್ನು ಖುಷಿಯಿಂದ ತಿಂದ. ನನಗಂತೂ ಬಹಳ ಖುಷಿಯಾಯಿತು. ಒಬ್ಬ ತಾಯಿಗೆ ಇದಕ್ಕಿಂತ ಸಂತಸದ ಸಂಗತಿ ಬೇರೇನಿದೆ?
ಇದೊಂದು ದಿಡೀರ್ ಇಡ್ಲಿಯಾಗಿದ್ದು, ಹಿಟ್ಟು ಹುದುಗ ಬೇಕಾಗಿಲ್ಲ. ಹಾಗಾಗಿ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಇಡ್ಲಿಯನ್ನು ತುರಿದ ಸೇಬುಹಣ್ಣು, ಸಕ್ಕರೆ ಮತ್ತು ಇಡ್ಲಿ ರವಾ ಬಳಸಿಕೊಂಡು ಮಾಡಲಾಗುತ್ತದೆ. ಎಲ್ಲ ಕಲಸಿ ಬೇರೆ ಇಡ್ಲಿಗಳಂತೆ ಬೇಯಿಸಿದರಾಯಿತು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಕಪ್ ತುರಿದ ಸೇಬು ಹಣ್ಣು
- 1/4 ಕಪ್ ಸಕ್ಕರೆ(ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಕಪ್ ಇಡ್ಲಿ ರವಾ (ಸ್ವಲ್ಪ ಹೆಚ್ಚು ಕಡಿಮೆ ಸೇಬು ಹಣ್ಣನ್ನು ಅವಲಂಬಿಸಿ)
- ಒಂದು ಚಿಟಿಕೆ ಏಲಕ್ಕಿ ಪುಡಿ
- ಒಂದು ಚಿಟಿಕೆ ಉಪ್ಪು
ಸೇಬುಹಣ್ಣಿನ ಸಿಹಿ ಇಡ್ಲಿ:
- ಸೇಬು ಹಣ್ಣು ತುರಿದು ಒಂದು ಪಾತ್ರೆಗೆ ಹಾಕಿ. ಇಡ್ಲಿ ರವೆ ಹಾಕಿ ಕಲಸಿ. ನೀರು ಹಾಕುವುದು ಬೇಡ.
- ಈಗ ಸಕ್ಕರೆ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ.
- ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ. 12 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಇಡ್ಲಿ ಬಿಸಿಯಾಗಿರುವಾಗಲೇ ಜೇನುತುಪ್ಪ ಅಥವಾ ತುಪ್ಪದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ