ಮಂಗಳವಾರ, ಜೂನ್ 28, 2016

Menthe idli or kadubu recipe in kannada | ಮೆಂತೆ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ

Menthe idli or kadubu recipe in kannada

Menthe idli or kadubu recipe in kannada | ಮೆಂತೆ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ

ಮೆಂತೆ ಇಡ್ಲಿ ವಿಡಿಯೋ


ತಯಾರಿ ಸಮಯ: 14 - 15 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 30 - 40 ಇಡ್ಲಿಗಳು

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಇಡ್ಲಿ ರವಾ 
  2. 1/4 ಕಪ್ ಉದ್ದಿನ ಬೇಳೆ 
  3. 1/4 ಕಪ್ ಮೆಂತ್ಯ 
  4. 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ

ಮೆಂತೆ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ:

  1. ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಅವಲಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. 
  3. ಅರೆಯಲು ಪ್ರಾರಂಭಿಸುವ ಮೊದಲು ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ.
  4. 4 - 5 ಗಂಟೆಗಳ ನಂತರ ಮಿಕ್ಸಿಗೆ ನೆನೆಸಿದ ಉದ್ದಿನಬೇಳೆ ಮತ್ತು ಮೆಂತ್ಯ ಹಾಕಿ.
  5. ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. 
  6. ಅರೆದು ಮುಗಿದ ಮೇಲೆ ನೀರು ಬಸಿದಿಟ್ಟ ಇಡ್ಲಿ ರವೆಗೆ ಸೇರಿಸಿ. 
  7. ನಂತ್ರ ಉಳಿದ ಬೇಳೆ ಮತ್ತು ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ. 
  8. ಬೇಕಾದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  9. ಅರೆದ ಮೇಲೆ ಅದನ್ನು ಸಹ ನೀರು ಬಸಿದಿಟ್ಟ ಇಡ್ಲಿ ರವೆಗೆ ಸೇರಿಸಿ. 
  10. ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ. 
  11. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  12. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  13. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

ಶುಕ್ರವಾರ, ಜೂನ್ 24, 2016

Baby corn Manchurian recipe in Kannada | ಬೇಬಿ ಕಾರ್ನ್ ಮಂಚೂರಿ ಮಾಡುವ ವಿಧಾನ

Baby corn manchurian recipe in Kannada

Baby corn manchurian recipe | ಬೇಬಿ ಕಾರ್ನ್ ಮಂಚೂರಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 ಬೇಬಿ ಕಾರ್ನ್ ಅಥವಾ ಎಳೆ ಜೋಳ
  2. 4 ಟೇಬಲ್ ಚಮಚ ಮೈದಾ ಹಿಟ್ಟು
  3. 2 ಟೇಬಲ್ ಚಮಚ ಜೋಳದ ಹಿಟ್ಟು
  4. 1 ಟೇಬಲ್ ಚಮಚ ಅಕ್ಕಿ ಹಿಟ್ಟು
  5. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 
  7. ಉಪ್ಪು ರುಚಿಗೆ ತಕ್ಕಷ್ಟು 
  8. ಎಣ್ಣೆ ಕಾಯಿಸಲು

ಸಾಸ್ ತಯಾರಿಸಲು ಬೇಕಾಗುವ ಪದಾರ್ಥಗಳು:

  1. 1 ಕತ್ತರಿಸಿದ ಈರುಳ್ಳಿ 
  2. 1/2 ಕತ್ತರಿಸಿದ ಕ್ಯಾಪ್ಸಿಕಂ 
  3. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ 
  4. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ 
  5. 2 ಈರುಳ್ಳಿ ಗಿಡ 
  6. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  7. 1/4 ಚಮಚ ಕಾಳುಮೆಣಸಿನ ಪುಡಿ 
  8. 1 ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ) 
  9. 4 ಟೇಬಲ್ ಚಮಚ ಟೊಮೆಟೊ ಸಾಸ್ 
  10. 1 ಟೀಸ್ಪೂನ್ ಸೋಯಾ ಸಾಸ್ 
  11. ಉಪ್ಪು ರುಚಿಗೆ ತಕ್ಕಷ್ಟು 
  12. 2 ಟೀಸ್ಪೂನ್ ಅಡುಗೆ ಎಣ್ಣೆ 
  13. 1/2 ಕಪ್ ನೀರು

ಬೇಬಿ ಕಾರ್ನ್ ಮಂಚೂರಿ ಮಾಡುವ ವಿಧಾನ:


  1. ಬೇಬಿ ಕಾರ್ನ್ ಸಿಪ್ಪೆ ಸುಲಿದು ಕತ್ತರಿಸಿಕೊಳ್ಳಿ. ಬೇಬಿ ಕಾರ್ನ್ ಮಂಚೂರಿಯನ್ ಗರಿಗರಿ ಆಗಬೇಕೆಂದರೆ ತೆಳುವಾಗಿ ಕತ್ತರಿಸಿಕೊಳ್ಳಿ.
  2. ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ. 
  3. ನೀರು ಸೇರಿಸಿ ಬಜ್ಜಿ ಅಥವಾ ಬೋಂಡಾದ ಹಿಟ್ಟಿಗಿಂತ ಕೊಂಚ ತೆಳುವಾಗಿ ಕಲಸಿಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟಿನಲ್ಲಿ ಕತ್ತರಿಸಿದ ಬೇಬಿ ಕಾರ್ನ್ ಗಳನ್ನು ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ. 
  5. ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. 
  6. ನಂತರ ಕತ್ತರಿಸಿದ ಈರುಳ್ಳಿ, ಈರುಳ್ಳಿ ಗಿಡದ ಬಿಳಿ ಭಾಗ, ಹಸಿರು ಮೆಣಸು ಮತ್ತು ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
  7. ನಂತರ ಅಚ್ಚ ಖಾರದ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. 
  8. ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. 
  9. ಈಗ ಬೇಬಿ ಕಾರ್ನ್ ಕಾಯಿಸಿ ಉಳಿದಿರುವ ಹಿಟ್ಟಿಗೆ 1/2 ಕಪ್ ನೀರು ಹಾಕಿ ಅಥವಾ 1/2 ಚಮಚ ಜೋಳದ ಹಿಟ್ಟನ್ನು 1/2 ಕಪ್ ನೀರಿನಲ್ಲಿ ಕಲಕಿ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ. 
  10. ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. 
  11. ಹುರಿದ ಬೇಬಿ ಕಾರ್ನ್ ಸೇರಿಸಿ, ಚೆನ್ನಾಗಿ ಕಲಸಿ. ಕತ್ತರಿಸಿದ ಈರುಳ್ಳಿ ಗಿಡಗಳಿಂದ ಅಲಂಕರಿಸಿ  ತಕ್ಷಣವೇ ಬಡಿಸಿ.



ಗುರುವಾರ, ಜೂನ್ 23, 2016

Poori recipe in Kannada | ಪೂರಿ ಮಾಡುವ ವಿಧಾನ

Poori recipe in Kannada

Poori recipe in Kannada | ಪೂರಿ ಮಾಡುವ ವಿಧಾನ 


ಪೂರಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗೋಧಿ ಹಿಟ್ಟು 
  2. 2 ಟೇಬಲ್ ಚಮಚ ಸಣ್ಣ ರವೆ (1/2 ಕಪ್ ವರೆಗೆ ಹೆಚ್ಚಿಸಬಹುದು)
  3. 2 ಟೇಬಲ್ ಚಮಚ ಬಿಸಿ ತುಪ್ಪ ಅಥವಾ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು
  5. ಎಣ್ಣೆ ಪೂರಿ ಕಾಯಿಸಲು

ಪೂರಿ ಮಾಡುವ ವಿಧಾನ:

  1. ಒಂದು ಅಗಲವಾದ ಬಟ್ಟಲಿಗೆ ಗೋಧಿ ಹಿಟ್ಟು, ಸಣ್ಣ ರವೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.  
  2. ನಂತರ 2 ಟೇಬಲ್ ಚಮಚ ಬಿಸಿ ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ. 
  3. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟನ್ನು ತಯಾರಿಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು. 
  4. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. 
  5. ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ. 
  6. ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.  
  7. ಚಿನ್ನದ ಹೊಂಬಣ್ಣ ಬರುವವರೆಗೆ ಎರಡು ಬದಿ ಕಾಯಿಸಿ. ಸಾಂಬಾರ್ ಅಥವಾ ಆಲೂ ಭಾಜಿಯೊಂದಿಗೆ ಬಡಿಸಿ. 

ಮಂಗಳವಾರ, ಜೂನ್ 21, 2016

Bele dose recipe in kannada | ಬೇಳೆ ದೋಸೆ ಮಾಡುವ ವಿಧಾನ

Bele dose recipe in kannada

Bele dose recipe in kannada | ಬೇಳೆ ದೋಸೆ ಮಾಡುವ ವಿಧಾನ

ಬೇಳೆ ದೋಸೆ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 2 ಟೇಬಲ್ ಚಮಚ ಉದ್ದಿನ ಬೇಳೆ
  3. 2 ಟೇಬಲ್ ಚಮಚ ತೊಗರಿ ಬೇಳೆ 
  4. 2 ಟೇಬಲ್ ಚಮಚ ಹೆಸರು ಬೇಳೆ 
  5. 2 ಟೇಬಲ್ ಚಮಚ ಕಡ್ಲೇ ಬೇಳೆ 
  6. 2 ಟೇಬಲ್ ಚಮಚ ಮಸೂರ್ ಬೇಳೆ 
  7. 1 - 2 ಹಸಿರುಮೆಣಸಿನಕಾಯಿ
  8. ಸಣ್ಣ ತುಂಡು ಶುಂಠಿ 
  9. 1/4 ಟೀಸ್ಪೂನ್ ಜೀರಿಗೆ 
  10. ಕೊತಂಬರಿ ಸೊಪ್ಪು ಸ್ವಲ್ಪ
  11. ಉಪ್ಪು ರುಚಿಗೆ ತಕ್ಕಷ್ಟು.

ಬೇಳೆ ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  3. ಕೊನೆಯಲ್ಲಿ ಹಸಿರುಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಸ್ವಲ್ಪ ಕೊತಂಬರಿ ಸೊಪ್ಪು ಸೇರಿಸಿ ಅರೆಯಿರಿ. 
  4. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಲಿ. ಒಂದರ್ಧ ಘಂಟೆ ಬಿಟ್ಟು ದೋಸೆ ಮಾಡಿ. 
  5. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 
  6. ಸಮಯವಿದ್ದಲ್ಲಿ ಕೆಲವು ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಟ್ಟು ನಂತರ ದೋಸೆ ಮಾಡಿದರೆ ಆಗಲೂ ದೋಸೆ ಚೆನ್ನಾಗಿ ಬರುತ್ತದೆ. ನಿಮ್ಮ ರುಚಿ ಪ್ರಕಾರ ಮಾಡಿ ಆನಂದಿಸಿ.

karibevu soppina chutney in Kannada | ಕರಿಬೇವು ಸೊಪ್ಪಿನ ಚಟ್ನಿ


karibevu soppina chutney in Kannada | ಕರಿಬೇವು ಸೊಪ್ಪಿನ ಚಟ್ನಿ 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 4 ಜನರಿಗೆ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 ಎಸಳು ಕರಿಬೇವು ಅಥವಾ 40 - 50 ಕರಿಬೇವಿನ ಎಲೆಗಳು
  2. 1 ಕಪ್ ತೆಂಗಿನ ತುರಿ 
  3. 2 - 4 ಹಸಿರು ಮೆಣಸಿನಕಾಯಿ 
  4. ಒಂದು ಸಣ್ಣ ಗೋಲಿ ಗಾತ್ರದ ಹುಣಿಸೆ ಹಣ್ಣು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 2 ಟಿಸ್ಪೂನ್ ಎಣ್ಣೆ 
  2. 2 ಕರಿಬೇವಿನ ಎಲೆ
  3. 1/4 ಟಿಸ್ಪೂನ್ ಸಾಸಿವೆ 
  4. ಒಂದು ಚಿಟಿಕೆ ಇಂಗು
 

ಕರಿಬೇವು ಸೊಪ್ಪಿನ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ೧ ಚಮಚ ಎಣ್ಣೆ ಹಾಕಿ ಕರಿಬೇವು ಮತ್ತು ಹಸಿರುಮೆಣಸಿನಕಾಯಿಯನ್ನು ಹುರಿಯಿರಿ. 
  2. ತೆಂಗಿನ ತುರಿ, ಹುಣಿಸೆ ಹಣ್ಣು, ಹುರಿದ ಕರಿಬೇವು, ಹುರಿದ ಹಸಿರುಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಬೇಕಾದಲ್ಲಿ ತೆಂಗಿನಕಾಯಿ ಕಡಿಮೆ ಮಾಡಿ ಸ್ವಲ್ಪ ಹುರಿಗಡಲೆಯನ್ನು ಸೇರಿಸಬಹುದು. 
  3. ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 

ಶುಕ್ರವಾರ, ಜೂನ್ 17, 2016

Gorikayi rice bath recipe in Kannada | ಗೋರಿಕಾಯಿ ರೈಸ್ ಬಾತ್ ಮಾಡುವ ವಿಧಾನ

Gorikayi rice bath recipe in Kannada

Gorikayi rice bath recipe in Kannada | ಗೋರಿಕಾಯಿ ರೈಸ್ ಬಾತ್ ಮಾಡುವ ವಿಧಾನ 


ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಹಿಡಿ ಎಳೆ ಗೋರಿಕಾಯಿ ಅಥವಾ ಚವಳಿ ಕಾಯಿ
  2. 1 ಕಪ್ ಸೋನಾ ಮಸೂರಿ ಅಥವಾ ಉತ್ತಮ ಗುಣಮಟ್ಟದ ಅಕ್ಕಿ
  3. 1/2 ಚಮಚ ಸಾಸಿವೆ
  4. 2 ಟೀಸ್ಪೂನ್ ಕಡ್ಲೇಬೇಳೆ 
  5. 2 ಟೀಸ್ಪೂನ್ ಉದ್ದಿನ ಬೇಳೆ
  6. 5 - 6 ಗೋಡಂಬಿ ಅಥವಾ 2 ಟೇಬಲ್ ಸ್ಪೂನ್ ನೆಲಗಡಲೆ ಬೀಜ
  7. 5 - 6 ಕರಿಬೇವಿನ ಎಲೆ 
  8. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  9. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  10. 3 - 4 ಚಮಚ ವಾಂಗಿ ಬಾತ್ ಪುಡಿ
  11. 1/4 ಟೀಸ್ಪೂನ್ ಅರಿಶಿನ ಪುಡಿ
  12. ಉಪ್ಪು ರುಚಿಗೆ ತಕ್ಕಷ್ಟು
  13. 8 ಟೀಸ್ಪೂನ್ ಅಡುಗೆ ಎಣ್ಣೆ

ಗೋರಿಕಾಯಿ ರೈಸ್ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಅನ್ನ ಮಾಡಿ ತೆಗೆದಿಟ್ಟು ಕೊಳ್ಳಿ. 
  2. ಗೋರಿಕಾಯಿಯನ್ನು ಆಯ್ದು, ಕಡೆಗಳನ್ನು ತೆಗೆದು, 1 "ತುಂಡುಗಳಾಗಿ ಕತ್ತರಿಸಿ.
  3. ಒಂದು ಬಾಣಲೆಯನ್ನು ಬಿಸಿ ಮಾಡಿ. 8 ಚಮಚ ಅಡುಗೆ ಎಣ್ಣೆ ಹಾಕಿ
  4. ಸಾಸಿವೆ, ಕಡ್ಲೇಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ. 
  5. ಸಾಸಿವೆ ಸಿಡಿಯುವವರೆಗೆ, ಬೇಳೆಗಳು ಕಂದು ಬಣ್ಣ ಬರುವ ತನಕ ಹುರಿಯಿರಿ. 
  6. ಕರಿಬೇವು ಹಾಕಿ, ಉರಿ ಕಡಿಮೆ ಮಾಡಿ.
  7. ಕತ್ತರಿಸಿದ ಗೋರಿಕಾಯಿಯನ್ನು ಸೇರಿಸಿ. 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ. 
  8. ಅರಿಶಿನ ಪುಡಿ ಹಾಕಿ. ಪುನಃ 2 ನಿಮಿಷ ಹುರಿಯಿರಿ. 
  9. ಉಪ್ಪು, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ. ಸ್ವಲ್ಪ ನೀರನ್ನೂ ಸೇರಿಸಿ. 
  10. ಮುಚ್ಚಳ ಮುಚ್ಚಿ ಗೋರಿಕಾಯಿಯನ್ನು ಬೇಯಿಸಿ. 
  11. ನಂತರ 3 - 4 ಚಮಚ ವಾಂಗಿ ಬಾತ್ ಪುಡಿ ಸೇರಿಸಿ. ಒಂದೆರಡು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ. 
  12. ಮೊದಲೇ ಬೇಯಿಸಿಟ್ಟ ಅನ್ನ ಸೇರಿಸಿ, ಮುದ್ದೆಯಾಗದಂತೆ ಕಲಸಿ. 
  13. ಸಲಾಡ್ ಅಥವಾ ಮೊಸರನ್ನ ದೊಂದಿಗೆ ಬಡಿಸಿ.

ಗುರುವಾರ, ಜೂನ್ 16, 2016

Kobbari mithai or Kaayi burfi or Kayi paka in Kannada | ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ

Kobbari mithai or Kaayi burfi or Kayi paaka in Kannada

Kobbari mithai or Kaayi burfi or Kayi paka in Kannada | ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ  

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 10 - 12 ಬರ್ಫಿ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ
  2. 1/2 ಕಪ್ ಸಕ್ಕರೆ 
  3. 2 ಟೇಬಲ್ ಸ್ಪೂನ್ ತುಪ್ಪ
  4. ಒಂದು ಚಿಟಿಕೆ ಏಲಕ್ಕಿ ಪುಡಿ ಅಥವಾ ಲವಂಗದ ಪುಡಿ

ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕ ಮಾಡುವ ವಿಧಾನ:

  1. ತೆಂಗಿನಕಾಯಿಯ ಬಿಳಿಭಾಗ ಮಾತ್ರ ತುರಿದುಕೊಳ್ಳಿ. 
  2. ನೀರು ಹಾಕದೇ ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಕೊಳ್ಳಿ. 
  3. ಒಂದು ಬಾಣಲೆಗೆ ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ (೧ ಕಪ್ ಸಕ್ಕರೆಗೆ ೧/೪ ಕಪ್ ನೀರು ಸಾಕು)
  4. ನಿರಂತರವಾಗಿ ಮಗುಚುತ್ತಾ ಒಂದೆಳೆ ಸಕ್ಕರೆ ಪಾಕ ಮಾಡಿ. ಒಂದೈದು ನಿಮಿಷ ಸಾಕಾಗುತ್ತದೆ. ಇಲ್ಲವೇ ಸೌಟಿನಿಂದ ಎತ್ತಿ ಸುರಿದಾಗ ಜೇನಿನಂತೆ ಬಿದ್ದರೆ ಸಾಕು. 
  5. ನಂತರ ಪುಡಿ ಮಾಡಿದ ತೆಂಗಿನತುರಿ ಸೇರಿಸಿ. 
  6. ನಿರಂತರವಾಗಿ ಮಗುಚುತ್ತಾ ಇರಿ. 
  7. ನೀರಾರಿ ಒಂದು ಮೆತ್ತಗಿನ ಮುದ್ದೆಯಂತೆ ಆದಾಗ ಏಲಕ್ಕಿ ಅಥವಾ ಲವಂಗ ಹಾಕಿ. 
  8. ತುಪ್ಪವನ್ನು ಸೇರಿಸಿ. ಮಗುಚುವುದನ್ನು ಮುಂದುವರೆಸಿ. 
  9. ಒಂದೆರಡು ನಿಮಿಷದಲ್ಲಿ ಕಾಯಿ ಮತ್ತು ಸಕ್ಕರೆಯ ಮಿಶ್ರಣ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. 
  10. ಈ ಸಮಯದಲ್ಲಿ ತುಪ್ಪ ಸವರಿದ ಟ್ರೇ ಗೆ ಸುರಿಯಿರಿ . 
  11. ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ. 
  12. ಬಿಸಿಯಾಗಿರುವಾಗಲೇ ಕತ್ತರಿಸಿ. ತಣಿದ ಮೇಲೆ ಕೊಬ್ಬರಿ ಮಿಟಾಯಿ ಅಥವಾ ಕಾಯಿ ಬರ್ಫಿ ಅಥವಾ ಕಾಯಿ ಪಾಕವನ್ನು ಬಡಿಸಿ, ತಿಂದು ಆನಂದಿಸಿ. 

ಸೋಮವಾರ, ಜೂನ್ 13, 2016

Mangalore style gojjavalakki in Kannada | ಮಂಗಳೂರು ಶೈಲಿಯ ಗೊಜ್ಜವಲಕ್ಕಿ


Mangalore style gojjavalakki in Kannada

Mangalore style gojjavalakki in Kannada | ಮಂಗಳೂರು ಶೈಲಿಯ ಗೊಜ್ಜವಲಕ್ಕಿ 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗಟ್ಟಿ ಅವಲಕ್ಕಿ
  2. 1/2 ಕಪ್ ತೆಂಗಿನ ತುರಿ
  3. 2 - 4 ಕೆಂಪು ಮೆಣಸಿನಕಾಯಿ
  4. 1/4 ಟೀಸ್ಪೂನ್ ಸಾಸಿವೆ
  5. 1 ಸಣ್ಣ ನಿಂಬೆ ಗಾತ್ರದ ಬೆಲ್ಲ
  6. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 4 - 6 ಕರಿಬೇವಿನ ಎಲೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. 4 ಟೇಬಲ್ ಚಮಚ ಅಡುಗೆ ಎಣ್ಣೆ (ತೆಂಗಿನೆಣ್ಣೆಗೆ ಆದ್ಯತೆ)

ಮಂಗಳೂರು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ :

  1. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ಹಾಕಿ.
  2. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  3. ಗಟ್ಟಿ ಅವಲಕ್ಕಿಯನ್ನು ತೊಳೆದು 5 ನಿಮಿಷಗಳ ಕಾಲ ನೆನೆಸಿ. ನೆನೆಸುವ ಸಮಯ ಅವಲಕ್ಕಿಯ ದಪ್ಪ ಅವಲಂಬಿಸಿ ಬದಲಾಗಬಹುದು. ಹುಣಿಸೇಹಣ್ಣನ್ನು ಸಹ ನೀರಿನಲ್ಲಿ ನೆನೆಸಿಡಿ. 
  4. ಅವಲಕ್ಕಿ ನೆನೆಯುವ ಸಮಯದಲ್ಲಿ  ಒಗ್ಗರಣೆಯನ್ನು ತಯಾರು ಮಾಡಿ ಕೊಳ್ಳೋಣ. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ  ಮಾಡಿ. 
  5. ನಂತರ ಅರಿಶಿನ ಪುಡಿ , ಕರಿಬೇವು ಸೇರಿಸಿ ಸ್ಟವ್ ಆಫ್ ಮಾಡಿ.
  6. ಈಗ ಅರೆದ ಮಸಾಲಾ ಪೇಸ್ಟ್, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  7. ಚೆನ್ನಾಗಿ ಕಲಸಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ. 
  8. ಈಗ ನೆನೆಸಿದ ಅವಲಕ್ಕಿಯ ನೀರು ಹಿಂಡಿ ತೆಗೆದು ಹಾಕಿ. 
  9. ಚೆನ್ನಾಗಿ ಕಲಸಿ. 
  10. ಮುಚ್ಚಳವನ್ನು ಮುಚ್ಚಿ. 5 ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
  11. 5 ನಿಮಿಷಗಳ ನಂತರ ಮುಚ್ಚಳವನ್ನು ತೆರೆದು, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. 
  12. ರುಚಿಕರ ಮಂಗಳೂರು ಶೈಲಿಯ ಗೊಜ್ಜವಲಕ್ಕಿಯನ್ನು ತಿಂದು ಆನಂದಿಸಿ.

ಭಾನುವಾರ, ಜೂನ್ 12, 2016

Guliyappa or paddu recipe in kannada | ಗುಳಿಯಪ್ಪ ಅಥವಾ ಪಡ್ದು ಮಾಡುವ ವಿಧಾನ

Guliyappa or paddu recipe in kannada

Guliyappa or paddu recipe in kannada | ಗುಳಿಯಪ್ಪ ಅಥವಾ ಪಡ್ದು ಮಾಡುವ ವಿಧಾನ 

ಗುಳಿಯಪ್ಪ ಅಥವಾ ಪಡ್ದು ವಿಡಿಯೋ


ತಯಾರಿ ಸಮಯ: 15 ಗಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನ ಬೇಳೆ (ಮಿಕ್ಸಿ ಉಪಯೋಗಿಸುತ್ತೀರಾದಲ್ಲಿ 1/4 ಕಪ್ ಹೆಚ್ಚುವರಿ ಸೇರಿಸಿ)
  3. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 1 ಕಪ್ ಮಂಡಕ್ಕಿ
  4. 1 ಟೀಸ್ಪೂನ್ ಮೆಂತ್ಯ
  5. 2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  6. 2 - 4 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  7. 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  8. 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  9. ಉಪ್ಪು ರುಚಿಗೆ ತಕ್ಕಷ್ಟು.

ಗುಳಿಯಪ್ಪ ಅಥವಾ ಪಡ್ದು ಮಾಡುವ ವಿಧಾನ :

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿ ಅಥವಾ ಮಂಡಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ. 
  3. ಈಗ ಗ್ರೈಂಡರ್ ನಲ್ಲಿ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ಮಿಕ್ಸಿಯಲ್ಲೂ ರುಬ್ಬ ಬಹುದು. ಆದರೆ ಉದ್ದಿನಬೇಳೆ ೧/೪ ಕಪ್ ಹೆಚ್ಚುವರಿ ಸೇರಿಸಲು ಮರೆಯದಿರಿ. 
  4. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  5. ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
  6. 7-8 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  7. ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ .ಗುಳಿಯಪ್ಪ ಅಥವಾ ಪಡ್ದು ಮಾಡಲು ಹಿಟ್ಟು ತಯಾರಾಯಿತು. 
  8. ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  9. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  10. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  11. ಗುಳಿಯಪ್ಪವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 


ಶುಕ್ರವಾರ, ಜೂನ್ 10, 2016

Malnad style Appe kayi saaru in kannada | ಅಪ್ಪೆ ಕಾಯಿ ಸಾರು ಮಾಡುವ ವಿಧಾನ

Malnad style Appe kayi saaru in kannada

Malnad style Appe kayi saaru in kannada | ಅಪ್ಪೆ ಕಾಯಿ ಸಾರು ಮಾಡುವ ವಿಧಾನ 

ಅಪ್ಪೆ ಕಾಯಿ ಸಾರು ವಿಡಿಯೋ 



ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 1.5 ಲೀ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಗಾತ್ರದ ಮಾವಿನಕಾಯಿ
  2. 5 - 6 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1/4 ಟೀಸ್ಪೂನ್ ಜೀರಿಗೆ 
  3. ಒಂದು ದೊಡ್ಡ ಚಿಟಿಕೆ ಇಂಗು 
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಅಪ್ಪೆ ಕಾಯಿ ಸಾರು ಮಾಡುವ ವಿಧಾನ:

  1. ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ. ಒಂದು ಪಾತ್ರೆಗೆ ಕತ್ತರಿಸಿದ ಮಾವಿನಕಾಯಿ, ಹಸಿರು ಮೆಣಸಿನ ಕಾಯಿ ಮತ್ತು ಉಪ್ಪು ಸೇರಿಸಿ. 
  2. ಒಂದು ಕಪ್ ನೀರು ಹಾಕಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ. ಒಂದೈದು ನಿಮಿಷ ಸಾಕಾಗುತ್ತದೆ. 
  3. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. 
  4. ರುಚಿಗೆ ತಕ್ಕಷ್ಟು ಉಪ್ಪು, ಉಳಿದ ನೀರು ಸೇರಿಸಿ ಕುದಿಸಿ. 
  5. ಸಾಸಿವೆ, ಜೀರಿಗೆ ಮತ್ತೆ ಇಂಗಿನ ಒಗ್ಗರಣೆ ಕೊಡಿ. ಊಟದೊಂದಿಗೆ ಕುಡಿದು ಆನಂದಿಸಿ.

ಬುಧವಾರ, ಜೂನ್ 8, 2016

Milk peda recipe in Kannada | ಹಾಲಿನ ಪೇಡ ಮಾಡುವ ವಿಧಾನ

Milk peda recipe in Kannada

Milk peda recipe in Kannada | ಹಾಲಿನ ಪೇಡ ಮಾಡುವ ವಿಧಾನ 


ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 20 ಪೇಡಗಳು 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 - 2 ಕಪ್ ಹಾಲಿನ ಪುಡಿ
  2. 1 ಟಿನ್ ಸಿಹಿಕರಿಸಿದ ಕಂಡೆನ್ಸೆಡ್ ಹಾಲು ( 400gm )
  3. 0.25 ಕಪ್ ತುಪ್ಪ ಅಥವಾ ಬೆಣ್ಣೆ
  4. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  5. 0.25 ಕಪ್ ಬೀಜಗಳು (ಗೋಡಂಬಿ, ಪಿಸ್ತಾ ಅಥವ ಬಾದಾಮಿ - ಬೇಕಾದಲ್ಲಿ)
  6. 0.25 ಕಪ್ ಒಣ ಕೊಬ್ಬರಿ ಹುಡಿ (ಬೇಕಾದಲ್ಲಿ)


ಹಾಲಿನ ಪೇಡ ಮಾಡುವ ವಿಧಾನ:

  1. ಒಂದು ನಾನ್ ಸ್ಟಿಕ್ ಕಡಾಯಿಗೆ ಹಾಲಿನಪುಡಿ ಮತ್ತು ಸಿಹಿಕರಿಸಿದ ಕಂಡೆನ್ಸೆಡ್ ಹಾಲು ಹಾಕಿ ಕಲಸಿ.
  2. ಕರಗಿಸಿದ ತುಪ್ಪ ಅಥವಾ ಬೆಣ್ಣೆ ಹಾಕಿ ಕಲಸಿ. ಗೋಡಂಬಿ, ಪಿಸ್ತಾ, ಬಾದಾಮಿ ಅಥವಾ ಒಣ ಕೊಬ್ಬರಿ ಹುಡಿ ಹಾಕಬಯಸುತ್ತೀರಾದಲ್ಲಿ ಈ ಹಂತದಲ್ಲಿ ಸೇರಿಸಿ. 
  3. ಒಲೆಯ ಮೇಲಿಟ್ಟು ಮದ್ಯಮ ಉರಿಯಲ್ಲಿ ಮಗುಚಿ. 
  4. ತಳ ಬಿಡಲು ಪ್ರಾರಂಭವಾದ ಕೂಡಲೇ ಏಲಕ್ಕಿ ಪುಡಿ ಹಾಕಿ. ಒಂದೆರಡು ನಿಮಿಷ ಮೆತ್ತಗಿನ ಮುದ್ದೆಯಾಗುವವರೆಗೆ ಮಗುಚಿ. ಸ್ಟವ್ ಆಫ್ ಮಾಡಿ. ಜಾಸ್ತಿ ಮಗುಚಿದಲ್ಲಿ ಪೇಡ ನಾರಾಗುತ್ತದೆ. ಕಡಿಮೆ ಮಗುಚಿದಲ್ಲಿ ಪೇಡ ಮಾಡುವಾಗ ಕೈಗೆ ಅಂಟುತ್ತದೆ.  
  5. ಬಿಸಿ ಆರಿದ ಮೇಲೆ ಪೇಡ ಗಳನ್ನು ತಯಾರಿಸಿ. ಪೇಡ ಮಾಡುವಾಗ ಕೈಗೆ ಅಂಟುತ್ತಿದ್ದರೆ ಪುನಃ ಒಲೆಯ ಮೇಲಿಟ್ಟು ಒಂದೆರಡು ನಿಮಿಷ ಮಗುಚಿ. ಬಿಸಿ ಆರಿದ ಮೇಲೆ ಪೇಡ ತಯಾರಿಸಿ. 
  6. ೪ - ೫ ಘಂಟೆಗಳ ಕಾಲ ಬಿಟ್ಟು ತಿನ್ನಿ. ಅದರ ಮೊದಲೇ ತಿನ್ದಲ್ಲಿ ಪೇಡ ಅಂಟೆನಿಸುವುದು. 

ಗುರುವಾರ, ಜೂನ್ 2, 2016

Southekayi sippe chutney recipe in Kannada | ಸಾಂಬಾರ್ ಸೌತೆಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ

Southekayi sippe chutney recipe in Kannada

Southekayi sippe chutney recipe in Kannada | ಸಾಂಬಾರ್ ಸೌತೆಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ

ಸೌತೆಕಾಯಿ ಸಿಪ್ಪೆ ಚಟ್ನಿ ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಾಂಬಾರ್ ಸೌತೆಕಾಯಿ 
  2. 1 ಕಪ್ ತೆಂಗಿನ ತುರಿ
  3. 1 - 2 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಉದ್ದಿನ ಬೇಳೆ
  5. 1/4 ಟೀಸ್ಪೂನ್ ಕೊತ್ತಂಬರಿ ಬೀಜ
  6. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  7. 2 ಟೀಸ್ಪೂನ್ ಅಡುಗೆ ಎಣ್ಣೆ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಸೌತೆಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ:

  1. ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. ೨ ಸೆಮೀ ಉದ್ದದ ತುಂಡು ಗಳಾಗಿ ಕತ್ತರಿಸಿ. 
  2. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಉದ್ದಿನಬೇಳೆ ಹಾಕಿ.
  3. ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
  4. ತೆಂಗಿನ ತುರಿ, ಹುರಿದ ಸೌತೆಕಾಯಿ ಸಿಪ್ಪೆ, ಹುರಿದ ಒಣ ಮೆಣಸು, ಕೊತ್ತಂಬರಿ ಬೀಜ, ಹುರಿದ ಉದ್ದಿನಬೇಳೆ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
Related Posts Plugin for WordPress, Blogger...