ಕ್ಯಾರೆಟ್ ಮಿಲ್ಕ್‌ಶೇಕ್ ಅಥವಾ ಕ್ಯಾರೆಟ್ ಜೂಸ್ ಸರಳ ಮತ್ತು ಆರೋಗ್ಯಕರ ಪಾನೀಯವಾಗಿದೆ. ಕ್ಯಾರೆಟ್ ಮಿಲ್ಕ್‌ಶೇಕ್ ಬಹಳ ರುಚಿಕರವಾಗಿದ್ದು ಬೇಸಿಗೆ ಬಿಸಿಲಿಗೆ ದೇಹವನ್ನು ತಂಪು ಗೊಳಿಸುತ್ತದೆ. ಕ್ಯಾರೆಟ್ ನಲ್ಲಿ ಆಂಟಿ ಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಹೀಗೆ ಅನೇಕ ಪೋಷಕಾಂಶಗಳು ಇದ್ದು, ನಿಯಮಿತ ಸೇವನೆಯಿಂದ ಕಣ್ಣಿನ ಆರೋಗ್ಯ ಮತ್ತು ಚರ್ಮದ ಕಾಂತಿ ಯನ್ನು ಕಾಪಾಡಿಕೊಳ್ಳಲು, ಕ್ಯಾನ್ಸರ್ ನಂಥ ಕಾಯಿಲೆಯನ್ನು ದೂರವಿಡಲೂ ಇದು ಸಹಕಾರಿಯಾಗಿದೆ.
ಕ್ಯಾರೆಟ್ ಮಿಲ್ಕ್‌ಶೇಕ್ ಪ್ರತಿನಿತ್ಯ ಸೇವಿಸುತ್ತಾ ಬಂದಲ್ಲಿ, ಕೆಲವು ವಾರಗಳ ನಂತರ ಚರ್ಮದ ಕಾಂತಿ ಹೆಚ್ಚುವುದನ್ನು ಕಾಣಬಹುದು. ಇಷ್ಟೆಲ್ಲ ಮಹಿಮೆ ಹೊಂದಿರುವ ಕ್ಯಾರೆಟ್ ನ್ನು ನಮ್ಮ ಆಹಾರ ಪದ್ದತಿಯಲ್ಲಿ ಸೇರಿಸಲು ಈ ಮಿಲ್ಕ್‌ಶೇಕ್ ಸಹಕಾರಿಯಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಇದನ್ನು ತಯಾರಿಸಬಹುದು ಹಾಗೂ ಹೊಟ್ಟೆಯೂ ತುಂಬುತ್ತದೆ.
ಇನ್ನು ತರಕಾರಿ ತಿನ್ನಲು ಇಷ್ಟಪಡದ ಮಕ್ಕಳಿಗೆ ಈ ಮಿಲ್ಕ್‌ಶೇಕ್ ಮಾಡಿ ಕೊಟ್ಟಲ್ಲಿ, ಅವರಿಗೆ ಖಂಡಿತ ಇಷ್ಟವಾಗುವುದು. ಜೊತೆಗೆ ಒಳ್ಳೆ ಆಹಾರ ಒದಗಿಸಿದ ಸಮಾಧಾನವೂ ಸಿಗುತ್ತದೆ.
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಮಧ್ಯಮ ಗಾತ್ರದ ಕ್ಯಾರೆಟ್
- 2 ಟೇಬಲ್ ಸ್ಪೂನ್ ತೆಂಗಿನ ತುರಿ
- 1/2 ಕಪ್ ನೀರು
- 1/2 ಕಪ್ ಕುದಿಸಿ ಆರಿಸಿದ ಹಾಲು
- 8 ಟೀಸ್ಪೂನ್ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
- ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ
ಕ್ಯಾರೆಟ್ ಮಿಲ್ಕ್‌ಶೇಕ್ ಮಾಡುವ ವಿಧಾನ:
- ಕ್ಯಾರೆಟ್ ನ್ನು ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಮಿಕ್ಸೀ ಜಾರ್ ತೆಗೆದುಕೊಂಡು, ಕ್ಯಾರೆಟ್ ಮತ್ತು ತೆಂಗಿನ ತುರಿ ಹಾಕಿ, 1/2 ಕಪ್ ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿ. ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ