ಮನೆಯಲ್ಲಿ ಶುದ್ಧ ತುಪ್ಪ ಮಾಡುವ ವಿಧಾನವನ್ನು ಇಲ್ಲಿ ಚಿತ್ರ ಸಹಿತ ವಿವರಿಸಲಾಗಿದೆ. ಮನೆಯಲ್ಲಿ ಮಾಡಿದ ತುಪ್ಪದಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದಿರುವುದರಿಂದ, ಆದಷ್ಟು ಮನೆಯಲ್ಲೇ ತುಪ್ಪ ಮಾಡುವುದು ಉತ್ತಮ. ಅಲ್ಲದೇ ಮನೆಯಲ್ಲಿ ಮಾಡಿದ ತುಪ್ಪ ಒಳ್ಳೆ ಸುವಾಸನೆ
ಮತ್ತು ರುಚಿಯನ್ನು ಹೊಂದಿರುತ್ತದೆ.
ತುಪ್ಪ ಮಾಡುವ ವಿಧಾನ:
- ಬೆಣ್ಣೆಯನ್ನು ಒಂದು ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ ತೆಗೆದುಕೊಳ್ಳಿ. ಸ್ವಚ್ಛ ಬೆಣ್ನೆಗಾಗಿ ಹಲವಾರು ಬಾರಿ ಚೆನ್ನಾಗಿ ತೊಳೆಯಿರಿ (ನನ್ನಮ್ಮ ಹೇಳುವ ಪ್ರಕಾರ 7 ಬಾರಿ ತೊಳೆಯಬೇಕು). ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
- ನಂತರ ಸ್ಟೋವ್ ಹಚ್ಚಿ ಬೆಣ್ಣೆಯನ್ನು ಕಾಯಲು ಇಡಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ. ಕೆಲವೇ ಕ್ಷಣಗಳಲ್ಲಿ ಬೆಣ್ಣೆ ಸಂಪೂರ್ಣ ಕರಗಿ ನೊರೆ ನೊರೆಯಾಗಿ ಕುದಿಯಲಾರಂಬಿಸುತ್ತದೆ.
- ನಿಧಾನವಾಗಿ, ನೊರೆಯು ನೀರಿನ ಗುಳ್ಳೆಗಳಂತೆ ಬದಲಾಗಿ ಒಂದು ಸಣ್ಣ ಸದ್ದಿನೊಂದಿಗೆ ಕುದಿಯುವುದನ್ನು ನೀವು ಕಾಣುತ್ತೀರಿ. ಈ ಸಮಯದಲ್ಲಿ ಹಾಲಿನ ಗಟ್ಟಿ ಅಂಶ ತಳದಲ್ಲಿ ಶೇಖರಣೆಯಾಗ ತೊಡಗುತ್ತದೆ. ಆಗೊಮ್ಮೆ ಈಗೊಮ್ಮೆ ಮಗುಚಿ. ಸ್ವಲ್ಪ ಸಮಯದಲ್ಲಿ ಈ ಹಾಲಿನ ಗಟ್ಟಿ ಅಂಶ ಕಂದು ಬಣ್ಣಕ್ಕೆ ತಿರುಗುತ್ತದೆ. ಕೂಡಲೇ ಸ್ಟೋವ್ ಆಫ್ ಮಾಡಿ.
- ಒಂದು ಹತ್ತು ನಿಮಿಷ ಬಿಟ್ಟು, ನೀರಿನ ಪಸೆ ಇಲ್ಲದ ಪಾತ್ರೆಗೆ ಜರಡಿಯ ಸಹಾಯದಿಂದ ತುಪ್ಪವನ್ನು ಸೋಸಿ. ಮನೆಯಲ್ಲಿ ಮಾಡಿದ ಘಮ ಘಮ ತುಪ್ಪ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ