ಈ ಉಪ್ಪಿನಕಾಯಿ ತುಂಬಾ ಸರಳ ಉಪ್ಪಿನಕಾಯಿಯಾಗಿದ್ದು, ನಿಂಬೆ ಹಣ್ಣು, ಶುಂಠಿ, ಉಪ್ಪು ಮತ್ತು ಹಸಿಮೆಣಸು ಉಪಯೋಗಿಸಿ ಮಾಡಲಾಗುತ್ತದೆ. ಇದನ್ನು ಅನ್ನ ಅಥವಾ ಮೊಸರನ್ನದೊಂದಿಗೆ ಸವಿಯಬಹುದು. ನೀವು ನೆಗಡಿ ಅಥವಾ ಜ್ವರದಿಂದ ಬಳಲುತ್ತಿದ್ದರಂತು, ಈ ಉಪ್ಪಿನಕಾಯಿಯನ್ನು ಊಟ ಅಥವಾ ಗಂಜಿಯೊಂದಿಗೆ ತಿನ್ನಲು ಬಹಳ ರುಚಿ ಎನಿಸುತ್ತದೆ. ನಿಂಬೆ ಹಣ್ಣಿನ ಸ್ವಾದ, ಕಳೆದುಕೊಂಡ ಬಾಯಿರುಚಿಯನ್ನು ಹೆಚ್ಚಿಸುತ್ತದೆ.
ಬೇರೆ ಕೆಲವು ನಿಂಬೆ ಹಣ್ಣಿನ ಉಪ್ಪಿನಕಾಯಿಗಳಂತೆ ಈ ಉಪ್ಪಿನಕಾಯಿಯನ್ನು ಕೂಡಲೇ ಉಪಯೋಗಿಸಲಾಗುವುದಿಲ್ಲ. ಕನಿಷ್ಟ 15 ದಿನಗಳ ಕಾಲ ಆದರೂ ಕಾಯಬೇಕಾಗುತ್ತದೆ. ಅಷ್ಟರಲ್ಲಿ ಎಲ್ಲ ಪದಾರ್ಥಗಳು ಉಪ್ಪಿನೊಂದಿಗೆ ಹೊಂದಿಕೊಂಡು, ಮೆತ್ತಗಾಗಿ ಸವಿಯಲು ಯೋಗ್ಯವಾಗುತ್ತದೆ.ಈ ಉಪ್ಪಿನಕಾಯಿಯಲ್ಲಿ ಎಣ್ಣೆಯಾಗಲಿ ಅಥವಾ ಬೇರೆ ಮಸಾಲೆ ಪದಾರ್ಥಗಳಾಗಲಿ ಇರುವುದಿಲ್ಲ.
ನಾನು ಈ ಉಪ್ಪಿನಕಾಯಿ ಹುಳಿ ಕಡಿಮೆ ಮಾಡಲು ಸ್ವಲ್ಪ ಮಾವಿನಕಾಯಿ ಶುಂಠಿಯನ್ನು ಉಪಯೋಗಿಸಿದ್ದೇನೆ. ಅದರ ಬದಲಾಗಿ ಸಣ್ಣ ಕ್ಯಾರೆಟ್ ಬೇಕಾದರೂ ಉಪಯೋಗಿಸಬಹುದು. ಅಥವಾ ನನ್ನಮ್ಮ ಮಾಡುವ ಹಾಗೆ ಎಲ್ಲ ನಿಂಬೆ ಹಣ್ಣುಗಳಿಂದ ಸ್ವಲ್ಪ ಸ್ವಲ್ಪ ರಸವನ್ನು ಹಿಂಡಿ ತೆಗೆಯಬಹುದು. ನಿಮ್ಮ ರುಚಿಗೆ ಅನುಸಾರವಾಗಿ ನಿರ್ಧರಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 5 ನಿಂಬೆ ಹಣ್ಣು
- 6 ಹಸಿ ಮೆಣಸಿನಕಾಯಿ (ಅಥವಾ ರುಚಿಗೆ ತಕ್ಕಷ್ಟು)
- 2 ಬೆರಳುದ್ದ ಮಾವಿನಕಾಯಿ ಶುಂಠಿ (ಬೇಕಾದಲ್ಲಿ)
- 1 ಬೆರಳುದ್ದ ಶುಂಠಿ
- 5 ಟೀಸ್ಪೂನ್ ಕಲ್ಲುಪ್ಪು (ಅಥವಾ ರುಚಿಗೆ ತಕ್ಕಷ್ಟು)
ನಿಂಬೆ-ಶುಂಠಿ-ಹಸಿಮೆಣಸು ಉಪ್ಪಿನಕಾಯಿ ಮಾಡುವ ವಿಧಾನ:
- ಎಲ್ಲ ಪದಾರ್ಥಗಳನ್ನು ತೊಳೆದು ನೀರು ಆರಿಸಿ.
- ಒಂದು ನೀರಿನ ಪಸೆ ಇಲ್ಲದ ಗಾಜಿನ ಪಾತ್ರೆ ತೆಗೆದು ಕೊಳ್ಳಿ.
- ಈಗ ತೊಳೆದು ನೀರಾರಿದ ಎಲ್ಲ ಪದಾರ್ಥಗಳನ್ನು ಹೆಚ್ಚಿಟ್ಟು ಕೊಳ್ಳಿ.
- ನಂತರ ಗಾಜಿನ ಪಾತ್ರೆಯಲ್ಲಿ ಪದರ ಪದರವಾಗಿ, ಉಪ್ಪನ್ನು ಸೇರಿಸಿ ಎಲ್ಲ ಪದಾರ್ಥಗಳನ್ನು ಹಾಕಿ.
- ಕೊನೆಯಲ್ಲಿ ಮೇಲಿನಿಂದ 1 ಟಿ ಸ್ಪೂನ್ ಉಪ್ಪು ಹಾಕಿ, ಮುಚ್ಚಳ ಮುಚ್ಚಿ. ಫ್ರಿಡ್ಜ್ ನಲ್ಲಿ ಇಡಬೇಡಿ. ನಂತರ ನೀರಿಲ್ಲದ ಚಮಚೆಯಲ್ಲಿ, 15 ದಿನಗಳ ಕಾಲ ದಿನಕ್ಕೊಂದು ಬಾರಿ ಮಗುಚುತ್ತಾ ಇರಿ. 15 ದಿನಗಳ ನಂತರ ರುಚಿಯಾದ ಉಪ್ಪಿನಕಾಯಿ ಸಿದ್ಧವಾಗುತ್ತದೆ.
ತುಂಬಾ ಚೆನ್ನಾಗಿದೆ, ಮಾಡಲು ಸುಲಭ,ಬಹಳ ರುಚಿ
ಪ್ರತ್ಯುತ್ತರಅಳಿಸಿ