ಬ್ರಾಹ್ಮಿ ಅಥವಾ ತಿಮರೆ ಅಥವಾ ಒಂದೆಲಗ ಚಟ್ನಿ ಮಾಡುವ ವಿಧಾನ
ಬ್ರಾಹ್ಮಿ ಅಥವಾ ಒಂದೆಲಗ ಅಥವಾ ತಿಮರೆ ಒಂದು ಔಷಧೀಯ ಸಸ್ಯವಾಗಿದ್ದು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿದೆ. ಬ್ರಾಹ್ಮಿ ಸೊಪ್ಪನ್ನು ಉಪಯೋಗಿಸಿ ಮಾಡುವ ಕೆಲವು ಅಡುಗೆಗಳಿದ್ದು, ಅದರಲ್ಲಿ ಈ ಚಟ್ನೀ ಒಂದಾಗಿದೆ. ಈ ಚಟ್ನಿ ಮಾಡಲು ಸುಲಭ ಹಾಗೂ ಬಹಳ ರುಚಿಯಾಗಿರುತ್ತದೆ.
ಆಯುರ್ವೇದ ಪ್ರಕಾರ ಬ್ರಾಹ್ಮಿ ಆತಂಕ, ನರವ್ಯಾಧಿ ಮತ್ತು ಮಾನಸಿಕ ಆಯಾಸ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಬ್ರಾಹ್ಮಿ ಐಕ್ಯೂ, ಹಾಗೂ ಮಕ್ಕಳಲ್ಲಿ ಮಾನಸಿಕ ಏಕಾಗ್ರತೆ ಉತ್ತಮಗೊಳಿಸಲು ಅತ್ಯಂತ ಸಹಕಾರಿಯಾಗಿದೆ. ಬ್ರಾಹ್ಮಿ ಮಾನಸಿಕ ಸ್ಪಷ್ಟತೆ ಮತ್ತು ಆತ್ಮ ವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಿದೆ. ಬ್ರಾಹ್ಮಿ ಅಪಸ್ಮಾರ , ನಿದ್ರಾಹೀನತೆ, ಅಸ್ತಮಾ ಮತ್ತು ಸಂಧಿವಾತ ಗಳ ಚಿಕಿತ್ಸೆಯಲ್ಲಿ ಫಲಕಾರಿಯಾಗಿದೆ. ಬ್ರಾಹ್ಮಿಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಕ್ಯಾನ್ಸರ್ ನಂತಹ ಖಾಯಿಲೆಗಳನ್ನು ತಡೆಯಬಲ್ಲದು. ಅಲ್ಲದೆ ಆಸ್ತಮಾ, ಸಂಧಿವಾತ, ಬೆನ್ನು ನೋವು, ಮಲಬದ್ಧತೆ, ಕೂದಲು ಉದುರುವಿಕೆ, ಜ್ವರ, ಅಜೀರ್ಣ ಮುಂತಾದ ಸಮಸೈಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಬ್ರಾಹ್ಮಿ ಬುದ್ಧಿಶಕ್ತಿ ಹೆಚ್ಚಿಸುತ್ತದೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ ಎಂದು ಹೇಳುತ್ತಾರೆ.
ಬ್ರಾಹ್ಮೀ ಚಟ್ನಿ ವಿಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- ಎರಡು ಹಿಡಿ ಬ್ರಾಹ್ಮಿ ಎಲೆ
- 1/2 ಕಪ್ ತೆಂಗಿನ ತುರಿ
- 1/3 ಬೆರಳುದ್ದ ಶುಂಠಿ
- 2 ಒಣ ಮೆಣಸಿನಕಾಯಿ
- 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
- 1/2 ನೆಲ್ಲಿಕಾಯಿ ಗಾತ್ರ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಬ್ರಾಹ್ಮಿ ಚಟ್ನಿ ಮಾಡುವ ವಿಧಾನ:
- ಮೊದಲಿಗೆ ಬ್ರಾಹ್ಮಿ ಎಲೆಗಳನ್ನು ಆಯ್ದು, ತೊಳೆಯಿರಿ. ನಂತರ ಅರೆಯಲು ಬೇಕಾದ ಎಲ್ಲ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಸಿದ್ಧ ಮಾಡಿಟ್ಟುಕೊಂಡ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಅರೆಯಿರಿ.
- ಸಾಸಿವೆ ಮತ್ತು ಒಣ ಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಅನ್ನದೊಂದಿಗೆ ತಿನ್ನಲು ಬಲು ರುಚಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ